February 24, 2007

ಮಿಣ್ಣಗೆ

'ಮಿಣ್ಣಗೆ' = ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಇರೋದು, ಯಾರಿಗೂ ಗೊತ್ತಾಗದ ಹಾಗೆ ಎನಾದ್ರೂ ಮಾಡೋದು, keeping low profile ಅಂತಾನೂ ಅನ್ಬಹುದು.

ಗುಬ್ಬಚ್ಚಿ ಮಿಣ್ಣಗೆ ಬಂದ್ ಹಾಲ್ ಕುಡ್ದದ್ದನ್ನ್ ಬೆಕ್ಕ್ ಕಂಡಿತ್ತ್:-)
ತುಳಸಿಯಮ್ಮ ಮಿಣ್ಣಗಿದ್ರಪ್ಪ. ಗುರುದಕ್ಷಿಣೆ ಕೊಡ್ಕಾತ್ತ್ ಅಂದ್ಕಂಡೇನೊ:-)
"ಮಾಣಿಗೆ ಜೋರ್ (ಬಯ್ಯೋದು) ಮಾಡಿದ್ಯ? ನಿನ್ನೆಯಿಂದ ಮಿಣ್ಣಗಿತ್ತಪ್ಪ"
'ಮಿಣ್ಣ'ಗಿಪ್ಪುದು ಅಂದ್ರೆ ಶಬ್ದ ಇಲ್ದೆ ಅವರಷ್ಟಕ್ಕ್ ಅವರಿಪ್ಪುದು. 'ಮಿಣ್ಣ'ಗಿದ್ದೂ ಮಿನುಗುದು ಅಸತ್ಯಿಗಳಿಗೆ ಮಾತ್ರ ಸಾಧ್ಯ:-)

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಕವನವೊಂದರಲ್ಲಿ (ಮಿಣ್ಣಗಿನ ಧೂರ್ತ) ಇದನ್ನ ಉಪಯೋಗಿಸಿದ್ದಾರೆ.ಕವನದ ಹೆಸರು ನೆನಪಿಲ್ಲ (ವಯಸ್ಸಾಯ್ತು ನೋಡಿ). 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತದು.

ಇತ್ತೀಚಿನ ಸುದ್ದಿ. 'ಎಣ್ಣು' ಪದವನ್ನು ಸಾಹಿತ್ಯದಲ್ಲಿ ಉಪಯೋಗಿಸಲಾಗಿದೆ. ಮಿತ್ರಾ ವೆಂಕಟ್ರಾಜ್ ತಮ್ಮ 'ಒಂದು ಒಸಗೆ ಒಯ್ಯುವುದಿತ್ತು' ಕಥೆಯಲ್ಲಿ ಉಪಯೋಗಿಸಿದಾರೆ. ದೆಹಲಿಯ 'ಕಥಾ' ಪ್ರಶಸ್ತಿ ವಿಜೇತ ಕಥೆ. ಭಾಗವತ್ರ ಅಚ್ಚುಮೆಚ್ಚಿನ ಕಥೆ ಅದು. ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿ - http://kanlit.com/modes/home/brh/168/.html
"ಶೇಷಮ್ಮ ತನ್ನ ಕಾಲದ ಗತವೈಭವವನ್ನು, ಮುಖ್ಯವಾಗಿ ತುಂಬಿತುಳುಕುತ್ತಿದ್ದ ಮನೆಯಂದಿಗರನ್ನು, ಚಾವಡಿ ಭರ್ತಿಯಾಗುತ್ತಿದ್ದ ಊಟದ ಪಂಕ್ತಿಯನ್ನು ಎಣ್ಣಿ, ಎಣ್ಣಿ ರೋದಿಸುತ್ತಿದ್ದರೆ ಜಲಜೆಗೂ ಹೌದೆಂಬಂತೆ ಕಾಣಿಸುತ್ತಿತ್ತು."

ಇವತ್ತಿನ ಸವಾಲು
ಇದರ ಅರ್ಥ ಏನು - 'ಅಟ್ರಕಾಣಿ'?

Bonus question:-) - ನಾವು 'ಕಥನ (ಜಾಗತಿಕ ಕನ್ನಡಿಗರ ಕೂಟ)'ದಿಂದ ನಡೆಸಿದ ಕಥಾಸ್ಪರ್ಧೆಯಲ್ಲಿ ವಿಜೇತವಾದ ಎರಡು ಕಥೆಗಳು http://kanlit.com/ ಜಾಲತಾಣದಲ್ಲಿವೆ. ಅವು ಯಾವುವು?

ಸರಿ ಉತ್ತರ ಹೇಳಿದವರಿಗೆ ಕೋಟೇಶ್ವರ ಹಬ್ಬದಲ್ಲಿ ಒಂದು ಸೇರು ಮುಂಡಕ್ಕಿ:-))

February 20, 2007

ಎಣ್ಣು

ಪ್ರೇಮಜ್ವರದ ಮುಂದಿನ ಹಂತ 'ವಿರಹ'. ಅದಕ್ಕಾಗಿ ಇವತ್ತಿನ ಶಬ್ದ 'ಎಣ್ಣು':-)
'ಎಣ್ಣು' = ಯೋಚಿಸುವುದು, ಚಿಂತಿಸುವುದು

ಶಿವು, ಇನ್ನೂ ವಿರಹ ವಿರಹ ಅಂತ 'ಎಣ್ಣ'ತಿದ್ರ್ಯಾ?
ತುಳಸಿಯಮ್ಮ, ನಂಗೆ ಗುರುದಕ್ಷಿಣೆ ಕೊಡ್ಕಾತ್ತ್ ಅಂತ 'ಎಣ್ಣ'ತಿದ್ರ್ಯಾ?
"ನಾವೆಲ್ಲ ಹುಶಾರಿತ್ತ್. ಮನೆ ಬಗ್ಗೆ 'ಎಣ್ಣ'ಬೇಡ".
"ಇನ್ನೂ 'ಎಣ್ಣು'ದೆಂತಕೆ? ಹೋಪವ್ರ್ ಹೋತ್ರ್. ಅದನ್ನೆಲ್ಲ ತಡುಕಾತ್ತಾ (ತಡೀಲಿಕ್ಕಾಗತ್ತ)? ಇಪ್ಪವ್ರ್ (ಇರುವವರು) ಬಗ್ಗೆ ಯೋಚ್ನೆ ಮಾಡ್" (ಸಾವಿನ ಮನೆಯಲ್ಲಿ ಕೇಳುವ ಮಾತು).

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಸಾಹಿತ್ಯದಲ್ಲೂ ಉಪಯೋಗಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ಭಾಗವತ್ರು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಕ್ಕನಿಗೆ ಬರೆದ ಪತ್ರವೊಂದರಲ್ಲಿ ಇದನ್ನ ಉಪಯೋಗಿಸಿದ್ದಾರೆ. ಅದರ ಒಂದು ಚರಣ:-
ತಿಂಗಳೊಂದಾಯ್ತು ಹತ್ರ ಹತ್ರ
ಬರೆದಿಲ್ಲವೇಕೆ ನೀನಿನ್ನೂ ಉತ್ರ
ಕೆದಕುತ್ತಿಹರು ಕಾರಣದ ಚರಿತ್ರ
ಆರಂಭವಾಗಿದೆ ಎಣ್ಣುವಿಕೆಯ ಸತ್ರ

ಅಂದಹಾಗೆ ಮಾಲಾ ರಾವ್ (http://www.chitra-durga.blogspot.com/ )ಸಿದ್ಧಪಡಿಸುತ್ತಿರುವ ಜಗತ್ತಿನ ಅತಿಶ್ರೇಷ್ಠ ಕವನಗಳ ಪಟ್ಟಿಯಲ್ಲಿ ಈ ಮೇಲಿನ ಕವನವನ್ನೂ ಪರಿಗಣಿಸಲಾಗಿದೆ ಎಂದು ಬೊ.ರ.ಬ್ಯೂರೋದ 'ನಂಬಲನರ್ಹ' ಮೂಲಗಳಿಂದ ತಿಳಿದುಬಂದಿದೆ:-))

ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮಿಣ್ಣಗೆ'? ಇದನ್ನು ಕನ್ನಡದ ಹೆಸರಾಂತ ಕವಿಯೊಬ್ಬರು ತಮ್ಮ ಕಾವ್ಯವೊಂದರಲ್ಲಿ ಉಪಯೋಗಿಸಿದ್ದಾರೆ. ಅವರ ಹೆಸರೇನು?
Hint : ತುಳಸಿಯಮ್ಮನವರು ಈ ಕವಿಯ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ:-))

February 17, 2007

ಕಾಂತ, ಕಾಂತೆ

ಈ ವಾರ ಎಲ್ಲಕಡೆನೂ ಪ್ರೇಮಜ್ವರ. ಹಾಗಾಗಿ ಇವತ್ತಿನ ಶಬ್ದ 'ಕಾಂತ, ಕಾಂತೆ':-))
ಕಾಂತ = ಕಾಣ್ತಾನೆ.
ಕಾಂತೆ = ಕಾಣ್ತೇನೆ.

ಕಂದಾಪ್ರ ಕನ್ನಡಕ್ಕೆ ಅದರದ್ದೆ ಆದ ರಚನೆ ಇದೆ. ಇವುಗಳನ್ನ ನೋಡಿ:-
ಕಾಂತ = ಕಾಣ್ತಾನೆ, ಕೇಂತ = ಕೇಳ್ತಾನೆ, ಹೋತ = ಹೋಗ್ತಾನೆ, ಬತ್ತ = ಬರ್ತಾನೆ,
ಕಾಂತೆ = ಕಾಣ್ತೇನೆ, ಕೇಂತೆ = ಕೇಳ್ತೇನೆ, ಹೋತೆ = ಹೋಗ್ತೇನೆ, ಬತ್ತೆ = ಬರ್ತೇನೆ,
ಕಾಂತ್ರ್ಯ = ಕಾಣ್ತೀರ, ಕೇಂತ್ರ್ಯ = ಕೇಳ್ತೀರ, ಹೋತ್ರ್ಯಾ = ಹೋಗ್ತೀರ, ಬತ್ತ್ರ್ಯಾ = ಬರ್ತೀರಾ,
ಕಾಣಿ = ನೋಡಿ, ಕೇಣಿ = ಕೇಳಿ, ಹೋಯಿನಿ = ಹೋಗಿ, ಬನ್ನಿ = ಬನ್ನಿ:-)
ಕಾಂಬ್ರ್ಯಲೆ = ಕಾಣುವಿರಲ್ಲ, ಕೇಂಬ್ರ್ಯಲೆ = ಕೇಳುವಿರಲ್ಲ, ಹೋಪ್ರ್ಯಲೆ = ಹೋಗುವಿರಲ್ಲ, ಬಪ್ಪ್ರ್ಯಲೆ = ಬರುವಿರಲ್ಲ,
ಕಂಡ = ನೋಡಿದ, ಕೇಂಡ = ಕೇಳಿದ, ಹೋದ = ಹೋದ, ಬಂದ = ಬಂದ.

ನಮ್ಮ ಚಲನಚಿತ್ರ ಸಾಹಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವುದು:-
ಕಾಂತ - ಕಾಂತೆ,
ಇನಿಯ - ಇನಿಯೆ(?),
ನಲ್ಲ - ನಲ್ಲೆ,
ಪ್ರಿಯತಮ - ಪ್ರಿಯತಮೆ,
ಪ್ರಿಯಕರ - ಪ್ರಿಯಕ(ರೆ,ರಿ?),
ಪ್ರಿಯ - ಪ್ರಿಯೆ,
ಮತ್ತೆ ನಮ್ಮ ಯಕ್ಷಗಾನದಲ್ಲಿ - ರಮಣ, ವಲ್ಲಭ:-))

ಭಾಷೆ ಸಂಸ್ಕೃತಿಯ ಪ್ರತೀಕ ಅಂತಾರೆ. ಕೆಲವೊಂದು ಪದ ಪ್ರಯೋಗಗಳು ನಮ್ಮ ನಂಬಿಕೆಯಿಂದ ತುಂಬ ಪ್ರಭಾವಿತವಾಗಿವೆ.
ಮನೆಯಿಂದ ಹೋಗುವಾಗ - ಬತ್ತೆ - ಅನ್ತೇವೆ. 'ಹೋತೆ' ಅನ್ನೋಹಾಗಿಲ್ಲ:-) ನೆಂಟರ ಮನೆಯಾದ್ರೆ -'ಬತ್ತೆ, ನೀವೆಲ್ಲ ಕೂಕಣಿ (ಕೂತ್ಕೊಳ್ಳಿ)':-))
ಅದೇ ಆಸ್ಪತ್ರೆಗೆ ರೋಗಿಯನ್ನ ನೋಡ್ಲಿಕ್ಕೆ ಹೋಗಿದ್ರೆ - 'ಹೋತೆ'. 'ಬತ್ತೆ' ಅನ್ನೊ ಹಾಗಿಲ್ಲ. ಡಾಕ್ಟರ್ ಬಳಿನೂ 'ಹೋತೆ':-))ನಮ್ಮ ಮನೇಲಿ ರಾತ್ರಿ ದೀಪ (ಲೈಟು, ಕರೆಂಟು) ಆರಿಸ್ಬೇಕಾದ್ರೆ -ದೀಪ ದೊಡ್ಡದು ಮಾಡ್ - ಅಂತಾರೆ. ದೀಪ ಆರಿಸು ಅನ್ನೊ ಹಾಗಿಲ್ಲ:-))

ಆಯ್ತು. ಇವತ್ತಿಗ್ ಮಸ್ತ್ ಆಯ್ತ್. ನಾನ್ ಬತ್ತೆ. ನೀವೆಲ್ಲ ಕೂಕಣಿ.
Reborn, ನಾನ್ ಹೋತೆ:-))

ಇವತ್ತಿನ ಸವಾಲು -ಇದರ ಅರ್ಥ ಏನು? - 'ಎಣ್ಣು'

February 13, 2007

ದಸ್ಕತ್ತು

ದಸ್ಕತ್ತು = ಸಹಿ, ಹಸ್ತಾಕ್ಷರ
ಮೂಲ - ದಸ್ತಕತ್ (ಪ್ರಾಯಶಃ). ಇದು ಕೇವಲ ಕುಂದಗನ್ನಡದ ಶಬ್ದವೋ, ಇಲ್ಲ ಬೇರೆ ಕಡೆನೂ ಉಪಯೋಗಿಸ್ತಾರೊ ಗೊತ್ತಿಲ್ಲ.

ಮನಸ್ವಿನಿ ನಂಗೆ ನೂರು ಡಾಲರ್ ಕೊಡುದಿತ್ತ್ (ಕೊಡ್ಬೇಕಿದೆ). ನಾನ್ 'ದಸ್ಕತ್ತ್' ತಕಂಬ್ದ್ (ತೆಗೆದುಕೊಳ್ಳೊದು) ಒಳ್ಳಿದ್ (ಒಳ್ಳೆಯದು):-)
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಏಗ್ಳಿಕೆ (ಯಾವಾಗ) ಕೊಡ್ತ್ರಿ(ಕೊಡ್ತೀರಾ)? ನಿಮ್ಮತ್ರ 'ದಸ್ಕತ್ತ್' ತಕಣ್ಕ (ತೆಗೆದುಕೊಳ್ಬೇಕ)?:-) ,
Reborn, ನಿಮಗೆ 'ದಸ್ಕತ್ತ್' ಹಾಕುಕ್ (ಹಾಕ್ಲಿಕ್ಕೆ) ಬತ್ತಾ (ಬರತ್ತ)? ಅಥ್ವಾ ಹೆಬ್ಬೆಟ್ಟಾ?:-)

'ದಸ್ಕತ್ತ್'ಗೆ ಇನ್ನೊಂದು ಅರ್ಥ ಇದೆ.
ದಸ್ = ೧೦, ಕತ್ತ್ = ಕತ್ತು = ಕಂಠ.
ದಸ್ಕತ್ತು = ರಾವಣ:-)

ನಿನ್ನೆಯ ಸವಾಲಿಗೆ ಉತ್ರ:-
'ಕಾಣಿ' = ನೋಡಿ,
'ಕಾಣಿ' - ಇದು ಒಂದು ಸಣ್ಣ ಮೀನಿನ ಹೆಸರು ಸಹ ಹೌದು:-)
ಕುಂದಾಪ್ರ ಕಾಣಿ ರುಚಿ ಕಾಣಿ = ಕುಂದಾಪ್ರ ಮೀನಿನ ರುಚಿ ನೋಡಿ:-)
ಇದನ್ನ ನಾನು ಎತ್ತಿಕೊಂಡದ್ದು ಡುಂಡಿರಾಜರ ಕವನವೊಂದರಿಂದ ('ಏನಾಯಿತು' ಕವನ ಸಂಕಲನ). ಅದರ ಪೂರ್ಣರೂಪ ನನಗೆ ಗೊತ್ತಿಲ್ಲ. ಅದರ ಕೆಲವು ಸಾಲು ಹೀಗಿವೆ:-
ಹೊಟ್ಟಿಗ್ ಹಿಟ್ಟ್ ಇಲ್ದೆ ಮರ್ಕಿ ಮರ್ಕಿ
ಹೊಳಿ ನೀರ್ ಸೈತ ಉಪ್ಪು
ಹೊಟ್ಟಿ ಥರ ತಲಿಯೂ ಖಾಲಿ
ಅನ್ಕಂಡ್ರೆ ಅದ್ ನಿಮ್ಮ್ ತಪ್ಪು

ಸಾಹಿತ್ಯಕ್ಕೇನ್ ಕೊಟ್ಟಿರಿ ಅಂತ್ ಕೇಂಡ್ರೆ
ಕಾರಂತ್ರೊಬ್ರೆ ಸಾಲ್ದ?
......ನಂಗ್ ಮುಂದ್ ಗೊತ್ತಿಲ್ಲ..:-))

ಡುಂಡಿರಾಜ್, ಚುಟುಕಗಳಷ್ಟೆ ಸಮರ್ಥವಾಗಿ ಗಂಭೀರ ಸಾಹಿತ್ಯವನ್ನೂ ಬರೆದಿದ್ದಾರೆ. ಆದರೆ ಅವರಿವತ್ತಿಗೂ ಗುರುತಿಸಲ್ಪಡುವುದು ಚುಟುಕಗಳ ಮೂಲಕವೆ. ಅವರ - 'ಏನಾಯಿತು' - ಸಂಕಲನ ತುಂಬ ಚೆನ್ನಾಗಿದೆ. 'ಆಯದ ಕವನಗಳು' ಅಂತ ಇನ್ನೊಂದು ಸಂಕಲನವಿದೆ. ಅವರ ನಾಟಕಗಳೂ ಚೆನ್ನಾಗಿವೆ - ನಾಳೆ ಬನ್ನಿ, ವೇಷಾಂತರ ಪ್ರಸಂಗ, ಕೊರಿಯಪ್ಪನ ಕೊರಿಯೋಗ್ರಫಿ ನನಗೆ ಇಷ್ಟವಾದವು.

February 11, 2007

ಹುಗ್ಸಿಡು, ಅಂಡ್ಕಂಬ್ದು

'ಹುಗ್ಸಿಡು' = ಬಚ್ಚಿಡು,
ಮೂಲ - 'ಹುದುಗಿಸಿಡು'.
ಅಕ್ಕ, ನನ್ನ ಕ್ರಿಕೆಟ್ ಬ್ಯಾಟ್ ಎಲ್ಲ್ 'ಹುಗ್ಸಿಟ್ಟಿದೆ'?
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಎಲ್ಲ್ 'ಹುಗ್ಸಿಟ್ಟಿರಿ'?

ಗದಾಯುದ್ಧ ಯಕ್ಷಗಾನ ಪ್ರಸಂಗದ ಒಂದು ಪದ್ಯ - (ದುರ್ಯೋಧನ ಸಂಜಯನಿಗೆ ಹೇಳ್ತಾನೆ)
"ಇದೆ ಒಂದು ಸರೋವರವು ಇಲ್ಲಿಗೆ ಸಮೀಪದಲಿ, 'ಹುದುಗಿರುವೆ'ನೈ ನಾನು ಅರಿಗಳ್ ಅರಿಯದಂದದಲಿ"

'ಅಂಡ್ಕಂಬ್ದು' = ಅಡಗಿಕೊಳ್ಳು

ಅನ್ವೇಷಿಗಳೆ, ಪತ್ತೆನೆ ಇಲ್ಲ ಇತ್ತೀಚೆಗೆ. ಎಲ್ಲ್ 'ಅಂಡ್ಕಂಡಿರಿ'?
ಶ್ರೀ, ಬೆಂಗ್ಳೂರಲ್ಲ್ ಕಾವೇರಿ ಗಲಾಟಿ ಆತ್ತ್. ಒಳ್ಳೆ ಜಾಗದಲ್ಲ್ 'ಅಂಡ್ಕಣಿ',

'ಅಂಡ್ಕಂಡ' = ಅಡಗಿಕೊಂಡ
'ಅಂಡ್ಕಂತ' = ಅಡಗಿಕೊಳ್ಳುತ್ತಾನೆ
'ಅಂಡ್ಕಣಿ' = ಅಡಗಿಕೊಳ್ಳಿ
'ಅಂಡ್ಕೊ' = ಅಡಗಿಕೊ

ಇವತ್ತಿನ ಸವಾಲು
ಇದರ ಅರ್ಥ ಏನು? - "ಕುಂದಾಪ್ರ ಕಾಣಿ ರುಚಿ ಕಾಣಿ"