ಮಾಯಾವಿ ವಿಕ್ರಮ
ನಿನ್ನೆ ಇಲ್ಲೊಂದು ಯಕ್ಷಗಾನ ಇತ್ತು. ತುಂಬ ಚೆನ್ನಾಗಿದ್ದರಿಂದ ನಿಮ್ ಜೊತೆ ಮಾತ್ರ ಹಂಚ್ಕೊಳ್ತಿದ್ದೇನೆ. ಬೇರೆ ಯಾರಿಗೂ ಹೇಳ್ಬೇಡಿ.
ಓದುಗರಿಗೆ ಸೂಚನೆ :-
೧) ಪಾತ್ರಧಾರಿಯು ಬೆಂಗ್ಳೂರಿನಲ್ಲಿ ನೆಲೆಸಿ ತುಂಬ ವರ್ಷಗಳಾಗಿರುವುದರಿಂದ ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಬಳಕೆಯಾಗಿದೆ.
೨) ಕೆಳಗಿನ ಕಥಾನಕವನ್ನ ಯಕ್ಷಗಾನದ ಧಾಟಿಯಲ್ಲೇ, ಶ್ರುತಿಬದ್ಧವಾಗಿ, ಸ್ವರಭಾರ, ಏರಿಳಿತ, ಆಂಗಿಕ ಮತ್ತು ವಾಚಿಕ ಅಭಿನಯದೊಂದಿಗೆ ಓದಿಕೊಂಡರೆ ರಸಾಸ್ವಾದನೆಗೆ ಒಳ್ಳೆಯದು.
೩) ಹಿ: - ಹಿಮ್ಮೇಳ. ಪಾ: ಪಾತ್ರಧಾರಿ, ನಾ: ನಾರದ ಮುನಿಗಳು.
೪) ಮೊದಲಿಗೆ ನಾಂದಿ ಪದ್ಯ. ನಂತರ ಒಡ್ಡೋಲಗದ ದೃಶ್ಯ.
***********************************
ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳಜನ ಧ್ಯಾನಿಸಿ ವಂದಿಸುತ ಶಾರದೆಗೆ ಶಕ್ರಾದ್ಯಮರರಿಂಗೆರಗಿ ನಾಂದಿಯೊಳು ವರವ್ಯಾಸ ಮುನಿಪದ ದ್ವಂದ್ವಕಾನತನಾಗಿ ನೆರೆದಿಹ ಕವಿಗಳ ಸಂದಣಿಗೆ ಬಲವಂದು ಪೇಳ್ವೆನೀ "ಅಧಿಕ ಪ್ರಸಂಗ" ಎಂಬ ಕಥಾಮೃತವ
ಹಿ : ಬಲ್ಲಿರೇನಯ್ಯಾ?
ಪಾ: ಮಾಯಾವಿ ವಿಕ್ರಮನೆಂದರೆ ಯಾರೆಂದು ತಿಳಿದಿದ್ದೀರಿ?
ಹಿ : ಇರುವಂಥ ಸ್ಥಳ
ಪಾ: ರಂಗಸ್ಥಳ
ಹಿ: ಹ್ಹ!!
ಪಾ: ವಿಶಾಲವಾದ ಬೆಂಗಳೂರು ಮಹಾನಗರವನ್ನೇ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡವನಿಗೆ ಎಲ್ಲ ಸ್ಥಳವೂ ರಂಗಸ್ಥಳವೇ.
ಹಿ: ಹ್ಹ!!
ಪಾ: ಸಪ್ತಸಾಗರಗಳನ್ನ ದಾಟಿ, ದಿಗ್ವಿಜಯವನ್ನ ಪೂರೈಸಿ, ಸ್ವಸ್ಥಾನವಾದ ಬೆಂಗಳೂರು ಮಹಾನಗರಿಗೆ ಮರಳಿ ಬಂದಿರುವ ಸಂದರ್ಭ. ಮಹಾಕಾವ್ಯವೊಂದನ್ನು ಬರೆಯುವ ಉದ್ದೇಶದೊಂದಿಗೆ ಮರಳಿ ಬಂದೆನಾದರೂ, ವೈಯಕ್ತಿಕ ಕಾರಣಗಳಿಂದ ಜೀವಂತಕಾವ್ಯವೊಂದರೊಂದಿಗೆ ಮಗ್ನನಾಗುವ ಪರಿಸ್ಥಿತಿಗೆ ಸಿಲುಕಿಕೊಂಡೆ.
ಹಿ: ಜೀವಂತಕಾವ್ಯ? ಹ್ಹ!!!
ಪಾ: ಮಾಯಾವಿ ವಿಕ್ರಮ, ನಿನ್ನ ಕವನಗಳೆಲ್ಲಿ?, ಎಂದು ನನ್ನ ಪ್ರಜಾಪರಿವಾರವರ್ಗದವರೆಲ್ಲ ಒಕ್ಕೊರಲಿನಿಂದ ಕೇಳುತ್ತಿದ್ದಾರೆ. ಏನು ಮಾಡೋಣ? ಇದೆಲ್ಲ ಹೀಗೆಯೇ ಆಗಬೇಕೆಂದು ವಿಧಿಲಿಖಿತವಾಗಿದ್ದರೆ ಅದನ್ನು ತಪ್ಪಿಸಲು ನಾನ್ಯಾರು?
ಹಿ: ಹ್ಹ!!
ಪಾ: ಪಂಡಿತೋತ್ತಮರು ಮೆಚ್ಚಿ ’ವಿಕ್ಕಿ’ ಕವಿತೆಗಳೆಂದೂ, ಅರ್ಥವಾಗದೆ ಮಂಡೆಪೆಟ್ಟು ಮಾಡಿಕೊಂಡ ಮಂದಿ ’ವಿಕ್ಸ್’ ಕವಿತೆಗಳೆಂದೂ, ವಿಧ ವಿಧ ಹೆಸರುಗಳೊಂದಿಗೆ ನನ್ನ ಕವನಗಳನ್ನು ಗುರುತಿಸುತ್ತಾರೆ. ಕವನಗಳ ಮೂಲಕವೇ ಅಂಗ, ವಂಗ, ಕಳಿಂಗ, ಕಾಂಭೋಜವೇ ಮೊದಲಾದ ಛಪ್ಪನ್ನಾರು ದೇಶಗಳಲ್ಲಿ ಲೋಕೋತ್ತರ ಪ್ರಸಿಧ್ಧಿಯನ್ನು ಪಡೆದಿರುವಾಗ.....ಇದೇನನ್ನ ಕೇಳುತ್ತಿದ್ದೇನೆ?...
ಹಿ: ಏನ ಕೇಳಿದೆ ನಾನು? ಏನ? ಏನ?...ಏನ ಕೇಳಿದೆ ನಾನು? ಬಿಡಲಾರೆ....ನಾ...ಬಿಡಲಾರೆ...
ಪಾ: ಅದಾರೋ ಪರದೇಸಿಯಾದ ಜಗಲಿ ಭಾಗವತರಂತೆ...ನನ್ನ ಕುರಿತು ಲಘುವಾಗಿ ಬರೆಯುತ್ತಿದ್ದಾರೆ ಎನ್ನುವ ವರ್ತಮಾನ ರಾಜದೂತರಿಂದ ತಿಳಿದುಬಂದಿದೆ....ನಾನು ಬೆಂಗಳೂರು ಮಹಾನಗರಿಯನ್ನು ತಲುಪಿದ ಮೇಲೆ ಕರೆ ಮಾಡುತ್ತೇನೆ ಅಂದವರು ಈ ಕೆಲಸಕ್ಕೆ ಕೈ ಹಾಕಿದರೇ?..ಎಷ್ಟು ಧೈರ್ಯ? ಎಂತಹ ಅಧಟು?...ಅವರು ಎಲ್ಲಿಯೇ ಅಡಗಿರಲಿ.....ಅತಳ, ವಿತಳ, ಸುತಳ, ಪಾತಾಳ, ರಸಾತಳ, ಮಹಾತಳ, ತಳಾತಳದಲ್ಲೇ ಅಡಗಿರಲಿ, ಇಲ್ಲಾ ಭೂಗರ್ಭದಲ್ಲೇ ಅಡಗಿರಲಿ, ಅವರನ್ನ ಗೂಗಲಿಸಿ, ಹಿಡಿದೆಳೆತಂದು ತಕ್ಕ ಶಾಸ್ತಿಯನ್ನು ಮಾಡುತ್ತೇನೆ....
ಹಿ: ಸಮಾಧಾನ...ಸಮಾಧಾನ....
ಪಾ: ಹ್ಹ..ಇದೀಗಷ್ಟೇ ಬೇಹುಗಾರರಿಂದ ತಿಳಿದುಬಂದ ಸಮಾಚಾರ...ಅವರು ಲೋಕಕಲ್ಯಾಣಾರ್ಥವಾಗಿ ಶ್ರದ್ಧಾಭಕ್ತಿಯಿಂದ, ವಾರಾಂತ್ಯದಲ್ಲಿ ದಿನವೊಂದಕ್ಕೆ ೧೮ ಗಂಟೆಗಳಷ್ಟು ಘನಘೋರ ನಿದ್ದೆಯನ್ನು ಮಾಡುತ್ತಾರೆ ಎನ್ನುವ ಮಾಹಿತಿ....ನಿದ್ದೆಯಲ್ಲಿದ್ದವರನ್ನ, ರಣಕ್ಕೆ ಬೆನ್ನು ಹಾಕಿ ಓಡುತ್ತಿರುವವರನ್ನ, ನಿರಾಯುಧರನ್ನ ಘಾಸಿಗೊಳಿಸಬಾರದು ಎನ್ನುವುದು ಕ್ಷಾತ್ರಧರ್ಮ....ಹ್ಹಾ...ಈಗೇನು ಮಾಡಲಿ? ಇವರನ್ನ ನಿದ್ದೆಯಿಂದ ಎಬ್ಬಿಸುವ ವಿಧಾನ ಹೇಗೆ?
ಹಿ: ಮಸಾಲೆ ದೋಸೆಯ ವಾಸನೆ ತೋರಿಸಿದರೆ?
ಪಾ: ಹ್ಹಾ...ಭಲೇ...ಒಳ್ಳೆಯ ಯೋಜನೆ. ಇಗೋ, ನಿಮಗೆ ನನ್ನ ಕಂಠೀಹಾರವನ್ನ ಪಾರಿತೋಷವಾಗಿ ನೀಡುತ್ತಿದ್ದೇನೆ...ಯಾರಲ್ಲಿ? ಇವರಿಗೆ ಸಾವಿರ ಬಂಗಾರದ ವರಹಗಳನ್ನು ನೀಡಿ ಯಥೋಚಿತವಾಗಿ ಸನ್ಮಾನಿಸಿ....
ಹಿ: ಧನ್ಯೋಸ್ಮಿ.
ಪಾ: ಮಸಾಲೆ ದೋಸೆ ಹೇಗಿರಬೇಕು?
ಹಿ: ಹೇಗಿರಬೇಕು?
ಪಾ: ರುಚಿಕಟ್ಟಾಗಿರಬೇಕು...ರುಚಿ ಕಟ್-ಆಗಿರಬೇಕು...(ವ್ಯಂಗ್ಯ ನಗು)....ಹ್ಹ....ರಾಜಪಾಕಶಾಸ್ತ್ರಜ್ಞರಿಂದ ದೋಸೆಯನ್ನು ತಯಾರಿಸಿದ್ದಾಗಿದೆ...ಪದಾತಿ ದಳ, ಅಶ್ವಸೈನ್ಯ, ಗಜಸೈನ್ಯವೂ ಸಿದ್ಧವಾಗಿದೆ. ಇನ್ನೇನು ತಡ? ಹೊರಡೋಣವಂತೆ.....
(ನಾರದ ಮುನಿಗಳ ಪ್ರವೇಶವಾಗುವುದು).
ನಾ: ಭಾಗವತ.....ಭಾಗವತ.....
ಪಾ: ನಾರದ ಮುನಿಪುಂಗೋತ್ತಮರೇ...ಇದೋ ವಂದಿಸಿಕೊಂಡಿದ್ದೇನೆ.....ಆಸೀನರಾಗಿ.
ನಾ: ಆಯ್ಯಾ ಮಾಯಾವಿ ವಿಕ್ರಮ. ನಿನ್ನ ರಣೋತ್ಸಾಹವನ್ನು ನೋಡಿ, ಅನಾಹುತವನ್ನು ತಪ್ಪಿಸಲೋಸುಗ ಆತುರಾತರವಾಗಿ ಬಂದಿದ್ದೇನೆ.
ಪಾ: ಅನಾಹುತವೇ?
ನಾ: ಹೌದಯ್ಯ. ಜಗಲಿ ಭಾಗವತರು ಅಕ್ಷೋಹಿಣಿ ಸೈನ್ಯದ ಬಲವುಳ್ಳವರು. ಅಲ್ಲದೇ ಅವರ ಪುಣ್ಯನಾಮ ಸ್ಮರಣೆಯನ್ನು ಮಾಡಿದರೆ ನಿನಗೆ ಸನ್ಮಂಗಲ ಉಂಟಾಗುವುದಯ್ಯಾ..ಹಾಗಾಗಿ, ಈ ಯುದ್ಧವನ್ನು ಕೈ ಬಿಡು.
ಪಾ: ಮುನಿಪೋತ್ತಮರೇ, ನಿಮ್ಮ ಮಾತುಗಳನ್ನು ಮೀರಲಾರೆ. ಇಗೋ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇನೆ...
ನಾ: ಒಳ್ಳೆಯದಾಗಲಿ. ಭಾಗವತ......ಭಾಗವತ.....
ಪಾ: ನಾರದ ಮಹರ್ಷಿಗಳ ಸಲಹೆಯನುಸಾರ ಯುದ್ಧವನ್ನು ಕೈಬಿಟ್ಟಿದ್ದೇನೆ.....ಹ್ಹಾ....ಬಹಳ ಆಯಾಸವುಂಟಾಗಿದೆ....ವಿಶ್ರಮಿಸಕೊಳ್ಳಬೇಕು....ಯಾರಲ್ಲಿ? ರಾಜಸಖಿಯರನ್ನು ಬರಹೇಳಿ.
ಹಿ: ಅವರೆಲ್ಲ ಮಹಿಳಾ ವಿಮೋಚನಾ ಸಭೆಗೆ ತೆರಳಿದ್ದಾರಯ್ಯ....
ಪಾ: ಹ್ಹಾ...ಎಂತಹ ದುರ್ಭರ ಪ್ರಸಂಗ ಇದು.
ಹಿ: ಅಧಿಕ ಪ್ರಸಂಗವೇ ಹೌದು.
ಪಾ: ಹ್ಹ...
(ಆಗ ಕರೆಂಟು ಕೈ ಕೊಟ್ಟಿದ್ದರಿಂದ ಮುಂದೇನಾಯ್ತೆಂದು ಸರಿಯಾಗಿ ಗೊತ್ತಾಗ್ಲಿಲ್ಲ. ಗೊತ್ತಿದ್ದವರು ತಿಳಿಸಿ.)
ಹಿ: ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ.........ಮಂಗಳಂ
**********************************************************
11 comments:
hahhahha! sakhath annayya..
ಅಯ್ಯಾ ಭಾಗವತರೇ,
ಇನ್ನು ಚಿಂತೆಗೆ ಕಾರಣವಿಲ್ಲ. ಮಾಯಾವಿ ವಿಕ್ರಮನ ಕಾವ್ಯ ಸಂಪತ್ತೆಲ್ಲವನ್ನೂ ನಾನು ಮಟ್ಟುಗೋಲು ಹಾಕಿಕೊಂಡಿದ್ದೇನೆ!
ಕಾಲಕಾಲಕ್ಕೆ ಅದನ್ನು ಪ್ರಜೆಗಳೆಲ್ಲರಿಗೂ ತಲುಪುವ ವ್ಯವಸ್ಥೆ ಮಾಡುತ್ತೇನೆಂದು ಮಾತು ಕೊಡುತ್ತೇನೆ.
ಇದೋ, ನಾನು ಈಗ ತಾನೇ ಮಹಿಳಾವಿಮೋಚನಾ ಸಭೆಯಿಂದ ಬಂದವಳಾದೆ. ಇನ್ನು ಮುಂದಿನ ಕೆಲಸ, ಮಾಯಾವಿ ವಿಕ್ರಮನ ಸಂಪತ್ತಿನ ವಿಲೇವಾರಿ ಮಾಡುವುದು. ಅದಕ್ಕಾಗಿ ತಮ್ಮ ಸಹಕಾರವನ್ನಪೇಕ್ಷಿಸಿ ಬಂದಿದ್ದೇನೆ. ನೀಡುವಿರಾ ಓ ಭಾಗವತರೇ!?
ಭಾಗವತರೇ, ಮು೦ದೆ೦ತ ಬರ್ಯುದು ಅ೦ದ್ ಹೇಳಿ ಗೊತ್ತಾಯ್ದಿದ್ರೆ ಕರೆ೦ಟ್ ಹೋಯ್ತ್ ಅ೦ದ್ ಬಿಡುದೇ?
ವಿಕ್ಕಿ ಕವಿತೆ ಅರ್ಥವಾಗದೆ, ತಲೆಗೆ ವಿಕ್ಸ್ ಮೆತ್ತಿಕೊಂಡು ಕೂತ ಪಾಮರರ ಪಾಪ ವಿಮೋಚನೆಯಾಗುವುದೆಂದು ಪೇಳುವಂಥವರಾಗಿ ನಾರದ ಮುನಿಗಳೇ.
ಸುಶ್, ಈ ಮಾಯಾವಿ ವಿಕ್ರಮ ನಿನ್ನ ಚೌಕಿ ಪಕ್ಕದಲ್ಲೆಲ್ಲೋ ಅವಿತಿದ್ದಾನೆ. ಹುಡುಕಿ, ಹಿಡಿದು, ಸರಿಯಾಗಿ ವಿಚಾರಿಸ್ಕೋ ಮರೀ.
ಚೇತನಾ, ಮಾಯಾವಿ ವಿಕ್ರಮನ ಕಾವ್ಯ ಸಂಪತ್ತನ್ನು ಮಟ್ಟುಗೋಲು ಹಾಕಿಕೊಂಡಿರಾ? ಮೊದಲೇ ಅವನು ಮಾಯಾವಿ. ನಿಮಗೆ ತನ್ನೆಲ್ಲ "ಸರಿಯಾದ" ಸಂಪತ್ತನ್ನೇ ಒಪ್ಪಿಸಿದ್ದಾನೆಂದು ಯಾವ ಧೈರ್ಯ?
ಭಾಗವತರೇ, ಕಥೆಯ ಮುಂದಿನ ಭಾಗವನ್ನೂ ಅರುಹುವಂಥವರಾಗಬೇಕೆಂದು ಅಭಿಮಾನಿನಿಯರ ವಿನಮ್ರ ಕೋರಿಕೆ. ಕೃಪೆದೋರಿ.
JB,
You always manage to do this with your wicked sense of humour. Nice take. I can certify that you sleep for 18 hoours on weekends,'cause, I can almost hear you yawn while reading your mails!!
Vikram must have rolled with laughter!!
-Tina.
ಭಾಗವತರೇ,
"ಅಧಿಕ ಪ್ರಸಂಗ' ದ ಅರ್ಧ ಭಾಗ ಲಾಯಕ್ಕುಂಟು. ಪ್ರಸಂಗ ಮುಂದುವರಿಯುವುದು ಯಾವಾಗ?
ನಾವಡ
ಕರಂಟ್ ಬಂದ ಮೇಲೆ ಕಂಡ ದೃಶ್ಯ:
ಸೇವಕ: ಪ್ರಭೋ, ರಾಜಸಖಿಯರು ಬಂದಿದ್ದಾರೆ?
ವಿಕ್ರಮ: ಸೇವಕಾ, ಏನು ತಂದಿದ್ದಾರೆ? ಮಸಾಲೆ ದೋಸೆಗಳನ್ನೆ?
ಸೇವಕ: ಪ್ರಭೊ, ಕೆಲವರು ಸೌಟುಗಳನ್ನು, ಕೆಲವರು ಲಟ್ಟಣಿಗೆಗಳನ್ನು ತಂದಿದ್ದಾರೆ.
ಮಾಯಾವಿ ವಿಕ್ರಮ ಸರ್ರನೆ ಮಾಯವಾಗುತ್ತಾನೆ.
ಜಗಲಿ ಭಾಗವತರು ಮದ್ದ(ತ)ಲೆ ಬಾರಿಸುತ್ತಾರೆ.
Bhaagavathre, Chetana blog iddakiddante missing? enaaytu..
Sorry to post an irrelavant comment here.
Chetana, ellideeri?
wow!!.. ನಿಮ್ಮ recent postನ ಹಿಡಕೊಂಡು ಇಲ್ಲಿಗೆ ಬಂದೆ.. ತುಂಬಾ ಚನ್ನಾಗಿದೆ ನೀವು ಕೊಟ್ಟ ವರ್ಣನೆ.. ha ha ha.. ತುಂಬಾ ಇಷ್ಟ ಆಯ್ತು.
ನಮಸ್ಕಾರ ಜಗಲಿ ಭಾಗವತರೆ.
ನಿಮ್ಮ ‘ಮಾಯಾವಿ ವಿಕ್ರಮ ಚನ್ನಾಗಿ ಇತ್ತು.ತಮಾಷೆಯಾಗಿಯೂ ಇತ್ತು.
Post a Comment