October 26, 2008

Fall ಸೀಸನ್ನು

ಚಳಿಗಾಲ ಆಗ್ಲೆ ಇಲ್ಲಿ ಕಾಲಿಡ್ತಿದೆ. ಮರಗಳ ಎಲೆಗಳೆಲ್ಲ ಉದುರುತ್ತಾ ಇದೆ. ಎಲೆಗಳು ಮರಗಳಿಂದ ಉದುರೋ ಮುನ್ನ ಹಸಿರು ಬಣ್ಣ ಕಳ್ಕೊಂಡು ಹಳದಿ, ಕಿತ್ತಳೆ, ಕೆಂಪು, ನೇರಳೆ ಬಣ್ಣಗಳಿಗೆ ತಿರುಗುತ್ತೆ. ಚಳಿಗಾಲ ಆರಂಭ ಆಗೋ ಮುನ್ನ ದಿನಗಳು ಚಿಕ್ಕದಾಗುತ್ತಿದ್ದರೆ ಮರಗಳೆಲ್ಲ "ಆಯ್ತು, ಇನ್ನೂ ಕಾಯ್ತಾ ಕೂತ್ರೆ ಕಷ್ಟ. ದ್ಯುತಿಸಂಶ್ಲೇಷಣ ಕ್ರಿಯೆಯನ್ನ (photosynthesis) ಇನ್ನು ನಿಲ್ಸೋದು ಸರಿ" ಅಂತ ಠರಾವು ಅಂಗೀಕರಿಸಿದ ಮೇಲೆ ಎಲೆಗಳಲ್ಲಿರೋ ಪತ್ರಹರಿತ್ತು (chlorophyll) ಮಾಯ ಆಗ್ತಾ ಬರತ್ತೆ. ಆಗ ಎಲೆಗಳ ನಿಜವಾದ ಬಣ್ಣ ಬಯಲಾಗತ್ತೆ. ಇನ್ನೂ ಜಾಸ್ತಿ ಓದ್ಬೇಕು ಅಂದ್ರೆ - ಇಲ್ಲಿ - ನೋಡಿ. ಕೆಂಡಸಂಪಿಗೆಯಲ್ಲಿ ಮೀರಾ ಬರೆದಿರೋ ಅಂಕಣವನ್ನೂ ಬೇಕಿದ್ರೆ ಒಮ್ಮೆ ಓದಿ. ಹಾಗೆ ಇಲ್ಲೂ ಒಬ್ರು ಬಿಸಿಬಿಸಿ ಕಾಫಿ ಮಾಡ್ಕೊಂಡು ಸ್ವೆಟರು ಶಾಲು ಅಂತೆಲ್ಲ ಹುಡುಕ್ತಿರೋರೂ ಇದಾರೆ.

ನ್ಯೂಇಂಗ್ಲೆಂಡ್ ಚಂದವನ್ನ ನೋಡ್ಬೇಕು ಅಂದ್ರೆ ಈ ವೀಡಿಯೋ ತುಣುಕನ್ನ ನೋಡಿ.

ಇದು Canon ಪರ್ವತದ ಮೇಲಿಂದ. ೪೨೦೦ ಅಡಿ ಎತ್ತರದಿಂದ ಪಕ್ಷಿನೋಟ. ಗಾಳಿ ಎಷ್ಟು ಜೋರಿತ್ತು ಅಂದ್ರೆ,ವಿವರಣೆ ನಿಮಗೆ ಕೇಳಿಸೋದೆ ಇಲ್ಲ. ಆ ಗಾಳಿಗೆ ಭಾಗ್ವತ್ರು ಹಾರಿ ಹೋಗದೆ ಇದ್ದಿದ್ದೆ ಪುಣ್ಯ!! ಇಲ್ಲಾ ಅಂತಿದ್ರೆ, ಗದಾಯುದ್ಧದ ಪ್ರಸಂಗದಲ್ಲಿ ಉಪಪಾಂಡವರ ತಲೆಗಳನ್ನ ನೋಡಿ, ದುರ್ಯೋಧನ ’ಚಂದ್ರವಂಶಕ್ಕಿನ್ನಾರು’ ಅಂತ ಗೋಳಿಟ್ಟಂತೆ, ನಾವು ನೀವೆಲ್ಲ "ನಮ್ಮ ಕಾಲೆಳೆಯುವವರಾರಿನ್ನು’ ಅಂತ ಗೋಳಿಡ್ಬೇಕಾಗ್ತಿತ್ತು!!!ಶುಭಂ

October 12, 2008

ಕಾಯ್ಕಿಣಿ ಉವಾಚ

ಇದು ಗಡಿಬಿಡಿ ಪೋಸ್ಟು. ಕಳೆದ ತಿಂಗಳು ಇಲ್ಲೊಂದು ನಮ್ಮ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರ ಸಂದರ್ಶನವಿತ್ತು. ಅದರ ವಿಡಿಯೋ ತುಣುಕೊಂದು ನಿಮಗಾಗಿ ಕನ್ನಡತನ, ಮಾನವೀಯ ವಿನ್ಯಾಸ, ಮಗುವಿನ ಅಚ್ಚರಿಯ ಕಣ್ಣುಗಳು.....ಜಯಂತ ಕಾಯ್ಕಿಣಿ ತಮ್ಮ ಎಂದಿನ ಅನನ್ಯ ಶೈಲಿಯಲ್ಲಿ....ನೋಡಿ ಆನಂದಿಸಿ. ಭಾಗ್ವತ್ರಿಗೊಂದು ಮಸಾಲೆ ದೋಸೆ ಹರಕೆ ಹೊತ್ಕೊಳ್ಳಿ:-)

October 6, 2008

ಭಾಗವತರ ಕಷ್ಟ

"ನನ್ನ ಬಿಟ್ಟು ಹೋಗಬೇಡ್ವೋ, ಭಾಗ್ವತ"
ಹಠ ಹಿಡಿದು ಕುಳಿತಿತ್ತು ಸೋಮಾರಿತನ,

"ಘನಾಂದಾರಿ ಕೆಲಸವಿದೆ ಕಣೋ, ನನಗೆ.
ನಿನ್ನ ಬಿಟ್ಟು ಹೋಗಲೇಬೇಕು ನಾನೀಗ,
ಕೋಪಿಸಿಕೊಂಡಾರು ಓದುಗ ದೊರೆಗಳು,
ಅವರ ಕೋಪ ತಾಳಿದವರುಂಟೇ ಹೇಳು?"

"ಬರೀ ಸುಳ್ಳು ಹೇಳ್ತೀ, ನಿನ್ನ ಬಿಡಲ್ಲ ನಾನು"
ಕಾಲಿಗೆ ಜೋತುಬಿದ್ದಿತ್ತು ಸೋಮಾರಿತನ.

"ಛೇ, ಛೇ, ಛೇ..ನಾನು ಮತ್ತು ಸುಳ್ಳು??
ಒಂದರ್ಧ ಗಂಟೆ ಅಷ್ಟೇ, ಮತ್ತೆ ವಾಪಸ್.
ಹಠ ಮಾಡಬೇಡ ಸುಮ್ಮನೆ ನೀನೀಗ,
ಹೋಗಿ ಬರುತ್ತೇನೆ, ಬಿಡು ನನ್ನ ಒಮ್ಮೆ"

"ಇಲ್ಲ ಬಿಡಲ್ಲ, ನಿನ್ನ ನಾನು ಬಿಡಲ್ಲ",
ರಚ್ಚೆ ಹಿಡಿದಿತ್ತು ಸೋಮಾರಿತನ

"ನಿನ್ನ ಬಿಟ್ಟು ನನಗಿನ್ಯಾರಿದ್ದಾರೋ?,
ವಾಪಾಸು ಬಂದುಬಿಡುತ್ತೇನೆ, ಖಂಡಿತ.
ಅಡ್ಜಸ್ಟು ಮಾಡಿಕೋ, ಒಂದರ್ಧ ಗಂಟೆ,
ಬರ್ತಾ ನಿನಗೆ ಮಸಾಲೆ ದೋಸೆ, ಆಯ್ತಾ?"

"ಓಹ್, ಮಸಾಲೆ ದೋಸೆನಾ? ಹಾಗಿದ್ರೆ ಹೋಗಿ ಬಾ,
ಅರ್ಧ ಗಂಟೆ ಅಷ್ಟೇ, ಆಮೇಲೆ ನಾನು ಮತ್ತು ನೀನು"
.........
ಇಗೋ ನೋಡಿರಿ, ಓದುಗ ದೊರೆಗಳೆ,
ನಿಮ್ಮೆದುರು ನಾನು,ಆರ್ಧ ಗಂಟೆ ಅಷ್ಟೇ,
ಎಷ್ಟೊಂದು ಕಷ್ಟ ನೋಡಿರಿ ನನಗೆ!!
ಆ ಮಸಾಲೆದೋಸೆ ಖರ್ಚು ನಿಮ್ಮದೇ!!

August 18, 2008

The diving bell and the butterfly

I just watched a French movie "The diving bell and the butterfly". It is based on a true story of a French Journalist 'Jean-Dominique Bauby'. He suffered a cerebrovascular accident at the age of 43 and was diagnosed with 'lock-in syndrome'. He was paralysed from head to toe and wheel-chair bound. All that he had was a functional left eye and imagination. He went on to dictate a book about his life with a method of blinking his left eye for alphabets. You can read about it here and here

It was truly an amazing movie, engaging and thoroughly absorbing. It was a long time since I watched a gripping movie like this one. It was very poignant. The most painful was the phone conversation between Bauby and his father. It moved me beyond words. Losing one's kid in front of one's eye is probably the worst thing that can happen to a person. Unfortunately I have come across such parents very closely. I was so moved when I read about the Ulaibettu (Mangalore) incident in which 7 children died recently. Rain always brings happy memories to us, makes us nostalgic, romantic. But unfortunately it takes few innocent lives also with it every year. I hope those parents will have enough love for life left in them to carry on. I too pray like my grandma would do, with her hands held high, and with full faith "ಮಾತಾಯಿ, ಇಷ್ಟ್ ಮಳೆ ಸಾಕ್. ಊರಲ್ಲಿ ಯಾರಿಗೂ ಉಪದ್ರ ಕೊಡ್ದೆ, ಸುಮ್ಮನಾಗು".

The movie also brought the pictures of our own Sridhar Heggodu in front of me. He is fully aware that he is dependent on others and that must be very painful. Life sometimes makes us so helpless. We always want to believe that the good things that we have currently like good job, family, friends circle etc., will continue eternally. We realize the hard truths only when that myth is busted. Bauby says at one point (not verbatim) " I can't talk to my children, can't play with them, can't clasp my arms around their smooth bodies. But I am happy for them, because they live, smile, laugh. That means a fine day to me". What we have today is a gift. But do we realize it? I hope at least one day we won't be fighting each other on various barriers like creed, language, nationality, colour, profession (like IT vs non-IT) etc. May be it is too simplistic. May be life is too complex for such idealism. But then.....life is only one.... Don't move so fast that you miss to smell the roses.

July 27, 2008

ಕಾರ್ಯಕ್ರಮ ವರದಿ

ಬೆಂಗಳೂರು, ಜುಲೈ ೨೭ :
ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿಂದು ಸಮಕಾಲೀನ ಕನ್ನಡದ ಈರ್ವರು ಹಿರಿಯ ಲೇಖಕಿಯರಾದ ತುಳಸಿಯಮ್ಮ ಮತ್ತು ಸುಪ್ತದೀಪ್ತಿಯವರ ಪುಸ್ತಕ ಬಿಡುಗಡೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಶ್ರೀಯುತ ಜಗಲಿ ಭಾಗವತರು ತಮ್ಮ ದಿವ್ಯದೃಷ್ಟಿಯಿಂದ ಭಾಗವಹಿಸಿ, ಈ ಕಾರ್ಯಕ್ರಮದ ವರದಿಯನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ ೧೦:೩೦ಕ್ಕೆ ಕುಮಾರಿ ಊರ್ಜಾ ಶ್ರೀಹರಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಪ್ರವೀಣ್ ಶಿವಶಂಕರ್ ನಿರ್ವಹಿಸಿದರು. ದಟ್ಸ್-ಕನ್ನಡದ ಸಂಪಾದಕ ಶಾಮಸುಂದರ್ ಸ್ವಾಗತ ಮತ್ತು ಪರಿಚಯ ಭಾಷಣವನ್ನು ಮಾಡಿದರು. ನಂತರ ತುಳಸಿಯಮ್ಮನವರ ಲಘುಪ್ರಬಂಧ ಸಂಕಲನ - "ತುಳಸಿವನ", ಹಾಗೂ ಸುಪ್ತದೀಪ್ತಿಯವರ ಕವನಸಂಕಲನ - "ಭಾವಬಿಂಬ"ವನ್ನು ಹಿರಿಯ ಪತ್ರಕರ್ತ ಜೋಗಿ ಹಾಗೂ ಹಿರಿಯ ಕವಿ ದೊಡ್ಡರಂಗೇಗೌಡ ಬಿಡುಗಡೆಗೊಳಿಸಿದರು.
ಭಾವಬಿಂಬದ ಅನಾವರಣ
ಹೊತ್ತಿಗೆಗಳೆರಡರ ಲೋಕಾರ್ಪಣೆ

ಕವನ ಸಂಕಲನ ಬಿಡುಗಡೆಗೊಳಿಸಿ ಮಾತಾನಾಡಿದ ಕವಿ ದೊಡ್ಡರಂಗೇಗೌಡರು ಸುಪ್ತದೀಪ್ತಿಯವರ ಕವನಗಳ ಲಯಬದ್ಧತೆಯನ್ನು, ಸರಳಗನ್ನಡದ ಪ್ರಯೋಗಗಳನ್ನು ಶ್ಲಾಘಿಸಿದರು. ಸಂಕಲನದಿಂದ ಮೂರ್ನಾಲ್ಕು ಕವನಗಳನ್ನು ವಾಚಿಸಿದರು. ನಂತರ ಸುಪ್ತದೀಪ್ತಿಯವರು "ಕವನ ನನ್ನ ಹುಚ್ಚು. ನನ್ನ ಪೌರುಷ ಏನಿದ್ರೂ ಕೀಲಿಮಣೆ ಮುಂದೆ. ಆದ್ರೆ ಈಗ ನನ್ನ ಕಾಲು ಕಂಪಿಸ್ತಾ ಇದೆ" ಎನ್ನುತ್ತ ೧೫ ನಿಮಿಷ ನಿರರ್ಗಳವಾಗಿ ಮಾತಾನಾಡಿ ಕೇಳುಗರನ್ನು ಎಂದಿನಂತೆ ಬುಟ್ಟಿಗೆ ಹಾಕಿಕೊಂಡರು.

ನನ್ನ ಕಾಲುಗಳು ನಡುಗುತ್ತಿವೆ
’ತುಳಸಿವನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ್ದು ಹಿರಿಯ ಪತ್ರಕರ್ತರೂ, ಕನ್ನಡ ಬ್ಲಾಗುಲೋಕದಲ್ಲಿ ಹಲವಾರು ಬರಹಗಾರ/ರ್ತಿಯರಿಗೆ ’ಗಾಡ್-ಫಾದರ್" ಎಂದೂ ಚಿರಪರಿಚಿತರಾಗಿರುವ ಜೋಗಿಯವರು. ಸಂಕಲನದ ಹಲವಾರು ಪ್ರಬಂಧಗಳನ್ನು, ಕೆಲವು ಸಾಲುಗಳನ್ನು ಉಲ್ಲೇಖಿಸಿದ ಅವರು ತುಳಸಿಯಮ್ಮನವರ ಸಾಹಿತ್ಯಸೇವೆಯನ್ನು ಕೊಂಡಾಡಿದರು. ನಂತರ "ಗಾಂಭೀರ್ಯ ನನ್ನ ಗುಣವೇ ಅಲ್ಲ" ಎಂದು ಬಲುಗಂಭೀರವಾಗಿಯೇ ಮಾತುಗಳನ್ನಾರಂಭಿಸಿದ ತುಳಸಿಯಮ್ಮನವರು ಮುಂದುವರಿದು "ಜೋಗಿ ಕೈನಲ್ಲೆ ಪುಸ್ತಕ ಬಿಡುಗಡೆ ಮಾಡಿಸ್ಬೇಕು ಅಂತಿತ್ತು. ಅವ್ರು ಒಪ್ಪಿಲ್ದೆ ಇದ್ದಿದ್ರೆ ಪುಸ್ತಕ ಬಿಡುಗಡೆ ಮಾಡ್ತಿರ್ಲಿಲ್ಲ...ನಾನು ಬರ್ದಿದ್ದೆಲ್ಲ ಜೀವನದ ಸತ್ಯಘಟನೆಗಳೆ. ಸಾಹಿತ್ಯದ ಮೂಲದ್ರವ್ಯವಾದ ಜೀವನಾನುಭವದ ಮೂಸೆಯಲ್ಲಿಯೆ ಹರಳುಗಟ್ಟಿದವುಗಳಿವು" ಎಂದು ತಮ್ಮ ಲಘುಪ್ರಬಂಧಗಳ ಕುರಿತು ನುಡಿದರು.

ಗಾಂಭೀರ್ಯ ನನ್ನ ಗುಣವೇ ಅಲ್ಲ

ಕಾರ್ಯಕ್ರಮಕ್ಕೆ ಮೆರುಗುನೀಡಿದ್ದು ಹಿರಿಯ ಕವಿ ಎಚ್ಚೆಸ್ವಿಯವರ ಅಧ್ಯಕ್ಷೀಯ ಭಾಷಣದ ಮಾತುಗಳು. ದೂರದೇಶದಲ್ಲಿದ್ದೂ ಕನ್ನಡ ಪ್ರೀತಿಯನ್ನು, ಕನ್ನಡದ ಅಭಿಮಾನವನ್ನು ಉಳಿಸಿಕೊಂಡಿದ್ದಲ್ಲದೆ, ಪುಸ್ತಕ ಬಿಡುಗಡೆಯಂತಹ ಸಾಹಿತ್ಯಿಕ ಪಾರಿಚಾರಿಕೆಯನ್ನು ಮಾಡುತ್ತಿರುವ ಲೇಖಕಿಯರ ಉತ್ಸಾಹವನ್ನು, ಸಾಹಿತ್ಯಪರ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕನ್ನಡ ಸಾಹಿತ್ಯಲೋಕದ ದಿಗ್ಗಜಗಳಾದ ಸಾ.ಶಿ.ಮರುಳಯ್ಯ, ಲಕ್ಷ್ಮೀನಾರಯಣ ಭಟ್ಟರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಕನ್ನಡ ಬ್ಲಾಗುಲೋಕದಲ್ಲಿ ಚಿರಪರಿಚಿತರಾದ ಸುಶ್ರುತ, ಶ್ರೀನಿಧಿ, ಗುಬ್ಬಚ್ಚಿ, ಮಧು, ಮನಸ್ವಿನಿ, ವೀಣಾ ಹಾಜರಿದ್ದರು. ಮಾಯಾವಿ ವಿಕ್ರಮ ಕಾರ್ಯಕ್ರಮದ ಮೊದಲರ್ಧದಲ್ಲಿ ಮಾಯವಾಗಿದ್ದರು. ಸುನಾಥ ಕಾಕಾ ದೂರದ ಧಾರವಾಡದಿಂದ, ಫೇಡೆಯೊಂದಿಗೆ, ಬಲುಪ್ರೀತಿಯಿಂದ ಬಂದಿದ್ದರು.


೧೨:೩೦ಕ್ಕೆ ಮುಗಿದ ಕಾರ್ಯಕ್ರಮದ ನಂತರ ಸುಗ್ರಾಸ ಭೋಜನವನ್ನು ಏರ್ಪಡಿಸಲಾಗಿತ್ತು. ಬಿಸಿಬೇಳೆ ಭಾತ್, ಶಾವಿಗೆಭಾತ್, ಉಪ್ಪಿಟ್ಟು, ಬಾದಾಮ್ ಪುರಿ, ಮೊಸರನ್ನ, ಕೋಸಂಬರಿ, ಉಪ್ಪಿನಕಾಯಿಯಿಂದ ಕೂಡಿದ ಮೃಷ್ಟಾನ್ನ ಭೋಜನವನ್ನು ಎಲ್ಲರೂ ಸವಿದರು.

ಪ್ರತ್ಯಕ್ಷದರ್ಶಿಗಳ ಉದ್ಗಾರಗಳು :-
"ತುಳಸಿಯಮ್ಮ, ಸುಪ್ತದೀಪ್ತಿ ಇಬ್ರೂ ಫುಲ್ ಮಿಂಚಿಂಗ್ ಇವತ್ತು":-)
"ಜೋಗಿ ಸಕ್ಕತ್ ಕೂಲ್. ಆರಾಮಾಗಿ ಜೀನ್ಸ್-ನಲ್ಲೆ ಬಂದಿದ್ರು"
"ಮಾತು ಅಂದ್ರೆ ಎಚ್ಚೆಸ್ವಿದು. ಸೂಪರ್"
"ಸುನಾಥ ಕಾಕಾ ಬಂದಿದ್ರು. ತುಂಬ down-to-earth-ಉ. ಆದ್ರೆ ಬರೀ ಮೋಸ. ಫೇಡೆ ತುಳಸಿಯಮ್ಮಂಗೆ ಮಾತ್ರ ಕೊಟ್ರು. ನಾವು ಜಗಳ ಮಾಡಿದ್ರೂ ನಮಗೆ ಕೊಡ್ಲಿಲ್ಲ :-("

ಗಮನಾರ್ಹ ಹೇಳಿಕೆ:-
ಸುನಾಥ ಕಾಕಾ :- "ಜಗ್ಲಿ ಭಾಗ್ವತ್ರು ಸಂಭಾವಿತ ಮನಶಾ. ದಯವಿಟ್ಟು ಅವ್ರ ಕಾಲು ಎಳಿಬ್ಯಾಡ್ರಿ ಅಂತ ಲೇಖಕಿಯರಿಗೆ ಖುದ್ದು ಹೇಳಿ ಬಂದ್ರ ಛಲೋ ಅಂತ ಒಬ್ನ ಬೆಂಗ್ಳೂರಿಗ ಬಂದೇನ ನೋಡ್ರಿ"

July 23, 2008

ಇಲ್ಲೊಂದು ಬ್ಲಾಗು

ತುಳಸಿಯಮ್ಮನವರ ಮತ್ತು ಸುಪ್ತದೀಪ್ತಿಯವರ ಪುಸ್ತಕ ಬಿಡುಗಡೆ ಇದೆ ಜುಲೈ ೨೭ಕ್ಕೆ, ಬೆಂಗ್ಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ, ಬೆಳಿಗ್ಗೆ ೧೦ಕ್ಕೆ. ತಪ್ಪದೇ ಹೋಗಿ, ಪುಸ್ತಕ ಕೊಂಡು ಓದಿ :-)

ಇವತ್ತು ಬ್ಲಾಗ್ ಲೋಕದಲ್ಲಿ ಎಂದಿನ ಹಾಗೆ ವಿಹರಿಸ್ತಾ ಇದ್ದೆ. ನನ್ನನ್ನ ತುಂಬ ಗಾಢವಾಗಿ ಓದಿಸಿಕೊಂಡು ಹೋದ ಒಂದೆರಡು ಬರಹಗಳುಳ್ಳ ಬ್ಲಾಗ್ ಒಂದನ್ನ ನಿಮಗೆ ತೋರಿಸ್ತಾ ಇದ್ದೇನೆ. ಬೇರೆ ಯಾರಿಗೂ ಹೇಳ್ಬೇಡಿ. ಇಲ್ಲಿ ಮತ್ತೆ ಇಲ್ಲಿ ನೋಡಿ. ಇದನ್ನ ಬರೀತಾ ಇದ್ದವ್ರು ಮಂಗ್ಳೂರಿನ ಡಾಕ್ಟರೊಬ್ರು :-) ಅವ್ರು ಬರೆಯೋದನ್ನ ನಿಲ್ಸಿದಾರೆ. ಮತ್ತೆ ಮುಂದುವರಿಸ್ಲಿಕ್ಕೆ ಕೇಳಿ ನೋಡೋಣ :-)

July 12, 2008

ಕೊರೆತ ಪುರಾಣ

ತುಳಸಿಯಮ್ಮನವರ ಮತ್ತು ಸುಪ್ತದೀಪ್ತಿಯವರ ಪುಸ್ತಕ ಬಿಡುಗಡೆ ಇದೆ ಜುಲೈ ೨೭ಕ್ಕೆ, ಬೆಂಗ್ಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ, ಬೆಳಿಗ್ಗೆ ೧೦ಕ್ಕೆ. ತಪ್ಪದೇ ಹೋಗಿ, ಪುಸ್ತಕ ಕೊಂಡು ಓದಿ :-) ಭಾಗ್ವತ್ರಿಗೆ ಬರ್ಲಿಕ್ಕಾಗಲ್ವಂತೆ. ಬೆಳಗಿನ ಪುಕ್ಕಟೆ ತಿಂಡಿ, ಮಧ್ಯಾನ್ಹದ ಪುಕ್ಕಟೆ ಊಟ ತಪ್ಪಿಹೋಯ್ತು ಅಂತ ಭಾಗ್ವತ್ರು ತುಂಬ ಕೈ ಕೈ ಹಿಸುಕಿಕೊಳ್ತಿದಾರಂತೆ :-)
************************************
Did you watch men's Wimbledon finals between Roger Federer and Rafael Nadal? It is one of the best live tennis matches I have ever watched so far. Breathtaking beauty it was. When I started watching, the match was held up due to rain (first time interruption). I was shocked to see Federer trailing. Then the match started again. I wanted the match to go into 5th set and it did!!! I was jumping in joy seeing Federer save 3 championship points. Ultimately Nadal won, and he deserved it, for he was the better player throughout the match. Federer is my tennis sport idol and I wanted him to win from the beginning. However, I had no complaints for Nadal winning the match! In my view both were winners, but yes, officially we can have only one!

I like these champions for their focus, determination, never-say-die attitude and perseverance. The absolute class with which Federer saved the match points and sets, how he maintained his calm, composure throughout those tense moments....I just love it. Even during the post-match interview, each player gracefully acknowledged the greatness of each other. May be they are groomed to behave like that by their image building agencies, but does that matter? Is there something for our new generation of over-hyped cricketers to learn from this?

The past one year has been very disappointing for me in sports:-) All my favourites are on back foot. My cricket idol Dravid abdicated the captaincy, lost his place in limited overs team, was humiliated publicly in IPL....New England Patriots lost in the superbowl (NFL) to underdogs NY Giants, Federer lost Australian Open, French Open and now Wimbledon.....It is so disappointing. After the Wimbledon finals I was thinking about the match and was feeling bit low for some times!! How should it be for Federer then? When John McEnroe tried to interview Federer, he was almost about to break down and he finally did. Tears must have rolled down, but he turned his face away and went back. McEnroe ended the interview there very sensibly. It is a testimony to what emotions, stakes go into playing those matches. Money alone isn't the factor there. Have you ever invested so much of your heart into anything like that?

I was following Dravid ever since I came across an article when Dravid was 19 or 20 years old. It was essentially saying that Sachin got into Indian colours very early because he was from Mumbai. Although Dravid had a similar record in domestic cricket, he had to wait till the world cup of 1996 got over. I remember the Ranji match commentary. Kambli was replaced by Dravid in the Indian team before the start of that Ranji match. The commentator, with his own leanings for Kambli, was criticising Dravid's technique comparing that to Kambli's!!! That made me like Dravid more :-) I followed him very closely ever since. I liked him for his perseverance, elegance, substance and patience. He will hold on to one end come what may!!

This never-say-die attitude...it is real great fun. You try and try and try and try....till you are convinced that there is nothing left and that you have tried your absolute best. It makes one happy just for that effort put in!!! To be happy, I think there are two ways. One is to be laid back. You should not be perturbed by any earthly matters :-) You are one and only one in the world and there is nothing else to disturb your peace :-) Second way is to 'want' something and have a full go to get it. It could be as simple as wanting to watch a movie in a theatre of your choice. Or it could be becoming Prime minister of India :-) Once you have decided that you 'want' something then you should go for it!! I think the excitement will be in the effort that we put in rather than in the result.

It does not matter what we are or what we are not, if we want to enjoy. All that matters is that we have only one life and no one till now has escaped death :-)....So... have it or lose it :-)

June 30, 2008

ಕ್ರಿಕೆಟ್ಟು

ಪ್ರಕಟಣೆ : - ಜುಲೈ ೩, ೪, ೫, ಮತ್ತು ೬ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಮೋದರ ಚಿತ್ರಕಲಾ ಪ್ರದರ್ಶನವಿದೆ, ಬೆಳಿಗ್ಗೆ ೧೦ರಿಂದ ಸಂಜೆ ೭ರ ತನಕ. ವಿವರಗಳಿಗೆ ಪ್ರಮೋದರನ್ನು ಸಂಪರ್ಕಿಸಿ.
**********************************************************

ಇವತ್ತು ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಯ ಕುರಿತು ಮಾತಾಡೋಣ. ಭಾಗ್ವತ್ರು ಕನ್ನಡ ವೀಕ್ಷಕ ವಿವರಣೆ ಮೊದ್ಲು ಕೇಳಿದ್ದು ಆಕಾಶವಾಣಿಯಲ್ಲಿ (ರೇಡಿಯೋ, ಬಾನುಲಿ). ಅದ್ರಲ್ಲೂ ಧಾರವಾಡ ಮತ್ತು ಗುಲ್ಬರ್ಗ ಕೇಂದ್ರದಲ್ಲಿ. ಅದು ಪಿ.ವಿ.ಶಶಿಕಾಂತ್, ಕಾರ್ಲ್ಟನ್ ಸಲ್ದಾನ, ಕಿರ್ಮಾನಿ, ಅರ್ಜುನ್ ರಾಜಾ, ರಘುರಾಮ್ ಭಟ್ ಯುಗ. ಜಾವಗಲ್ ಶ್ರೀನಾಥ್ ಹ್ಯಾಟ್ರಿಕ್ ಪಡೆದದ್ದನ್ನ, ಕುಂಬ್ಳೆ ಶತಕ ಬಾರಿಸಿದ್ದನ್ನ ಕೇಳಿದ ನೆನಪು.

ಆಗ ಸ್ಥಳೀಯ ಮಟ್ಟದಲ್ಲೂ ತುಂಬ ಪಂದ್ಯಗಳಾಗೋದು...ವಲಯಮಟ್ಟ, ತಾಲೂಕುಮಟ್ಟ, ಜಿಲ್ಲಾಮಟ್ಟ, ರಾಜ್ಯಮಟ್ಟ ಅಂತೆಲ್ಲ...
ಆಗ ಸ್ಥಳೀಯ ಮಟ್ಟದಲ್ಲಿ ತುಂಬ ಹೆಸರಿದ್ದದ್ದು ಕುಂದಾಪುರದ ಚಕ್ರವರ್ತಿ ಕ್ರಿಕೆಟರ್ಸ್ ತಂಡಕ್ಕೆ. ಶ್ರೀಪಾದ ಉಪಾಧ್ಯ, ಸತೀಶ್ ಕೋಟ್ಯಾನ್, ಸತೀಶ್ ಕೆ.ಪಿ., ಪ್ರದೀಪ್ ವಾಜ್, ಶಹೀದ್ ನನಗೆ ನೆನಪಿರೋ ಹೆಸ್ರುಗಳು. ಜೊತೆಗೆ ಕುಂದಾಪುರ ಟಾರ್ಪೆಡೋಸ್-ನ ನಿತಿನ್ ಸಾರಂಗ್, ಉಡುಪಿ ಸನ್ನಿಯ ಕಿಶೋರ್ ಕೂಡ. ಇನ್ನೊಂದಿಷ್ಟು ತಂಡಗಳೂ ಹೆಸರುವಾಸಿಯಾಗಿದ್ವು. ಸವಿನಯ ಸಾಸ್ತಾನ, ಬೆಂಗಳೂರು (ಅಥ್ವಾ ಮೈಸೂರು?) ಜೈ ಕರ್ನಾಟಕ, ಪಡಿಬಿದ್ರಿ ಫ್ರೆಂಡ್ಸ್....

ಆಯ್ತು. ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಯ್ತು. ಈಗ ಒಂದಿಷ್ಟು ಪದಗಳನ್ನ ಪಟ್ಟಿಮಾಡೋಣ.

bat = ದಾಂಡು.
batsman = ದಾಂಡಿಗ
ball = ಚೆಂಡು,
delivery = ಎಸೆತ
stroke = ಹೊಡೆತ
bowler = ಎಸೆಗಾರ
field = ಕ್ಷೇತ್ರರಕ್ಷಣೆ
fielder = ಕ್ಷೇತ್ರರಕ್ಷಕ
run = ಓಟ
stump = ಗೂಟ
leg stump = ಬಲಗೂಟ
off stump = ಎಡಗೂಟ
middle stump = ಮಧ್ಯಗೂಟ
wicket keeper = ಗೂಟರಕ್ಷಕ
wicket = ಹುದ್ದರಿ
boundary = ಸೀಮೆ
full toss = ಪೂರ್ಣಾಂತರ
catch = ಬುತ್ತಿ
defensive shot = ರಕ್ಷಣಾತ್ಮಕ ಹೊಡೆತ, ತಟ್ಟಿಮುಟ್ಟಿ ಆಡು
pinch hitter = ಹೊಡೆಬಡಿಯ ದಾಂಡಿಗ
umpire = ನಿರ್ಣಾಯಕ. ಅದ್ರಲ್ಲೂ ಹೆಚ್ಚಾಗಿ "ಹದ್ದಿನ ಕಣ್ಣಿನ ನಿರ್ಣಾಯಕ". ;-)
line = ನೇರ
length = ಅಂತರ
no ball = ಅಕ್ರಮ ಎಸೆತ
wide = ಅಗಲ ಎಸೆತ. ಆದರೆ ಹೆಚ್ಚಾಗಿ - ವೈಡ್ :-)
footwork = ಪಾದಚಲನೆ
backfoot = ಹೆಜ್ಜೆಯನ್ನ ಹಿಂದಿಟ್ಟು
frontfoot = ಹೆಜ್ಜೆಯನ್ನ ಮುಂದಿಟ್ಟು
short run up = ನಾಲ್ಕಾರು ಹೆಜ್ಜೆಗಳ ಅಂತರದಿಂದ
long run up = ಹತ್ತಾರು ಹೆಜ್ಜೆಗಳ ಅಂತರದಿಂದ, ದೂರದಿಂದ ಓಡಿ ಬಂದು
sweep = ಗುಡಿಸಿ ಹೊಡೆ
fielding set up = ಕ್ಷೇತ್ರರಕ್ಷಣಾ ವ್ಯೂಹ
A fierce contest between bat and ball = ಚೆಂಡು ದಾಂಡಿನ ನಡುವೆ ತೀವ್ರ ಹಣಾಹಣಿ :-)
inswinger = ಒಳತಿರುವು
outswinger = ಹೊರತಿರುವು
pacer = ವೇಗಿ
medium pacer = ಮಧ್ಯಮ ವೇಗಿ
over = ನಿರ್ವಹಣೆ.
swift running between the wickets = ಪಾದರಸದ ಚುರುಕಿನ ಓಟಗಾರಿಕೆ :-)
appeal = ಮನವಿ
loud appeal, vociferous appeal = ಬಲವಾದ ಮನವಿ
out = ನಿರ್ಗಮನ.
four = ನಾಲ್ಕು ಓಟ, ಚಟ್ಕ
sixer = ಆರು ಓಟ, ಷಟ್ಕ
two, couple of runs = ಅವಳಿ ಓಟ, ಎರಡು ಓಟ
loss of wicket = ಹುದ್ದರಿಯ ನಷ್ಟ.
opener = ಆರಂಭಿಕ ಆಟಗಾರ,
middle order = ಮಧ್ಯಮ ಕ್ರಮಾಂಕ
average = ಸರಾಸರಿ
poor fielding = ಕಳಪೆ ಕ್ಷೇತ್ರರಕ್ಷಣೆ
dramatic collapse = ನಾಟಕೀಯ ಕುಸಿತ
offside = ಎಡಭಾಗ
legside = ಬಲಭಾಗ
life = ಜೀವದಾನ

ಇನ್ನೂ ತುಂಬ ಪದಗಳಿಗೆ ಕನ್ನಡದಲ್ಲಿ ಸಂವಾದಿ ಶಬ್ದಗಳಿಲ್ಲ. mid-on, mid-off, gully, slip, silly point, cover, point, sweeper cover, block hole.....ಬ್ರಿಟಿಷರ ವಸಾಹತೀಕರಣದ ಪಳೆಯುಳಿಕೆಯಾಗಿದ್ದರಿಂದ, ಇಂಗ್ಲಿಷ್ ಮೂಲದ ಈ ಆಟದ ಎಲ್ಲ ಪದಗಳನ್ನು ಕನ್ನಡೀಕರಣಗೊಳಿಸುವುದು ಸ್ವಲ್ಪ ಕಷ್ಟ. ನಾವು ಒಂದು ಪುಟ್ಟ ಪ್ರಯತ್ನ ಮಾಡೋಣ ಬನ್ನಿ.
slip = ಜಾರು :-)
silly point = ಮೂರ್ಖ ಬಿಂದು :-)
long leg = ಉದ್ದ ಕಾಲು :-)
square leg = ಚೌಕ ಕಾಲು :-)
fine leg = ಚಂದ ಕಾಲು :-)

ಇದೊಂದು ಉದಾಹರಣೆ:
ಎರಡು ಎಸೆತಗಳಲ್ಲಿ ೬ ಓಟಗಳ ಅವಶ್ಯಕತೆ. ಕೊನೆಯ ಹುದ್ದರಿ ಕೈಯಲ್ಲಿ. ನಿರ್ಣಾಯಕ ಘಟ್ಟದಲ್ಲಿ ಪಂದ್ಯ. ಬೌಲಿಂಗ್ ತುದಿಯಲ್ಲಿ ವಿಕ್ರಮ. ಹೊಡೆಬಡಿಯ ದಾಂಡಿಗ ಜಗಲಿ ಭಾಗವತ ತಂಡಕ್ಕೆ ಆಪದ್ಭಾಂಧವರಾಗಬಲ್ಲರೇ ಎನ್ನುವುದನ್ನು ಕಾದುನೋಡಬೇಕಾಗಿದೆ. ದಾಂಡಿಗನ ಎಡಭಾಗದಲ್ಲಿ ಐವರು, ಬಲಭಾಗದಲ್ಲಿ ನಾಲ್ವರು ಕ್ಷೇತ್ರರಕ್ಷಕರು. ತನ್ಮಧ್ಯೆ, ವಿಕ್ರಮ ಹತ್ತಾರು ಹೆಜ್ಜೆಗಳಿಂದ ಓಡಿಬಂದು ಹದ್ದಿನ ಕಣ್ಣಿನ ನಿರ್ಣಾಯಕ ಅಸತ್ಯಾನ್ವೇಷಿಗಳನ್ನು ದಾಟಿ ಬಳಸಿ ಎಸೆದಿರತಕ್ಕಂತಹ ಈ ಒಂದು ಎಸೆತ...ಅದ್ಭುತ ಎಸೆತ...ಎಡಗೂಟದ ನೇರದಲ್ಲಿ ಬಂದು ಕೊಂಚ ಒಳತಿರುವನ್ನು ಪಡೆದ ಎಸೆತ....ಚೆಂಡಿನ ನೇರವನ್ನ ಗುರುತಿಸುವಲ್ಲಿ ದಾಂಡಿಗ ವಿಫಲ....ದಾಂಡಿನ ಕೊನೆಯಂಚನ್ನು ಚುಂಬಿಸಿ ಸಾಗಿದ ಚೆಂಡನ್ನು ಬುತ್ತಿಯಾಗಿಸಿಕೊಳ್ಳುವಲ್ಲಿ ಗೂಟರಕ್ಷಕ ಸುಶ್ರುತ ಸಂಪೂರ್ಣ ವಿಫಲ....ಕಳಪೆ ಗೂಟರಕ್ಷಣೆ...ಈ ಒಂದು ಜೀವದಾನ ದುಬಾರಿಯಾಗಬಲ್ಲುದೇ ಎನ್ನುವದನ್ನು ಕಾದುನೋಡಬೇಕಾಗಿದೆ....ಅತ್ಯಂತ ರೋಚಕ ಅಂತ್ಯ...೬ ಓಟಗಳ ಅವಶ್ಯಕತೆ...ಕೊನೆಯ ಹುದ್ದರಿ ಕೈಯಲ್ಲಿ...ಕೊನೆಯ ಎಸೆತ....., ಅತ್ತಿಂದಿತ್ತ ಓಲಾಡುತ್ತಿರುವ ವಿಜಯಲಕ್ಷ್ಮಿ.......ಯಾರ ಕೊರಳಿಗೆ ವಿಜಯಮಾಲೆ?... ರೋಮಾಂಚಕತೆಯ ಉತ್ಕಂಠತತೆ....ವಿಕ್ರಮ ಸಜ್ಜಾಗುತ್ತಿದ್ದಾರೆ, ಕೊನೆಯ ಬಾರಿಗೆ....ಜಗಲಿ ಭಾಗವತರ ಹೊಡೆಬಡಿಯ ಆಟಕ್ಕೆ ಕಡಿವಾಣ ತೊಡಿಸಬಲ್ಲರೇ?....ಓಡಿಬಂದು ಎಸೆದಿರುವ ಈ ಎಸೆತ....ಭರ್ಜರಿ ಹೊಡೆತ.....ಗಾಳಿಯಲ್ಲಿ ತೇಲಿ ಹೋಗಿರುವ ಚೆಂಡು.......ಆರು ಓಟಗಳು........ಸೀಮಾರೇಖೆಯನ್ನ ಪೂರ್ಣಾಂತರದಲ್ಲಿ ದಾಟಿ ಸೆಲೆಬ್ರಿಟಿ ಬ್ಲಾಗರ್ ತರಹ ಕಣ್ಮರೆಯಾಗುವುದರೊಂದಿಗೆ.......ಜಗಲಿ ಭಾಗವತರ ತಂಡಕ್ಕೆ ವಿಜಯಮಾಲೆ.. :-))

ಮನವಿ : ಬಲ್ಲವರು ಈ ಪಟ್ಟಿಗೆ ಇನ್ನಷ್ಟು ಪದಗಳನ್ನು ಸೇರಿಸಿ.

June 18, 2008

ಬ್ಲಾಗ್ ವಿಹಾರ

ಇವತ್ತು ಹೀಗೆ ಒಂದು ಸುತ್ತು ಬ್ಲಾಗ್ ವಿಹಾರಕ್ಕೆ ಹೋಗೋಣ ಬನ್ನಿ.

ಭಾಗ್ವತ್ರು ತುಂಬ ದಿನದಿಂದ ಏನೂ ಮಾಡ್ದೇ ಸುಮ್ನೆ ಕಾಲ ತಳ್ತಾ ಇದ್ದಿದ್ರಿಂದ, ಏನಾದ್ರೂ inspirational ಸಿಗತ್ತಾ ಅಂತ ತುಂಬ ಹುಡುಕಾಡ್ತಾ ಇದ್ರು. ಹಾಗೆ ಹುಡುಕ್ತಾ ಹುಡುಕ್ತಾ ಇಲ್ಲಿಗ್ ಬಂದ್ರು. ’ಓದುಗ್ರೇ, ನಿಮ್ ಅನುಭವಾನೂ ಬರೀರಿ’ ಅಂತ ಕೇಳ್ಕೊಂಡಿದಾರೆ. ನೀವೂ ಕಾಮೆಂಟಿಸ್ಬಹುದು.

ಕನ್ನಡದಲ್ಲಿ ವಿಜ್ಞಾನ ಸಂಬಂಧಿ ಲೇಖನಗಳು ತೀರ ಕಡಿಮೆ ಅಂತ ಬಲ್ಲವರ ಅಂಬೋಣ. ಶ್ರೀನಿಧಿ, ಹಾಲ್ದೊಡ್ಡೇರಿ ಸುಧೀಂದ್ರ, ಪವನಜ ಅಂತ ಒಂದಿಷ್ಟು ಕೈ ಬೆರಳೆಣಿಕೆಯಷ್ಟು ಮಂದಿಯನ್ನ ಬಿಟ್ರೆ ಬೇರೆ ಯಾರೂ ಕೈಯಾಡಿಸಿಲ್ಲ. ಈ ಫೀಲ್ಡಿಗೆ ಹೊಸ ಎಂಟ್ರಿ ಕೊಟ್ಟಿರೋರು ಭೌತಶಾಸ್ತ್ರಜ್ಞೆ ಲಕ್ಷ್ಮಿ . ನೀವು ಓದಿ, ಬರ್ದು, ಬೆನ್ನು ತಟ್ಬೇಕಂತೆ.

ನಮ್ಮೂರಿನವ್ರೊಬ್ರು, ವಿಜಯರಾಜ ಕನ್ನಂತ ಅಂತ, ಕುಂದಾಪ್ರ ಕನ್ನಡದ ಹೊಸ ಬ್ಲಾಗು ಶುರು ಮಾಡಿದಾರೆ. ಇವರಲ್ಲೂ ಭಾಗ್ವತ್ರ ತರಹ, ಮಳೆ ಗಾಳಿ ಚಳಿ ಎನ್ನದೇ, ಪ್ರತಿದಿನವೂ ಕುಂದಗನ್ನಡದ ತರಗತಿಗಳನ್ನು ತೆಗೆದುಕೊಳ್ಳುವ ಪ್ರಶ್ನಾತೀತ ಬದ್ಧತೆ ಇದೆಯೇ ಅಂತ ಕಾದು ನೋಡಬೇಕಷ್ಟೆ.

ವಿಶೇಷ ಪ್ರಕಟಣೆ:
ಕೆಂಡಸಂಪಿಗೆಯ ಉಪಸಂಪಾದಕರೂ, ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು ದಾಖಲೆ ಮಾಡಿದವರೂ ಆದ ಜೋಮನ್ ವರ್ಗೀಸರು, ತಮ್ಮ ಬ್ಲಾಗೋದುಗರಿಗೆ ಕೃತಜ್ಞತಾಪೂರ್ವಕವಾಗಿ ಕೆಂಗುಲಾಬಿಗಳನ್ನು ನೀಡುತ್ತಿದ್ದಾರೆಂದೂ, ಮಹಿಳಾಮಣಿಗಳೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದೂ, ನಮ್ಮ ಬ್ಲಾಗಿನ ನಿಷ್ಠಾವಂತ ಓದುಗರೂ, ಹಿತೈಷಿಗಳೂ ಆದ ಶ್ರೀಮತಿ ಟೀನಾ ಅವರು ತಿಳಿಸಿರುತ್ತಾರೆ.

June 10, 2008

ವಾರ್ತೆಗಳು

ವಾರ್ತೆಗಳು,
ಬರೆಯುತ್ತಿರುವವರು ಜಗಲಿ ಭಾಗವತರು.

ಇತ್ತೀಚೆಗೆ ತಲೆದೋರಿರುವ ಅತೀವ ಪ್ರೇಮಕ್ಷಾಮದ ಸಮಸ್ಯೆಗೆ ಪರಿಹಾರ ಯೋಜನೆಯೊಂದನ್ನು ಕಂಡುಹಿಡಿಯಲು ಕನ್ನಡದ ಹಿರಿಯ ಬರಹಗಾರ್ತಿಯರಿಬ್ಬರು ನಿರ್ಧರಿಸಿದ್ದಾರೆಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅಮೇರಿಕೆಯ ಸಂಯುಕ್ತ ಸಂಸ್ಥಾನದ ಕೆಲಿಫೋರ್ನಿಯಾದ ಬೀದಿಯೊಂದರ ತಳ್ಳುಗಾಡಿಯ ಐಸ್ಕ್ಯಾಂಡಿಯೊಂದನ್ನು ಅಸ್ವಾದಿಸುತ್ತಾ ಬರಹಗಾರ್ತಿಯರೀರ್ವರು ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡರೆನ್ನಲಾಗಿದೆ. ಐಸ್ಕ್ಯಾಂಡಿಯನ್ನು ಆಸ್ವಾದಿಸಿದ ನಂತರ ಪಕ್ಕದ ತೋಟವೊಂದಕ್ಕೆ ’ನುಗ್ಗಿ’, ಕೆಂಗುಲಾಬಿಗಳ ನೂರಾರು ಛಾಯಾಚಿತ್ರಗಳನ್ನು ತಮ್ಮ ಕೆಮೆರಾದ ಬಕಾಸುರ ಹೊಟ್ಟೆಯಲ್ಲಿ ಸೆರೆಹಿಡಿದಿದ್ದಾರೆನ್ನಲಾಗಿದೆ. ಯೋಜನೆಯ ಮೊದಲ ಹಂತವಾಗಿ ತಮ್ಮ ಬ್ಲಾಗಿನಲ್ಲಿ ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಪ್ರೇಮಕವಿತೆಗಳನ್ನು ಪ್ರಕಟಿಸುವುದಾಗಿಯೂ, ಜೊತೆಯಲ್ಲಿ ಕಂಗೊಳಿಸುವ ಕೆಂಗುಲಾಬಿಯ ಚಿತ್ರಗಳನ್ನು ಪ್ರಕಟಿಸುವುದಾಗಿಯೂ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಚಿತ್ರದುರ್ಗದವರು "ಇತ್ತೀಚೆಗೆ ಬಹಳ ಮಂದಿ ಯುವಕ ಯುವತಿಯರು ಪ್ರೇಮಕ್ಷಾಮದಿಂದ ಬಳಲುತ್ತಿರುವ ಸಮಸ್ಯೆ ತಲೆದೋರಿದೆ. ಈ ನಿಟ್ಟಿನಲ್ಲಿ ನಾವು ಹಿರಿಯಕ್ಕನ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಇಂದಿನ ಪೀಳಿಗೆಯವರಿಗೆ ಸಹಾಯ ಮಾಡಬೇಕಂತ ಅನಿಸಿದ್ದರಿಂದ ಈ ಯೋಜನೆ ರೂಪುತಳೆಯಿತು" ಎಂದರು.

ಈಗ ಜಾಹೀರಾತು ಸಮಯ
**************************
ಬಿಸಿರಕ್ತದ, ಗಟ್ಟಿಮುಟ್ಟಾದ, ರಮ್ಯ ಹೃದಯಕ್ಕೆ ಇಂದೇ ಸಂಪರ್ಕಿಸಿ. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ - ೧-೮೦೦-ಹೃದಯ-ಲಭ್ಯವಿದೆ. ತ್ವರೆ ಮಾಡಿ. ಕೆಲವೇ ಕ್ಷಣಗಳು ಬಾಕಿ ಇವೆ. ಹೃದಯವನ್ನು ಕದಿಯಿರಿ, ಮನಸ್ಸನ್ನು ಪುಕ್ಕಟೆಯಾಗಿ ಪಡೆಯಿರಿ!!!
*************************************

ಈಗ ವಾರ್ತಾ ಪ್ರಸಾರ ಮುಂದುವರಿಯಲಿರುವುದು.

ಈ ಯೋಜನೆಯ ಇನ್ನೋರ್ವ ಭಾಗೀದಾರರಾದ ಸುಪ್ತದೀಪ್ತಿಯವರು ಇಂದಿಲ್ಲಿ ಕರೆದಿದ್ದ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡುತ್ತ "ಇವತ್ತಿನ ಯುವಜನಾಂಗಕ್ಕೆ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅವಶ್ಯಕತೆಯಿದೆ. ಇದು ಸಾಧ್ಯವಾಗಬೇಕಾದರೆ ಪ್ರೇಮಕವನಗಳ ಕುರಿತು ಯುವಜನಾಂಗದಲ್ಲಿ ಆಸಕ್ತಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಯೋಜನೆ ಸಮಾಜೋದ್ಧಾರದ ಉದ್ದೇಶಗಳನ್ನು ಹೊಂದಿದೆ" ಎಂದು ತಿಳಿಸಿದರು.

ಹವಾಮಾನ ವರದಿ :
ಪ್ರೇಮಕವನಗಳನ್ನೋದಿ, ದೈಹಿಕ ಉಷ್ಣತೆಯಲ್ಲಿ ಸಾಧಾರಣದಿಂದ ಭಾರೀ ಮಟ್ಟದ ಏರುಪೇರುಗಳಾಗುವ ಸಂಭವವಿರುವುದರಿಂದ ಸಾರ್ವಜನಿಕರು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕೆಂದು ಹವಾಮಾನ ಇಲಾಖೆಯ ಪ್ರಕಟನೆಯೊಂದು ತಿಳಿಸಿದೆ.

ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು.

May 26, 2008

ಇಂದೇ ಹಾರೈಸಿ

ಮಕ್ಕಳ ಕುರಿತಾಗಿರುವ ಎರಡು ಕನ್ನಡ ಬ್ಲಾಗುಗಳು - ನಂದಗೋಕುಲ ಮತ್ತು ನಿಶುಮನೆ ನಿನ್ನೆ ನಂದಗೋಕುಲದ ಅಮ್ಮುವಿನ ಹುಟ್ಟುಹಬ್ಬ. ಇವತ್ತು ನಿಶುವಿನ ಹುಟ್ಟುಹಬ್ಬ. ಇಂದೇ ಹಾರೈಸಿ :-)

ಹೊಸದೊಂದು ಮೊಗ್ಗು ಅರಳಿದೆ, ಕನ್ನಡ ಬ್ಲಾಗುಲೋಕದಲ್ಲಿ. ಕೇಶಾಲಂಕಾರ ಪ್ರಿಯರು (ನಾಗವೇಣಿಯರು, ನೀಲವೇಣಿಯರು, ಕೃಷ್ಣವೇಣಿಯರು) ತಪ್ಪದೇ ಇಂದೇ ಭೇಟಿ ಕೊಡಿ :-)

ರಾಧಿಕಾ ಅವರು ಕನ್ನಡದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ, ಮಾಹಿತಿ ಪ್ರಧಾನವಾದ ಬ್ಲಾಗೊಂದನ್ನು ಆರಂಭಿಸುತ್ತೇನೆಂದು ಭರವಸೆಯನ್ನು ನೀಡಿದ್ದಾರೆ. ಆದರೆ ಇದು ಚುನಾವಣಾ ಸಮಯದ ಆಶ್ವಾಸನೆಯಾಗಿರುವುದರಿಂದ ಓದುಗರು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮುಹೂರ್ತವಿದ್ದಲ್ಲಿ ತಿಳಿಸಬೇಕಾಗಿ ವಿನಂತಿ :-)

May 24, 2008

ನೀಕು

ಭಾಗವತರು ಬರೀ ಬೇರೆಯವರ ಕಾಲೆಳೆಯುತ್ತ ಕಾಲಹರಣ ಮಾಡುತ್ತಿದ್ದಾರೆನ್ನುವ ಗಂಭೀರ ಆಪಾದನೆಗಳು ಜಗಲಿಯನ್ನು ತಲುಪಿರುವುದರಿಂದ, ಕುಂದಗನ್ನಡದ ತರಗತಿಗಳನ್ನು ವಿದ್ಯುಕ್ತವಾಗಿ ಪುನರಾರಂಭಿಸಲು ಭಾಗವತರಿಗೆ ನಿರ್ದೇಶಿಸಲಾಗಿದೆ. ಸದರಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಈ ಕೂಡಲೇ ಗುರುದಕ್ಷಿಣೆಯನ್ನು ಶ್ರೀ ಜಗಲಿ ಭಾಗವತರ ಖಾತೆಗೆ ಮುಂಗಡವಾಗಿ ಸಂದಾಯಿಸಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ.
***************************

’ನೀಕು’ = ನಿಲುಕು (ಶಿಷ್ಟ ಕನ್ನಡದ ಸಮಾನಾರ್ಥಕ ಪದ, ನನ್ನ ಊಹೆಯ ಪ್ರಕಾರ). ಇಣುಕು, ಎಟುಕು.

"ನೀನ್ ಉದ್ದ ಇದ್ಯಲೆ (ಇದೀಯಲ್ಲ). ನ್ಯಾಲೆ (clothes line) ’ನೀಕತ್ತಾ’ ಕಾಣ್".
"ಬಾಮಿ (ಬಾವಿ) ನೀಕ್ಬೆಡ ಅಂದ್ನಾ? ಹಾಂಗಾರೆ ಹೇಳದ್ದ್ ಕೇಂತಿಲ್ಯಾ?"
"ಎಂತದಾ! ಅಷ್ಟು "ನೀಕಿ" ಕಾಂಬುಕೆ (ಕಾಣ್ಲಿಕ್ಕೆ) ಎಂಥ ಮಂಗ ಕುಣಿತಾ ಇತ್ತಾ ಅಲ್ಲಿ?" - ಗುರು ಕೊಟ್ಟ ಉದಾಹರಣೆ.
"ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ (ಹೋಗುವಾಗ) ಪಟ್ಟಾ೦ಗ ಕ೦ಡ್ ಹೀ೦ಗೇ ನೀಕಿದ್ದೇ."
"ನೀವ್ ಆ ತೊಡು ಇತ್ತು-ಷೆಡ ಬಿಡ ಮಾಣಿ ಕೈಗೆ ನೀಕು ಹಾ೦ಗೆ ಹಾಲ್ಬಾಯೋ-ಅತ್ರಾಸವೊ ಇಟ್ರಾತಿಲ್ಯ ಮಾರಾಯ್ರೇ!" - ಪಯಣಿಗರ ಉದಾಹರಣೆ.

ಸುಶ್ರುತ ಕೊಟ್ಟ ಉದಾಹರಣೆ ಭಿನ್ನವಾಗಿದೆ. ಇದು ಹವ್ಯಗನ್ನಡದ ಪ್ರಯೋಗವೇ, ಇಲ್ಲ ಕುಂದಗನ್ನಡದಲ್ಲೂ ಉಪಯೋಗಿಸುತ್ತಾರಾ?
"'ನೀಕು' ಅಂದ್ರೆ ಎತ್ತಿ ಕೊಡೋದು. "ಏ ಮಾಣೀ, ಒಂಚೂರು ಬುಟ್ಟಿ ನೀಕಿ ಕೊಡಾ" ಅಂತ ಅಪ್ಪ ಹೇಳಿದ ಅಂದ್ರೆ, ಬುಟ್ಟಿಯನ್ನ ಎತ್ತಿ ತಲೆ ಮೇಲಿಟ್ಟುಕೊಳ್ಳಲಿಕ್ಕೆ ಹೆಲ್ಪ್ ಮಾಡು ಅಂತ."

ಬಾನಾಡಿಯವರ ಉದಾಹರಣೆ ನೋಡಿದ್ರೆ ತುಳು ಪ್ರಭಾವ ಹೊಂದಿದೆಯೇನೋ ಅನ್ಸತ್ತೆ. ಗೊತ್ತಿದ್ದವರು ತಿಳಿಸಿ.
'ನೀಕು’ ಅಂದ್ರೆ ನೀವು ಕೂಡ. "ಆಟಕ್ಕೆ ನೀಕು ಹೋಗ್ತೀರಾ?"

ಬೋನಸ್ ಪ್ರಶ್ನೆಗೆ ಉತ್ರ :-
"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದರೆ ಜಾಸ್ತಿ ಉಟ, ತಿಂಡಿ ತಿನ್ನದ ಸಣಕಲು ಮಕ್ಕಳು ’ಆ ಐಟಮ್ ಸರಿ ಇಲ್ಲಾ, ಇದು ಸರಿ ಇಲ್ಲಾ, ಉಪ್ಪು ಕಮ್ಮಿ, ಖಾರ ಜಾಸ್ತಿ’ ಹೀಂಗೆ ಕಂಪ್ಲೇಂಟ್ ಮಾಡ್ತಾ ಇದ್ದರೆ (ಬಾಯಿಷೆಡ ಅಂತ್ಲೂ ಹೇಳ್ತಾರೆ) ಮೇಲಿನ ನಾಣ್ಣುಡಿ ಹೇಳ್ತಾರೆ! - ನೆಂಪು ಗುರು ವ್ಯಾಖ್ಯಾನ.

ಕಾಂಬ್ಕೆ ಬಡವಾಗಿದ್ದರೂ ಕೊಬ್ಬು ಜಾಸ್ತಿ - ಶಾಂತಲಾ ಭಂಡಿ ವ್ಯಾಖ್ಯಾನ.

ಮಾಣಿ ಬಡಕಟಿಯಾದ್ರೂ ಮಾತಿಗೇನೂ ಕಡಿಮೆಯಿಲ್ಲ - ನಾವಡ ಉವಾಚ :-)

’ಬಡಕಟಿ’ = ಬಡಕಲು, ’ಸೆಡಕಟಿ’ = ಸೆಡಕು (ಸಿಟ್ಟು - ಸೆಡಕು, ಸೆಡವು). ಹೆಚ್ಚಾಗಿ ಸಣ್ಣ ದೇಹದವರು ತಿಂಡಿ ತಿನ್ನುವಾಗ ವಿಪರೀತ ಬಾಯಿ ರುಚಿ ತೋರಿಸಿದಾಗ, ಇಲ್ಲ ಹಠಮಾರಿಯಂತೆ ವರ್ತಿಸುವಾಗ ಇದನ್ನು ಪ್ರಯೋಗಿಸ್ತಾರೆ.

ಇವತ್ತಿನ ಸವಾಲು :-
’ಕಟ್ಕಟ್ಲೆ’ - ಈ ಶಬ್ದದ ಅರ್ಥ ಏನು?

ಬೋನಸ್ ಪ್ರಶ್ನೆ :-
ಗೊಂಬೆಯಾಟದಲ್ಲಿ ವಿಶ್ವಪ್ರಸಿದ್ಧವಾದ ಕುಂದಾಪುರ ತಾಲೂಕಿನ ತಂಡ ಯಾವುದು?

May 11, 2008

ಮಾಯಾವಿ ವಿಕ್ರಮ

ನಿನ್ನೆ ಇಲ್ಲೊಂದು ಯಕ್ಷಗಾನ ಇತ್ತು. ತುಂಬ ಚೆನ್ನಾಗಿದ್ದರಿಂದ ನಿಮ್ ಜೊತೆ ಮಾತ್ರ ಹಂಚ್ಕೊಳ್ತಿದ್ದೇನೆ. ಬೇರೆ ಯಾರಿಗೂ ಹೇಳ್ಬೇಡಿ.
ಓದುಗರಿಗೆ ಸೂಚನೆ :-
೧) ಪಾತ್ರಧಾರಿಯು ಬೆಂಗ್ಳೂರಿನಲ್ಲಿ ನೆಲೆಸಿ ತುಂಬ ವರ್ಷಗಳಾಗಿರುವುದರಿಂದ ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಬಳಕೆಯಾಗಿದೆ.
೨) ಕೆಳಗಿನ ಕಥಾನಕವನ್ನ ಯಕ್ಷಗಾನದ ಧಾಟಿಯಲ್ಲೇ, ಶ್ರುತಿಬದ್ಧವಾಗಿ, ಸ್ವರಭಾರ, ಏರಿಳಿತ, ಆಂಗಿಕ ಮತ್ತು ವಾಚಿಕ ಅಭಿನಯದೊಂದಿಗೆ ಓದಿಕೊಂಡರೆ ರಸಾಸ್ವಾದನೆಗೆ ಒಳ್ಳೆಯದು.
೩) ಹಿ: - ಹಿಮ್ಮೇಳ. ಪಾ: ಪಾತ್ರಧಾರಿ, ನಾ: ನಾರದ ಮುನಿಗಳು.
೪) ಮೊದಲಿಗೆ ನಾಂದಿ ಪದ್ಯ. ನಂತರ ಒಡ್ಡೋಲಗದ ದೃಶ್ಯ.

***********************************
ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳಜನ ಧ್ಯಾನಿಸಿ ವಂದಿಸುತ ಶಾರದೆಗೆ ಶಕ್ರಾದ್ಯಮರರಿಂಗೆರಗಿ ನಾಂದಿಯೊಳು ವರವ್ಯಾಸ ಮುನಿಪದ ದ್ವಂದ್ವಕಾನತನಾಗಿ ನೆರೆದಿಹ ಕವಿಗಳ ಸಂದಣಿಗೆ ಬಲವಂದು ಪೇಳ್ವೆನೀ "ಅಧಿಕ ಪ್ರಸಂಗ" ಎಂಬ ಕಥಾಮೃತವ

ಹಿ : ಬಲ್ಲಿರೇನಯ್ಯಾ?
ಪಾ: ಮಾಯಾವಿ ವಿಕ್ರಮನೆಂದರೆ ಯಾರೆಂದು ತಿಳಿದಿದ್ದೀರಿ?
ಹಿ : ಇರುವಂಥ ಸ್ಥಳ
ಪಾ: ರಂಗಸ್ಥಳ
ಹಿ: ಹ್ಹ!!
ಪಾ: ವಿಶಾಲವಾದ ಬೆಂಗಳೂರು ಮಹಾನಗರವನ್ನೇ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡವನಿಗೆ ಎಲ್ಲ ಸ್ಥಳವೂ ರಂಗಸ್ಥಳವೇ.
ಹಿ: ಹ್ಹ!!
ಪಾ: ಸಪ್ತಸಾಗರಗಳನ್ನ ದಾಟಿ, ದಿಗ್ವಿಜಯವನ್ನ ಪೂರೈಸಿ, ಸ್ವಸ್ಥಾನವಾದ ಬೆಂಗಳೂರು ಮಹಾನಗರಿಗೆ ಮರಳಿ ಬಂದಿರುವ ಸಂದರ್ಭ. ಮಹಾಕಾವ್ಯವೊಂದನ್ನು ಬರೆಯುವ ಉದ್ದೇಶದೊಂದಿಗೆ ಮರಳಿ ಬಂದೆನಾದರೂ, ವೈಯಕ್ತಿಕ ಕಾರಣಗಳಿಂದ ಜೀವಂತಕಾವ್ಯವೊಂದರೊಂದಿಗೆ ಮಗ್ನನಾಗುವ ಪರಿಸ್ಥಿತಿಗೆ ಸಿಲುಕಿಕೊಂಡೆ.
ಹಿ: ಜೀವಂತಕಾವ್ಯ? ಹ್ಹ!!!
ಪಾ: ಮಾಯಾವಿ ವಿಕ್ರಮ, ನಿನ್ನ ಕವನಗಳೆಲ್ಲಿ?, ಎಂದು ನನ್ನ ಪ್ರಜಾಪರಿವಾರವರ್ಗದವರೆಲ್ಲ ಒಕ್ಕೊರಲಿನಿಂದ ಕೇಳುತ್ತಿದ್ದಾರೆ. ಏನು ಮಾಡೋಣ? ಇದೆಲ್ಲ ಹೀಗೆಯೇ ಆಗಬೇಕೆಂದು ವಿಧಿಲಿಖಿತವಾಗಿದ್ದರೆ ಅದನ್ನು ತಪ್ಪಿಸಲು ನಾನ್ಯಾರು?
ಹಿ: ಹ್ಹ!!
ಪಾ: ಪಂಡಿತೋತ್ತಮರು ಮೆಚ್ಚಿ ’ವಿಕ್ಕಿ’ ಕವಿತೆಗಳೆಂದೂ, ಅರ್ಥವಾಗದೆ ಮಂಡೆಪೆಟ್ಟು ಮಾಡಿಕೊಂಡ ಮಂದಿ ’ವಿಕ್ಸ್’ ಕವಿತೆಗಳೆಂದೂ, ವಿಧ ವಿಧ ಹೆಸರುಗಳೊಂದಿಗೆ ನನ್ನ ಕವನಗಳನ್ನು ಗುರುತಿಸುತ್ತಾರೆ. ಕವನಗಳ ಮೂಲಕವೇ ಅಂಗ, ವಂಗ, ಕಳಿಂಗ, ಕಾಂಭೋಜವೇ ಮೊದಲಾದ ಛಪ್ಪನ್ನಾರು ದೇಶಗಳಲ್ಲಿ ಲೋಕೋತ್ತರ ಪ್ರಸಿಧ್ಧಿಯನ್ನು ಪಡೆದಿರುವಾಗ.....ಇದೇನನ್ನ ಕೇಳುತ್ತಿದ್ದೇನೆ?...
ಹಿ: ಏನ ಕೇಳಿದೆ ನಾನು? ಏನ? ಏನ?...ಏನ ಕೇಳಿದೆ ನಾನು? ಬಿಡಲಾರೆ....ನಾ...ಬಿಡಲಾರೆ...
ಪಾ: ಅದಾರೋ ಪರದೇಸಿಯಾದ ಜಗಲಿ ಭಾಗವತರಂತೆ...ನನ್ನ ಕುರಿತು ಲಘುವಾಗಿ ಬರೆಯುತ್ತಿದ್ದಾರೆ ಎನ್ನುವ ವರ್ತಮಾನ ರಾಜದೂತರಿಂದ ತಿಳಿದುಬಂದಿದೆ....ನಾನು ಬೆಂಗಳೂರು ಮಹಾನಗರಿಯನ್ನು ತಲುಪಿದ ಮೇಲೆ ಕರೆ ಮಾಡುತ್ತೇನೆ ಅಂದವರು ಈ ಕೆಲಸಕ್ಕೆ ಕೈ ಹಾಕಿದರೇ?..ಎಷ್ಟು ಧೈರ್ಯ? ಎಂತಹ ಅಧಟು?...ಅವರು ಎಲ್ಲಿಯೇ ಅಡಗಿರಲಿ.....ಅತಳ, ವಿತಳ, ಸುತಳ, ಪಾತಾಳ, ರಸಾತಳ, ಮಹಾತಳ, ತಳಾತಳದಲ್ಲೇ ಅಡಗಿರಲಿ, ಇಲ್ಲಾ ಭೂಗರ್ಭದಲ್ಲೇ ಅಡಗಿರಲಿ, ಅವರನ್ನ ಗೂಗಲಿಸಿ, ಹಿಡಿದೆಳೆತಂದು ತಕ್ಕ ಶಾಸ್ತಿಯನ್ನು ಮಾಡುತ್ತೇನೆ....
ಹಿ: ಸಮಾಧಾನ...ಸಮಾಧಾನ....
ಪಾ: ಹ್ಹ..ಇದೀಗಷ್ಟೇ ಬೇಹುಗಾರರಿಂದ ತಿಳಿದುಬಂದ ಸಮಾಚಾರ...ಅವರು ಲೋಕಕಲ್ಯಾಣಾರ್ಥವಾಗಿ ಶ್ರದ್ಧಾಭಕ್ತಿಯಿಂದ, ವಾರಾಂತ್ಯದಲ್ಲಿ ದಿನವೊಂದಕ್ಕೆ ೧೮ ಗಂಟೆಗಳಷ್ಟು ಘನಘೋರ ನಿದ್ದೆಯನ್ನು ಮಾಡುತ್ತಾರೆ ಎನ್ನುವ ಮಾಹಿತಿ....ನಿದ್ದೆಯಲ್ಲಿದ್ದವರನ್ನ, ರಣಕ್ಕೆ ಬೆನ್ನು ಹಾಕಿ ಓಡುತ್ತಿರುವವರನ್ನ, ನಿರಾಯುಧರನ್ನ ಘಾಸಿಗೊಳಿಸಬಾರದು ಎನ್ನುವುದು ಕ್ಷಾತ್ರಧರ್ಮ....ಹ್ಹಾ...ಈಗೇನು ಮಾಡಲಿ? ಇವರನ್ನ ನಿದ್ದೆಯಿಂದ ಎಬ್ಬಿಸುವ ವಿಧಾನ ಹೇಗೆ?
ಹಿ: ಮಸಾಲೆ ದೋಸೆಯ ವಾಸನೆ ತೋರಿಸಿದರೆ?
ಪಾ: ಹ್ಹಾ...ಭಲೇ...ಒಳ್ಳೆಯ ಯೋಜನೆ. ಇಗೋ, ನಿಮಗೆ ನನ್ನ ಕಂಠೀಹಾರವನ್ನ ಪಾರಿತೋಷವಾಗಿ ನೀಡುತ್ತಿದ್ದೇನೆ...ಯಾರಲ್ಲಿ? ಇವರಿಗೆ ಸಾವಿರ ಬಂಗಾರದ ವರಹಗಳನ್ನು ನೀಡಿ ಯಥೋಚಿತವಾಗಿ ಸನ್ಮಾನಿಸಿ....
ಹಿ: ಧನ್ಯೋಸ್ಮಿ.
ಪಾ: ಮಸಾಲೆ ದೋಸೆ ಹೇಗಿರಬೇಕು?
ಹಿ: ಹೇಗಿರಬೇಕು?
ಪಾ: ರುಚಿಕಟ್ಟಾಗಿರಬೇಕು...ರುಚಿ ಕಟ್-ಆಗಿರಬೇಕು...(ವ್ಯಂಗ್ಯ ನಗು)....ಹ್ಹ....ರಾಜಪಾಕಶಾಸ್ತ್ರಜ್ಞರಿಂದ ದೋಸೆಯನ್ನು ತಯಾರಿಸಿದ್ದಾಗಿದೆ...ಪದಾತಿ ದಳ, ಅಶ್ವಸೈನ್ಯ, ಗಜಸೈನ್ಯವೂ ಸಿದ್ಧವಾಗಿದೆ. ಇನ್ನೇನು ತಡ? ಹೊರಡೋಣವಂತೆ.....
(ನಾರದ ಮುನಿಗಳ ಪ್ರವೇಶವಾಗುವುದು).
ನಾ: ಭಾಗವತ.....ಭಾಗವತ.....
ಪಾ: ನಾರದ ಮುನಿಪುಂಗೋತ್ತಮರೇ...ಇದೋ ವಂದಿಸಿಕೊಂಡಿದ್ದೇನೆ.....ಆಸೀನರಾಗಿ.
ನಾ: ಆಯ್ಯಾ ಮಾಯಾವಿ ವಿಕ್ರಮ. ನಿನ್ನ ರಣೋತ್ಸಾಹವನ್ನು ನೋಡಿ, ಅನಾಹುತವನ್ನು ತಪ್ಪಿಸಲೋಸುಗ ಆತುರಾತರವಾಗಿ ಬಂದಿದ್ದೇನೆ.
ಪಾ: ಅನಾಹುತವೇ?
ನಾ: ಹೌದಯ್ಯ. ಜಗಲಿ ಭಾಗವತರು ಅಕ್ಷೋಹಿಣಿ ಸೈನ್ಯದ ಬಲವುಳ್ಳವರು. ಅಲ್ಲದೇ ಅವರ ಪುಣ್ಯನಾಮ ಸ್ಮರಣೆಯನ್ನು ಮಾಡಿದರೆ ನಿನಗೆ ಸನ್ಮಂಗಲ ಉಂಟಾಗುವುದಯ್ಯಾ..ಹಾಗಾಗಿ, ಈ ಯುದ್ಧವನ್ನು ಕೈ ಬಿಡು.
ಪಾ: ಮುನಿಪೋತ್ತಮರೇ, ನಿಮ್ಮ ಮಾತುಗಳನ್ನು ಮೀರಲಾರೆ. ಇಗೋ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇನೆ...
ನಾ: ಒಳ್ಳೆಯದಾಗಲಿ. ಭಾಗವತ......ಭಾಗವತ.....
ಪಾ: ನಾರದ ಮಹರ್ಷಿಗಳ ಸಲಹೆಯನುಸಾರ ಯುದ್ಧವನ್ನು ಕೈಬಿಟ್ಟಿದ್ದೇನೆ.....ಹ್ಹಾ....ಬಹಳ ಆಯಾಸವುಂಟಾಗಿದೆ....ವಿಶ್ರಮಿಸಕೊಳ್ಳಬೇಕು....ಯಾರಲ್ಲಿ? ರಾಜಸಖಿಯರನ್ನು ಬರಹೇಳಿ.
ಹಿ: ಅವರೆಲ್ಲ ಮಹಿಳಾ ವಿಮೋಚನಾ ಸಭೆಗೆ ತೆರಳಿದ್ದಾರಯ್ಯ....
ಪಾ: ಹ್ಹಾ...ಎಂತಹ ದುರ್ಭರ ಪ್ರಸಂಗ ಇದು.
ಹಿ: ಅಧಿಕ ಪ್ರಸಂಗವೇ ಹೌದು.
ಪಾ: ಹ್ಹ...

(ಆಗ ಕರೆಂಟು ಕೈ ಕೊಟ್ಟಿದ್ದರಿಂದ ಮುಂದೇನಾಯ್ತೆಂದು ಸರಿಯಾಗಿ ಗೊತ್ತಾಗ್ಲಿಲ್ಲ. ಗೊತ್ತಿದ್ದವರು ತಿಳಿಸಿ.)

ಹಿ: ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ.........ಮಂಗಳಂ
**********************************************************

April 29, 2008

ಬಾಲಕನ ಅರಣ್ಯರೋದನ

ಮೊನ್ನೆ ಒಂದು ಪೌರಾಣಿಕ ನಾಟಕವನ್ನ ನೋಡಲಿಕ್ಕೆ ಹೋಗಿದ್ದೆ. ಅದರ ಒಂದು ದೃಶ್ಯದ ತುಣುಕು ನಿಮ್ಮ ಓದಿಗೆ.
*********************************************************************
(ರಾಜಬೀದಿಯ ಹಿನ್ನೆಲೆಯ ತೆರೆ. ಹರಿದ ಬಟ್ಟೆಗಳನ್ನು ತೊಟ್ಟ, ಕೆದರಿದ ತಲೆಯ ಬಾಲಕನೊಬ್ಬನು ವಿಧವಿಧವಾಗಿ ವಿಲಪಿಸುತ್ತಾ ರಂಗದ ಮೇಲೆ ಆಗಮಿಸುವನು).

ಬಾಲಕ : ಅಯ್ಯೋ, ಇದೆಂತಹ ದುರ್ಭರ ಪ್ರಸಂಗ ನನ್ನ ಬಾಳಿನಲ್ಲಿ ಬಂದೊದಗಿತಲ್ಲ. ಇದನ್ನೆಲ್ಲ ನೋಡುವ ನನ್ನ ಕಣ್ಣುಗಳು ಇಂಗಿಹೋಗಬಾರದೆ? ಇದನ್ನೆಲ್ಲ ಅನುಭವಿಸುವ ನನ್ನ ಹೃದಯ ಸಿಡಿದು ಹೋಗಬಾರದೆ? ನಾನು ನಿಂತಿರುವ ಭೂಮಿ ಬಿರಿದು ನನ್ನನ್ನು ತಿನ್ನಬಾರದೇ? ಹರಹರ....ಶಿವಶಿವ...ಅಕಟಕಟಕಟಕಟಕಟ.....(ಲಬೋಲಬೋ ಎಂದು ಎದೆ ಎದೆ ಬಡಿದುಕೊಳ್ಳುತ್ತ, ಕೈಗಳನ್ನು ಮೇಲ್ಮುಖವಾಗಿ ಹಿಡಿದು, ನಿಧಾನವಾಗಿ ಒಂದೊಂದೆ ಹೆಜ್ಜೆಯನ್ನ್ನಿಟ್ಟು ರಂಗದ ಮಧ್ಯಭಾಗಕ್ಕೆ ಬರುವನು. )

(ತಲೆಗೆ ಮುಂಡಾಸು ಸುತ್ತಿಕೊಂಡ, ಕೈಯಲ್ಲಿ ತಾಳ ಹಿಡಿದಿರುವ ವ್ಯಕ್ತಿಯೊಬ್ಬನು ರಂಗದ ಮೇಲೆ ಆಗಮಿಸುವನು).
ವ್ಯಕ್ತಿ : ಅಯ್ಯಾ ಬಾಲಕ. ನಿನ್ನ ಹೃದಯವಿದ್ರಾವಕ ರೋದನವನ್ನು ನನ್ನ ಈ ಎರಡು ಕಣ್ಣುಗಳಿಂದ ನೋಡಲಾಗುತ್ತಿಲ್ಲ. ನಿನ್ನ ವ್ಯಥೆ ಏನು?

(ಬಾಲಕನು ಕಣ್ಣೀರೊರೆಸಿಕೊಳ್ಳಲು ನೋಡುವನು. ಕೂಡಲೇ ಪ್ರೇಕ್ಷಕರೊಬ್ಬರು ಪಕ್ಕದಲ್ಲಿರುವ ಹವ್ಯಗೂಸೊಂದರಿಂದ (ಹವ್ಯಕ + ಕೂಸು - ಆದೇಶಾಗಮ ಲೋಪ ಸಂಧಿ) ಕರವಸ್ತ್ರವೊಂದನ್ನು ಪಡೆದು ಬಾಲಕನಿಗೆ ನೀಡುವರು).
ಬಾಲಕ : ಅಯ್ಯಾ, ನನ್ನ ಕಥೆಯನ್ನು ಏನೆಂದು ಹೇಳಲಿ? ನನ್ನ ಪಾಲಕರಿಂದ ನಾನು ತ್ಯಕ್ತನಾಗಿದ್ದೇನೆ.

ವ್ಯಕ್ತಿ : ಅಹುದೇ? ಈ ಕಲಿಗಾಲದಲ್ಲೂ ತಮ್ಮ ಮಕ್ಕಳನ್ನು ಪಾಲಕರು ಬೀದಿಗೆ ಬಿಡುವರೇ? ಆಯ್ಯೋ, ಎಂತಹ ಕಾಲವು ಪ್ರಾಪ್ತವಾಯಿತು? ಛೆ..ಛೆ...ಛೆ...

ಬಾಲಕ : ಅಹುದು. ನಾನು ಆಂಗ್ಲ ಬಾಲಕ. ನನ್ನ ಪಾಲಕರು ತಮ್ಮ ಕನ್ನಡದ ಪುತ್ರಿಯನ್ನು ಚೆನ್ನಾಗಿಯೇ ಪೋಷಿಸುತ್ತಿಹರು....

ವ್ಯಕ್ತಿ : ಅಹೋ!! ಮಕ್ಕಳಲ್ಲೂ ಮಲತಾಯಿಧೋರಣೆಯೆ? ಶಾಂತಂ ಪಾಪಂ...ಶಾಂತಂ ಪಾಪಂ...

ಬಾಲಕ : ನನಗೆ ಜೀವನದಲ್ಲಿ ಜಿಗುಪ್ಸೆ ಮೂಡಿದೆ. ಇದೂ ಒಂದು ಜೀವನವೇ? ಇದೋ, ನಾನು ಹಿಮಾಲಯಕ್ಕೆ ತೆರಳಿ ನಿರ್ವಾಣ ಹೊಂದುತ್ತೇನೆ....

ವ್ಯಕ್ತಿ : ಅಯ್ಯಾ ಬಾಲಕ. ತಡೆ. ಎಲ್ಲದಕ್ಕೂ ತಾಳ್ಮೆಯೇ ಭೂಷಣವು. ಅಗೋ, ನಮ್ಮ ರಾಜವೈದ್ಯೆಯಲ್ಲಿ ವಿಚಾರಿಸೋಣ. ನಿನಗೂ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅಗತ್ಯವಿರುವುದೇನೋ...

ಬಾಲಕ : ಅಹುದೇ? ನಾನೀಗ ಏನು ಮಾಡಬೇಕೆಂದು ಹೇಳುವಂತವರಾಗಿ.

ವ್ಯಕ್ತಿ : ಕೇಳುವಂತವನಾಗು...ನೀನು ಸೂರ್ಯೋದಯಕ್ಕಿಂತ ಅರ್ಧ ಗಂಟೆ ಮುನ್ನ, ಒದ್ದೆ ಪೀತಾಂಬರವನ್ನುಟ್ಟು, ಖಾಲಿ ಹೊಟ್ಟೆಯಲ್ಲಿ, "ಓಂ ಶ್ರೀ ಜಗಲಿ ಭಾಗವತಾಯ ನಮಃ" ಎಂದು ಒಂದು ಸಾವಿರ ಬಾರಿ ಪುಣ್ಯನಾಮ ಸ್ಮರಣೆಯನ್ನು ಮಾಡು.

ಬಾಲಕ : ಧನ್ಯೋಸ್ಮಿ. ಹಾಗೆಯೇ ಆಗಲಿ. ನಿಮ್ಮ ಪಾದಾರವಿಂದಗಳಿಗೆ ವಂದಿಸಿಕೊಂಡಿದ್ದೇನೆ.

ವ್ಯಕ್ತಿ : ತಥಾಸ್ತು. ನಿನಗೆ ಮಂಗಳವಾಗಲಿ.

April 6, 2008

ಕುಂದಗನ್ನಡದಲ್ಲಿ ಮೊದಲ ಕಾದಂಬರಿ

ಕುಂದಗನ್ನಡದಲ್ಲಿ ಬರೆದ ಮೊದಲ ಕಾದಂಬರಿ ಬಿಡುಗಡೆಯಾಗಿದೆ. ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳರು ಬರೆದ ’ಹಳೆಯಮ್ಮನ ಆತ್ಮಕಥೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಉದಯವಾಣಿಯ ಲೇಖನವನ್ನು ಓದಿ.

March 23, 2008

ದೇಶಕಾಲ

’ದೇಶಕಾಲ’ ತ್ರೈಮಾಸಿಕ ಪತ್ರಿಕೆಯ ಬಗ್ಗೆ ನಿಮಗೆ ಗೊತ್ತಿರಬಹುದು ಅಂತ ಅಂದುಕೊಳ್ತೇನೆ. ಗೊತ್ತಿಲ್ಲದಿದ್ದಲ್ಲಿ ಎಂ.ಎಸ್.ಶ್ರೀರಾಮ್ ಬರೆದಿರುವ ಲೇಖನವನ್ನು ಓದಿ. ’ದೇಶಕಾಲ’ಕ್ಕೆ ಒಂದು ವರ್ಷ ತುಂಬಿದಾಗ ಬರೆದ ಲೇಖನವದು.

’ದೇಶಕಾಲ’ಕ್ಕೆ ಮೂರು ವರ್ಷ ತುಂಬಿದಾಗ, ಭರವಸೆಯ ಹೊಸ ಬರಹಗಾರ, ನರೇಂದ್ರ ಪೈ ಬರೆದ ಲೇಖನ ಇಲ್ಲಿದೆ. ವಿವೇಕ ಶಾನಭಾಗರ ಸಂದರ್ಶನದ ಕೊಂಡಿಯೂ ಅಲ್ಲಿದೆ.

ಮತ್ತೆ, ಸ್ವಲ್ಪ ತಡವಾಗಿ ತಮ್ಮ ತಲೆಯ ಮೇಲೆ ಬೋಧಿವೃಕ್ಷವನ್ನು ಬೆಳೆಸಿಕೊಂಡವರ ಬರಹ ಇಲ್ಲಿದೆ.

ಭಾಗವತರು ಸಜ್ಜಾಗೃಹಕ್ಕೆ ತೆರಳಿ ಹಂಸತೂಲಿಕಾತಲ್ಪದಲ್ಲಿ ಪವಡಿಸಲು ಅಣಿಯಾಗುವುದರೊಂದಿಗೆ ಈ ಸಂಚಿಕೆಯು ಇಲ್ಲಿಗೆ ಪರಿಸಂಪನ್ನಗೊಂಡಿತು :-)

March 15, 2008

ಮಾರುವೇಷದಲ್ಲಿ ಬ್ಲಾಗ್ ಸಂಚಾರ

ಇವತ್ತು ಸುಮ್ಮನೆ ಒಂದು ಬ್ಲಾಗು ಪ್ರದಕ್ಷಿಣೆ. ಸೋಂಬೇರಿ ಭಾಗವತರಿಗೆ ಬರೆಯಲು ಬೇರೇನೂ ತೋಚುತ್ತಿಲ್ಲವಾದ್ದರಿಂದ ಓದುಗ ದೊರೆಗಳು ಇದನ್ನೋದಿ ಸಿಟ್ಟಾಗದೆ ಭಾಗವತರನ್ನು ಮನ್ನಿಸಬೇಕಾಗಿ ವಿನಂತಿ.

ಬೇಂದ್ರೆಯಜ್ಜನ ಕವಿತೆಗಳನ್ನು ನಾವೆಲ್ಲರೂ ಓದಿಯೇ ಇದ್ದೇವೆ. ಅವರ ಕುರಿತು ಸ್ವಲ್ಪ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಇಲ್ಲಿಗೆ ಭೇಟಿ ಕೊಡಿ. ಇದು ನಮ್ಮ ಕಾಕಾ ಬರೀತಾ ಇರೋ ಬ್ಲಾಗ್. ಓದಿ ಇಷ್ಟವಾದ್ರೆ ಕಾಮೆಂಟಿಸಿ, ಖುಶಿಯಾಗಿ ಇನ್ನಷ್ಟು ಬರೀತಾರೆ:-)

ನಮ್ಮ ಗಮನ ಸೆಳೆದ ಇನ್ನೊಂದು ಬ್ಲಾಗ್ ಇಲ್ಲಿದೆ. ಆರು ಮಂದಿ ಕುರುಡರ ಕಥೆ ಗೊತ್ತಾ ನಿಮಗೆ? ಗೊತ್ತಿಲ್ಲದಿದ್ದಲ್ಲಿ ಒಮ್ಮೆ ಇಲ್ಲಿಗೆ ಭೇಟಿ ಕೊಡುವುದು ಒಳ್ಳೆಯದು.

ನಮ್ಮೂರಿನವರೊಬ್ರು ಈಗಷ್ಟೆ ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಬ್ಲಾಗ್ ಟ್ರಾಫಿಕ್ ನೋಡಿ ಸ್ವಲ್ಪ ಅಳುಕಿನಿಂದಲೆ ಆರಂಭಿಸಿದ್ದಾರೆ. ಓದುಗರು ಕಾಮೆಂಟಿಸಿ, ಕೈ ಕೊಟ್ಟು, ಅಂದ್ರೆ ಪ್ರೋತ್ಸಾಹ ಕೊಟ್ಟು ಆಚೆದಡ ಸೇರಿಸ್ಬೇಕಂತ ಅವರ ವಿನಂತಿ.

ಇಲ್ಲಿಗೆ ಸೋಂಬೇರಿ ಭಾಗವತರ ಈ ದಿನ ಸಮಾಪ್ತಿಯಾಯಿತು.

February 28, 2008

ಕನಸು ಕಾಣದ ಕಂದ

ಓದುಗರಿಗೆ ಸೂಚನೆ :- ಇದೊಂದು ಕಂದಪದ್ಯ*ದ ಧಾಟಿಯಲ್ಲಿರುವ ಘನಗಂಭೀರ ಕವನವಾಗಿದ್ದು, ಗಂಭೀರವಾಗಿಯೇ ಓದಿಕೊಳ್ಳತಕ್ಕದ್ದೆಂದು ಸೂಚನೆ.
**********************************

ಭಾರೀ ಜಟಾಪಟಿ ನಿನ್ನೆ ರಾತ್ರಿ,
ಇದ್ದದ್ದು ಇಬ್ಬರೇ ಇಬ್ಬರು,
ಕನಸು ಮತ್ತು ನಾನು

ಹುಯ್ಯಲಿಟ್ಟುಕೊಂಡಿದ್ದೆ ನಾನು
’ತುಂಬ ಬೋರಾಗುತ್ತಿದೆ ಕಣೋ
ಒಂದಾದರೂ ಕನಸು ಕೊಡು
ಯಾವುದಾದರೂ ಸರಿಯೇ’

’ಆಫೀಸಿನ ಕೆಂಪು ಕೆಂಪು ಆರತಿ,
ಪಕ್ಕದ ಮನೆಯ ಕೀರುತಿ,
ಅಥವಾ ಜಿ-ಟಾಕಿನ ಭಾರತಿ,
ಯಾರಾದರೂ ಸರಿಯೇ’

ನನ್ನೆದೆಯಲ್ಲಾಕೆ ಹೂತುಹೋದಂತೆ
ಬಿಸಿಯುಸಿರು ಬೆಚ್ಚಗಾಗಿಸಿದಂತೆ,
ಚಂದ ಕನಸು ಕೊಡು ಮಾರಾಯ,
ಏನಾದರೂ ಸರಿಯೇ’

ಮುಖಗಂಟಿಕ್ಕಿಕೊಂಡಿತು ಕನಸು
’ಎಲ್ಲಾರ್ಗೂ ಅದೇ ಬೇಕು ಗುರೂ,
ಸ್ಟಾಕು ಖಾಲಿ, ನಾಳೆ ನೋಡುವ,
ಅದೇನು ಲವ್ವು ಮಾಡ್ತಾರೋ ಜನ’

ಮತ್ತೆ ದುಂಬಾಲುಬಿದ್ದೆ ನಾನು,
’ಹೋಗಲಿ ಬೇರಿನ್ನಿನ್ನೇನಾದರೂ,
ಬಿಲ್ ಗೇಟ್ಸು, ಸ್ಟೀವ್ ಜಾಬ್ಸು ಥರ,
ಕೊಪ್ಪರಿಗೆ ದುಡ್ಡು ಮಾಡಿದ ಹಾಗೆ’

ಗಹಗಹಿಸಿ ನಕ್ಕಿತು ಕನಸು
’ನಿನಗೆಂಥ ಮರುಳೋ ಭಾಗ್ವತ,
ಮೊದಲೇ ಬುಕ್ ಮಾಡೊದಲ್ವಾ?
ವೈಟಿಂಗ್ ಲಿಸ್ಟಿನಲ್ಲಿದ್ದೀ ನೀನೀಗ’

ಕೆರೆದುಕೊಂಡೆ ಇದ್ದಬದ್ದ ತಲೆ
’ಏನೋ ಒಂದು ಕಣೋ, ಪ್ಲೀಸ್,
ಆಸ್ಕರ್ರು, ನೋಬೆಲ್ಲು, ವಿಂಬಲ್ಡನ್ನು,
ರೆಬೆಲ್ಲು , ಸೈನಿಕ, ಪ್ರಧಾನಮಂತ್ರಿ’

ಕುಪಿತಗೊಂಡಿತು ಕನಸು
’ನನ್ನದೇನು ಶಾಪಿಂಗ್ ಮಾಲಾ?
ನಿನಗೇ ಗೊತ್ತಿಲ್ಲ, ಏನು ಬೇಕಂತ,
ಹೋಗಿ ತೆಪ್ಪಗೆ ಬಿದ್ದುಕೋ ಸುಮ್ಮನೇ’

ಇವತ್ತೀಗ ನಾನು ಬಿದ್ದುಕೊಳ್ಳುತ್ತಿದ್ದೇನೆ,
ಇನ್ನೆರಡೇ ನಿಮಿಷ, ಮತ್ತೆ ಗೊರಕೆ.
ಆರತಿಯೂ ಇಲ್ಲ, ಕೀರುತಿಯೂ ಇಲ್ಲ...
ನನ್ನ ಬಾಸು, ಪ್ರಾಜೆಕ್ಟು...ಡೆಡ್-ಲೈನು...

*ಕಂದಪದ್ಯ = ಶಿಶುಗೀತೆ,

ಶೀರ್ಷಿಕೆ ಕೃಪೆ : - ’ಕನಸು ಕಂಡ ಕಂಸ’ ಯಕ್ಷಗಾನ ಪ್ರಸಂಗಕೃರ್ತರ ಕ್ಷಮೆಕೋರಿ.

February 26, 2008

ಎಡಿಯ

’ಎಡಿಯ’ - ಕೆಳಗಿನ ಉದಾಹರಣೆಗಳನ್ನ ನೋಡಿ. ಅರ್ಥ ಗೊತ್ತಾಗತ್ತೆ.

"ಮಣ್ಯಾ, ಅಂಗ್ಡಿಗ್ ಹೋಯಿ (ಹೋಗಿ) ಸಾಮಾನ್ ತಕಂಬಾ" (ತೆಗೆದುಕೊಂಡು ಬಾ - ತಕಂಡ್ ಬಾ - ತಕಂಬಾ:-)
"ನಂಗ್ ಎಡಿಯ"

"ಹೆಣೆ (ಹೆಣ್ಣೆ), ದನ ಕೂಗತ್ತಲೇ (ಕೂಗ್ತಿದ್ಯಲ್ಲ). ಬಾಯ್ರ್ (ಬಾಯಾರು) ಹಾಕಿ ಬಾ."
"ನಂಗ್ ಎಡಿಯ"

"ಮಗಾ, ಶೆಟ್ರ್ ಮನಿಗೆ ಹಾಲ್ ಕೊಟ್ಟಿಕ್ (ಕೊಟ್ಟು) ಬಾ"
"ನಂಗ್ ಎಡಿಯ"

"ಹೊತ್ತ್ ಕಂತಿಯಾಯ್ತಲೆ (ಸಂಜೆಯಾಯ್ತಲ್ಲ). ಹೋಗ್, ದೇವ್ರಿಗೆ ದೀಪ ಹಚ್ಚ್"
"ನಂಗ್ ಎಡಿಯ"

"ಭಾಗ್ವತ್ರೇ, ದಿನಾ ದಿನಾ ಕ್ಲಾಸ್ ತಕಣಿ ಕಾಂಬೊ"
"ನಂಗ್ ಎಡಿಯ"

’ಎಡಿಯ’ = ಆಗದು, ಇಷ್ಟವಿಲ್ಲ
ಇದರ ಮೂಲ ಯಾವುದು ಅಂತ ಗೊತ್ತಾಗ್ಲಿಲ್ಲ. ಇದೇ ಪದದ ಬೇರೆ ಬೇರೆ ರೂಪಗಳು :-
’ಎಡಿತ್ತಾ?’ = ಆಗತ್ತಾ? - ನಿಂಗ್ ಎಡಿತ್ತಾ?
’ಎಡಿತಿಲ್ಲೆ’ = ಆಗುವುದಿಲ್ಲ
’ಎಡುದಿಲ್ಲ’ = ಆಗುವುದಿಲ್ಲ -
’ಎಡುದಾರೆ’, ’ಎಡುದಾದ್ರೆ’ = ಆಗೋದಾದ್ರೆ - ನಿಂಗ್ ಎಡುದಾರ್ ಮಾತ್ರ ಮಾಡ್.
’ಎಡುದಲ್ಲ’ = ಆಗುವುದಲ್ಲ - ನನ್ ಕೂಡ್ ಎಡುದಲ್ಲಪ ಇದ್ (ನನ್ ಕೈಯಲ್ಲಿ ಆಗಲ್ಲ)

ಬೋನಸ್ ಪ್ರಶ್ನೆಗೆ ಉತ್ರ :-
ಕಂಡ್ರೆ ಮಾಣಿ, ಉಂಡ್ರೆ ಗೋಣಿ...
ಭಾಗವತ್ರ ಥರ ಸಣ್ಣಸಣ್ಣಗೆ ಇರುವವರು ಇಮ್ಯಾಜಿನ್ ಮಾಡ್ಲಿಕ್ಕೂ ಸಾಧ್ಯವಿಲ್ಲದಷ್ಟು ತಿಂಡಿಪೋತರಾಗಿದ್ರೆ, ಹೊಟ್ಟೆಬಾಕರಾಗಿದ್ರೆ, ಅವರನ್ನು ಹಂಗಿಸ್ಲಿಕ್ಕೆ ಈ ಗಾದೆ ಉಪಯೋಗಿಸ್ತಾರೆ... (ಶ್ರೀ ವ್ಯಾಖ್ಯಾನ).

ಇವತ್ತಿನ ಸವಾಲು :-
’ನೀಕು’ - ಇದರ ಅರ್ಥ ಏನು?

ಬೋನಸ್ ಪ್ರಶ್ನೆ -
ಇದರ ಅರ್ಥ ತಿಳಿಸಿ - ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ :-)

February 20, 2008

ನಾವಡ

’ನಾವಡ’ :-
ನಾವಡ ಪದಮೂಲದ ಬಗ್ಗೆ ಓದುಗ ಮಹಾಪ್ರಭುಗಳು ನಿರುತ್ತರರಾಗಿದ್ದಾರೆ. ಎಲ್ಲರೂ ಶಸ್ತ್ರ ತ್ಯಜಿಸಿ, ಶರಣಾಗತರಾಗಿರುವುದರಿಂದ ಭಾಗವತರೇ ಉತ್ತರಿಸುವಂತವರಾಗುತ್ತಾರಂತೆ.....

ನಾವಡ ಪದದ ಮೂಲದ ಬಗ್ಗೆ ನಾನು ಓದಿದ್ದು, ಪಾ.ವೆಂ.ಆಚಾರ್ಯರ ಪದಾರ್ಥ ಚಿಂತಾಮಣಿಯಲ್ಲಿ. ಅವರ ಪ್ರಕಾರ, ನಾವಡ ಪದದ ಮೂಲ - ’ನವ ಊಢಃ’ (ಹೊಸ ಮದುಮಗ). ಅದು ನಾವುಡ ಆಗಿ, ಈಗ ನಾವಡ ಆಗಿದೆ ಆನ್ನುವುದು ಅವರ ಅಂಬೋಣ. ಈ ಪದ ಮೂಲದ ಕುರಿತು ಬೇರೆ ವ್ಯಾಖ್ಯಾನಗಳೂ ಇರಬಹುದು. ಪಂಡಿತೋತ್ತಮರಿಗೆ ಗೊತ್ತಿದ್ದರೆ ತಿಳಿಸಿ. ನೀವು ಊಹಿಸಿರುವ ಪ್ರಕಾರ ನಾವಡ ಸರ್ನೇಮು (ಸರ್-ನೇಮ್ ಪದದ ಕನ್ನಡ ರೂಪ).

ಬೋನಸ್ ಪ್ರಶ್ನೆಗೆ ಉತ್ರ :- ದಿಕಾಳಿಂಗ ನಾವಡ. ಇವರ ಕೆಲವು ಪ್ರಸಂಗಗಳು ಇಲ್ಲಿ ಲಭ್ಯವಿದೆ. ನನಗೆ ತೀರ ಇಷ್ಟವಾದದ್ದು ಗದಾಯುದ್ಧ ಮತ್ತು ಕನಸು ಕಂಡ ಕಂಸ. ಕನಸು ಕಂಡ ಕಂಸ ಪ್ರಸಂಗದಲ್ಲಿ ಕೊನೆಯ ಇಪ್ಪತ್ತು ನಿಮಿಷದ ಹಾಡುಗಾರಿಕೆ ಚೆನ್ನಾಗಿದೆ. ಒಂದು ಸ್ಯಾಂಪಲ್ಲು -
ಧೂರ್ತ ಕಂಸನ ಹೃದಯ ಸ್ತಂಭಿಸಲು ಗೋವಳರ ವರ್ತಮಾನವ ಕೇಳಿ ಚಿತ್ತದಲಿ ಕಡುನೊಂದುವ್ಯರ್ಥಬರಿಸಿದೆಯೇಕೆಶಿವಶಿವಾ ಅದ್ಭುತವು ಪೃಥ್ವಿ ನಡುಗುತ್ತಲಿಹುದು

ಇದರ ರಾಗ ಯಾವುದು, ತಾಳ ಯಾವುದು ಗೊತ್ತಿಲ್ಲ (afterall, ನಾನು ರಾಗ-ದ್ವೇಷಗಳಿಲ್ಲದ ಸಮಚಿತ್ತದ ವ್ಯಕ್ತಿ). ಜೊತೆಗೆ ಆ delimiterಗಳನ್ನು ಮನಸೋ ಇಚ್ಛೆ ಕೊಟ್ಟಿದ್ದೇನೆ. ಮನೆಯಲ್ಲಿದ್ದ ’ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು’ ಅನ್ನುವ ಹೆಬ್ಬೊತ್ತಿಗೆಯಲ್ಲೂ ಇದೇ ಥರ delimiters ನೋಡಿದ ನೆನಪು. ಅಡ್ಜಸ್ಟ್ ಮಾಡ್ಕೊಳ್ಳಿ :-)

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - ’ಎಡಿಯ’.

ಬೋನಸ್ ಪ್ರಶ್ನೆ :-
ಈ ನಾಣ್ಣುಡಿಯ ಅರ್ಥ ತಿಳಿಸಿ :- ’ಕಂಡ್ರ್ ಮಾಣಿ. ಉಂಡ್ರ್ ಗೋಣಿ’. ತುಂಬ ಸುಲಭದ್ದಿದು.

February 12, 2008

’ಪೋಂಕು’

’ಪೋಂಕು’ = ತಲೆಹರಟೆ ವ್ಯಕ್ತಿ, ಕಿಲಾಡಿ, ತಲೆಸರಿಯಿಲ್ಲದವ...ಸರಿಯಾದ ಅರ್ಥ ಗೊತ್ತಾಗ್ತಿಲ್ಲ. ಆದರೆ ಇದೇ ಗುಂಪಿನಲ್ಲಿ ಬರತ್ತೆ :-)

"ಇದೆಲ್ಲೀ ಪೋಂಕ್ ಗಂಡ್. ಬರೀ ತದ್ಯಾಪ್ರತ ಮಾಡತ್ತಪ"
"ಆ ಹೆಣ್ಣ್ ಸರಿ ಇಲ್ಲ ಅಂಬ್ರ್ (ಅಂತೆ). ಅದ್ ಪೋಂಕ್ ಅಂಬ್ರಪ (ಅಂತಾರಪ್ಪ)...ಹೌದೋ ಸುಳ್ಳೋ ಗೊತ್ತಿಲ್ಲ" ವದಂತಿ ಹಬ್ಬಿಸುವುದು ಹೀಗೆ:-)
"ಬರೀ ಪೋಂಕ್ ಮಾಣಿ ಮರ್ರೆ ಇದ್. ಹೇಳದ್ದೊಂದೂ ಕೇಂತಿಲ್ಲ (ಕೇಳಲ್ಲ) ಕಾಣಿ" - ನನ್ನಮ್ಮ ಬೇರೆಯವರ ಮುಂದೆ ನನ್ನನ್ನು ಕೆಲವೊಮ್ಮೆ ಹೊಗಳುತ್ತಿದ್ದದ್ದು ಹೀಗೆ :-)

ಇದರ ಮೂಲದ ಬಗ್ಗೆ ಗೊತ್ತಿಲ್ಲ. ವಿಶ್ವಂಭರ ಉಪಾಧ್ಯರ ಶಬ್ದನಿಧಿ ಕೈಕೊಟ್ಟಿದೆ. ಈ ಪದಕ್ಕೆ ಹಲವಾರು ಸಮಾನಾರ್ಥಕ ಪದಗಳಿವೆ. ವಿಕ್ಕಿಯ ಪ್ರಕಾರ :- ಯಟ್ಟಿ, ಮರ್ಲ್, ಆನೆಗುಡ್ಡಿ, ಮಂಡೆಪಿರ್ಕಿ... ಇದ್ರ ಬಗ್ಗೆ ಮತ್ತೊಂದಿನ ಮಾತಾಡುವ.

ಬೋನಸ್ ಪ್ರಶ್ನೆಗೆ ಉತ್ರ -
’ಏನಾಯಿತು’- ಡುಂಡಿರಾಜರ ಸಂಕಲನ.

ಇವತ್ತಿನ ಸವಾಲು:-
ಕನ್ನಡ ಬ್ಲಾಗ್ ಲೋಕದಲ್ಲಿ ಅರವಿಂದ ನಾವಡರು ’ಚಂಡೆಮದ್ದಳೆ’ ಬಾರಿಸುತ್ತಿದ್ದಾರೆ. ಪ್ರಶ್ನೆ ಏನಪ್ಪಾ ಅಂದರೆ....ನಾವಡ ಶಬ್ದದ ಮೂಲ ಏನು?
ನೆನಪಿಡಿ - ಈ ಪ್ರಶ್ನೆಗೆ ಬೇರೆ ಬೇರೆ ಉತ್ತರಗಳಿರಬಹುದು. ಆದರೆ ಭಾಗವತರಿಗೆ ಗೊತ್ತಿರುವ ಉತ್ತರ ಹೇಳಿದರಷ್ಟೇ ನಿಮಗೆ ಅಂಕ :-)

ಬೋನಸ್ ಪ್ರಶ್ನೆ :-
ಚಂಡೆಮದ್ದಳೆ ಅನ್ನುವಾಗ ಯಕ್ಷಗಾನದ ನೆನಪು. ’ಯಕ್ಷಗಾನದ ಯುಗಪ್ರವರ್ತಕ’ ಅಂತ ಹೆಸರು ಮಾಡಿದ ಭಾಗವತರು ಯಾರು? ತುಂಬ ಸುಲಭದ ಪ್ರಶ್ನೆ ಇದು. ಸುಳಿವು ಬೇಕಿದ್ದರೆ ಮೇಲೆ ನೋಡಿ (ಮನೆಯ ಮಾಳಿಗೆಯನ್ನಲ್ಲ, ಮೇಲಿನ ಪ್ರಶ್ನೆಯನ್ನು:-)

ಓದುಗ ದೊರೆಗಳಲ್ಲಿ ಕಳಕಳಿಯ ವಿನಂತಿ. ಈ ಕೆಳ’ಕಂಡ’ ವ್ಯಕ್ತಿಗಳು ಕಾಣೆಯಾಗಿದ್ದಾರೆ. ನಿಮಗೆಲ್ಲಾದರೂ ಸಿಕ್ಕಿದರೆ, ದಯವಿಟ್ಟು ಜಗಲಿಗೆ ಫೋನಾಯಿಸಿ. ಸೂಕ್ತ ಭಕ್ಷೀಸನ್ನು ನೀಡಲಾಗುವುದು.
೧) ನಮ್ಮ reviewers ಮತ್ತು ಓದುಗರು- ಗುಬ್ಬಚ್ಚಿ, ಶಾಂತಲಾ, reborn, ಸಂತು ಕಾರಂತ, ಯಾತ್ರಿಕ.
೨) ಮಜಾವಾಣಿ ’ಸೊಂಪಾದ’ಕರು.