December 16, 2007

ಹಸ್ರೋಣೆ

'ಹಸ್ರೋಣೆ', 'ಹಸ್ರೊಣೆ' = ಹಸಿರು ತರಕಾರಿ, ಕಾಯಿಪಲ್ಲೆ

"ಸಂತಿಗ್ (ಸಂತೆಗೆ) ಹೋಯಿ ಎಂತಾರು (ಏನಾದ್ರು) ಹಸ್ರೋಣೆ ತಕಂಡ್ ಬಾ"
"ಇವತ್ತ್ ಎಂತ ಅಡಿಗೆ ಮಾಡುದು? ಹಸ್ರೊಣೆ ಇತ್ತಾ?"
"ಒಂದ್ ಬೆಂಡೆಕಾಯಿ, ಎರಡ್ ಹೀರೆಕಾಯಿ ಬಿಟ್ರೆ ಬೇರೆ ಎಂತ ಹಸ್ರೋಣೆ ಇಲ್ಲ"

ನನ್ನ ಊಹೆಯ ಪ್ರಕಾರ ಇದರ ಮೂಲ -'ಹಸಿರುವಾಣಿ'.
ಬರಹ ನಿಘಂಟಿನ ಪ್ರಕಾರ 'ಹಸಿರುವಾಣಿ' = ೧. ಹಸಿರುವಾಣಿ (ನಾ) ೧ ಸಸ್ಯಗಳಿಂದ ಉತ್ಪನ್ನವಾಗುವ ಸೊಪ್ಪು, ಕಾಯಿ, ತರಕಾರಿ, ಹಣ್ಣು ಮೊ. (ವ್ಯಾಪಾರದ) ಸರಕು ೨ ಹಸುರಾದ ಎಲೆ, ಗರಿ ಮೊ.ವು

ಬೋನಸ್ ಪ್ರಶ್ನೆಗೆ ಉತ್ರ - ಸುಮಂಗಲಾ. ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯ ವಿಜೇತರು. 'ಛಂದ' ಪ್ರಕಾಶನದ ಮೊದಲ ವರ್ಷದ ಕಥಾಸ್ಪರ್ಧೆಯ ವಿಜೇತರು ಕೂಡ.

ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಪೋಂಕು'?

ಬೋನಸ್ ಪ್ರಶ್ನೆ -
'ಹಟ್ಟಿಕುದ್ರು' ಕುಂದಾಪುರ ತಾಲೂಕಿನ ಒಂದು ಸುಂದರ ಊರು. ಈ ಊರಿನಿಂದ ಬಂದ ಪ್ರಸಿದ್ಧ ಸಾಹಿತಿ (ಕವಿ, ನಾಟಕಕಾರ, ಅಂಕಣಕಾರ) ಯಾರು?
ಸುಳಿವು - 'ಏನಾಯಿತು' ಕವನ ಸಂಕಲನ.

December 6, 2007

ಎರು

'ಎರು' = ಇರುವೆ.

'ಸಕ್ರೆ ಚೆಲ್ಬೇಡ. ಎರು ಬತ್ತ್ (ಬರತ್ತೆ)'.
'ಆ ಲಾಡಿನ್ (ಲಡ್ಡುವಿನ) ಪಾತ್ರ ಮುಚ್ಚಲಿಲ್ಯಾ? ಎರು ಬಂತಾ ಕಾಣ್'.
'ಕೆಳಗ್ ಬೀಳಿಸ್ದೇ ತಿನ್ನ್. ಎರು ಬತ್ತ್'.

ಎರು ಬಗ್ಗೆ ಬರೀಲಿಕ್ಕೆ ತುಂಬ ವಿಷಯ ಇದೆ. ಒಳ್ಳೆಯ ದಿನ (ಅರಿ ಸಮಾಸ ಗೊತ್ತಲ್ಲ? - ಸಮ್ಯಕ್+day = Sunday) ಸಿಕ್ಕಾಗ ಬರೀತೇನೆ.

ನಮ್ಮೂರಿನ ಎರುಗಳಲ್ಲೂ ತುಂಬ ವಿಧವಿದೆ. ಅವುಗಳ ಜೀವಶಾಸ್ತ್ರೀಯ ಹೆಸರುಗಳು ಗೊತ್ತಿಲ್ಲ. ನಮ್ಮೂರಿನ ಹೆಸರುಗಳಷ್ಟೇ ಗೊತ್ತು. ನಿಮ್ಮೂರಲ್ಲಿ ಏನಂತಾರೆ ಅಂತ ಬರೆಯಿರಿ.

'ಓಡೆರು' = ಬಹುಶಃ ಓಡುವ ಎರು ಇರ್ಬೇಕು. ಇದು ನಿಂತಲ್ಲಿ ನಿಲ್ಲಲ್ಲ. ಯಾವಾಗ್ಲೂ ಓಡ್ತಾನೆ ಇರತ್ತೆ. ಸಿಕ್ಕಾಪಟ್ಟೆ ಓಟ. ಹಾಗಾಗಿ ಇದು ಹೆಚ್ಚ್ ಹೊತ್ತು ಒಂದೇಕಡೆ ಇರಲ್ಲ. ಕಪ್ಪು ಬಣ್ಣ. ತುಂಬ ಚಿಕ್ಕವು, ಜೊತೆಗೆ ಕಚ್ಚೋದು ಇಲ್ಲ. ಹಾಗಾಗಿ ಇದು ತೀರ ನಿರುಪದ್ರವಿ ಎರು.
'ನೈಯರು' - ಇದೂ ಕೂಡ ತುಂಬ ಚಿಕ್ಕ ಎರು. ಆದರೆ ಮಹಾನ್ ಘಾಟಿ. ಕೆಂಪು ಬಣ್ಣ. ಬಂದರೆ ಅಕ್ಷೋಹಿಣಿ ಸೈನ್ಯ. ಸುಲಭದಲ್ಲಿ ಹೋಗೋದೂ ಇಲ್ಲ, ಕಚ್ಚಿದರೆ ತುಂಬ ಉರಿ. ಹಾಗಾಗಿ ಇದು ಉಪದ್ರವಿ ನಂಬರ್ ೧.
'ಕೆಂಪೆರು' - ಇವು ಆಕಾರ, ಗಾತ್ರ, ಸೈನ್ಯಬಲ, ಮೀಸೆಬಲ (ಕಚ್ಚಿದಾಗ) ಎಲ್ಲದರಲ್ಲೂ 'ನೈಯರು' ತರಹ. ಸ್ವಲ್ಪ ಕೆಂಪು ಜಾಸ್ತಿ. ಆದರೆ ಇದನ್ನ 'ನೈಯರು'ಗಿಂತ ಸುಲಭದಲ್ಲಿ ಓಡಿಸಬಹುದು.
'ಕಟ್ಟೆ' - ಇವು ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಆದರೆ ಸೈನ್ಯ ಯಾವಾಗಲೂ ಸಣ್ಣದು. ಕಚ್ಚುವುದಿಲ್ಲ. ಕಪ್ಪು ಬಣ್ಣ. ಎರುವಿನ ಜಾತಿಯಲ್ಲಿ ಇವಕ್ಕೆ 'ಕ್ಲಾಸಿಕಲ್ ಎರು' ಅಂತ ಕರೀಬಹುದು :-)
'ಕಟ್ಟೆರು' - ಆಕಾರ, ಗಾತ್ರದಲ್ಲಿ ಇದು ಕಟ್ಟೆ ತರಹವೇ. ಸೈನ್ಯಬಲ ಸಣ್ಣದು. ಆದರೆ ಸ್ವಲ್ಪ ಕಪ್ಪು ಜಾಸ್ತಿ. ಕಚ್ಚಿದರೆ ನಮ್ಮೂರಿನ ಶ್ರೀನಿವಾಸ ಡಾಕ್ಟರರ ಇಂಜೆಕ್ಷನ್ ಚುಚ್ಚಿದ ಹಾಗಾಗತ್ತೆ :-)
'ಬೆದರುಕಟ್ಟೆ' - ಇದು ನಿಜವಾಗಿಯೂ ಬೆದರಿಸುವ ಕಟ್ಟೆ. ಎರುವಿನ ಜಾತಿಯಲ್ಲೆ ದೊಡ್ಡವು. ತುಂಬ ವಿರಳ. ಕೆಂಪುಮೂತಿ. ಓಡಾಡುವಾಗ ಸ್ವಲ್ಪ ರಾಜಗಾಂಭೀರ್ಯ. ಆದರೆ...ಕಚ್ಚಿದರೆ ದೇವರೇ ಗತಿ. ಇಡಿ ಒಂದು ದಿನ 'ಅಮ್ಮಾ, ಊಊಊಊ' ಅಂತ ಅಳ್ತಾ ಕೂರ್ಬಹುದು.

ಮೇಲಿನ ಎರುಗಳೆಲ್ಲ domestic ಎರುಗಳು:-) ನೀವು ಎಚ್ಚರವಹಿಸದಿದ್ದರೆ, ರಾತ್ರೋರಾತ್ರಿ ಮುನ್ಸೂಚನೆ ಕೊಡದೆ ಪದಾತಿ ದಳದೊಂದಿಗೆ ಮನೆಗೆ ದಾಳಿ ಇಡುವಂತಹವು.

'ಚೌಳಿ' - ಇದು non-resident ಎರು. ಹೆಚ್ಚಾಗಿ ಗೇರುಮರದ ಎಲೆಗಳ ಮಧ್ಯೆ ಮನೆಮಾಡಿಕೊಂಡಿರುತ್ತದೆ. ಕೆಂಪು ಕೆಂಪು, ರಣ ಭಯಂಕರ. ಮರ ಹತ್ತಿದಾಗ ನೀವೇನಾದರೂ ಗೊತ್ತಿಲ್ಲದೆ ಇದಕ್ಕೆ ಕೈಹಾಕಿದಿರೋ......'ಮಂಗಳಂ' ಅಷ್ಟೇ :-))

'ದುಡ್ಡು' - ಎರು ಕಚ್ಚಿ ಉಬ್ಬಿದ ಚರ್ಮದ ಭಾಗ.
ಬಹುಶಃ ಎರು ಕಚ್ಚಿಸಿಕೊಂಡ ಮಕ್ಕಳನ್ನ ಸುಮ್ಮನಿರಿಸಲಿಕ್ಕಾಗಿ ಈ ಪದ ಬಂದಿರಬೇಕು.
'ಎರು ಕಚ್ತಾ? ಓಹೋ, ನಮ್ಮನೆ ಮಗುಗೆ ಮಸ್ತ್ ದುಡ್ಡ್ ಸಿಕ್ಕಿತ್ತಲೇ ಇವತ್ತ್' :-)

ಬೋನಸ್ ಪ್ರಶ್ನೆಗೆ ಉತ್ರ -
'ಚಣಿಲ' - ಅಳಿಲು, ಇಣಚಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ. ತುಳುವಿನಲ್ಲೂ ಇದೇ ಬಳಕೆ ಇದೆ. ಸುನಿಲ್-ಗೆ ಥ್ಯಾಂಕ್ಸ್.

'ಮರದ್ಮೇಲ್ ಚಣಿಲ ಕಾಣ್. ಎಷ್ಟ್ ಚಂದ ಇತ್ತಲ್ದಾ?'.
'ಅಲ್ಕಾಣ್ ಚಣಿಲ. ಹ್ಯಾಂಗ್ (ಹೇಗೆ :-) ಮರ ಹತ್ತತ್ತ್ ಕಾಣ್'.

'ಚಣಿಲ' ಚಂದದ ಮುದ್ದಿನ ಪ್ರಾಣಿ. ಪಾಪದ್ದು (ಸುಪ್ತದೀಪ್ತಿ ಹೇಳಿದ ಹಾಗೆ). ಎಷ್ಟು ಪಾಪದ್ದು ಅಂದ್ರೆ ತ್ರೇತಾಯುಗದಲ್ಲೇ ಶ್ರೀರಾಮನಂಥ ಶ್ರೀರಾಮನೇ ಅದಕ್ಕೆ 'ಮೂರು ನಾಮ' ಎಳೆದಿದ್ದ :-)

ಚಣಿಲ ತುಂಬ ಕ್ರೀಯಾಶೀಲ ಪ್ರಾಣಿ. ಹಾಗಾಗಿ ಅದನ್ನ ಪ್ರಶಂಸಾತ್ಮಕವಾಗಿ ಬಳಸುವುದೂ ಉಂಟು.
"ಅಂವ ಚಣಿಲನ ಮರಿ. ಭಾರಿ ಚುರ್ಕ್ (ಚುರುಕು)"

ಓದುಗ ದೊರೆಗಳ ಬೇಡಿಕೆಯ ಪದಗಳು -
ಹಸರೊಣೆ, ಗಿಂಡು, ಪೋಂಕು.
ಶಾಂತಲಾ ('ಬಂಡಿ'ಗಟ್ಟಲೆ ಬರೆಯುವವರಲ್ಲ, ಇನ್ನೊಬ್ಬರು, ನಮ್ಮ reviewer) ಒಂದಿಷ್ಟು ಪದಗಳನ್ನು ಕೇಳಿದ್ದರು. ಅವು ಯಾವುದಂತ ಮರೆತು ಹೋಗಿದೆ (ವಯಸ್ಸಾಗ್ತ ಬಂತು, ಏನು ಮಾಡೋದು? :-)). ಮತ್ತೊಮ್ಮೆ ಕಳಿಸಿ :-)

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಹಸರೊಣೆ' ಅಥ್ವಾ 'ಹಸ್ರೋಣೆ'?

ಬೋನಸ್ ಪ್ರಶ್ನೆ :-
ಇದು ಯಾರ ಕಥೆ - 'ಇಣಚಿ ಮತ್ತು ಮರ'?
ಸುಳಿವು - ಇವರು ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ವಿಜೇತ ಕಥೆಗಾರ್ತಿ.

December 3, 2007

ಚಾಂದ್ರಾಣ

ಚಾಂದ್ರಾಣ = ರಾಡಿ, ಕಸ, ಗಲೀಜು, ಕೊಳೆ

"ಮನೆ ತುಂಬ 'ಚಾಂದ್ರಾಣ' ಮಾಡಿಯಳೀ ಮಾರಾಯ್ತಿ, ಹಿಡಿ (ಪೊರಕೆ) ತಂದು ಗುಡಿಸು ಕಾಂಬೋ. ಎಲ್ಲ ಸಾಪ್ (ಸ್ವಚ್ಛ) ಆಯ್ಕು (ಆಗಬೇಕು)ಈಗಲೇ." - ಸುನಿಲ್ ಅವರ ಅತ್ತಿಗೆ ಕೊಟ್ಟ ಉದಾಹರಣೆ.
"ಮಳಿಗೆ (ಮಳೆಗೆ) ಹಂಚ್ (ಹೆಂಚು) ಒಡ್ದೋಯಿ (ಒಡೆದುಹೋಗಿ) ಮನೆ ಎಲ್ಲ ಚಾಂದ್ರಾಣ ಆಯ್ತ್."
"ಆ ಮಾಣಿ ನೀರ್ ಚೆಲ್ಲಿ, ಮನೆ ಇಡಿ ಚಾಂದ್ರಾಣ ಮಾಡಿ ಇಟ್ಟಿತ್"
"ಬರೀ ಕಾಟ್ (ಕಾಟು) ದನ ಅದ್. ಎಷ್ಟ್ ಸರ್ತಿ ತೊಳ್ದ್ ಸಾಪ್ ಮಾಡಿ ಇಟ್ರೂ, ಮತ್ತೊಂದ್ ಕ್ಷಣದಲ್ಲ್ ಕೊಟ್ಟಿಗೆ ಇಡಿ ಚಾಂದ್ರಾಣ ಮಾಡತ್ತ್"

ಸುಮಾ ಅವರ ಅಮ್ಮ ಕುತೂಹಲಕರ ಉದಾಹರಣೆ ಕೊಟ್ಟಿದಾರೆ - "ಚಳಿಗೆ ಕಾಲೆಲ್ಲ ಒಡ್ದ್ (ಒಡೆದು) ಚಾಂದ್ರಾಣ ಆಯ್ತ್".

ಬೋನಸ್ ಪ್ರಶ್ನೆಗೆ ಉತ್ರ -
'ಏ' ಅಥ್ವಾ 'ಎ' - ಹೆಂಡತಿಯನ್ನು ಕರೆಯುವುದು :-))
ನನ್ನ ಮೇಲೆ ಸಿಟ್ಟಾಗಬೇಡಿ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ನಿರಪರಾಧಿ :-)
ಈ ಮೇಲಿನ ಅರ್ಥವನ್ನು ಕೊಟ್ಟಿದ್ದು ವಿಶ್ವಂಭರ ಉಪಾಧ್ಯರು. ಅವರ ಕುಂದಗನ್ನಡ ಶಬ್ದನಿಧಿ Digital Library of India-ದಲ್ಲಿದೆ - ಇಲ್ಲಿ ನೋಡಿ. ಕೊಂಡಿ ಕಳಿಸಿದ ಸುನಿಲ್-ಗೆ ಕೃತಜ್ಞತೆಗಳು.

ಇದೇ ಅರ್ಥವನ್ನು ಬೀಚಿ ಕೂಡ ಕೊಟ್ಟಿದಾರೆ - ಇಲ್ಲಿ ನೋಡಿ :-).

ತದ್ಯಾಪ್ರತದ ಬಗ್ಗೆ ಇನ್ನೊಂದಿಷ್ಟು :-
ಕುಂದಗನ್ನಡ ಶಬ್ದನಿಧಿಯಲ್ಲೂ ತದ್ಯಾಪ್ರತ ಸಿಗಲಿಲ್ಲ. ಆದ್ರೆ ಅದನ್ನೇ ಹೋಲುವ ಶಬ್ದ - 'ತದಿಪ್ರಿತ'. ಅದರ ಅರ್ಥ - ಒಂದಕ್ಕೊಂದೂವರೆ. ಸುನಿಲ್ ಹೇಳಿದ ಹಾಗೆ 'ಅಧಿಕಪ್ರಸಂಗ' ಅನ್ನುವ ಅರ್ಥ ತುಂಬ ಹೊಂದುತ್ತದೆ. ಶಬ್ದಮೂಲದ ಬಗ್ಗೆ ನನಗೆ ಗೊತ್ತಿಲ್ಲ. ಸಂತು ಹೇಳಿದ ಹಾಗೆ ಈ ಶಬ್ದ ಸಂಸ್ಕೃತದಿಂದ ಬಂದಿರಬಹುದೇ? ಭಾಷಾಪಂಡಿತರು ಎಲ್ಲಿ?

ಇವತ್ತಿನ ಸವಾಲು -
ಈ ಶಬ್ದದ ಅರ್ಥ ಏನು - 'ಎರು'?

ಬೋನಸ್ ಪ್ರಶ್ನೆ -
ಈ ಪ್ರಾಣಿಯ ಗ್ರಂಥಸ್ಥ ಕನ್ನಡದ ಪದ ಏನು - 'ಚಣಿಲ'?

November 27, 2007

ತದ್ಯಾಪ್ರತ

'ತದ್ಯಾಪ್ರತ' = ತುಂಟಾಟ, ಕೀಟಲೆ, ತರಲೆ (ಇದರ ಅರ್ಥ ನನಗೆ ಗೊತ್ತಿಲ್ಲ :-).
ಆದರೆ ಇದರ ಬಳಕೆ ಹೆಚ್ಚಾಗಿ ಮಾಡೋದು ಏನಾದರೂ ಚಿಕ್ಕ ಪುಟ್ಟ ಅನಾಹುತಕ್ಕೆಡೆ ಮಾಡುವ ಕೆಲಸಗಳಿಗೆ.

"ಬರೀ ತದ್ಯಾಪ್ರತದ ಮಾಣಿ ಅದ್. ಹೇಳದ್ದೊಂದು ಕೇಂತಿಲ್ಲ (ಕೇಳಲ್ಲ)" - ನನ್ನಮ್ಮ ಹೊಗಳ್ತಾ ಇದ್ದದ್ದು ಹೀಗೆ :-)
"ಇಕಾಣ್ (ಇಲ್ನೋಡು), ಮದಿ (ಮದುವೆ) ಮನೆಗೆ ಸುಮ್ನಿರ್ಕ್. ತದ್ಯಾಪ್ರತ ಮಾಡುಕ್ ಹೋಯ್ಬೇಡ"
"ಅಗಾಣ್ (ಅಲ್ನೋಡು), ಆ ಮಾಣಿ ಅಲ್ಲೆಂತದೊ ತದ್ಯಾಪ್ರತ ಮಾಡುಕ್ ಹೋಯಿತ್ತ್. ಈಚಿಗ್ ಕರ್ಕಂಡ್ ಬಾ ಮಾರಾಯ್ತಿ"
"ಸುಮ್ನೆ ಮನ್ಯೆಗಿಪ್ಪುದು (ಮನೆಯಲ್ಲಿರೋದು) ಬಿಟ್ಟು, ಅಲ್ಲ್ ಎದ್ಕಂಡ್ ಬಿದ್ಕಂಡ್ ತದ್ಯಾಪ್ರತ ಮಾಡ್ಕಾಂಬ್ಕೆ ಹೋದ್ದಾ (ಹೋಗಿದ್ದಾ)?"

ಬೋನಸ್ ಪ್ರಶ್ನೆಗೆ ಉತ್ರ -
ಕ್ಷಿತಿಜ ನೇಸರ ಧಾಮ ಬೈಂದೂರಿನ ಒತ್ತಿನೆಣೆಯಲ್ಲಿದೆ. ಹೆಚ್ಚಿನ ವಿವರಗಳಿಗೆ http://kaalaharana.blogspot.com/2006/05/abbigundi-falls.html ನೋಡಿ

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಚಾಂದ್ರಾಣ' ?

ಬೋನಸ್ ಪ್ರಶ್ನೆ :-
ಈ ಶಬ್ದವನ್ನು ಯಾರು ಯಾರನ್ನು ಕರೆಯಲು ಬಳಸುತ್ತಾರೆ - 'ಏ' ? :-))

November 25, 2007

Random Rounds

I met a guy yesterday. He was nice, friendly and started off without any hesitation
" You from India?"
"Yes. I am. And you?"
"I am from Brazil"
"Nice. What do you do here?"
"I work as a maintenance mechanic in an apartment. I know few people from India who stay in our apartment. They are nice."
"Oh, that's nice. How is it in Brazil? It must be beautiful. I have seen 'the motorcycle diaries'. How is life there?"
It was a lengthy response "It is not at all good. You can't live a good life there. You can earn only if you have good degree, you know, like lawyers, doctors, dentists. They have good life. Others, they just don't. If I do the same mechanic job there....foooffff... no value, no money. But, you, computer guys, have good value. You can earn a lot. They say Brazil is a poor country. But you know, only rich can live there. Poors... no value, no value.....The standard of living is very poor."

*******************
I was reading a magazine. It was about the fading 'American dreams' and a solution to reverse the trend. The initial few lines goes thus...
"Over the last couple of centuries millions of people left their countries and landed in America, most of them penniless, to pursue what is today known as "American dreams". The American dream is the one which enabled upward mobility in the economic status for the hardworking individual. Each generation worked hard, accumulated material goods and wealth, and dreamt of a better standard of living for the next generation. The migrants could afford a standard of living, which only a privileged few could afford in their motherland......"

******************

I was watching an interview of renowned director Godfrey Reggio. He was talking about standard of living.
"Who are we to set standard of living? Every culture has its own standard of living. The cultures in Asia, India, Africa, the Middle East and South America are land-based, human-scale societies and are very close to nature. We can't compare it with our materialistic societies. Our model of growth is unsustainable. However, lure of technology and mega-cities are affecting small-scale indigenous cultures. The "progress" is luring more and more people into a pattern of meaningless consumption in place of real values."
*** This is a summary of what Godfrey Reggio said, and not the verbatim reproduction of his words.

********************
ಸೂಚನೆ :- ಬೇಸಿಗೆ ರಜಾಕಾಲ ಕಳೆದಿರುವುದರಿಂದ, ಕುಂದಗನ್ನಡದ ತರಗತಿಗಳು ಸದ್ಯದಲ್ಲೇ ಆರಂಭವಾಗಲಿವೆ. ಆಸಕ್ತ ವಿದ್ಯಾರ್ಥಿಗಳು ಈ ಕೂಡಲೆ ತಮ್ಮ ಹೆಸರನ್ನು ನೋಂದಾಯಿಸಕೊಳ್ಳತಕ್ಕದ್ದೆಂದು, ರಾಜ್ಯಸರ್ಕಾರದ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ.

ವಿ.ಸೂ. :- ಕಳೆದ ಶಿಕ್ಷಣ ವರ್ಷದಲ್ಲಿ ಗುರುದಕ್ಷಿಣೆಯನ್ನು ಪಾವತಿ ಮಾಡದ ವಿದ್ಯಾರ್ಥಿ/ನಿಯರನ್ನು ತರಗತಿಯ ಹೊರಗೆ, ಒಂದು ಕಾಲಿನಲ್ಲಿ ನಿಲ್ಲಿಸಲಾಗುವುದೆನ್ನುವ ಅಮೂಲ್ಯ ಮಾಹಿತಿಯನ್ನು ನಮ್ಮ ಗುಪ್ತಚರ ವಿಭಾಗವು ಹೊರಗೆಡಹಿದೆ.

November 18, 2007

ಪುಕ್ಕಟೆ ಸಿಕ್ಕಿದ ಮಸಾಲೆದೋಸೆ!!!

ಅಲವತ್ತುಕೊಳ್ಳುತ್ತಿತ್ತು,
ಲೇಖನಿಯ ಮಸಿ ಇವತ್ತು....

ಬಿಟ್ಟುಬಿಡು ಮಾರಾಯ ನನ್ನ ಹೊರಗೆ,
ಸಾಕಾಗಿ ಹೋಗಿದೆ ಕೂತು ಒಳಗೆ,
ಗಾಳಿಯಿಲ್ಲ, ಬೆಳಕೂ ಇಲ್ಲ, ಜೊತೆಗೆ
ಕೂತು ಮಾತಾಡಿಸುವವರೂ ಇಲ್ಲ,

ಮಾರಾಯ, ಸ್ವಾತಂತ್ರ್ಯ ಕೊಡು ನನಗೆ,
ಕಾಲುಸೋತಿದೆ ಚಕ್ಕಳಮಕ್ಕಳ ಹಾಕಿ ಕೂತು,
ಉಸಿರುಕಟ್ಟುತ್ತಿದೆ ಒಬ್ಬನೇ ಕೂತು ಕೂತು,
ಹೊಡೆದು ಬರುವೆನು ಒಂದು ರೌಂಡ್ ಬೀಟು

ನೋಡು, ನೀನೂ ಸುಮ್ಮನೇ ಇದ್ದಿ,
ಏನೂ ಗೀಚಿಯೇ ಇಲ್ಲ ಬ್ಲಾಗಿನಲ್ಲೂ,
ಮಾತಾಡಿಸಿ ಬರುವೆ ನಿನ್ನ ಓದುಗರನ್ನ,
ಬಿಟ್ಟುಬಿಡು ಮಾರಾಯ ನನ್ನ ಹೊರಗೆ,

ಲೋ ಭಾಗವತ, ನನ್ನ ಮಾತು ಕೇಳೋ ಮಾರಾಯ,
ಕೂಡಿಹಾಕಬೇಡವೋ ನನ್ನ ಹೀಗೆ ಒಳಗೆ, ಪುಕ್ಕಟೆ
ಮಸಾಲೆದೋಸೆ ಕೊಡಿಸುತ್ತೇನೋ ನಿನಗೆ ಪುಣ್ಯಾತ್ಮ,
ದಯವಿಟ್ಟು ಬಿಟ್ಟುಬಿಡು ಮಾರಾಯ ನನ್ನ ಹೊರಗೆ,

ಅಲವತ್ತುಕೊಳ್ಳುತ್ತಿತ್ತು,
ಲೇಖನಿಯ ಮಸಿ ಇವತ್ತು....

November 1, 2007

ನನ್ನ ಕಾವ್ಯಕನ್ನಿಕೆಗೆ

ಹುಡುಗಿ,
ನಿನಗಾಗಿ ಕಾದಿದ್ದೇನೆ, ಬೇಗ ಬಂದುಬಿಡು.....

ನನ್ನ ಮುಂದಿಲ್ಲಿ ಕತ್ತಲೆ ಅಂಗಾತ ಮಲಗಿಬಿಟ್ಟಿದೆ,
ಮೇಲೆ ತಾರೆಗಳ ಜೊತೆ ಚಕ್ಕಂದವಾಡುವ ಚಂದ್ರ,
ನಾನಿಲ್ಲಿ ಒಬ್ಬನೇ ಬಿಕ್ಕುತ್ತಿದ್ದೇನೆ ಹುಡುಗಿ, ನೀನಿಲ್ಲದೇ.....

ನಿನ್ನನ್ನೊಮ್ಮೆ ನಾನು ಕಣ್ತುಂಬ ನೋಡಬೇಕು, ಹುಡುಗಿ..
ಬಂದುಬಿಡು, ನನ್ನ ತೋಳುಗಳಲ್ಲಿ ಬಂಧಿಯಾಗಿಬಿಡು...
ನೀನು, ನಿನ್ನ ಕೆಂದುಟಿಗಳು ಮತ್ತು ನಿನ್ನ ಕೋಮಲ ಹಸ್ತ.....

ಕೂತಲ್ಲಿ ಕೂರಲಾಗುತ್ತಿಲ್ಲ, ನಿಂತಲ್ಲಿ ನಿಲ್ಲಲಾಗುತ್ತಿಲ್ಲ,
ಏನೋ ಚಡಪಡಿಕೆ, ಏನೋ ಕಳೆದುಕೊಂಡಂತೆ....
ನೀನು, ನಿನ್ನ ಕುಡಿನೋಟ ಮತ್ತು ನಿನ್ನ ಚೂಪು ಮೂಗು.....

ಕವನ ಹೊಸೆಯಲೂ ಆಗುತ್ತಿಲ್ಲ ಹುಡುಗಿ, ನಿನ್ನ ನೆನಪಲ್ಲಿ,
ಸುಮ್ಮನೇ ಏನೋ ಗೀಚುತ್ತಿದ್ದೇನೆ ಬೇರೆ ದಾರಿ ಕಾಣದೆ...
ನೀನು, ನಿನ್ನ ಸ್ಪರ್ಶ, ನಿನ್ನ ನಗು ಮತ್ತು ನಿನ್ನ ಹುಸಿಗೋಪ.....

ಹುಡುಗಿ,
ನಾನೊಬ್ಬನೇ ಇಲ್ಲಿ ಬಿಕ್ಕುತ್ತಿದ್ದೇನೆ...ನನಗೆ ನೀನು ಬೇಕು ಹುಡುಗಿ....

ಎದೆ ಬಡಿತ ನಿಂತಂತಾಗಿದೆ...
ಏನೂ ತೋಚುತ್ತಿಲ್ಲ....
ಏನೂ ಕಾಣಿಸುತ್ತಿಲ್ಲ...
ಏನೂ ಗೊತ್ತಾಗುತ್ತಿಲ್ಲ......

ಇನ್ನೆರಡೇ ಎರಡು ನಿಮಿಷ....
ಹುಡುಗಿ....ನಿನ್ನ ದಮ್ಮಯ್ಯ...
ಪ್ಲೀಸ್... ನನ್ನನ್ನುಳಿಸಿಕೋ....
ಪ್ಲೀಸ್....

**********************

ಸಾರ್ವಜನಿಕರ ಅವಗಾಹನೆಗೆ :-
ಭಾಗವತರಿಗೆ ಸಕ್ಕತ್ತು ಬೋರಾಗಿ, ಮಂಡೆ ಹನ್ನೆರಡಾಣೆಯಾಗಿ, ಸುಮ್ಮನೆ ಏನೇನೋ ಗೀಚುತ್ತಿದ್ದಾರಾದ್ದರಿಂದ, ಅವರು ಗೀಚಿದ್ದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು, ಮಂಡೆಗೆ ಹಚ್ಚಿಕೊಂಡು, 'ಡೋಂಟ್ ವರಿ' ಮಾಡಿಕೊಳ್ಳಬಾರದಾಗಿ ಕೇಂದ್ರ ಸರ್ಕಾರವು ಸುತ್ತೋಲೆ ಹೊರಡಿಸಿದೆ :-)೦

October 17, 2007

ಬುದ್ಧಿವಂತರಿಗೆ ಮಾತ್ರ......

ಕುಕ್ಕರುಗಾಲು ಹಾಕಿ ಕುಂತಿದೆ ನಿದ್ದೆ ಬಾರದ ರಾತ್ರಿ,
ಕಥೆ ಹೇಳು ಅಂತದರ ವರಾತ....

ಹೇಳಿ ಮುಗಿಸಿದ್ದೇನೆ ತರಹೇವಾರಿ ಕಥೆಗಳನ್ನ...
ಇಗೊಳ್ಳಿ ನಿಮಗೊಂದಿಷ್ಟು ಸ್ಯಾಂಪಲ್ಲುಗಳು..

ಬಿಳಿಗುದುರೆಯೇರಿ ಬಂದು, ರಾಜಕುಮಾರಿಯನ್ನು ಸೆಳೆದೊಯ್ದ ಆ ರಾಜಕುಮಾರ,
ದಶದಿಕ್ಕುಗಳಲ್ಲೂ ದಿಗ್ವಿಜಯ ಮಾಡಿ, ಸಾಮ್ರಾಜ್ಯ ಕಟ್ಟಿದ ಆ ವೀರ ಪರಾಕ್ರಮಿ,
ಐಶ್ವರ್ಯದ ಹೊಳೆಯಲ್ಲಿ ಮಿಂದು, ತಿಂದು, ತೇಗಿದ ಆ ಬಂಗಲೆಯ ಸಾಹುಕಾರ,
ಗಂಧ, ಹಾರ, ತುರಾಯಿ, ಶಾಲಿನ ಮೇಲೆ ಶಾಲು ಪಡೆದ, ಆ ಅಸೀಮ ಬುದ್ಧಿವಂತ,

ಇದಾವುದೂ ಬೇಡವಂತೆ, ನಿದ್ದೆ ಬಾರದ ರಾತ್ರಿಗೆ...
ತಗೊಳ್ಳಪ್ಪ ಇನ್ನೊಂದಿಷ್ಟು ಪ್ರತಿಮೆಗಳು...

ಧಡಲ್ಲಂತ ಗುದ್ದಿದ ಬಸ್ಸಿನ ಹೊಡೆತಕ್ಕೆ, ತುಂಡಾಗಿ, ವಿಲಿವಿಲಿ ಒದ್ದಾಡಿದ ಆ ಕಾಲು
ನೇಣಿಗೆ ಕುತ್ತಿಗೆ ಕೊಟ್ಟ, ಕೊನೆ ಬೀದಿಯ, ಕೊನೆ ಮನೆಯ, ಆ ದಪ್ಪನೆಯ ಹೆಂಗಸು,
ನನ್ನ ಹೆಗಲ ಮೇಲೆ ಕಮಕ್-ಕಿಮಕ್ಕೆನ್ನದೆ ತುಟಿ ಪಿಟ್ಟಾಗಿಸಿ ಮಲಗಿದ್ದ ಆ ಸಾವು,
ಸರಕಾರಿ ಆಸ್ಪತ್ರೆಯಿಂದ ಹೊರಬಿದ್ದ, ಆ ಇನ್ನೊಂದು, ಗುರುತಿಸಲಾಗದ ಆ ಹೆಣ......

ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ....
ತುಂಡರಿಸಿದ ಆ ಕಾಲು ನರ್ತಿಸುವ ಮುನ್ನ,
ಆ ದಪ್ಪನೆಯ ಹೆಂಗಸು ಗಹಗಹಿಸುವ ಮುನ್ನ,
ಆ ಸಾವು ಎಚ್ಚರಾಗಿ ಕೆನ್ನೆ ಸವರುವ ಮುನ್ನ,
ಆ ಹೆಣ ನಸುನಕ್ಕು ಕಣ್ಣು ಹೊಡೆಯುವ ಮುನ್ನ...

ಶ್ಯ್!!! ಸದ್ದು ಮಾಡಬೇಡಿ....
ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ.....

October 11, 2007

ಆರೋಗ್ಯವಂತರಿಗೆ ಮಾತ್ರ!!

ಓದುಗ ದೊರೆಗಳ ಗಮನಕ್ಕೆ :- ಈ ಬರಹಕ್ಕೆ ಅರ್ಥ ಹುಡುಕುವುದು ಆರೋಗ್ಯಕ್ಕೆ ಹಾನಿಕರ:-))
***************************************************************

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ....
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಅಲ್ಲೆಲ್ಲಾ ಶಿಶಿರದ ತಂಪು
ಗಾಳಿಯಲ್ಲಿ ವಸಂತನ ಬಿಸುಪು
ಶೃತಿ ಹಿಡಿದು ಜಿನುಗುವ ಮಳೆಹನಿಗಳು
ಮಿರುಮಿರುಗುವ ಬಣ್ಣ ಹೊತ್ತ ಮರಗಳು
ನಾಚಿ ಕೆಂಪಾಗಿವೆ ಆಕೆಯ ಬೆಳಗುಗೆನ್ನೆಗಳು
ಮಂಡಿಯೂರಿದವನ ಎದೆಯ ತುಂಬೆಲ್ಲ ಬಿಸಿಯುಸಿರು
"ನನಗೆ ನೀನು ತುಂಬ ಇಷ್ಟ. ನಿನಗೆ ನಾನು ಇಷ್ಟಾನಾ?"
ಝಲ್ಲೆನ್ನುವ ಕಾಲ್ಗೆಜ್ಜೆಯ ಸದ್ದು, ಝಣಝಣ ಕೈಬಳೆಗಳ ಸದ್ದು
ಜೋಡಿಹಕ್ಕಿ ಹಾರುತ್ತಿದೆ, ನಿನ್ನೆ ನಾಳೆಗಳ ಪರಿವೆ ಇಲ್ಲದಂತೆ.....

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಅವ ಭುಸುಗುಡುತ್ತಿದ್ದಾನೆ ಹಲ್ಲು ಕಟಕಟಿಸುತ್ತ
ನಿನ್ನೆಯಷ್ಟೇ ಕೈಯಲ್ಲಿದ್ದ ಆಕೆ ಈಗ ಇನ್ನಾರವಳೋ,
ಗೋಳಿಡುತ್ತಿದ್ದಾನೆ, ಭೋರೆಂದು ಗೋಳಿಡುತ್ತಿದ್ದಾನೆ
ನಾಳೆಯ ಬಿಳಿಹಾಳೆಯ ತುಂಬೆಲ್ಲ ಕಪ್ಪುಮಸಿಯ ಲೇಪಿಸಿ,
"ನನ್ನ ಬಿಟ್ಟು ಹೋಗಬೇಡ್ವೆ, ಪ್ಲೀಸ್, ಒಂದ್ನಿಮಿಷ ನನ್ನ ಕೇಳು,
ನನ್ನ ನಾಳೆಗಳು ಉಸಿರು ಕಳೆದುಕೊಳ್ಳುತ್ತವೆ, ನೀನಿಲ್ಲದೇ ಹೋದರೆ"
ಬಿಳಿಹೊದಿಕೆ ಹೊತ್ತ ಸತ್ತ ನಾಳೆಯ ಹೆಣದ ಮೆರವಣಿಗೆ ಬೀದಿ ತುಂಬೆಲ್ಲ,
ಕಣ್ಣೀರೊರೆಸಿಕೊಳ್ಳುತ್ತಿದ್ದಾರೆ, ಕಣ್ಣು ಹಾಯುವವರೆಗೂ ನೆರೆದ ದು:ಖತಪ್ತ ಜನಸ್ತೋಮ
ರುಂಡದಿಂದ ತೊಟ್ಟಿಕ್ಕುವ ರಕ್ತದ ಪಾಲಿಗಾಗಿ ಮೇಲಿಂದ ಗಿರಕಿ ಹೊಡೆಯುತ್ತಿವೆ ರಣಹದ್ದುಗಳು

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಕಣ್ಣು ಕಾಣದ ಮುದುಕಿ ಸುತ್ತೆಲ್ಲ ಅರಸುತ್ತಿದ್ದಾಳೆ,
ಊಟ ಕಾಣದ ಆ ಪುಟ್ಟ ಮಗು ಚಿಂದಿ ಆಯುತ್ತಿದೆ,
ಕಂಡಕಂಡವರಲ್ಲೆಲ್ಲಾ ಕೈ ಮುಗಿದು ಬೇಡುತ್ತಿದ್ದಾಳೆ ಆಕೆ,
"ಮಗನ ಆಪರೇಷನ್ನಿಗೆ ದುಡ್ಡಿಲ್ಲ. ಏನಾದ್ರೂ ಕರುಣೆ ಮಾಡಿ ಸ್ವಾಮಿ"
ನಾಳೆಗಳು ಮತ್ತೆ ಚಿಗಿತುಕೊಂಡಿವೆ, ಅಷ್ಟೂದ್ದ ಎತ್ತರಕ್ಕೆ ಬೆಳೆದುನಿಂತಿವೆ,
"ಬಾರೋ ಮಾರಾಯ, ಒಟ್ಟಿಗೆ ಹೋಗೋಣ ಬಾ" ಕೈ ಬೀಸಿ ಕರೆಯುತ್ತಿದೆ.
ಬೀದಿಯ ತುಂಬೆಲ್ಲ ಹಸಿರು ಪಲ್ಲಕ್ಕಿ ಈಗ, ವಟರುಗಪ್ಪೆಗಳದ್ದೇ ಒಡ್ಡೋಲಗ
"ಬಲ್ಲಿರೇನಯ್ಯಾ? ನಾಳೆಗಳಿಗೆ ಯಾರೆಂದು ಕೇಳಿದ್ದೀರಿ? ಅಹೋ, ನಾವೇ ಸರಿ"

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

September 22, 2007

Some Links

ನಮ್ಮೂರಿನ ಕೆಲವು ಸ್ನೇಹಿತರನ್ನ ಮಾತಾಡಿಸ್ತಾ ಇದ್ದಾಗ ಗಮನ ಸೆಳೆದವರು ಪ್ರದೀಪ್. ಅವರ ಫೋಟೋ ಬ್ಲಾಗ್ ಇಲ್ಲಿದೆ ನೋಡಿ. ನೀವು ನೋಡಿ ಚೆನ್ನಾಗಿದೆ ಅಂದ್ರೆ ಇನ್ನೂ ಒಳ್ಳೊಳ್ಳೆ ಫೋಟೋ ಹಾಕ್ತಾರಂತೆ:-)
http://rk.aminus3.com/

ಮತ್ತೆ, ಇನ್ನೊಬ್ರು, ನಮ್ಮೂರ್ನವ್ರೇ, ಕವನ ಬರೀತಾರೆ. . ಜಗಲಿಯ ಕೀಟಲೆಯಿಂದ ಬೇಸರವಾಗಿದ್ದರೆ ಈ ಕವನಗಳನ್ನ ಓದಿ:-)
http://poeticnats.blogspot.com/

ಇವತ್ತು ಇಷ್ಟೇ ಬರೀಲಿಕ್ಕಾಗೋದು. ನಾಳೆ ಒಳ್ಳೆಯ ದಿನ ಅಂತೆ. ನಾಳೆ ಸಿಗೋಣ.
ಅಂದಹಾಗೆ, ಸಮ್ಯಕ್ + Day = Sunday (ಅರಿಸಮಾಸ) = ಒಳ್ಳೆಯ ದಿನ.
ಅರಿಸಮಾಸದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ :- http://parijata.blogspot.com/2007/08/blog-post_29.html

August 14, 2007

ಬೈಸರ್ತಿಗೆ

ಬೈಸರ್ತಿಗೆ, ಬೈಸರಿಗೆ = ಸಂಜೆಗೆ, ಸಾಯಂಕಾಲದ ಹೊತ್ತು.

ಇವತ್ತ್ ಬೈಸರ್ತಿಗೆ ಎಲ್ಲಿಗೆ ಸವಾರಿ ತಮ್ದ್?
ನಾಳೆ ಬೈಸರ್ತಿಗೆ ಎಲ್ಲ ತುಳಸಿಯಮ್ಮನ ಮನೆಗೆ ಬನ್ನಿ. ಗಡ್ಜ್ ಹಯಗ್ರೀವದ ಸಮಾರಾಧನೆ ಇತ್ತಂಬ್ರ್:-)
ಈಗ ನಂಗ್ ಕೆಲ್ಸ ಮಸ್ತ್ ಇತ್ತ್. ಬೈಸರ್ತಿಗೆ ಬಾ, ಆಗ್ದಾ?

ಇದೇ ಅರ್ಥದ ಇನ್ನೊಂದು ಶಬ್ದ - 'ಬೈಯಾಪತ್ತಿಗೆ'.
'ಬೈ' + 'ಆಪತ್ತಿಗೆ' (ಆಗುವಾಗ) = ಸಂಜೆ ಆಗುವಾಗ
"ಬೈಯಾಪತ್ತಿಗೆ ಭಟ್ರ್ ಮನಿಗ್ ಹೋಯಿ (ಹೋಗಿ) ಹಾಲ್ ತಕಂಡ್ (ತೆಗೆದುಕೊಂಡು) ಬಾ."

ಇದೇ ಪದದ ಇನ್ನೊಂದು ರೂಪ - 'ಬೈಯಾಯ್ತಲೆ', 'ಬೈಯಾಯ್ತ್'
'ಬೈ' + 'ಆಯ್ತಲೆ' (ಆಯಿತಲ್ಲ) = ಸಂಜೆ ಆಯ್ತಲ್ಲ
"ಬೈಯಾಯ್ತಲೆ, ಇನ್ನೂ ದನದ ಹಾಲ್ ಕರಿಲಿಲ್ಯಾ ನೀನ್?"
"ಬೈಯಾಯ್ತ್. ಇನ್ನ್ ಕೂಕಂಡ್ರೆ (ಕೂತುಕೊಂಡರೆ) ಆಪ್ದಲ್ಲ (ಆಗುವುದಲ್ಲ)" - ಮನೆಗೆ ಬಂದ ನೆಂಟರಿಗೆ ಸಂಜೆಯಾಗುತ್ತಲೆ ಆಗುವ ಜ್ಞಾನೋದಯ:)

ನಿಘಂಟಿನಲ್ಲಿ ನನಗೆ ದೊರೆತ ಶಬ್ದ 'ಬೈಗು'. 'ಬೈಹೊತ್ತು' ಅನ್ನುವ ಪದ ಕೇಳಿದ್ದೆ. ಆದರೆ 'ಬೈ' ಅನ್ನುವ ಸ್ವತಂತ್ರ ಪದದ ಅರ್ಥ 'ಅಡಗಿಸು', 'ಹುದುಗಿಸು'. 'ಬೈ' ಅಂದರೆ ಸಂಜೆಯೂ ಆಗುತ್ತದಾ? ಕನ್ನಡ ಪಂಡಿತರು ತಿಳಿಸಿ. ನಮ್ಮ reviewers ಯಾವಾಗ್ಲೋ ಮಾಯ ಆಗ್ಬಿಟ್ಟಿದ್ದಾರೆ:(( inspector-ಅಂತೂ ಪತ್ತೆನೆ ಇಲ್ಲ....

'ಬೈಯಾದ' ನಂತರ 'ಹೊತ್ತು ಕಂತುತ್ತದೆ". 'ಕಂತು' = ಮುಳುಗು.
ಬೆಳಿಗ್ಗೆ ಆಗುವಾಗ - ಹೊತ್ತು ಮೂಡುತ್ತದೆ. ಬೆಳ್ಳಿ ಮೂಡುತ್ತದೆ.
ಸಂಜೆ - ಹೊತ್ತು ಕಂತುತ್ತದೆ.
"ಹೊತ್ತ್ ಮೂಡ್ತ್. ಇನ್ನೂ ನಿದ್ರಿಯ ನಿಂಗೆ?"
"ಹೊತ್ತ್ ಕಂತಿಯಾಯ್ತಲೆ, ಮಕ್ಳೆ. ಇನ್ನ್ ಆಡದ್ದ್ ಸಾಕ್. ಎಲ್ಲ ಕೈ ಕಾಲ್ ಮುಖ ತೊಳ್ಕಂಡ್ ದೇವ್ರ್ ಭಜನೆ ಮಾಡಿನಿ. ಹೋಯ್ನಿ (ಹೋಗಿ)"

ಬೆಳಗಾಗುವುದು, ಸಂಜೆಯಾಗುವುದು ನಮ್ಮ ಜನಪದರಿಗೆ, ಕವಿಗಳಿಗೆ ಬಹಳ ಆಸಕ್ತಿ ಹುಟ್ಟಿಸುವ ಕ್ರಿಯೆಗಳೆನಿಸುತ್ತದೆ. ಸೂರ್ಯನಿಗಂತೂ ದೇವರ ಪಟ್ಟ:)) ಬೇಂದ್ರೆಯವರ ಈ ಕವನ ನನಗೆ ಬಹಳ ಅಚ್ಚುಮೆಚ್ಚು
"ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ, ನುಣ್ಣನೆ ಎರಕವ ಹೊಯ್ದಾ"
ತುಳಸಿಯಮ್ಮ, ತುಳಸಿವನದಲ್ಲಿ ಈ ಪದ್ಯ ಹಾಕ್ತ್ರ್ಯಾ?

ಬೋನಸ್ ಪ್ರಶ್ನೆಗೆ ಉತ್ರ -
'ಕುಜ' ಕಾದಂಬರಿ 'ಜಿ. ಕೆ. ಐತಾಳ'ರ ಕೃತಿ. ಕುಂದಾಪುರದವರು. 'ಅ.ನ.ಕೃ' ಪ್ರಶಸ್ತಿ ವಿಜೇತ ಕೃತಿ. ಈ ಕಾದಂಬರಿಯ ನಾಯಕನ ಪಾತ್ರಕ್ಕೂ, ಚಿತ್ತಾಲರ 'ಶಿಕಾರಿ'ಯ 'ನಾಗಪ್ಪ'ನಿಗೂ ಬಹಳ ಸಾಮ್ಯತೆಗಳಿವೆ.

ಇವತ್ತಿನ ಸವಾಲು:-
ಈ ಶಬ್ದದ ಅರ್ಥ ಏನು - 'ತದ್ಯಾಪ್ರತ'.

ಬೋನಸ್ ಪ್ರಶ್ನೆ -
ಕ್ಷಿತಿಜ ನೇಸರ ಧಾಮ ಎಲ್ಲಿದೆ?
ಸುಳಿವು - ಇವತ್ತಿನ ಶಬ್ದಮಾಲೆಯನ್ನ ನೋಡಿ:)

July 21, 2007

ಹರ್ಮೈಕ

ಹರ್ಮೈಕ = ರಂಗುರಂಗಾಗಿ ಮಾತಾಡೋದು, ಬಾಯಿ ಬಡುಕತನ, ಬಾಯಿ ಪಟಾಕಿ

"ಜಗಲಿ ಭಾಗವತ್ರು ಹರ್ಮೈಕ ಮಾಡುದ್ರಗೆ ನಂಬರ್ ಒಂದ್":-)
"ಹರ್ಮೈಕ ಮಾಡುಕ್ ಹೇಳ್. ಕೆಲ್ಸ ಮಾಡ್ ಅಂದ್ರ್ ಎಡಿತಿಲ್ಲ (ಆಗಲ್ಲ)"
"ಅವ್ಳ್ ಹರ್ಮೈಕ್-ವೇ!!! ಅಬ್ಬಬ್ಬಬ್ಬಬಾ":-)
"ನಿನ್ ಹರ್ಮೈಕ ಸಾಕ್. ನಿಂಗ್ ಎಂತ ಬೇಕ್ ಹೇಳ್. ನಂಗ್ ಬೇರೆ ಕೆಲ್ಸ ಇತ್ತ್"

ನನ್ನ ಗ್ರಹಿಕೆಯ ಪ್ರಕಾರ 'ಹರ್ಮೈಕ'ದ ಮೂಲ 'ಹರಿಮಾಯಿಕ'. ಸರಿ ಗೊತ್ತಿಲ್ಲ. ಆದರೆ ವೈದೇಹಿಯವರ ಕಥೆಯೊಂದರಲ್ಲಿ ಆ ಶಬ್ದ ಓದಿದ ನೆನಪು. ಹರಿ + ಮಾಯಿಕ (ಮಾಯೆ) ಇರಬಹುದು. ನಮ್ಮಲ್ಲಿ ಇದೇ ತೆರನಾದ ಇನ್ನೊಂದು ಶಬ್ದ - 'ವಿಷ್ಣುಮಾಯೆ'. ಆದರೆ ಈ ಶಬ್ದ ಬಳಕೆಯಾಗುವುದು 'ಪವಾಡ'ದ ಅರ್ಥದಲ್ಲಿ.

ಹವ್ಯಕರ ಮನೆಯಲ್ಲಿ "ಆಸ್ರಿಗ್ ಬೇಕಾ?" ಅಂತ ಕೇಳಿದ್ರೆ ನಮ್ಮಲ್ಲಿ "ಗಂಗೋದ್ಕ ಬೇಕಾ" ಅಂತ ಕೇಳ್ತಾರೆ. ಶ್ರೀಲತಾಗೆ ಪೂರ್ತಿ ಅಂಕ:-))
ಗಂಗೋದ್ಕ = ಗಂಗೋದಕ = ಗಂಗ + ಉದಕ (ನೀರು) (ಗುಣ ಸಂಧಿ?)

ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಬೈಸರ್ತಿಗೆ'?

ಬೋನಸ್ ಸವಾಲು:-
'ಕುಜ' ಕಾದಂಬರಿ ಕರ್ತೃ ಯಾರು?

July 7, 2007

ಬೇಕಾಗಿದ್ದಾರೆ!!!

ಇವತ್ತು ಜಾಲತಾಣದಲ್ಲಿ ಹೀಗೆ ಒಂದ್ ರೌಂಡ್ ಬೀಟ್ ಹೊಡೀತಾ ಇದ್ದೆ. ಗೆಳೆಯನೊಬ್ಬನ ಕರುಣಾಜನಕ, ಹೃದಯವಿದ್ರಾವಕ ಕಥೆಯನ್ನೋದಿ, ಕುರುಕ್ಷೇತ್ರ ಪ್ರಸಂಗದಲ್ಲಿ ದುರ್ಯೋಧನನಿಗಾದಂತೆ, 'ಸಂತಾಪದಿ, ತನ್ನಯ ಮನದಿ ಮರುಗಿ' ಈ ಪೋಸ್ಟ್ ಬರೆಯುತ್ತಿದ್ದೇನೆ:-))

ಗೆಳೆಯನ 'ತುರ್ತು' ಅಗತ್ಯಗಳ ಬಗ್ಗೆ ಇಲ್ಲಿ ಓದಿ -
http://thatskannada.oneindia.in/nri/article/060707confessions-of-a-bachelor.html

ಆಸಕ್ತರು ಅರ್ಜಿ ಗುಜರಾಯಿಸಬೇಕಾದ ವಿಳಾಸ - http://hathwar.blogspot.com/

ಭಾಗ್ವತ್ರು:-))

July 3, 2007

ನೀವೂ ದಾರ ಕಟ್ಟಿ

ಕಥನ' (ಜಾಗತಿಕ ಕನ್ನಡಿಗರ ಕೂಟ) ಮತ್ತು 'ರಾಘವೇಂದ್ರ ಪ್ರಕಾಶನ' ಸಹಯೋಗದಲ್ಲಿ ಪ್ರಕಟಿತ 'ನೀವೂ ದಾರ ಕಟ್ಟಿ' ಕಥಾ ಸಂಕಲನದ ನಿಗದಿತ ಪ್ರತಿಗಳು ಅಮೇರಿಕಾದಲ್ಲಿ ಲಭ್ಯವಿದೆ. ಆಸಕ್ತರು ಇ-ವಿಳಾಸ ( kathana.qns@gmail.com ) ಕ್ಕೆ ಬರೆಯಬೇಕಾಗಿ ವಿನಂತಿ.

೧೪೪ ಪುಟಗಳು, ೧೨ ಬಹುಮಾನಿತ ಕಥೆಗಳು. ಬೆಲೆ - ೫ ಡಾಲರ್ (ಅಂಚೆ ವೆಚ್ಚದ ಹೊರತಾಗಿ).
ವಿವರಗಳಿಗೆ ಈ ಜಾಲತಾಣವನ್ನು ನೋಡಿ - http://kathana.qns.googlepages.com/

http://avadhi.wordpress.com/2007/06/22 - ಪೂರಕ ಓದಿಗೆ.

ನಿಮ್ಮ ನಿರಂತರ ಬೆಂಬಲದ ನಿರೀಕ್ಷೆಯಲ್ಲಿ,
'ಕಥನ' (ಜಾಗತಿಕ ಕನ್ನಡಿಗರ ಕೂಟ).

June 24, 2007

ಹಳೇ ಬ್ಲಾಗ್

ನನ್ನ ಸಹಪಾಠಿ ಒಂದು ಬ್ಲಾಗ್ ಬರೀತಿದ್ದ - http://rkvijay.blogspot.com/ - ಆದ್ರೆ ಯಾರೂ ಓದ್ತಾ ಇಲ್ಲ, ಅನಿಸಿಕೆಗಳನ್ನ ಗೀಚ್ತಾ ಇಲ್ಲ ಅಂತ ಈಗ ಮುಖ ಊದಿಸ್ಕೊಂಡು ಕೂತಿದ್ದಾನೆ, ಬ್ಲಾಗ್ ಬರೆಯೋದ್ ಬಿಟ್ಟು. ನೀವಾದ್ರೂ ಓದಿ, ನಿಮ್ಮನಿಸಿಕೆಗಳನ್ನ ಗೀಚಿ:-)

June 23, 2007

ನಿಘಂಟು

ನಿಘಂಟು = ಪದಕೋಶ. ಇದು ಗ್ರಂಥಸ್ಥ ಕನ್ನಡದಲ್ಲಿನ ಬಳಕೆ. ಈ ಅರ್ಥವಲ್ಲದೆ 'ಖಚಿತ', 'ಖಂಡಿತ', 'ನಿಶ್ಚಿತ' ಅನ್ನುವ ಅರ್ಥದಲ್ಲೂ ಬಳಕೆಯಾಗುತ್ತದೆ.

ಕುಂದಗನ್ನಡದ ಉದಾಹರಣೆಗಳು
"ಮದಿ (ಮದುವೆ) ಏಗ್ಳಿಕಂತೇಳಿ ನಿಘಂಟಾಯ್ತಾ?"
"ದಿನ ಸ್ವಲ್ಪ ಹೆಚ್ಚು ಕಡ್ಮೆ ಆಪ್ಗ್ (ಆಗಬಹುದು). ನಿಘಂಟಲ್ಲ ಅದ್"

ಕಾಸರಗೋಡಿನ ಹವ್ಯಗನ್ನಡದ ಉದಾಹರಣೆಗಳು (ಶ್ರೀ ಕೊಟ್ಟಿದ್ದು)
"ನೀ ಬರ್ತ್ದ್ (ಬರ್ತ್-ದ್) ನಿಘಂಟಾ..."
"ಇಲ್ಲೆ ನಾ ಬರ್ತ್-ದ್ ನಿಘಂಟಿಲ್ಲೆ, ನಂಗೆ ಕಾಯಳೆ (ಕಾಯಬೇಡಿ), ನೀವ್ ಹೋಯ್ನಿ (ಹೋಗಿ)..."

ಈ ಅರ್ಥ ಕುಂದಗನ್ನಡಕ್ಕೆ ಮಾತ್ರ ಸೀಮಿತ ಅಲ್ಲ ಅನ್ನಿಸ್ತದೆ ನನಗೆ. ತ.ರಾ.ಸು. ಅವರ 'ಚಂದವಳ್ಳಿಯ ತೋಟದಲ್ಲಿ' ಕಾದಂಬರಿಯ ೯೦ನೇ ಪುಟದಲ್ಲಿ ಈ ಪದ ಬಳಕೆಯಾಗಿದೆ - "ನನ್ನ ಮಾತಿನಲ್ಲಿ ನಂಬಿಕೆ ಇಲ್ಲಾಂದ್ರೆ, ಈಗ್ಲೇ ಏನೇನ್ಬೇಕೋ ಎಲ್ಲಾ ನಿಘಂಟಾಗಿ ಹೇಳ್ಬಿಡಿ" ಎಂದ ಶಿವನಂಜೇಗೌಡ.

'ನಿಘಂಟು' ಶಬ್ದದ ವ್ಯುತ್ಪತ್ತಿ ಬಗ್ಗೆ 'ಯಾತ್ರಿಕ' ವಿವರವಾಗಿ ಬರೆದಿದ್ದಾರೆ:-
ಯಾಸ್ಕಾಚಾರ್ಯರ ನಿರುಕ್ತದಲ್ಲಿ ನಿಘಂಟು ಶಬ್ದದ ವಿವರಣೆ ಕೊಟ್ಟಿದೆ - "ಛಂದೋಭ್ಯಃ ಸಮಾಹೃತ್ಯ ಸಮಾಹೃತ್ಯ ಸಮಾಮ್ನತಾಃ ತೇ ನಿಗಂತವ ಏವ ಸಂತೋ ನಿಗಮನಾನ್ನಿಘಂಟವ ಉಚ್ಯಂತ ಔಪಮನ್ಯವ: ಅಪಿ ವಾ ಹನನಾದ್ಯೇವ ಸ್ಯುಃ ಸಮಾಹತಾ ಭವಂತಿ ಯದ್ವಾ ಸಮಾಹೃತಾ ಭವಂತಿ "
- ವೇದಗಳಿಂದ (=ಛಂದೋಭ್ಯಃ) ಮತ್ತೆ ಮತ್ತೆ ಆರಿಸಿ (ಸಮಾಹೃತ್ಯ ಸಮಾಹೃತ್ಯ) ಜೋಡಿಸಿದ ಶಬ್ದಗಳಿವು. ಈ ರೀತಿ ವೇದಗಳಿಂದ (ನಿಗಮನಾತ್) ಉದ್ಧರಿಸಿದ್ದರಿಂದಲೇ (quoted, ನಿಗಂತವಃ) ಇವು ನಿಘಂಟುಗಳು ಎನ್ನುತ್ತಾರೆ ಔಪಮನ್ಯವ ಋಷಿಗಳು. ನಿಘಂಟು ಶಬ್ದವು ಹನ್ ಧಾತುವಿನಿಂದ ಬಂದಿದೆ (ಹನ್ ಅಂದರೆ ಕೊಲ್ಲು, ಜೋಡಿಸು ಎಂಬ ಅರ್ಥಗಳಿವೆ- ಸಮಾಹತ ಎಂಬ ಶಬ್ದ ಕೂಡ ಈ ಧಾತುವಿನದ್ದು) ಅಥವಾ ಹೃ ಧಾತುವಿನಿಂದಾಗಿದೆ ('ಸಮಾಹೃತ' ಈ ಶಬ್ದ ಹೃ ಧಾತುವಿನಿಂದಾದ್ದು-ಇದಕ್ಕೂ ಸೇರಿಸು ಎಂಬ ಅರ್ಥ ಉಂಟು).

'ನಿಘಂಟು' ಶಬ್ದಕ್ಕೆ 'ಖಚಿತ', 'ನಿಶ್ಚಿತ' ಎನ್ನುವ ಅರ್ಥ ಹೇಗೆ ಬಂತೋ ನಿಘಂಟಾಗಿ ಗೊತ್ತಿಲ್ಲ. ಬಲ್ಲವರು ತಿಳಿಸಿ.

ಬೋನಸ್ ಪ್ರಶ್ನೆಗೆ ಉತ್ರ:-ಮರವಂತೆಯಲ್ಲಿ ರಸ್ತೆಯ ಒಂದು ಬದಿ ಸಮುದ್ರ, ಇನ್ನೊಂದು ಬದಿ ಸೌಪರ್ಣಿಕಾ ನದಿ. ಇಲ್ಲಿ ದೋಣಿ ವಿಹಾರ ವ್ಯವಸ್ಥೆ ಕೂಡ ಇದೆ. ಆದರೆ ಮಳೆಗಾಲ ಸೂಕ್ತ ಸಮಯ ಅಲ್ಲ:-)

ಇವತ್ತಿನ ಸವಾಲು:-
ಈ ಪದದ ಅರ್ಥ ಏನು - 'ಹರ್ಮೈಕ'?

ಬೋನಸ್ ಪ್ರಶ್ನೆ:-
ಹವ್ಯಕರ ಮನೆ ಹೊಕ್ಕಾಗ 'ಆಸ್ರಿಗ್ ಬೇಕಾ' ಅಂತ ಕೇಳ್ತಾರೆ. ಅದೇ ರೀತಿ ಕುಂದಾಪುರದ ಮನೆಯಲ್ಲಿ ಏನ್ ಕೇಳ್ತಾರೆ?:-)

June 16, 2007

ತಟ್ಕ್

ತಟ್ಕ್ = ಸ್ವಲ್ಪ, ಚೂರೇ ಚೂರು. ಇದನ್ನ ಹೆಚ್ಚಾಗಿ ದ್ರವಗಳಿಗೆ ಸಂಬಂಧಿಸಿ ಉಪಯೋಗಿಸ್ತಾರೆ.
"ಅಷ್ಟೆಲ್ಲ ಮಜ್ಗಿ (ಮಜ್ಜಿಗೆ) ಬ್ಯಾಡ. 'ತಟ್ಕ್' ಅಷ್ಟೇಯ"
"ತಟ್ಕ್ ಎಣ್ಣೆ ಕೊಡ್"
"ಮಸ್ತ್ ಪಾಯ್ಸ ಹಾಕ್ಬೇಡ. ತಟ್ಕ್ ಅಷ್ಟೇಯ. ನಂಗೆ ದಾಕ್ಷಿಣ್ಯ ಇಲ್ಲ"

'ತಟ್ಕ್' ಪದ 'ತಟಕು' ಪದದ ಅಪಭ್ರಂಶ ರೂಪ. 'ತಟಕು' = ತೊಟ್ಟು, ಬಿಂದು, ಹನಿ. ಬರಹ ಕನ್ನಡ ನಿಘಂಟಿನಲ್ಲಿ ಇದರ ಅರ್ಥವನ್ನ ನೋಡಬಹುದು.

ಇದೇ ಅರ್ಥದ ಇನ್ನೊಂದು ಪದ -'ಹುಂಡ್'. 'ಹುಂಡ್' ಅಥವ 'ಹುಂಡು' ಅಂದರೆ 'ತೊಟ್ಟು', 'ಬಿಂದು', 'ಬೊಟ್ಟು', 'ತಿಲಕ'. ಆದರೆ ಈ ಪದ ಯಾಕೋ ನಿಘಂಟಿನಲ್ಲಿಲ್ಲ. ಈ ಪದವನ್ನ ಎಷ್ಟು ಜನ ಕೇಳಿಲ್ಲ?
"ಒಂದ್ ಹುಂಡ್ ಹಾಲ್ ಹಾಕ್"
"ಮಣಿಯ, ಒಂದ್ ಹುಂಡ್ ತೀರ್ಥ ಕೊಡ್ ಕಾಂಬ"
"ಹುಂಡ್ ಇಟ್ಕಣ್ಲಿಲ್ಲ ಎಂತಕೆ? ಹಣೆ ಬೋಳ್ ಬೋಳ್ ಅನ್ಸತ್ತ್" ಇಲ್ಲಿ ಹುಂಡ್ ಅಂದರೆ ತಿಲಕ.
'ಹುಂಡ್ ಕೋಳಿ' ಯಾರಾದ್ರೂ ನೋಡಿದೀರಾ?:-)

'ತಟ್ಕ್' ಅಂದ್ರೆ 'ತಟ್ಟಬೇಕ' ಅಂತನೂ ಅರ್ಥೈಸಬಹುದು. ಇದು ಸಂತು ಅವರ ಸಲಹೆ.
"ಅಧಿಕಪ್ರಸಂಗ ಮಾಡ್ತ್ಯಾ? ಹಿಡ್ದ್ ತಟ್ಕಾ?"
"ಹೇಳ್ದಾಂಗ್ ಮಾಡ್ತ್ಯಾ, ಇಲ್ಲಾ ತಟ್ಕಾ?"

ಬೋನಸ್ ಪ್ರಶ್ನೆಗೆ ಉತ್ರ:-
'ತಟ್ಕ್' ಪದದ ಸಂವಾದಿ ಪದ 'ಹನಿ'. ನನ್ನದು ಹರಕು ಮುರುಕು ಹವ್ಯಗನ್ನಡ. ಬಲ್ಲವರು ತಿದ್ದಿ. ಹವ್ಯಗನ್ನಡದ ಹಿತದೃಷ್ಟಿಯಿಂದ ಉದಾಹರಣೆ ಕೊಡ್ಲಿಕ್ಕೆ ಹೋಗಿಲ್ಲ:-))

ಇವತ್ತಿನ ಸವಾಲು:
ಈ ಪದದ ಅರ್ಥ ಏನು - 'ನಿಘಂಟು'.

ಬೋನಸ್ ಪ್ರಶ್ನೆ:
ರಸ್ತೆಯ ಒಂದು ಬದಿ ಸಮುದ್ರ. ಇನ್ನೊಂದು ಬದಿ ನದಿ. ಕರ್ನಾಟಕದಲ್ಲಿ ಎಲ್ಲಿದೆ?

May 24, 2007

ಸೊಲಗೆ

'ಸೊಲಗೆ'
ಸೊಲಗೆ = ೫೦ ಮಿ.ಲಿ.
೪ ಸೊಲಗೆಗೆ ಒಂದು ಸಿದ್ದಿ (ಸಿದ್ದೆ). ೫ ಸಿದ್ದಿಗೆ ಒಂದು ಲೀಟರ್.

ಹಾಲಿನ ಡೈರಿ, ಪ್ಯಾಕೆಟ್ ಹಾಲು ಬರುವ ಮುಂಚೆ ಹಾಲಿನ ಲೆಕ್ಕಾಚಾರವೆಲ್ಲ ಸಿದ್ದಿ, ಸೊಲಗೆಗಳ ಲೆಕ್ಕದಲ್ಲಿ.
"ಶೆಟ್ಟರ ಮನೆಗೆ ೪ ಸಿದ್ದಿ ಹಾಲು ಕೊಡ್ಕ್".
"ಮೊನ್ನೆ ಅಮಾವಾಸ್ಯೆಯಿಂದ ಹಾಲ್ ಕೊಡುಕೆ ಶುರು ಮಾಡದ್ದ್. ದಿನಕ್ಕೆ ೩ ಸಿದ್ದಿ ಹಾಲ್. ಸಿದ್ದಿಗೆ ೨ ರೂಪಾಯಿಯಾದ್ರೆ, ಒಟ್ಟ್ ಎಷ್ಟಾಯ್ತ್?".
"ಮಗ ಬಯಿಂದ (ಬಂದಿದ್ದಾನೆ). ಎರಡ್ ಸೊಲಗೆ ಹಾಲ್ ಹೆಚ್ಚು ಕೊಡುವಲೆ (ಕೊಡು)".

'ಸೊಲಗೆ' ದ್ರವಗಳ ಮಾಪನದ ಕನಿಷ್ಠ ಮಿತಿಯಾಗಿಯೂ ಉಪಯೋಗ ಆಗತ್ತೆ.
"ಅಷ್ಟೆಲ್ಲ ಬ್ಯಾಡ. ಒಂದ್ ಸೊಲಗೆ ಅಷ್ಟೆಯ"

ಧಾನ್ಯಗಳ ಮಾಪನದಲ್ಲಿ ಹೆಚ್ಚಾಗಿ ಉಪಯೋಗ ಆಗುವುದು "ಪಾವು", "ಸೇರು", "ಕಳ್ಸಿಗೆ", "ಮಾನಿಗೆ", "ಮುಡಿ".
೪ ಪಾವು = ಒಂದು ಸೇರು.
೧೪ ಸೇರು = ಒಂದು ಕಳ್ಸಿಗೆ
೪೨ ಸೇರು = ೩ ಕಳ್ಸಿಗೆ = ಒಂದು ಮಾನಿಗೆ = ಇದು ಸರಿಸುಮಾರು ೪೦ ಕೆ.ಜಿ. ಅಂತೆ.
ಒಂದು ಮುಡಿಗೆ ಎಷ್ಟು ಸೇರು? ೪೮?

"ನಾಕ್ (೪) ಸೇರ್ ಭತ್ತ ಕೊಡ್".
"ಎಷ್ಟ್ ಮಾನಿಗೆ ಭತ್ತ ಬೆಳಿತ್ರಿ?".
"ಅದ್ ನಾಕ್ ಮುಡಿ ಗದ್ದೆ".

ಈ ಪರಿಮಾಣಗಳೆಲ್ಲ ಒಂದು ಪ್ರದೇಶದಿಂದ ಒಂದು ಪ್ರದೇಶದಿಂದ ಬೇರೆ ಬೇರೆ ಆಗಿರತ್ತೆ. ಪೂರಕ ಓದಿಗೆ ಕನ್ನಡಪ್ರಭದ ಲೇಖನ - ಓದಿ. ಈ ಲೇಖನದ ಪ್ರಕಾರ ೪ ಸಿದ್ದೆಗೆ ಒಂದು ಪಾವು. ಆದ್ರೆ ನಮ್ಮಲ್ಲಿ ಸಿದ್ದೆ ಉಪಯೋಗಿಸುವುದು ದ್ರವಗಳಿಗೆ ಮಾತ್ರ, ಧಾನ್ಯಗಳಿಗಲ್ಲ. " ೪ ಸಿದ್ದೆ ಹಾಲು", " ೪ ಸೇರ್ ಭತ್ತ".

ಕುಂದಗನ್ನಡ ಪಂಡಿತರಿದ್ದರೆ ತಿದ್ದಿ. ಬಾಲ ಬೇಕಿದ್ರೆ ಜೋಡ್ಸಿ:-)) ನಮ್ಮ reviewers ಮತ್ತೆ inspector ಇನ್ನೂ ಕಾಣೆಯಾಗಿದ್ದಾರೆ:-((

ಬೋನಸ್ ಪ್ರಶ್ನೆಗೆ ಉತ್ರ:- ಕರ್ನಾಟಕ ಏಕೀಕರಣದಲ್ಲಿ ಬಹುವಾಗಿ ಶ್ರಮಿಸಿದ ಕೋ.ಶಿವರಾಮ ಕಾರಂತರ ಸಹೋದರ - ರಾಮಕೃಷ್ಣ ಕಾರಂತ.
ನಾನೋದಿದ 'ಕರ್ನಾಟಕ ಏಕೀಕರಣ" ಕುರಿತಾದ ಒಂದೆರಡು ಪುಸ್ತಕಗಳಲ್ಲಿ ಓದಿದ್ದೆ. ಮತ್ತೆ ವೈದೇಹಿಯವರ ಬಳಿ ಕೇಳಿ ತಿಳಿದದ್ದು. ಹೆಚ್ಚು ಮಾಹಿತಿ ನನ್ನ ಹತ್ರ ಇಲ್ಲ. ಬಲ್ಲವರು ತಿಳಿಸುವಂತವರಾಗಿ:-)

ಇವತ್ತಿನ ಸವಾಲು :
ಇದರ ಅರ್ಥ ಏನು - 'ತಟ್ಕ್'?

ಬೋನಸ್ ಪ್ರಶ್ನೆ :
'ತಟ್ಕ್' ಪದದ ಸಂವಾದಿ ಹವ್ಯಗನ್ನಡದ ಪದ ಯಾವುದು?

ಬಾಲಂಗೋಚಿ :
"ರಾಮ (ತೆಂಗಿನ) ಕಾಯಿ ಕೊಯ್ಯುಕೆ ಬಯಿಂದ. ನಾನ್ ಇನ್ನೊಂದೆರಡ್ ಕೆಲ್ಸ ಹಮ್ಸಕಂಡಿದ್ದೆ. ನೀನ್ ಎಲ್ಲ ಬಿಟ್ಟ್ ಇಷ್ಟೊತ್ತಿಗೆ ಸೊಲಗೆ, ಸಿದ್ದೆ..ಅನ್ಕಂಡ್ ಫೋನ ಮಾಡ್ರೆ? ಪುರ್ಸೊತ್ತಿದ್ದಾಗ್ಳಿಕೆ ಫೋನ್ ಮಾಡ್, ಆಗ್ದಾ (ಆಗೊಲ್ಲವೆ)?" ಅಂತ ಅಮ್ಮ ಫೋನ್ ಇಟ್ಟಿದ್ದರಿಂದ ಈ ಅಧ್ಯಾಯ ಇಲ್ಲಿಗೆ ಪರಿಸಮಾಪ್ತಿಯಾಗುತ್ತಿದೆ. ಮಂಗಳಂ:-))

May 19, 2007

ಶುಭಹಾರೈಕೆಗಳು

ಮಿತ್ರರೇ,
ನಮ್ಮ ನಿಮ್ಮ ನೆಚ್ಚಿನ ತುಳಸಿಯಮ್ಮ ನವರ ಚೊಚ್ಚಲ ಪುಸ್ತಕ ನಾಳೆ ಬಿಡುಗಡೆಯಾಗುತ್ತಿದೆ. ಶುಭ ಹಾರೈಸಿ ಮತ್ತು ಪುಸ್ತಕ ಕೊಳ್ಳಿ (ಕಾಸು ಕೊಟ್ಟು:-)).

ತುಳಸಿಯಮ್ಮ,
ನಮ್ಮ ಜಗಲಿಯಿಂದ ನಿಮಗೆ ಶುಭ ಹಾರೈಕೆಗಳು.

ಜಗಲಿ ಭಾಗವತರು:-)

May 13, 2007

ಗಂಟಿ

'ಗಂಟಿ' = ದನ, ಎಮ್ಮೆ, ಎತ್ತು, ಹೋರಿ,(Live stock, ನಾಯಿ ಬೆಕ್ಕುಗಳನ್ನ ಬಿಟ್ಟು)
ಸಂತು ಅವರ ವಿವರಣೆ ತುಂಬ ಚೆನ್ನಾಗಿದೆ.

"ಇವ ಎಂತಕೂ (ಏನಕ್ಕೂ) ಆಪವ್ನಲ್ಲ (ಆಗುವವನಲ್ಲ). 'ಗಂಟಿ' ಮೇಸುಕೆ (ಮೇಯಿಸಲಿಕ್ಕೆ) ಅಡ್ಡಿಲ್ಲ."
"ನಾನ್ ಇವತ್ತ್ ಮದಿಗ್ (ಮದ್ವೆಗೆ) ಹೋಯ್ಕ್. ನೀನ್ 'ಗಂಟಿ' ಕಂಡ್ಕಂತ್ಯಾ? (ನೋಡ್ಕೋತೀಯ)"
"ಅಮ್ಮ, 'ಗಂಟಿ'ಗ್ ಹುಲ್ಲ್ ಹಾಕಿದ್ಯಾ? ದನ ಕೂಗ್ತಿತ್ತಪ್ಪ ಆಗ್ಳಿಂದ (ಆವಾಗಿಂದ)"

'ಹೆಂಗರು' - ಹೆಣ್ಣು ಕರು
'ಗುಡ್ಡ' - ಗಂಡು ಕರು
"ದನ ಕರು ಹಾಕಿತ್ತ? ಗುಡ್ಡವ? ಹೆಂಗರುವ?"

'ಕಡಸು' - ಕರುವಿಗಿಂತ ಕೊಂಚ ದೊಡ್ಡದಾದ, ಇನ್ನೂ ಗರ್ಭಧರಿಸಿರದ ಎಳೆಗರು:-)
'ಕಡಸು' ಶಬ್ದ ತಮಿಳು, ಮಲಯಾಳಂನ 'ಕಡಾ' ಶಬ್ದದಿಂದ ಬಂದಿರಬಹುದು ಅಂತ ಎಲ್ಲೋ ಓದಿದ್ದೆ.

'ಬತ್ತ್ ಗಂದಿ' = ಬತ್ತಿದ ದನ, ಹಾಲು ಕೊಡದ ದನ.
"'ಬತ್ತ್ ಗಂದಿ' ಮಾರಾಯ್ರೆ ಅದ್. ಹಾಲೇ ಇಲ್ಲ ಕಾಣಿ."

ದನಗಳ ಆಹಾರ - 'ಹಿಂಡಿ', 'ಅಕ್ಕಚ್ಚು'
"ದನಕ್ಕೆ ಅಕ್ಕಚ್ಚ್ ಕೊಟ್ಟಿದ್ಯ?"
"ಎಮ್ಮೆ ಕೂಗತ್ತಲೆ, ಮಗ. 'ಅಕ್ಕಚ್ಚ್' ಬೇಕೇನೋ ಅದ್ಕೆ. ಹೋಯಿ ಕಾಣ್"
'ಗೋಗ್ರಾಸ' ಇಲ್ಲದೆ ಯಾವ ಊಟವೂ ಆರಂಭವಾಗುವುದಿಲ್ಲ. ದೀಪಾವಳಿಯ ಸಮಯದಲ್ಲಿ 'ಗೋಪೂಜೆ' ನನಗೆ ತುಂಬ ಖುಶಿ ಕೊಡ್ತಾ ಇದ್ದ ಹಬ್ಬ.

ಬೋನಸ್ ಪ್ರಶ್ನೆಗೆ ಉತ್ತರ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಕೋ.ಲ.ಕಾರಂತರ ಜೀವನಚರಿತ್ರೆ. ಶಾಂತಲಾಗೆ ಪೂರ್ತಿ ಅಂಕ:-)
'ಕೋ.ಲ.ಕಾರಂತ'ರು ಶಿವರಾಮ ಕಾರಂತರ ಸಹೋದರ. ಶಿಕ್ಷಣತಜ್ಞರು. ಜೀವನದ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ಕೊಡಬೇಕು ಅನ್ನುವುದು ಅವರ ನಿಲುವಾಗಿತ್ತು. ಅದರಲ್ಲಿ ವ್ಯವಸಾಯವೂ ಒಂದು. ಅವರು ಸ್ವತಃ ತೋಟ ಬೆಳೆಸಿದ್ದರು. ಕುಂದಾಪುರದ ಬೋರ್ಡ್ ಹೈಸ್ಕೂಲ್, ಕೋಟದ ವಿವೇಕ ಹೈಸ್ಕೂಲ್-ಗಳ ಜೊತೆ ಅವರ ಹೆಸರು ಚಿರಸ್ಥಾಯಿಯಾಗಿದೆ. ದೇವರ ಕುರಿತು ಅವರದ್ದು 'ಏ.ಎನ್.ಮೂರ್ತಿರಾಯ'ರ ಥರದ ನಿಲುವು. ನಾಸ್ತಿಕರಾದರೂ ಹೆಂಡತಿಯ ಆಸ್ತಿಕತೆಯನ್ನು ಪ್ರಶ್ನಿಸಿದವರಲ್ಲ.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಸೊಲಗೆ'?
ಸುಳಿವು - ಇದು ದ್ರವಗಳ ಮಾಪನ ಪರಿಮಾಣ.

ಬೋನಸ್ ಪ್ರಶ್ನೆ -
ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಶಿವರಾಮ ಕಾರಂತರ ಸಹೋದರ ಯಾರು?

April 22, 2007

ನೀವೂ ದಾರ ಕಟ್ಟಿ

'ಕಥನ' (ಜಾಗತಿಕ ಕನ್ನಡಿಗರ ಕೂಟ) ಮತ್ತು 'ರಾಘವೇಂದ್ರ ಪ್ರಕಾಶನ' ಸಹಯೋಗದಲ್ಲಿ ಪ್ರಕಟಿತ 'ನೀವೂ ದಾರ ಕಟ್ಟಿ' ಕಥಾ ಸಂಕಲನದ ನಿಗದಿತ ಪ್ರತಿಗಳು ಅಮೇರಿಕಾದಲ್ಲಿ ಲಭ್ಯವಿದೆ. ಆಸಕ್ತರು ಇ-ವಿಳಾಸ ( kathana.qns@gmail.com ) ಕ್ಕೆ ಬರೆಯಬೇಕಾಗಿ ವಿನಂತಿ.

೧೪೪ ಪುಟಗಳು,
೧೨ ಬಹುಮಾನಿತ ಕಥೆಗಳು.
ಬೆಲೆ - ೫ ಡಾಲರ್ (ಅಂಚೆ ವೆಚ್ಚದ ಹೊರತಾಗಿ).

ವಿವರಗಳಿಗೆ ಈ ಜಾಲತಾಣವನ್ನು ನೋಡಿ - http://kathana.qns.googlepages.com/

ನಿಮ್ಮ ನಿರಂತರ ಬೆಂಬಲದ ನಿರೀಕ್ಷೆಯಲ್ಲಿ,
'ಕಥನ' (ಜಾಗತಿಕ ಕನ್ನಡಿಗರ ಕೂಟ).

March 27, 2007

Need Info

Gururaj is doing fine now. We are planning to help him post-operation to make him self-reliant.
He is an unskilled person and may not have completed SSLC too. My approach is to provide him some kind of training to gain skill in certain area. Would you mind sharing with us any information regarding schools/institutions/training centers which help these kind of causes? Your help will be extremely appreciated.I did hear from someone about some Job Oriented Courses in institutions run by Dharmasthala temple trust. Please let us know if you have any contact information regarding the same.

I was also intrested in collating the information regarding various courses that one can take up after S.S.L.C./P.U.C. (apart from B.E./M.B.B.S.). The information should contain the course details and the future career path. I am collecting this information to help a group, which is planning to conduct guidance sessions in Kannada schools in rural areas. Any information or pointers to information is highly appreciated.

March 26, 2007

ಮೇನತ್ತು

ಮೇನತ್ತು = ವಿಶೇಷ, ತುಂಬ ಮೆಹನತ್ತಿನಿಂದ ಮಾಡಿದ್ದು.
ಪ್ರಾಯಶಃ 'ಮೆಹನತ್' ಶಬ್ದ ಇದರ ಮೂಲವಾಗಿರಬಹುದು.

ಈ ಪದವನ್ನ, ನಾನು ಹೆಚ್ಚು ಕೇಳಿದ್ದು ಅಡುಗೆಮನೆಯಲ್ಲಿ:-))
'ಮಕ್ಳ್ ಬತ್ತೊ (ಬರ್ತಾರೆ). ಮೇನತ್ತ್ ಅಂದ್ಕಂಡ್ ಕೆಸಿನಸೊಪ್ಪಿನ್ ಪತ್ರೊಡೆ ಮಾಡಿದ್ದೆ'.
'ಮೇನತ್ತ್ ಅಂದ್ಕಂಡ್ ಮಾಡದ್ದೆ ಬಂತ್. ಉಪ್ಪ್ ಜಾಸ್ತಿಯಾಯಿ ಎಲ್ಲ ಪುಸ್ಕಟಿ ಆಯ್ತ್':-))
'ನೀನ್ ಮನ್ಯೆಗಿಪ್ಪುದಿಲ್ಲ ಅಂತೇಳಿ (ಅಂತ ಹೇಳಿ) ಮೇನತ್ತ್ ಅಂದ್ಕಂಡ್ ಮಾಡದ್ದ್ ಕಾಣ್. ಅದ್ ನಿಂಗ್ ಸೇರುದಿಲ್ಲ (ರುಚಿಸಲ್ವಾ), ಸುಳ್ಳಾ? ಈಗಿನ್ ಕಾಲದ್ ಮಕ್ಳಿಗೆ ಎಂತ ಮಾಡಿರೂ ತರವಾತಿಲ್ಲ.'

ಪಾ.ವೆಂ.ಆಚಾರ್ಯರ ಕಾವ್ಯನಾಮ - ಲಾಂಗೂಲಾಚಾರ್ಯ'.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಗಂಟಿ' (ತುಂಬ ಸುಲಭದ ಸವಾಲು).

ಬೋನಸ್ ಪ್ರಶ್ನೆ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಯಾರ ಜೀವನಚರಿತ್ರೆ?

March 18, 2007

ಟೋಪಿ

ಇದು ಹಳೆಯ ಕವನ (?). ಇವತ್ತು ಮತ್ತೆ ನೆನಪಾಯ್ತು:-))

ನಾನು ಹೋಗಿದ್ದೆ ಇವತ್ತು hair cut-ಗೆ,
ಕತ್ತರಿ ಹಿಡಿದು ಕಾದಿದ್ದಳು ತರಳೆ ಓರ್ವಳು

"ಯಾವ ಲೆವೆಲ್ ಇ-style ಬೇಕು ಭಾಗವತರೆ?",
ವಯ್ಯಾರದಿಂದ ಉಲಿದಳು ಕತ್ತರಿ ಝಳಪಿಸುತ್ತ

ಉತ್ತರಿಸಲು ಸಾಧ್ಯವೆ ಷೋಡಶಿಯ ಪ್ರಶ್ನೆಗೆ ?
ಅವಳ ಕಣ್ಣ ಮಿಂಚಿನಲ್ಲಿ ನಾ ಮುಳುಗಿರುವಾಗ?

ಶಿಸ್ತಾಗಿ ಅವಳ ಕೈಗೆ ಮಂಡೆ ಕೊಟ್ಟು ಹೇಳಿದೆ,
"ಎನೊ ಒಂದು, ಒಟ್ನಲ್ಲಿ level-ಆಗಿ cut ಮಾಡಮ್ಮ",

"ಇದು ಯಾವ ಸೀಮೆಯ ಬಕ್ರ, ವಕ್ಕರಿಸಿದ್ದಾನೆ"?
ಪಿಳಿಪಿಳಿ ಕಣ್ಣು ಬಿಟ್ಟಳು ತರುಣಿ ಅಚ್ಚರಿಯಿಂದ.

ಬಡಪಾಯಿ ಮಂಡೆ ಹಿಡಿದು ಕುಟ್ಟಿ, ತಟ್ಟಿ, ಇನ್ನೂ ಏನೇನೋ..
ಭಯವಾಯ್ತು ನನಗೆ " ಇದು hari cut-ಓ? brain wash-ಓ"?

"ಸಮಾಧಾನ ಮಹರಾಯ್ತಿ, ತೋರು ಸ್ವಲ್ಪ ಕರುಣೆ,
knowledge ಎಲ್ಲ ಮಂಡೆಯಿಂದ ಉದುರೀತು, ಜೋಪಾನ".

"ಆಯ್ತಪ್ಪ, ನೀನ್ ಹೇಳಿದಾಂಗೆ ಮಾಡುವ, ಅಕಾ?
ಬೊಬ್ಬೆ ಮಾತ್ರ ಹಾಕ್ಬೇಡ, ಕೈ ಮುಗೀತೆ ಮಾರಾಯ".

ಅಲವತ್ತುಕೊಂಡಳು ಹುಡುಗಿ, ಸುಳ್ಳು ದೈನ್ಯದಿಂದ,
ಚಿಕ್ಕ ಮಕ್ಕಳಲ್ಲಿ ಅಮ್ಮಂದಿರು sorry ಕೇಳುವ ಹಾಗೆ

ಈಗ ನಯ ನಾಜೂಕು, ತರುಣಿಯ ಲಾಸ್ಯ ಕೆಲಸಕ್ಕೆ,
ನನಗೋ ಮೈಯಲ್ಲಿ ಮಿಂಚು ಅವಳ ಪ್ರತಿ ಸ್ಪರ್ಶಕ್ಕೂ:-)

ಮಂಡೆ ಬೋಳಿಸಿ, ಎದ್ದೇಳಿಸಿ, 'ಉಸ್ಸಪ್ಪ' ಅಂದಳು ಹುಡುಗಿ,
"bill ಎಷ್ಟಾಯ್ತು" ಅಂತ purse ತಡಕಾಡಿದೆ ನಾನು

15$ hair cut, 45$ extra charge. 60$ ಒಟ್ಟಿಗೆ,
ನಿಮ್ಮ ಬೊಬ್ಬೆ ಕೇಳಿ, ಓಡಿ ಹೋಗಿದ್ದಾರೆ 3 ಗಿರಾಕಿಗಳು":-))

ಟೋಪಿ ತೆಗೆದುಕೊಂಡೆ ನನ್ನ ಬೋಳು ಮಂಡೆಗೆ
ಟೋಪಿಯೂ ಹಾಕಿದರು, ಮಂಡೆಯೂ ಬೋಳಿಸಿದರು:-))

March 6, 2007

'ಹಂಬಕ'

ಗುರುರಾಜ್ ಚಿಕಿತ್ಸೆಗೆ ಧನಸಹಾಯದ ಮನವಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸದ್ಯದ ಒಟ್ಟು ಸಂಗ್ರಹಿತ ಮೊತ್ತ - ರೂ ೪೧,೦೦೦.
ಸಾಧ್ಯವಾದರೆ ಈ ವಾರಾಂತ್ಯವೇ ಗುರುರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗುವುದು. ನಿಮ್ಮ ಸಹಾಯಕ್ಕೆ ನಾವು ಆಭಾರಿ.

'ಹಂಬಕ' = ಮೋಸ.
ಶಾಂತಲ ಹೇಳಿದ ಹಾಗೆ ಇದರ ಮೂಲ 'humbug' ಇರಬಹುದೇನೋ ಅಂತ ನನ್ನ ಅನಿಸಿಕೆ ಕೂಡ.

ಈ ಶಬ್ದ ಉಪಯೋಗ ಆಗುವುದು ಚಿಕ್ಕಪುಟ್ಟ ಮೋಸಕ್ಕೆ. ಅದೂ, ಆಟಗಳಲ್ಲಿ ಜಾಸ್ತಿ.
'ಅಣ್ಣಯ್ಯ ಬರೀ ಹಂಬಕ. ಗೆಲ್ಲಕಂತೇಳಿ ಮೋಸ ಮಾಡ್ತ'
'ಮೊನ್ನೆ ತಮಿಳ್ನಾಡಿನವ್ರ್ ಹಂಬಕ ಮಾಡಿ ಗೆದ್ದ್ರ್'
'ಅವ ಹಂಬಕದ ಪುಟ್ಟ. ಏಗ್ಳಿಕ್ ಕಂಡ್ರೂ ಅವ್ನೆ ಗೆಲ್ಕ್'

ಬೋನಸ್ ಪ್ರಶ್ನೆಗೆ ಉತ್ರ
'ಅಡಿಗ' ಅನ್ನುವ ಪದಮೂಲದ ಮೇಲೆ 'ಅಡಿಗಳು' ಎನ್ನುವುದು ವ್ಯಾಕರಣದ ದೃಷ್ಟಿಯಿಂದ ಸರಿ. ದೇವರ ಅಡಿಗಳನ್ನು ಪೂಜಿಸುವವನೇ ಅಡಿಗ. ಹಾಗಾಗಿ ಅದರ ಬಹುವಚನ 'ಅಡಿಗಳು'.
ಇದನ್ನ ಹೇಳ್ತಾ ಇರೋದು ನಾನಲ್ಲ. ಪಾ.ವೆಂ.ಆಚಾರ್ಯ:-)) ಅವರ 'ಪದಾರ್ಥ ಚಿಂತಾಮಣಿ'ಯಲ್ಲಿ ಇದರ ಪ್ರಸ್ತಾಪ ಇದೆ. ಓದಿ ತುಂಬ ವರ್ಷ ಆಯ್ತು, ತಪ್ಪಿದ್ರೆ ಸರಿಮಾಡಿ:-)

ರೂಢಿಯಲ್ಲಿ 'ಅಡಿಗರು' ಅನ್ನುವ ಪ್ರಯೋಗ ಜಾಸ್ತಿ. 'ಅಡಿಗಳು' ಅನ್ನುವ ಪ್ರಯೋಗ ಕುಂದಾಪುರದಲ್ಲಿ ತುಂಬಾ ಕೇಳಿದ್ದೇನೆ. ಕುಂದಾಪುರದ ಹೊರಗೆಲ್ಲ 'ಅಡಿಗರು'.

ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮೇನತ್ತು'?

ಬೋನಸ್ ಪ್ರಶ್ನೆ :-
ಪಾ.ವೆಂ.ಆಚಾರ್ಯರ ಕಾವ್ಯನಾಮ ಏನು?

March 1, 2007

ಅಟ್ರಕಾಣಿ

'ಅಟ್ರಕಾಣಿ' = ಕಳಪೆ, ಕೀಳು ದರ್ಜೆ
ಮೂಲ ಗೊತ್ತಿಲ್ಲ. ಬೇರೆ ಅರ್ಥ ಇದ್ರೆ ತಿಳಿಸಿ.

ಭಾಗವತ್ರು 'ಅಟ್ರಕಾಣಿ' ಜನ ಅಲ್ಲ. ಮಸ್ತ್ ಒಳ್ಳೆ ಜನ ಅವ್ರ್. ಏನಂತ್ರಿ ಅಸತ್ಯಿಗಳೆ?:-)
"ಕೆಲ್ಸ ಮಾಡಿರೆ (ಮಾಡಿದ್ರೆ) ಲೈಕ್ ಮಾಡಿ ಮಾಡ್ಕ್. 'ಅಟ್ರಕಾಣಿ' ಕೆಲ್ಸ ಮಾಡುಕಾಗ"
ಇವತ್ತ್ ಬರುಕೆ (ಬರೆಯಲಿಕ್ಕೆ) ಮಂಡಿಗೆ ಎಂತದೂ ಹೊಳಿತಿಲ್ಲ. ಇದ್ 'ಅಟ್ರಕಾಣಿ' ಪೋಸ್ಟ್ ಆಯ್ತ್:-((

'ಅಟ್ರಕಾಣಿ'ಗೆ ಮೋಸ ಎನ್ನುವ ಅರ್ಥವೂ ಇದೆಯ ಅಂತ ಅನಿಸ್ತಿದೆ. ಸರಿ ಗೊತ್ತಿಲ್ಲ. Reviewers ಮತ್ತೆ inspector ಅಟ್ರಕಾಣಿಯ ಅಲ್ದಾ ಕಾಂಬ:-)

ಇವತ್ತಿನ ಸವಾಲು-
ಇದರ ಅರ್ಥ ಏನು - 'ಹಂಬಕ'?

ಬೋನಸ್ ಪ್ರಶ್ನೆ -
ಇದ್ರಲ್ಲಿ ಯಾವ್ದು ಸರಿ - 'ಅಡಿಗರು' ಅಥವ 'ಅಡಿಗಳು'?

February 24, 2007

ಮಿಣ್ಣಗೆ

'ಮಿಣ್ಣಗೆ' = ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಇರೋದು, ಯಾರಿಗೂ ಗೊತ್ತಾಗದ ಹಾಗೆ ಎನಾದ್ರೂ ಮಾಡೋದು, keeping low profile ಅಂತಾನೂ ಅನ್ಬಹುದು.

ಗುಬ್ಬಚ್ಚಿ ಮಿಣ್ಣಗೆ ಬಂದ್ ಹಾಲ್ ಕುಡ್ದದ್ದನ್ನ್ ಬೆಕ್ಕ್ ಕಂಡಿತ್ತ್:-)
ತುಳಸಿಯಮ್ಮ ಮಿಣ್ಣಗಿದ್ರಪ್ಪ. ಗುರುದಕ್ಷಿಣೆ ಕೊಡ್ಕಾತ್ತ್ ಅಂದ್ಕಂಡೇನೊ:-)
"ಮಾಣಿಗೆ ಜೋರ್ (ಬಯ್ಯೋದು) ಮಾಡಿದ್ಯ? ನಿನ್ನೆಯಿಂದ ಮಿಣ್ಣಗಿತ್ತಪ್ಪ"
'ಮಿಣ್ಣ'ಗಿಪ್ಪುದು ಅಂದ್ರೆ ಶಬ್ದ ಇಲ್ದೆ ಅವರಷ್ಟಕ್ಕ್ ಅವರಿಪ್ಪುದು. 'ಮಿಣ್ಣ'ಗಿದ್ದೂ ಮಿನುಗುದು ಅಸತ್ಯಿಗಳಿಗೆ ಮಾತ್ರ ಸಾಧ್ಯ:-)

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಕವನವೊಂದರಲ್ಲಿ (ಮಿಣ್ಣಗಿನ ಧೂರ್ತ) ಇದನ್ನ ಉಪಯೋಗಿಸಿದ್ದಾರೆ.ಕವನದ ಹೆಸರು ನೆನಪಿಲ್ಲ (ವಯಸ್ಸಾಯ್ತು ನೋಡಿ). 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತದು.

ಇತ್ತೀಚಿನ ಸುದ್ದಿ. 'ಎಣ್ಣು' ಪದವನ್ನು ಸಾಹಿತ್ಯದಲ್ಲಿ ಉಪಯೋಗಿಸಲಾಗಿದೆ. ಮಿತ್ರಾ ವೆಂಕಟ್ರಾಜ್ ತಮ್ಮ 'ಒಂದು ಒಸಗೆ ಒಯ್ಯುವುದಿತ್ತು' ಕಥೆಯಲ್ಲಿ ಉಪಯೋಗಿಸಿದಾರೆ. ದೆಹಲಿಯ 'ಕಥಾ' ಪ್ರಶಸ್ತಿ ವಿಜೇತ ಕಥೆ. ಭಾಗವತ್ರ ಅಚ್ಚುಮೆಚ್ಚಿನ ಕಥೆ ಅದು. ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿ - http://kanlit.com/modes/home/brh/168/.html
"ಶೇಷಮ್ಮ ತನ್ನ ಕಾಲದ ಗತವೈಭವವನ್ನು, ಮುಖ್ಯವಾಗಿ ತುಂಬಿತುಳುಕುತ್ತಿದ್ದ ಮನೆಯಂದಿಗರನ್ನು, ಚಾವಡಿ ಭರ್ತಿಯಾಗುತ್ತಿದ್ದ ಊಟದ ಪಂಕ್ತಿಯನ್ನು ಎಣ್ಣಿ, ಎಣ್ಣಿ ರೋದಿಸುತ್ತಿದ್ದರೆ ಜಲಜೆಗೂ ಹೌದೆಂಬಂತೆ ಕಾಣಿಸುತ್ತಿತ್ತು."

ಇವತ್ತಿನ ಸವಾಲು
ಇದರ ಅರ್ಥ ಏನು - 'ಅಟ್ರಕಾಣಿ'?

Bonus question:-) - ನಾವು 'ಕಥನ (ಜಾಗತಿಕ ಕನ್ನಡಿಗರ ಕೂಟ)'ದಿಂದ ನಡೆಸಿದ ಕಥಾಸ್ಪರ್ಧೆಯಲ್ಲಿ ವಿಜೇತವಾದ ಎರಡು ಕಥೆಗಳು http://kanlit.com/ ಜಾಲತಾಣದಲ್ಲಿವೆ. ಅವು ಯಾವುವು?

ಸರಿ ಉತ್ತರ ಹೇಳಿದವರಿಗೆ ಕೋಟೇಶ್ವರ ಹಬ್ಬದಲ್ಲಿ ಒಂದು ಸೇರು ಮುಂಡಕ್ಕಿ:-))

February 20, 2007

ಎಣ್ಣು

ಪ್ರೇಮಜ್ವರದ ಮುಂದಿನ ಹಂತ 'ವಿರಹ'. ಅದಕ್ಕಾಗಿ ಇವತ್ತಿನ ಶಬ್ದ 'ಎಣ್ಣು':-)
'ಎಣ್ಣು' = ಯೋಚಿಸುವುದು, ಚಿಂತಿಸುವುದು

ಶಿವು, ಇನ್ನೂ ವಿರಹ ವಿರಹ ಅಂತ 'ಎಣ್ಣ'ತಿದ್ರ್ಯಾ?
ತುಳಸಿಯಮ್ಮ, ನಂಗೆ ಗುರುದಕ್ಷಿಣೆ ಕೊಡ್ಕಾತ್ತ್ ಅಂತ 'ಎಣ್ಣ'ತಿದ್ರ್ಯಾ?
"ನಾವೆಲ್ಲ ಹುಶಾರಿತ್ತ್. ಮನೆ ಬಗ್ಗೆ 'ಎಣ್ಣ'ಬೇಡ".
"ಇನ್ನೂ 'ಎಣ್ಣು'ದೆಂತಕೆ? ಹೋಪವ್ರ್ ಹೋತ್ರ್. ಅದನ್ನೆಲ್ಲ ತಡುಕಾತ್ತಾ (ತಡೀಲಿಕ್ಕಾಗತ್ತ)? ಇಪ್ಪವ್ರ್ (ಇರುವವರು) ಬಗ್ಗೆ ಯೋಚ್ನೆ ಮಾಡ್" (ಸಾವಿನ ಮನೆಯಲ್ಲಿ ಕೇಳುವ ಮಾತು).

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಸಾಹಿತ್ಯದಲ್ಲೂ ಉಪಯೋಗಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ಭಾಗವತ್ರು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಕ್ಕನಿಗೆ ಬರೆದ ಪತ್ರವೊಂದರಲ್ಲಿ ಇದನ್ನ ಉಪಯೋಗಿಸಿದ್ದಾರೆ. ಅದರ ಒಂದು ಚರಣ:-
ತಿಂಗಳೊಂದಾಯ್ತು ಹತ್ರ ಹತ್ರ
ಬರೆದಿಲ್ಲವೇಕೆ ನೀನಿನ್ನೂ ಉತ್ರ
ಕೆದಕುತ್ತಿಹರು ಕಾರಣದ ಚರಿತ್ರ
ಆರಂಭವಾಗಿದೆ ಎಣ್ಣುವಿಕೆಯ ಸತ್ರ

ಅಂದಹಾಗೆ ಮಾಲಾ ರಾವ್ (http://www.chitra-durga.blogspot.com/ )ಸಿದ್ಧಪಡಿಸುತ್ತಿರುವ ಜಗತ್ತಿನ ಅತಿಶ್ರೇಷ್ಠ ಕವನಗಳ ಪಟ್ಟಿಯಲ್ಲಿ ಈ ಮೇಲಿನ ಕವನವನ್ನೂ ಪರಿಗಣಿಸಲಾಗಿದೆ ಎಂದು ಬೊ.ರ.ಬ್ಯೂರೋದ 'ನಂಬಲನರ್ಹ' ಮೂಲಗಳಿಂದ ತಿಳಿದುಬಂದಿದೆ:-))

ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮಿಣ್ಣಗೆ'? ಇದನ್ನು ಕನ್ನಡದ ಹೆಸರಾಂತ ಕವಿಯೊಬ್ಬರು ತಮ್ಮ ಕಾವ್ಯವೊಂದರಲ್ಲಿ ಉಪಯೋಗಿಸಿದ್ದಾರೆ. ಅವರ ಹೆಸರೇನು?
Hint : ತುಳಸಿಯಮ್ಮನವರು ಈ ಕವಿಯ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ:-))

February 17, 2007

ಕಾಂತ, ಕಾಂತೆ

ಈ ವಾರ ಎಲ್ಲಕಡೆನೂ ಪ್ರೇಮಜ್ವರ. ಹಾಗಾಗಿ ಇವತ್ತಿನ ಶಬ್ದ 'ಕಾಂತ, ಕಾಂತೆ':-))
ಕಾಂತ = ಕಾಣ್ತಾನೆ.
ಕಾಂತೆ = ಕಾಣ್ತೇನೆ.

ಕಂದಾಪ್ರ ಕನ್ನಡಕ್ಕೆ ಅದರದ್ದೆ ಆದ ರಚನೆ ಇದೆ. ಇವುಗಳನ್ನ ನೋಡಿ:-
ಕಾಂತ = ಕಾಣ್ತಾನೆ, ಕೇಂತ = ಕೇಳ್ತಾನೆ, ಹೋತ = ಹೋಗ್ತಾನೆ, ಬತ್ತ = ಬರ್ತಾನೆ,
ಕಾಂತೆ = ಕಾಣ್ತೇನೆ, ಕೇಂತೆ = ಕೇಳ್ತೇನೆ, ಹೋತೆ = ಹೋಗ್ತೇನೆ, ಬತ್ತೆ = ಬರ್ತೇನೆ,
ಕಾಂತ್ರ್ಯ = ಕಾಣ್ತೀರ, ಕೇಂತ್ರ್ಯ = ಕೇಳ್ತೀರ, ಹೋತ್ರ್ಯಾ = ಹೋಗ್ತೀರ, ಬತ್ತ್ರ್ಯಾ = ಬರ್ತೀರಾ,
ಕಾಣಿ = ನೋಡಿ, ಕೇಣಿ = ಕೇಳಿ, ಹೋಯಿನಿ = ಹೋಗಿ, ಬನ್ನಿ = ಬನ್ನಿ:-)
ಕಾಂಬ್ರ್ಯಲೆ = ಕಾಣುವಿರಲ್ಲ, ಕೇಂಬ್ರ್ಯಲೆ = ಕೇಳುವಿರಲ್ಲ, ಹೋಪ್ರ್ಯಲೆ = ಹೋಗುವಿರಲ್ಲ, ಬಪ್ಪ್ರ್ಯಲೆ = ಬರುವಿರಲ್ಲ,
ಕಂಡ = ನೋಡಿದ, ಕೇಂಡ = ಕೇಳಿದ, ಹೋದ = ಹೋದ, ಬಂದ = ಬಂದ.

ನಮ್ಮ ಚಲನಚಿತ್ರ ಸಾಹಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವುದು:-
ಕಾಂತ - ಕಾಂತೆ,
ಇನಿಯ - ಇನಿಯೆ(?),
ನಲ್ಲ - ನಲ್ಲೆ,
ಪ್ರಿಯತಮ - ಪ್ರಿಯತಮೆ,
ಪ್ರಿಯಕರ - ಪ್ರಿಯಕ(ರೆ,ರಿ?),
ಪ್ರಿಯ - ಪ್ರಿಯೆ,
ಮತ್ತೆ ನಮ್ಮ ಯಕ್ಷಗಾನದಲ್ಲಿ - ರಮಣ, ವಲ್ಲಭ:-))

ಭಾಷೆ ಸಂಸ್ಕೃತಿಯ ಪ್ರತೀಕ ಅಂತಾರೆ. ಕೆಲವೊಂದು ಪದ ಪ್ರಯೋಗಗಳು ನಮ್ಮ ನಂಬಿಕೆಯಿಂದ ತುಂಬ ಪ್ರಭಾವಿತವಾಗಿವೆ.
ಮನೆಯಿಂದ ಹೋಗುವಾಗ - ಬತ್ತೆ - ಅನ್ತೇವೆ. 'ಹೋತೆ' ಅನ್ನೋಹಾಗಿಲ್ಲ:-) ನೆಂಟರ ಮನೆಯಾದ್ರೆ -'ಬತ್ತೆ, ನೀವೆಲ್ಲ ಕೂಕಣಿ (ಕೂತ್ಕೊಳ್ಳಿ)':-))
ಅದೇ ಆಸ್ಪತ್ರೆಗೆ ರೋಗಿಯನ್ನ ನೋಡ್ಲಿಕ್ಕೆ ಹೋಗಿದ್ರೆ - 'ಹೋತೆ'. 'ಬತ್ತೆ' ಅನ್ನೊ ಹಾಗಿಲ್ಲ. ಡಾಕ್ಟರ್ ಬಳಿನೂ 'ಹೋತೆ':-))ನಮ್ಮ ಮನೇಲಿ ರಾತ್ರಿ ದೀಪ (ಲೈಟು, ಕರೆಂಟು) ಆರಿಸ್ಬೇಕಾದ್ರೆ -ದೀಪ ದೊಡ್ಡದು ಮಾಡ್ - ಅಂತಾರೆ. ದೀಪ ಆರಿಸು ಅನ್ನೊ ಹಾಗಿಲ್ಲ:-))

ಆಯ್ತು. ಇವತ್ತಿಗ್ ಮಸ್ತ್ ಆಯ್ತ್. ನಾನ್ ಬತ್ತೆ. ನೀವೆಲ್ಲ ಕೂಕಣಿ.
Reborn, ನಾನ್ ಹೋತೆ:-))

ಇವತ್ತಿನ ಸವಾಲು -ಇದರ ಅರ್ಥ ಏನು? - 'ಎಣ್ಣು'

February 13, 2007

ದಸ್ಕತ್ತು

ದಸ್ಕತ್ತು = ಸಹಿ, ಹಸ್ತಾಕ್ಷರ
ಮೂಲ - ದಸ್ತಕತ್ (ಪ್ರಾಯಶಃ). ಇದು ಕೇವಲ ಕುಂದಗನ್ನಡದ ಶಬ್ದವೋ, ಇಲ್ಲ ಬೇರೆ ಕಡೆನೂ ಉಪಯೋಗಿಸ್ತಾರೊ ಗೊತ್ತಿಲ್ಲ.

ಮನಸ್ವಿನಿ ನಂಗೆ ನೂರು ಡಾಲರ್ ಕೊಡುದಿತ್ತ್ (ಕೊಡ್ಬೇಕಿದೆ). ನಾನ್ 'ದಸ್ಕತ್ತ್' ತಕಂಬ್ದ್ (ತೆಗೆದುಕೊಳ್ಳೊದು) ಒಳ್ಳಿದ್ (ಒಳ್ಳೆಯದು):-)
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಏಗ್ಳಿಕೆ (ಯಾವಾಗ) ಕೊಡ್ತ್ರಿ(ಕೊಡ್ತೀರಾ)? ನಿಮ್ಮತ್ರ 'ದಸ್ಕತ್ತ್' ತಕಣ್ಕ (ತೆಗೆದುಕೊಳ್ಬೇಕ)?:-) ,
Reborn, ನಿಮಗೆ 'ದಸ್ಕತ್ತ್' ಹಾಕುಕ್ (ಹಾಕ್ಲಿಕ್ಕೆ) ಬತ್ತಾ (ಬರತ್ತ)? ಅಥ್ವಾ ಹೆಬ್ಬೆಟ್ಟಾ?:-)

'ದಸ್ಕತ್ತ್'ಗೆ ಇನ್ನೊಂದು ಅರ್ಥ ಇದೆ.
ದಸ್ = ೧೦, ಕತ್ತ್ = ಕತ್ತು = ಕಂಠ.
ದಸ್ಕತ್ತು = ರಾವಣ:-)

ನಿನ್ನೆಯ ಸವಾಲಿಗೆ ಉತ್ರ:-
'ಕಾಣಿ' = ನೋಡಿ,
'ಕಾಣಿ' - ಇದು ಒಂದು ಸಣ್ಣ ಮೀನಿನ ಹೆಸರು ಸಹ ಹೌದು:-)
ಕುಂದಾಪ್ರ ಕಾಣಿ ರುಚಿ ಕಾಣಿ = ಕುಂದಾಪ್ರ ಮೀನಿನ ರುಚಿ ನೋಡಿ:-)
ಇದನ್ನ ನಾನು ಎತ್ತಿಕೊಂಡದ್ದು ಡುಂಡಿರಾಜರ ಕವನವೊಂದರಿಂದ ('ಏನಾಯಿತು' ಕವನ ಸಂಕಲನ). ಅದರ ಪೂರ್ಣರೂಪ ನನಗೆ ಗೊತ್ತಿಲ್ಲ. ಅದರ ಕೆಲವು ಸಾಲು ಹೀಗಿವೆ:-
ಹೊಟ್ಟಿಗ್ ಹಿಟ್ಟ್ ಇಲ್ದೆ ಮರ್ಕಿ ಮರ್ಕಿ
ಹೊಳಿ ನೀರ್ ಸೈತ ಉಪ್ಪು
ಹೊಟ್ಟಿ ಥರ ತಲಿಯೂ ಖಾಲಿ
ಅನ್ಕಂಡ್ರೆ ಅದ್ ನಿಮ್ಮ್ ತಪ್ಪು

ಸಾಹಿತ್ಯಕ್ಕೇನ್ ಕೊಟ್ಟಿರಿ ಅಂತ್ ಕೇಂಡ್ರೆ
ಕಾರಂತ್ರೊಬ್ರೆ ಸಾಲ್ದ?
......ನಂಗ್ ಮುಂದ್ ಗೊತ್ತಿಲ್ಲ..:-))

ಡುಂಡಿರಾಜ್, ಚುಟುಕಗಳಷ್ಟೆ ಸಮರ್ಥವಾಗಿ ಗಂಭೀರ ಸಾಹಿತ್ಯವನ್ನೂ ಬರೆದಿದ್ದಾರೆ. ಆದರೆ ಅವರಿವತ್ತಿಗೂ ಗುರುತಿಸಲ್ಪಡುವುದು ಚುಟುಕಗಳ ಮೂಲಕವೆ. ಅವರ - 'ಏನಾಯಿತು' - ಸಂಕಲನ ತುಂಬ ಚೆನ್ನಾಗಿದೆ. 'ಆಯದ ಕವನಗಳು' ಅಂತ ಇನ್ನೊಂದು ಸಂಕಲನವಿದೆ. ಅವರ ನಾಟಕಗಳೂ ಚೆನ್ನಾಗಿವೆ - ನಾಳೆ ಬನ್ನಿ, ವೇಷಾಂತರ ಪ್ರಸಂಗ, ಕೊರಿಯಪ್ಪನ ಕೊರಿಯೋಗ್ರಫಿ ನನಗೆ ಇಷ್ಟವಾದವು.

February 11, 2007

ಹುಗ್ಸಿಡು, ಅಂಡ್ಕಂಬ್ದು

'ಹುಗ್ಸಿಡು' = ಬಚ್ಚಿಡು,
ಮೂಲ - 'ಹುದುಗಿಸಿಡು'.
ಅಕ್ಕ, ನನ್ನ ಕ್ರಿಕೆಟ್ ಬ್ಯಾಟ್ ಎಲ್ಲ್ 'ಹುಗ್ಸಿಟ್ಟಿದೆ'?
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಎಲ್ಲ್ 'ಹುಗ್ಸಿಟ್ಟಿರಿ'?

ಗದಾಯುದ್ಧ ಯಕ್ಷಗಾನ ಪ್ರಸಂಗದ ಒಂದು ಪದ್ಯ - (ದುರ್ಯೋಧನ ಸಂಜಯನಿಗೆ ಹೇಳ್ತಾನೆ)
"ಇದೆ ಒಂದು ಸರೋವರವು ಇಲ್ಲಿಗೆ ಸಮೀಪದಲಿ, 'ಹುದುಗಿರುವೆ'ನೈ ನಾನು ಅರಿಗಳ್ ಅರಿಯದಂದದಲಿ"

'ಅಂಡ್ಕಂಬ್ದು' = ಅಡಗಿಕೊಳ್ಳು

ಅನ್ವೇಷಿಗಳೆ, ಪತ್ತೆನೆ ಇಲ್ಲ ಇತ್ತೀಚೆಗೆ. ಎಲ್ಲ್ 'ಅಂಡ್ಕಂಡಿರಿ'?
ಶ್ರೀ, ಬೆಂಗ್ಳೂರಲ್ಲ್ ಕಾವೇರಿ ಗಲಾಟಿ ಆತ್ತ್. ಒಳ್ಳೆ ಜಾಗದಲ್ಲ್ 'ಅಂಡ್ಕಣಿ',

'ಅಂಡ್ಕಂಡ' = ಅಡಗಿಕೊಂಡ
'ಅಂಡ್ಕಂತ' = ಅಡಗಿಕೊಳ್ಳುತ್ತಾನೆ
'ಅಂಡ್ಕಣಿ' = ಅಡಗಿಕೊಳ್ಳಿ
'ಅಂಡ್ಕೊ' = ಅಡಗಿಕೊ

ಇವತ್ತಿನ ಸವಾಲು
ಇದರ ಅರ್ಥ ಏನು? - "ಕುಂದಾಪ್ರ ಕಾಣಿ ರುಚಿ ಕಾಣಿ"

January 28, 2007

Updates on Kathana

Kathana (jaagatika Kannadigara kooTa) is a group of like minded Kannadaabhimaani software engineers. Please follow this link for more information - http://kathana.qns.googlepages.com/

Last year we conducted state level Kannada story writing competiion and published a book of winning stories. We have been able to sell most of the Kathana books. We have set aside 200+ copies to be distributed across the libraries in Karnataka. We have limited copies available for sale. The proceeds from the book sale will go towards a social cause. We are in the process of finalizing the plans and budget for this year. Once the plans are finalized, we will identify a deserving Kannada school in rural area and will help the school either in infrastructure or in educational materials. We do not believe in just donating some money and hence Kathana will actively participate in the entire process. We are working towards building a reliable network of schools, educationists and intellectuals.

Following are the plans for this year.
1) Bringing out a book on the subject of - 'JaagateekaraNa mattu Kannada'. We will invite articles from 4 - 5 eminent scholars. The book is intended to discuss the challenges of globalization on Kannada and Kannada identity and also how Kannada should adapt and face those challenges. The timelines are from January to April. We are in the process of finalizing the names of writers.
2) Conducting a competition - either story writing or Science report writing in Kannada. The timelines are from June-July to October.

We are determined to take this initiative to the next orbit. Kathana will engage in activities of encouraging budding Kannada writers, publishing Kannada books of superior literary qualities and helping Kannada schools. We will give periodic updates about Kathana's activities to maintain the continuum. We need your continued support to make this success.