October 26, 2008

Fall ಸೀಸನ್ನು

ಚಳಿಗಾಲ ಆಗ್ಲೆ ಇಲ್ಲಿ ಕಾಲಿಡ್ತಿದೆ. ಮರಗಳ ಎಲೆಗಳೆಲ್ಲ ಉದುರುತ್ತಾ ಇದೆ. ಎಲೆಗಳು ಮರಗಳಿಂದ ಉದುರೋ ಮುನ್ನ ಹಸಿರು ಬಣ್ಣ ಕಳ್ಕೊಂಡು ಹಳದಿ, ಕಿತ್ತಳೆ, ಕೆಂಪು, ನೇರಳೆ ಬಣ್ಣಗಳಿಗೆ ತಿರುಗುತ್ತೆ. ಚಳಿಗಾಲ ಆರಂಭ ಆಗೋ ಮುನ್ನ ದಿನಗಳು ಚಿಕ್ಕದಾಗುತ್ತಿದ್ದರೆ ಮರಗಳೆಲ್ಲ "ಆಯ್ತು, ಇನ್ನೂ ಕಾಯ್ತಾ ಕೂತ್ರೆ ಕಷ್ಟ. ದ್ಯುತಿಸಂಶ್ಲೇಷಣ ಕ್ರಿಯೆಯನ್ನ (photosynthesis) ಇನ್ನು ನಿಲ್ಸೋದು ಸರಿ" ಅಂತ ಠರಾವು ಅಂಗೀಕರಿಸಿದ ಮೇಲೆ ಎಲೆಗಳಲ್ಲಿರೋ ಪತ್ರಹರಿತ್ತು (chlorophyll) ಮಾಯ ಆಗ್ತಾ ಬರತ್ತೆ. ಆಗ ಎಲೆಗಳ ನಿಜವಾದ ಬಣ್ಣ ಬಯಲಾಗತ್ತೆ. ಇನ್ನೂ ಜಾಸ್ತಿ ಓದ್ಬೇಕು ಅಂದ್ರೆ - ಇಲ್ಲಿ - ನೋಡಿ. ಕೆಂಡಸಂಪಿಗೆಯಲ್ಲಿ ಮೀರಾ ಬರೆದಿರೋ ಅಂಕಣವನ್ನೂ ಬೇಕಿದ್ರೆ ಒಮ್ಮೆ ಓದಿ. ಹಾಗೆ ಇಲ್ಲೂ ಒಬ್ರು ಬಿಸಿಬಿಸಿ ಕಾಫಿ ಮಾಡ್ಕೊಂಡು ಸ್ವೆಟರು ಶಾಲು ಅಂತೆಲ್ಲ ಹುಡುಕ್ತಿರೋರೂ ಇದಾರೆ.

ನ್ಯೂಇಂಗ್ಲೆಂಡ್ ಚಂದವನ್ನ ನೋಡ್ಬೇಕು ಅಂದ್ರೆ ಈ ವೀಡಿಯೋ ತುಣುಕನ್ನ ನೋಡಿ.

ಇದು Canon ಪರ್ವತದ ಮೇಲಿಂದ. ೪೨೦೦ ಅಡಿ ಎತ್ತರದಿಂದ ಪಕ್ಷಿನೋಟ. ಗಾಳಿ ಎಷ್ಟು ಜೋರಿತ್ತು ಅಂದ್ರೆ,ವಿವರಣೆ ನಿಮಗೆ ಕೇಳಿಸೋದೆ ಇಲ್ಲ. ಆ ಗಾಳಿಗೆ ಭಾಗ್ವತ್ರು ಹಾರಿ ಹೋಗದೆ ಇದ್ದಿದ್ದೆ ಪುಣ್ಯ!! ಇಲ್ಲಾ ಅಂತಿದ್ರೆ, ಗದಾಯುದ್ಧದ ಪ್ರಸಂಗದಲ್ಲಿ ಉಪಪಾಂಡವರ ತಲೆಗಳನ್ನ ನೋಡಿ, ದುರ್ಯೋಧನ ’ಚಂದ್ರವಂಶಕ್ಕಿನ್ನಾರು’ ಅಂತ ಗೋಳಿಟ್ಟಂತೆ, ನಾವು ನೀವೆಲ್ಲ "ನಮ್ಮ ಕಾಲೆಳೆಯುವವರಾರಿನ್ನು’ ಅಂತ ಗೋಳಿಡ್ಬೇಕಾಗ್ತಿತ್ತು!!!



ಶುಭಂ

October 12, 2008

ಕಾಯ್ಕಿಣಿ ಉವಾಚ

ಇದು ಗಡಿಬಿಡಿ ಪೋಸ್ಟು. ಕಳೆದ ತಿಂಗಳು ಇಲ್ಲೊಂದು ನಮ್ಮ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರ ಸಂದರ್ಶನವಿತ್ತು. ಅದರ ವಿಡಿಯೋ ತುಣುಕೊಂದು ನಿಮಗಾಗಿ ಕನ್ನಡತನ, ಮಾನವೀಯ ವಿನ್ಯಾಸ, ಮಗುವಿನ ಅಚ್ಚರಿಯ ಕಣ್ಣುಗಳು.....ಜಯಂತ ಕಾಯ್ಕಿಣಿ ತಮ್ಮ ಎಂದಿನ ಅನನ್ಯ ಶೈಲಿಯಲ್ಲಿ....ನೋಡಿ ಆನಂದಿಸಿ. ಭಾಗ್ವತ್ರಿಗೊಂದು ಮಸಾಲೆ ದೋಸೆ ಹರಕೆ ಹೊತ್ಕೊಳ್ಳಿ:-)

October 6, 2008

ಭಾಗವತರ ಕಷ್ಟ

"ನನ್ನ ಬಿಟ್ಟು ಹೋಗಬೇಡ್ವೋ, ಭಾಗ್ವತ"
ಹಠ ಹಿಡಿದು ಕುಳಿತಿತ್ತು ಸೋಮಾರಿತನ,

"ಘನಾಂದಾರಿ ಕೆಲಸವಿದೆ ಕಣೋ, ನನಗೆ.
ನಿನ್ನ ಬಿಟ್ಟು ಹೋಗಲೇಬೇಕು ನಾನೀಗ,
ಕೋಪಿಸಿಕೊಂಡಾರು ಓದುಗ ದೊರೆಗಳು,
ಅವರ ಕೋಪ ತಾಳಿದವರುಂಟೇ ಹೇಳು?"

"ಬರೀ ಸುಳ್ಳು ಹೇಳ್ತೀ, ನಿನ್ನ ಬಿಡಲ್ಲ ನಾನು"
ಕಾಲಿಗೆ ಜೋತುಬಿದ್ದಿತ್ತು ಸೋಮಾರಿತನ.

"ಛೇ, ಛೇ, ಛೇ..ನಾನು ಮತ್ತು ಸುಳ್ಳು??
ಒಂದರ್ಧ ಗಂಟೆ ಅಷ್ಟೇ, ಮತ್ತೆ ವಾಪಸ್.
ಹಠ ಮಾಡಬೇಡ ಸುಮ್ಮನೆ ನೀನೀಗ,
ಹೋಗಿ ಬರುತ್ತೇನೆ, ಬಿಡು ನನ್ನ ಒಮ್ಮೆ"

"ಇಲ್ಲ ಬಿಡಲ್ಲ, ನಿನ್ನ ನಾನು ಬಿಡಲ್ಲ",
ರಚ್ಚೆ ಹಿಡಿದಿತ್ತು ಸೋಮಾರಿತನ

"ನಿನ್ನ ಬಿಟ್ಟು ನನಗಿನ್ಯಾರಿದ್ದಾರೋ?,
ವಾಪಾಸು ಬಂದುಬಿಡುತ್ತೇನೆ, ಖಂಡಿತ.
ಅಡ್ಜಸ್ಟು ಮಾಡಿಕೋ, ಒಂದರ್ಧ ಗಂಟೆ,
ಬರ್ತಾ ನಿನಗೆ ಮಸಾಲೆ ದೋಸೆ, ಆಯ್ತಾ?"

"ಓಹ್, ಮಸಾಲೆ ದೋಸೆನಾ? ಹಾಗಿದ್ರೆ ಹೋಗಿ ಬಾ,
ಅರ್ಧ ಗಂಟೆ ಅಷ್ಟೇ, ಆಮೇಲೆ ನಾನು ಮತ್ತು ನೀನು"
.........
ಇಗೋ ನೋಡಿರಿ, ಓದುಗ ದೊರೆಗಳೆ,
ನಿಮ್ಮೆದುರು ನಾನು,ಆರ್ಧ ಗಂಟೆ ಅಷ್ಟೇ,
ಎಷ್ಟೊಂದು ಕಷ್ಟ ನೋಡಿರಿ ನನಗೆ!!
ಆ ಮಸಾಲೆದೋಸೆ ಖರ್ಚು ನಿಮ್ಮದೇ!!