December 16, 2007

ಹಸ್ರೋಣೆ

'ಹಸ್ರೋಣೆ', 'ಹಸ್ರೊಣೆ' = ಹಸಿರು ತರಕಾರಿ, ಕಾಯಿಪಲ್ಲೆ

"ಸಂತಿಗ್ (ಸಂತೆಗೆ) ಹೋಯಿ ಎಂತಾರು (ಏನಾದ್ರು) ಹಸ್ರೋಣೆ ತಕಂಡ್ ಬಾ"
"ಇವತ್ತ್ ಎಂತ ಅಡಿಗೆ ಮಾಡುದು? ಹಸ್ರೊಣೆ ಇತ್ತಾ?"
"ಒಂದ್ ಬೆಂಡೆಕಾಯಿ, ಎರಡ್ ಹೀರೆಕಾಯಿ ಬಿಟ್ರೆ ಬೇರೆ ಎಂತ ಹಸ್ರೋಣೆ ಇಲ್ಲ"

ನನ್ನ ಊಹೆಯ ಪ್ರಕಾರ ಇದರ ಮೂಲ -'ಹಸಿರುವಾಣಿ'.
ಬರಹ ನಿಘಂಟಿನ ಪ್ರಕಾರ 'ಹಸಿರುವಾಣಿ' = ೧. ಹಸಿರುವಾಣಿ (ನಾ) ೧ ಸಸ್ಯಗಳಿಂದ ಉತ್ಪನ್ನವಾಗುವ ಸೊಪ್ಪು, ಕಾಯಿ, ತರಕಾರಿ, ಹಣ್ಣು ಮೊ. (ವ್ಯಾಪಾರದ) ಸರಕು ೨ ಹಸುರಾದ ಎಲೆ, ಗರಿ ಮೊ.ವು

ಬೋನಸ್ ಪ್ರಶ್ನೆಗೆ ಉತ್ರ - ಸುಮಂಗಲಾ. ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯ ವಿಜೇತರು. 'ಛಂದ' ಪ್ರಕಾಶನದ ಮೊದಲ ವರ್ಷದ ಕಥಾಸ್ಪರ್ಧೆಯ ವಿಜೇತರು ಕೂಡ.

ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಪೋಂಕು'?

ಬೋನಸ್ ಪ್ರಶ್ನೆ -
'ಹಟ್ಟಿಕುದ್ರು' ಕುಂದಾಪುರ ತಾಲೂಕಿನ ಒಂದು ಸುಂದರ ಊರು. ಈ ಊರಿನಿಂದ ಬಂದ ಪ್ರಸಿದ್ಧ ಸಾಹಿತಿ (ಕವಿ, ನಾಟಕಕಾರ, ಅಂಕಣಕಾರ) ಯಾರು?
ಸುಳಿವು - 'ಏನಾಯಿತು' ಕವನ ಸಂಕಲನ.

December 6, 2007

ಎರು

'ಎರು' = ಇರುವೆ.

'ಸಕ್ರೆ ಚೆಲ್ಬೇಡ. ಎರು ಬತ್ತ್ (ಬರತ್ತೆ)'.
'ಆ ಲಾಡಿನ್ (ಲಡ್ಡುವಿನ) ಪಾತ್ರ ಮುಚ್ಚಲಿಲ್ಯಾ? ಎರು ಬಂತಾ ಕಾಣ್'.
'ಕೆಳಗ್ ಬೀಳಿಸ್ದೇ ತಿನ್ನ್. ಎರು ಬತ್ತ್'.

ಎರು ಬಗ್ಗೆ ಬರೀಲಿಕ್ಕೆ ತುಂಬ ವಿಷಯ ಇದೆ. ಒಳ್ಳೆಯ ದಿನ (ಅರಿ ಸಮಾಸ ಗೊತ್ತಲ್ಲ? - ಸಮ್ಯಕ್+day = Sunday) ಸಿಕ್ಕಾಗ ಬರೀತೇನೆ.

ನಮ್ಮೂರಿನ ಎರುಗಳಲ್ಲೂ ತುಂಬ ವಿಧವಿದೆ. ಅವುಗಳ ಜೀವಶಾಸ್ತ್ರೀಯ ಹೆಸರುಗಳು ಗೊತ್ತಿಲ್ಲ. ನಮ್ಮೂರಿನ ಹೆಸರುಗಳಷ್ಟೇ ಗೊತ್ತು. ನಿಮ್ಮೂರಲ್ಲಿ ಏನಂತಾರೆ ಅಂತ ಬರೆಯಿರಿ.

'ಓಡೆರು' = ಬಹುಶಃ ಓಡುವ ಎರು ಇರ್ಬೇಕು. ಇದು ನಿಂತಲ್ಲಿ ನಿಲ್ಲಲ್ಲ. ಯಾವಾಗ್ಲೂ ಓಡ್ತಾನೆ ಇರತ್ತೆ. ಸಿಕ್ಕಾಪಟ್ಟೆ ಓಟ. ಹಾಗಾಗಿ ಇದು ಹೆಚ್ಚ್ ಹೊತ್ತು ಒಂದೇಕಡೆ ಇರಲ್ಲ. ಕಪ್ಪು ಬಣ್ಣ. ತುಂಬ ಚಿಕ್ಕವು, ಜೊತೆಗೆ ಕಚ್ಚೋದು ಇಲ್ಲ. ಹಾಗಾಗಿ ಇದು ತೀರ ನಿರುಪದ್ರವಿ ಎರು.
'ನೈಯರು' - ಇದೂ ಕೂಡ ತುಂಬ ಚಿಕ್ಕ ಎರು. ಆದರೆ ಮಹಾನ್ ಘಾಟಿ. ಕೆಂಪು ಬಣ್ಣ. ಬಂದರೆ ಅಕ್ಷೋಹಿಣಿ ಸೈನ್ಯ. ಸುಲಭದಲ್ಲಿ ಹೋಗೋದೂ ಇಲ್ಲ, ಕಚ್ಚಿದರೆ ತುಂಬ ಉರಿ. ಹಾಗಾಗಿ ಇದು ಉಪದ್ರವಿ ನಂಬರ್ ೧.
'ಕೆಂಪೆರು' - ಇವು ಆಕಾರ, ಗಾತ್ರ, ಸೈನ್ಯಬಲ, ಮೀಸೆಬಲ (ಕಚ್ಚಿದಾಗ) ಎಲ್ಲದರಲ್ಲೂ 'ನೈಯರು' ತರಹ. ಸ್ವಲ್ಪ ಕೆಂಪು ಜಾಸ್ತಿ. ಆದರೆ ಇದನ್ನ 'ನೈಯರು'ಗಿಂತ ಸುಲಭದಲ್ಲಿ ಓಡಿಸಬಹುದು.
'ಕಟ್ಟೆ' - ಇವು ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಆದರೆ ಸೈನ್ಯ ಯಾವಾಗಲೂ ಸಣ್ಣದು. ಕಚ್ಚುವುದಿಲ್ಲ. ಕಪ್ಪು ಬಣ್ಣ. ಎರುವಿನ ಜಾತಿಯಲ್ಲಿ ಇವಕ್ಕೆ 'ಕ್ಲಾಸಿಕಲ್ ಎರು' ಅಂತ ಕರೀಬಹುದು :-)
'ಕಟ್ಟೆರು' - ಆಕಾರ, ಗಾತ್ರದಲ್ಲಿ ಇದು ಕಟ್ಟೆ ತರಹವೇ. ಸೈನ್ಯಬಲ ಸಣ್ಣದು. ಆದರೆ ಸ್ವಲ್ಪ ಕಪ್ಪು ಜಾಸ್ತಿ. ಕಚ್ಚಿದರೆ ನಮ್ಮೂರಿನ ಶ್ರೀನಿವಾಸ ಡಾಕ್ಟರರ ಇಂಜೆಕ್ಷನ್ ಚುಚ್ಚಿದ ಹಾಗಾಗತ್ತೆ :-)
'ಬೆದರುಕಟ್ಟೆ' - ಇದು ನಿಜವಾಗಿಯೂ ಬೆದರಿಸುವ ಕಟ್ಟೆ. ಎರುವಿನ ಜಾತಿಯಲ್ಲೆ ದೊಡ್ಡವು. ತುಂಬ ವಿರಳ. ಕೆಂಪುಮೂತಿ. ಓಡಾಡುವಾಗ ಸ್ವಲ್ಪ ರಾಜಗಾಂಭೀರ್ಯ. ಆದರೆ...ಕಚ್ಚಿದರೆ ದೇವರೇ ಗತಿ. ಇಡಿ ಒಂದು ದಿನ 'ಅಮ್ಮಾ, ಊಊಊಊ' ಅಂತ ಅಳ್ತಾ ಕೂರ್ಬಹುದು.

ಮೇಲಿನ ಎರುಗಳೆಲ್ಲ domestic ಎರುಗಳು:-) ನೀವು ಎಚ್ಚರವಹಿಸದಿದ್ದರೆ, ರಾತ್ರೋರಾತ್ರಿ ಮುನ್ಸೂಚನೆ ಕೊಡದೆ ಪದಾತಿ ದಳದೊಂದಿಗೆ ಮನೆಗೆ ದಾಳಿ ಇಡುವಂತಹವು.

'ಚೌಳಿ' - ಇದು non-resident ಎರು. ಹೆಚ್ಚಾಗಿ ಗೇರುಮರದ ಎಲೆಗಳ ಮಧ್ಯೆ ಮನೆಮಾಡಿಕೊಂಡಿರುತ್ತದೆ. ಕೆಂಪು ಕೆಂಪು, ರಣ ಭಯಂಕರ. ಮರ ಹತ್ತಿದಾಗ ನೀವೇನಾದರೂ ಗೊತ್ತಿಲ್ಲದೆ ಇದಕ್ಕೆ ಕೈಹಾಕಿದಿರೋ......'ಮಂಗಳಂ' ಅಷ್ಟೇ :-))

'ದುಡ್ಡು' - ಎರು ಕಚ್ಚಿ ಉಬ್ಬಿದ ಚರ್ಮದ ಭಾಗ.
ಬಹುಶಃ ಎರು ಕಚ್ಚಿಸಿಕೊಂಡ ಮಕ್ಕಳನ್ನ ಸುಮ್ಮನಿರಿಸಲಿಕ್ಕಾಗಿ ಈ ಪದ ಬಂದಿರಬೇಕು.
'ಎರು ಕಚ್ತಾ? ಓಹೋ, ನಮ್ಮನೆ ಮಗುಗೆ ಮಸ್ತ್ ದುಡ್ಡ್ ಸಿಕ್ಕಿತ್ತಲೇ ಇವತ್ತ್' :-)

ಬೋನಸ್ ಪ್ರಶ್ನೆಗೆ ಉತ್ರ -
'ಚಣಿಲ' - ಅಳಿಲು, ಇಣಚಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ. ತುಳುವಿನಲ್ಲೂ ಇದೇ ಬಳಕೆ ಇದೆ. ಸುನಿಲ್-ಗೆ ಥ್ಯಾಂಕ್ಸ್.

'ಮರದ್ಮೇಲ್ ಚಣಿಲ ಕಾಣ್. ಎಷ್ಟ್ ಚಂದ ಇತ್ತಲ್ದಾ?'.
'ಅಲ್ಕಾಣ್ ಚಣಿಲ. ಹ್ಯಾಂಗ್ (ಹೇಗೆ :-) ಮರ ಹತ್ತತ್ತ್ ಕಾಣ್'.

'ಚಣಿಲ' ಚಂದದ ಮುದ್ದಿನ ಪ್ರಾಣಿ. ಪಾಪದ್ದು (ಸುಪ್ತದೀಪ್ತಿ ಹೇಳಿದ ಹಾಗೆ). ಎಷ್ಟು ಪಾಪದ್ದು ಅಂದ್ರೆ ತ್ರೇತಾಯುಗದಲ್ಲೇ ಶ್ರೀರಾಮನಂಥ ಶ್ರೀರಾಮನೇ ಅದಕ್ಕೆ 'ಮೂರು ನಾಮ' ಎಳೆದಿದ್ದ :-)

ಚಣಿಲ ತುಂಬ ಕ್ರೀಯಾಶೀಲ ಪ್ರಾಣಿ. ಹಾಗಾಗಿ ಅದನ್ನ ಪ್ರಶಂಸಾತ್ಮಕವಾಗಿ ಬಳಸುವುದೂ ಉಂಟು.
"ಅಂವ ಚಣಿಲನ ಮರಿ. ಭಾರಿ ಚುರ್ಕ್ (ಚುರುಕು)"

ಓದುಗ ದೊರೆಗಳ ಬೇಡಿಕೆಯ ಪದಗಳು -
ಹಸರೊಣೆ, ಗಿಂಡು, ಪೋಂಕು.
ಶಾಂತಲಾ ('ಬಂಡಿ'ಗಟ್ಟಲೆ ಬರೆಯುವವರಲ್ಲ, ಇನ್ನೊಬ್ಬರು, ನಮ್ಮ reviewer) ಒಂದಿಷ್ಟು ಪದಗಳನ್ನು ಕೇಳಿದ್ದರು. ಅವು ಯಾವುದಂತ ಮರೆತು ಹೋಗಿದೆ (ವಯಸ್ಸಾಗ್ತ ಬಂತು, ಏನು ಮಾಡೋದು? :-)). ಮತ್ತೊಮ್ಮೆ ಕಳಿಸಿ :-)

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಹಸರೊಣೆ' ಅಥ್ವಾ 'ಹಸ್ರೋಣೆ'?

ಬೋನಸ್ ಪ್ರಶ್ನೆ :-
ಇದು ಯಾರ ಕಥೆ - 'ಇಣಚಿ ಮತ್ತು ಮರ'?
ಸುಳಿವು - ಇವರು ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ವಿಜೇತ ಕಥೆಗಾರ್ತಿ.

December 3, 2007

ಚಾಂದ್ರಾಣ

ಚಾಂದ್ರಾಣ = ರಾಡಿ, ಕಸ, ಗಲೀಜು, ಕೊಳೆ

"ಮನೆ ತುಂಬ 'ಚಾಂದ್ರಾಣ' ಮಾಡಿಯಳೀ ಮಾರಾಯ್ತಿ, ಹಿಡಿ (ಪೊರಕೆ) ತಂದು ಗುಡಿಸು ಕಾಂಬೋ. ಎಲ್ಲ ಸಾಪ್ (ಸ್ವಚ್ಛ) ಆಯ್ಕು (ಆಗಬೇಕು)ಈಗಲೇ." - ಸುನಿಲ್ ಅವರ ಅತ್ತಿಗೆ ಕೊಟ್ಟ ಉದಾಹರಣೆ.
"ಮಳಿಗೆ (ಮಳೆಗೆ) ಹಂಚ್ (ಹೆಂಚು) ಒಡ್ದೋಯಿ (ಒಡೆದುಹೋಗಿ) ಮನೆ ಎಲ್ಲ ಚಾಂದ್ರಾಣ ಆಯ್ತ್."
"ಆ ಮಾಣಿ ನೀರ್ ಚೆಲ್ಲಿ, ಮನೆ ಇಡಿ ಚಾಂದ್ರಾಣ ಮಾಡಿ ಇಟ್ಟಿತ್"
"ಬರೀ ಕಾಟ್ (ಕಾಟು) ದನ ಅದ್. ಎಷ್ಟ್ ಸರ್ತಿ ತೊಳ್ದ್ ಸಾಪ್ ಮಾಡಿ ಇಟ್ರೂ, ಮತ್ತೊಂದ್ ಕ್ಷಣದಲ್ಲ್ ಕೊಟ್ಟಿಗೆ ಇಡಿ ಚಾಂದ್ರಾಣ ಮಾಡತ್ತ್"

ಸುಮಾ ಅವರ ಅಮ್ಮ ಕುತೂಹಲಕರ ಉದಾಹರಣೆ ಕೊಟ್ಟಿದಾರೆ - "ಚಳಿಗೆ ಕಾಲೆಲ್ಲ ಒಡ್ದ್ (ಒಡೆದು) ಚಾಂದ್ರಾಣ ಆಯ್ತ್".

ಬೋನಸ್ ಪ್ರಶ್ನೆಗೆ ಉತ್ರ -
'ಏ' ಅಥ್ವಾ 'ಎ' - ಹೆಂಡತಿಯನ್ನು ಕರೆಯುವುದು :-))
ನನ್ನ ಮೇಲೆ ಸಿಟ್ಟಾಗಬೇಡಿ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ನಿರಪರಾಧಿ :-)
ಈ ಮೇಲಿನ ಅರ್ಥವನ್ನು ಕೊಟ್ಟಿದ್ದು ವಿಶ್ವಂಭರ ಉಪಾಧ್ಯರು. ಅವರ ಕುಂದಗನ್ನಡ ಶಬ್ದನಿಧಿ Digital Library of India-ದಲ್ಲಿದೆ - ಇಲ್ಲಿ ನೋಡಿ. ಕೊಂಡಿ ಕಳಿಸಿದ ಸುನಿಲ್-ಗೆ ಕೃತಜ್ಞತೆಗಳು.

ಇದೇ ಅರ್ಥವನ್ನು ಬೀಚಿ ಕೂಡ ಕೊಟ್ಟಿದಾರೆ - ಇಲ್ಲಿ ನೋಡಿ :-).

ತದ್ಯಾಪ್ರತದ ಬಗ್ಗೆ ಇನ್ನೊಂದಿಷ್ಟು :-
ಕುಂದಗನ್ನಡ ಶಬ್ದನಿಧಿಯಲ್ಲೂ ತದ್ಯಾಪ್ರತ ಸಿಗಲಿಲ್ಲ. ಆದ್ರೆ ಅದನ್ನೇ ಹೋಲುವ ಶಬ್ದ - 'ತದಿಪ್ರಿತ'. ಅದರ ಅರ್ಥ - ಒಂದಕ್ಕೊಂದೂವರೆ. ಸುನಿಲ್ ಹೇಳಿದ ಹಾಗೆ 'ಅಧಿಕಪ್ರಸಂಗ' ಅನ್ನುವ ಅರ್ಥ ತುಂಬ ಹೊಂದುತ್ತದೆ. ಶಬ್ದಮೂಲದ ಬಗ್ಗೆ ನನಗೆ ಗೊತ್ತಿಲ್ಲ. ಸಂತು ಹೇಳಿದ ಹಾಗೆ ಈ ಶಬ್ದ ಸಂಸ್ಕೃತದಿಂದ ಬಂದಿರಬಹುದೇ? ಭಾಷಾಪಂಡಿತರು ಎಲ್ಲಿ?

ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಎರು'?

ಬೋನಸ್ ಪ್ರಶ್ನೆ -
ಈ ಪ್ರಾಣಿಯ ಗ್ರಂಥಸ್ಥ ಕನ್ನಡದ ಪದ ಏನು - 'ಚಣಿಲ'?