June 10, 2008

ವಾರ್ತೆಗಳು

ವಾರ್ತೆಗಳು,
ಬರೆಯುತ್ತಿರುವವರು ಜಗಲಿ ಭಾಗವತರು.

ಇತ್ತೀಚೆಗೆ ತಲೆದೋರಿರುವ ಅತೀವ ಪ್ರೇಮಕ್ಷಾಮದ ಸಮಸ್ಯೆಗೆ ಪರಿಹಾರ ಯೋಜನೆಯೊಂದನ್ನು ಕಂಡುಹಿಡಿಯಲು ಕನ್ನಡದ ಹಿರಿಯ ಬರಹಗಾರ್ತಿಯರಿಬ್ಬರು ನಿರ್ಧರಿಸಿದ್ದಾರೆಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅಮೇರಿಕೆಯ ಸಂಯುಕ್ತ ಸಂಸ್ಥಾನದ ಕೆಲಿಫೋರ್ನಿಯಾದ ಬೀದಿಯೊಂದರ ತಳ್ಳುಗಾಡಿಯ ಐಸ್ಕ್ಯಾಂಡಿಯೊಂದನ್ನು ಅಸ್ವಾದಿಸುತ್ತಾ ಬರಹಗಾರ್ತಿಯರೀರ್ವರು ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡರೆನ್ನಲಾಗಿದೆ. ಐಸ್ಕ್ಯಾಂಡಿಯನ್ನು ಆಸ್ವಾದಿಸಿದ ನಂತರ ಪಕ್ಕದ ತೋಟವೊಂದಕ್ಕೆ ’ನುಗ್ಗಿ’, ಕೆಂಗುಲಾಬಿಗಳ ನೂರಾರು ಛಾಯಾಚಿತ್ರಗಳನ್ನು ತಮ್ಮ ಕೆಮೆರಾದ ಬಕಾಸುರ ಹೊಟ್ಟೆಯಲ್ಲಿ ಸೆರೆಹಿಡಿದಿದ್ದಾರೆನ್ನಲಾಗಿದೆ. ಯೋಜನೆಯ ಮೊದಲ ಹಂತವಾಗಿ ತಮ್ಮ ಬ್ಲಾಗಿನಲ್ಲಿ ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಪ್ರೇಮಕವಿತೆಗಳನ್ನು ಪ್ರಕಟಿಸುವುದಾಗಿಯೂ, ಜೊತೆಯಲ್ಲಿ ಕಂಗೊಳಿಸುವ ಕೆಂಗುಲಾಬಿಯ ಚಿತ್ರಗಳನ್ನು ಪ್ರಕಟಿಸುವುದಾಗಿಯೂ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಚಿತ್ರದುರ್ಗದವರು "ಇತ್ತೀಚೆಗೆ ಬಹಳ ಮಂದಿ ಯುವಕ ಯುವತಿಯರು ಪ್ರೇಮಕ್ಷಾಮದಿಂದ ಬಳಲುತ್ತಿರುವ ಸಮಸ್ಯೆ ತಲೆದೋರಿದೆ. ಈ ನಿಟ್ಟಿನಲ್ಲಿ ನಾವು ಹಿರಿಯಕ್ಕನ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಇಂದಿನ ಪೀಳಿಗೆಯವರಿಗೆ ಸಹಾಯ ಮಾಡಬೇಕಂತ ಅನಿಸಿದ್ದರಿಂದ ಈ ಯೋಜನೆ ರೂಪುತಳೆಯಿತು" ಎಂದರು.

ಈಗ ಜಾಹೀರಾತು ಸಮಯ
**************************
ಬಿಸಿರಕ್ತದ, ಗಟ್ಟಿಮುಟ್ಟಾದ, ರಮ್ಯ ಹೃದಯಕ್ಕೆ ಇಂದೇ ಸಂಪರ್ಕಿಸಿ. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ - ೧-೮೦೦-ಹೃದಯ-ಲಭ್ಯವಿದೆ. ತ್ವರೆ ಮಾಡಿ. ಕೆಲವೇ ಕ್ಷಣಗಳು ಬಾಕಿ ಇವೆ. ಹೃದಯವನ್ನು ಕದಿಯಿರಿ, ಮನಸ್ಸನ್ನು ಪುಕ್ಕಟೆಯಾಗಿ ಪಡೆಯಿರಿ!!!
*************************************

ಈಗ ವಾರ್ತಾ ಪ್ರಸಾರ ಮುಂದುವರಿಯಲಿರುವುದು.

ಈ ಯೋಜನೆಯ ಇನ್ನೋರ್ವ ಭಾಗೀದಾರರಾದ ಸುಪ್ತದೀಪ್ತಿಯವರು ಇಂದಿಲ್ಲಿ ಕರೆದಿದ್ದ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡುತ್ತ "ಇವತ್ತಿನ ಯುವಜನಾಂಗಕ್ಕೆ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅವಶ್ಯಕತೆಯಿದೆ. ಇದು ಸಾಧ್ಯವಾಗಬೇಕಾದರೆ ಪ್ರೇಮಕವನಗಳ ಕುರಿತು ಯುವಜನಾಂಗದಲ್ಲಿ ಆಸಕ್ತಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಯೋಜನೆ ಸಮಾಜೋದ್ಧಾರದ ಉದ್ದೇಶಗಳನ್ನು ಹೊಂದಿದೆ" ಎಂದು ತಿಳಿಸಿದರು.

ಹವಾಮಾನ ವರದಿ :
ಪ್ರೇಮಕವನಗಳನ್ನೋದಿ, ದೈಹಿಕ ಉಷ್ಣತೆಯಲ್ಲಿ ಸಾಧಾರಣದಿಂದ ಭಾರೀ ಮಟ್ಟದ ಏರುಪೇರುಗಳಾಗುವ ಸಂಭವವಿರುವುದರಿಂದ ಸಾರ್ವಜನಿಕರು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕೆಂದು ಹವಾಮಾನ ಇಲಾಖೆಯ ಪ್ರಕಟನೆಯೊಂದು ತಿಳಿಸಿದೆ.

ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು.

6 comments:

ಸುಪ್ತದೀಪ್ತಿ suptadeepti said...

ವಾರ್ತೆಗಳನ್ನು ಬರೆಯುತ್ತಿರುವ ಭಾಗವತರೇ,
-ನಿಮ್ಮ ಸುದ್ದಿ ಮೂಲ ನಂಬಲರ್ಹವೆಂದು ಏನು ಪುರಾವೆಯಿದೆ?
-ಬೀದಿಬದಿಯ ತಳ್ಳುಗಾಡಿಯಲ್ಲಿ ಐಸ್-ಕ್ಯಾಂಡಿಯೆ? ಇದೇನು ಭಾರತದ ಗಲ್ಲಿ ಅಂದುಕೊಂಡಿರೋ?
-ಹಾಗೇನಾದರೂ ಬಡ "ಮೇಹಿಕಾನ"ನೊಬ್ಬ ಐಸ್ಕ್ಯಾಂಡಿ ಮಾರುತ್ತಿದ್ದನೆಂದೇ ಇರಲಿ, ಅದನ್ನು ಪ್ರತಿಷ್ಠಿತ ಬರಹಗಾರ್ತಿಯರು ಕೊಂಡು ತಿಂದರೆಂಬ ಸುದ್ದಿಗೆ ನಿಮಗೇನು ಆಧಾರವಿದೆ?
-"ಪಕ್ಕದ ತೋಟವೊಂದಕ್ಕೆ ನುಗ್ಗಿ..."??!! ಇದೇನಿದು ಇಂಥ ಆರೋಪ? ಹಿರಿಯ, ಪ್ರತಿಷ್ಠಿತ ಅಂತೆಲ್ಲ ಹೇಳಿ, ಈ ರೀತಿಯಾಗಿ ಕಮೆಂಟು ಒಗಾಯಿಸಬಹುದೆ?
-ಯಾವುದೇ ಸಂಬಂಧವಿಲ್ಲದ ಪವಿತ್ರಮನದ ತುಳಸಿಯಮ್ಮನನ್ನು ಇದರಲ್ಲಿ ಎಳೆದು ತಂದಿರುವುದೂ ಅನಪೇಕ್ಷಿತವಾಗಿದೆಯೆಂದು ಆಕ್ಷೇಪಿಸುತ್ತೇವೆ.

----ಸದ್ಯಕ್ಕೆ ಇಷ್ಟು ಸಾಕು. ಈ ಹಿರಿಯಕ್ಕ ಕಮೆಂಟುಗಳ ಕಮಟು ಬದಿಗಿಟ್ಟು ಚಿಕ್ಕ ಮಕ್ಕಳ ಸಮಾರಂಭವೊಂದಕ್ಕೆ ಹೋಗಬೇಕಾಗಿರುವುದರಿಂದ ಇದನ್ನು ಇಲ್ಲಿಗೇ ಸ್ಥಗಿತಗೊಳಿಸಲಾಗಿದೆ....

Jagali bhaagavata said...

- ಸುದ್ದಿಮೂಲವನ್ನು ತಿದ್ದಿದ್ದೇವೆ. ತಪ್ಪನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಕೃತಜ್ಞತೆಗಳು.

-ಭಾರತದ ಗಲ್ಲಿಯಲ್ಲಿ ಮಾತ್ರವೇ ತಳ್ಳುಗಾಡಿಯೇ? ಕಾಲ ತುಂಬ ಮುಂದುವರಿದಿದೆ.

- ನಮ್ಮಲ್ಲಿ ಎಲ್ಲ ಆಧಾರಗಳೂ ಇವೆ. ಆದರೆ ಅವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಆಗುವುದಿಲ್ಲ.

- ’ನುಗ್ಗು’ ಅನ್ನುವ ಶಬ್ದ ಉತ್ಸಾಹವನ್ನು, ಛಾತಿಯನ್ನು ತೋರಿಸುತ್ತದೆ. "ನುಗ್ಗಿ ನಡೆ, ನುಗ್ಗಿ ನಡೆ ಮುಂದೆ" ಎನ್ನುವ ಕವಿವಾಣಿಯನ್ನು ತಾವು ಕೇಳಿಲ್ಲವೇ?

- ಪವಿತ್ರಮನದ ತುಳಸಿಯಮ್ಮನವರು ಇದನ್ನು ಓದಿ ಕಂಗಾಲಾಗುವ ಸಂಭವವಿರುವುದರಿಂದ ಅವರನ್ನು ಈಗ ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ :-)

sunaath said...

ಭಲೇ ಭಲೇ ಭಾಗವತರೆ!
ನೀವು ಪ್ರಕಟಿಸುತ್ತಿರುವ ice cream scoopಗಳು ತುಂಬಾ
ರೋಮಾಂಚಕವಾಗಿವೆ.
ಇನ್ನೂ ಹೆಚ್ಚಿನ (ಬೇಶುದ್ಧ) ಸುದ್ದಿಗಳಿಗಾಗಿ ಕಿವಿ ಕತ್ತರಿಸಿಕೊಂಡು ಕಾಯುತ್ತಿದ್ದೇನೆ.

mala rao said...

i came...i saw...i lost....
ನೋ ಮೋರ್ ಕಮೆಂಟ್ಸ್!

Tina said...

ಜೆಬಿ,
ನೀವು ಮಹಿಳಾಮಣಿಗಳ ಬ್ಲಾಗುಗಳನ್ನೇ ಪ್ರಮುಖ ಟಾರ್ಗೆಟಾಗಿಸಿಕೊಂಡಿರುವುದರ ಹಿಂದೆ ಏನೋ ತರ್ಕವಿದೆ ಎಂದು ನಮಗೆ ಗುಮಾನಿ ಮೂಡಿದೆ. ಹಾಗಿಲ್ಲದೆ ಹೋದರೆ ಕೆಂಗುಲಾಬಿಗಳನ್ನು ತಮ್ಮ ಬ್ಲಾಗಿಗೆ ಬಂದುಹೋದವರಿಗೆಲ್ಲ ಉಚಿತವಾಗಿ ಹಂಚುತ್ತಿರುವ ಜೋಮನ್ ವರ್ಗೀಸ್ ಎಂಬ ’ಮಳೆಹನಿ’ಯ ಮಾಲೀಕರ ಬಗ್ಗೆ ತಾವು ಸುದ್ದಿಸ್ಕೋಪು ಮಾಡದಿರಲು ಹೇನು ಖಾರಣ?
ಠೀನಾ.

ಸುಪ್ತದೀಪ್ತಿ suptadeepti said...

ಇಲ್ಲಿ ವಾರ್ತೆಗಳನ್ನು ಓದಿ, ಸಂತೋಷದಿಂದ ಬೇಹೋಶ್ ಆಗಿ ಮಾಲಾ ಮೇಡಮ್ ಕಳೆದುಹೋಗಿದ್ದಾರೆಂದು ಅವರೇ ಇಲ್ಲಿಯೇ ಹೇಳಿಕೆಕೊಟ್ಟಿದ್ದಾರೆಂದು ನಮಗೆ ಸುದ್ದಿ ಬಂದಿದೆ...