April 29, 2008

ಬಾಲಕನ ಅರಣ್ಯರೋದನ

ಮೊನ್ನೆ ಒಂದು ಪೌರಾಣಿಕ ನಾಟಕವನ್ನ ನೋಡಲಿಕ್ಕೆ ಹೋಗಿದ್ದೆ. ಅದರ ಒಂದು ದೃಶ್ಯದ ತುಣುಕು ನಿಮ್ಮ ಓದಿಗೆ.
*********************************************************************
(ರಾಜಬೀದಿಯ ಹಿನ್ನೆಲೆಯ ತೆರೆ. ಹರಿದ ಬಟ್ಟೆಗಳನ್ನು ತೊಟ್ಟ, ಕೆದರಿದ ತಲೆಯ ಬಾಲಕನೊಬ್ಬನು ವಿಧವಿಧವಾಗಿ ವಿಲಪಿಸುತ್ತಾ ರಂಗದ ಮೇಲೆ ಆಗಮಿಸುವನು).

ಬಾಲಕ : ಅಯ್ಯೋ, ಇದೆಂತಹ ದುರ್ಭರ ಪ್ರಸಂಗ ನನ್ನ ಬಾಳಿನಲ್ಲಿ ಬಂದೊದಗಿತಲ್ಲ. ಇದನ್ನೆಲ್ಲ ನೋಡುವ ನನ್ನ ಕಣ್ಣುಗಳು ಇಂಗಿಹೋಗಬಾರದೆ? ಇದನ್ನೆಲ್ಲ ಅನುಭವಿಸುವ ನನ್ನ ಹೃದಯ ಸಿಡಿದು ಹೋಗಬಾರದೆ? ನಾನು ನಿಂತಿರುವ ಭೂಮಿ ಬಿರಿದು ನನ್ನನ್ನು ತಿನ್ನಬಾರದೇ? ಹರಹರ....ಶಿವಶಿವ...ಅಕಟಕಟಕಟಕಟಕಟ.....(ಲಬೋಲಬೋ ಎಂದು ಎದೆ ಎದೆ ಬಡಿದುಕೊಳ್ಳುತ್ತ, ಕೈಗಳನ್ನು ಮೇಲ್ಮುಖವಾಗಿ ಹಿಡಿದು, ನಿಧಾನವಾಗಿ ಒಂದೊಂದೆ ಹೆಜ್ಜೆಯನ್ನ್ನಿಟ್ಟು ರಂಗದ ಮಧ್ಯಭಾಗಕ್ಕೆ ಬರುವನು. )

(ತಲೆಗೆ ಮುಂಡಾಸು ಸುತ್ತಿಕೊಂಡ, ಕೈಯಲ್ಲಿ ತಾಳ ಹಿಡಿದಿರುವ ವ್ಯಕ್ತಿಯೊಬ್ಬನು ರಂಗದ ಮೇಲೆ ಆಗಮಿಸುವನು).
ವ್ಯಕ್ತಿ : ಅಯ್ಯಾ ಬಾಲಕ. ನಿನ್ನ ಹೃದಯವಿದ್ರಾವಕ ರೋದನವನ್ನು ನನ್ನ ಈ ಎರಡು ಕಣ್ಣುಗಳಿಂದ ನೋಡಲಾಗುತ್ತಿಲ್ಲ. ನಿನ್ನ ವ್ಯಥೆ ಏನು?

(ಬಾಲಕನು ಕಣ್ಣೀರೊರೆಸಿಕೊಳ್ಳಲು ನೋಡುವನು. ಕೂಡಲೇ ಪ್ರೇಕ್ಷಕರೊಬ್ಬರು ಪಕ್ಕದಲ್ಲಿರುವ ಹವ್ಯಗೂಸೊಂದರಿಂದ (ಹವ್ಯಕ + ಕೂಸು - ಆದೇಶಾಗಮ ಲೋಪ ಸಂಧಿ) ಕರವಸ್ತ್ರವೊಂದನ್ನು ಪಡೆದು ಬಾಲಕನಿಗೆ ನೀಡುವರು).
ಬಾಲಕ : ಅಯ್ಯಾ, ನನ್ನ ಕಥೆಯನ್ನು ಏನೆಂದು ಹೇಳಲಿ? ನನ್ನ ಪಾಲಕರಿಂದ ನಾನು ತ್ಯಕ್ತನಾಗಿದ್ದೇನೆ.

ವ್ಯಕ್ತಿ : ಅಹುದೇ? ಈ ಕಲಿಗಾಲದಲ್ಲೂ ತಮ್ಮ ಮಕ್ಕಳನ್ನು ಪಾಲಕರು ಬೀದಿಗೆ ಬಿಡುವರೇ? ಆಯ್ಯೋ, ಎಂತಹ ಕಾಲವು ಪ್ರಾಪ್ತವಾಯಿತು? ಛೆ..ಛೆ...ಛೆ...

ಬಾಲಕ : ಅಹುದು. ನಾನು ಆಂಗ್ಲ ಬಾಲಕ. ನನ್ನ ಪಾಲಕರು ತಮ್ಮ ಕನ್ನಡದ ಪುತ್ರಿಯನ್ನು ಚೆನ್ನಾಗಿಯೇ ಪೋಷಿಸುತ್ತಿಹರು....

ವ್ಯಕ್ತಿ : ಅಹೋ!! ಮಕ್ಕಳಲ್ಲೂ ಮಲತಾಯಿಧೋರಣೆಯೆ? ಶಾಂತಂ ಪಾಪಂ...ಶಾಂತಂ ಪಾಪಂ...

ಬಾಲಕ : ನನಗೆ ಜೀವನದಲ್ಲಿ ಜಿಗುಪ್ಸೆ ಮೂಡಿದೆ. ಇದೂ ಒಂದು ಜೀವನವೇ? ಇದೋ, ನಾನು ಹಿಮಾಲಯಕ್ಕೆ ತೆರಳಿ ನಿರ್ವಾಣ ಹೊಂದುತ್ತೇನೆ....

ವ್ಯಕ್ತಿ : ಅಯ್ಯಾ ಬಾಲಕ. ತಡೆ. ಎಲ್ಲದಕ್ಕೂ ತಾಳ್ಮೆಯೇ ಭೂಷಣವು. ಅಗೋ, ನಮ್ಮ ರಾಜವೈದ್ಯೆಯಲ್ಲಿ ವಿಚಾರಿಸೋಣ. ನಿನಗೂ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅಗತ್ಯವಿರುವುದೇನೋ...

ಬಾಲಕ : ಅಹುದೇ? ನಾನೀಗ ಏನು ಮಾಡಬೇಕೆಂದು ಹೇಳುವಂತವರಾಗಿ.

ವ್ಯಕ್ತಿ : ಕೇಳುವಂತವನಾಗು...ನೀನು ಸೂರ್ಯೋದಯಕ್ಕಿಂತ ಅರ್ಧ ಗಂಟೆ ಮುನ್ನ, ಒದ್ದೆ ಪೀತಾಂಬರವನ್ನುಟ್ಟು, ಖಾಲಿ ಹೊಟ್ಟೆಯಲ್ಲಿ, "ಓಂ ಶ್ರೀ ಜಗಲಿ ಭಾಗವತಾಯ ನಮಃ" ಎಂದು ಒಂದು ಸಾವಿರ ಬಾರಿ ಪುಣ್ಯನಾಮ ಸ್ಮರಣೆಯನ್ನು ಮಾಡು.

ಬಾಲಕ : ಧನ್ಯೋಸ್ಮಿ. ಹಾಗೆಯೇ ಆಗಲಿ. ನಿಮ್ಮ ಪಾದಾರವಿಂದಗಳಿಗೆ ವಂದಿಸಿಕೊಂಡಿದ್ದೇನೆ.

ವ್ಯಕ್ತಿ : ತಥಾಸ್ತು. ನಿನಗೆ ಮಂಗಳವಾಗಲಿ.

10 comments:

Tina said...

ಸೋಮಿ ಬಾಗ್ವತ್ರೆ,
ಇಸ್ಟ್ ದಿನ ಮೆಯಿಲ್ ಮಾಡಿ ಕಮೆಂಟ್ ಮಾಡಿ ಪ್ರಾಣ ಹಿಂಡಿದ್ದಲ್ಡೇಯ ಈಗ ಪಬ್ಲಿಕ್ಕಾಗೂ ತಮಾಸೆ ಮಾಡೀರಿ. ಇರ್ಲಿ ಇರ್ಲಿ. ಇವುತ್ತಿಂದ ನಾನು ಔಸ್ತಿ ಮಂತ್ರಾನ ಸಾವಿರ್ಸಲ ಏಳಿ ಸೈ ಅನ್ನಿಸ್ಕಂತಿನಿ, ಆಮೇಲೆ ನನ್ ಇಂಗ್ಲಿಸ್ ಮಗೀನ ಚನಾಗ್ ನೋಡ್ಕಂತಿನಿ. ಈಗಂತೇಳಿ ಆಣೆಬಾಸೆ ಮಡಗ್ತೀನಿ.
ಅಂತು ಒಳ್ಳೆ ನಾಟ್ಕ. ಇನ್ನು ವಸಿ ಉದ್ದೂಕಿದ್ರೆ ಸಂದಾಕಿರೋದು!!

ಇಂತಿ,
ಟೀನಾ ಹೆಂಬ ಅತಬಾಗ್ಯೆಯಾದ ಥಾಯಿಯು.

Sree said...

ha ha ha ha! superraagide:))

Rohini Joshi said...

ha ha ha majavAgide=))...aadare inidina paristitige sampoorNa viruddavAgide...bahusha ee paristiti nirmANavAgirodu nimma mantrashaktiya prabhAvadinda ansatte:-?

Shubhada said...

ಹ ಹ್ಹ ಸಖತ್ತಾಗಿದೆ :-) ಅಂದ ಹಾಗೆ, ಆ ಮಂತ್ರದ ಬದ್ಲು ‘ಈ ಜಗಲಿ ಭಾಗ್ವತ ಏನ್ ಮಹಾ?!’ ಅಂತ ಅಂದ್ಕೊಳ್ತಾ ದಿವ್ಸ ೫ ಹೊತ್ತು ಊಟ ಮಾಡಿದ್ರೆ ಕಾಲೆಳೆಯೋದ್ರಲ್ಲಿ ಪಿ.ಎಚ್.ಡಿ (ಪೋಕರಿ ಹುಡ್ಗ್ರ ಡಿಗ್ರಿ) ಸಿಗುತ್ತಂತೆ! ಹೌದಾ?! ;-)

ಸುಪ್ತದೀಪ್ತಿ suptadeepti said...

ಮಾಸಾಮಿ, ನನಗೊಂದು ಪಂಡಮೆಂಟಲ್ ಡೌಟು... ಈ ಇಂಗ್ಲಿಸ್ ಅನುಮನ ಬಾಯಲ್ಲಿ ಆಟುದ್ದದ್ ಮಂತ್ರ ಬರೋದುಂಟಾ? ಅದೂ ಸಾವ್ರ ಸತಿ? ನಂಗೇನೋ ಡೌಟಪ್ಪ!! ವಸಿ ಇಚಾರಿಸ್ಕಳಿ ಮತ್ತೆ; ನಾಜೂಕಿನ ಉಡ್ಗ ಮಂತ್ರ ಏಳಿ ಏಳಿ ಏಳಿ... ತಲೆ-ಗಿಲೆ ತಿರ್ಗಿ ಬಿದ್ ಬಿಟ್ರೆ ಯಾರ್ಗತಿ? ನೋಡ್ಕೊಳೋರ್ ಯಾರೂ ಮದ್ಲೇ ಇದ್ದಂಗಿಲ್ಲಾ!?

ಮನಸ್ವಿನಿ said...

:)ಚೆನ್ನಾಗಿದೆ.

‘ಈ ಜಗಲಿ ಭಾಗ್ವತ ಏನ್ ಮಹಾ? ’ ಈ ಮಂತ್ರ ತುಂಬಾ interesting ಆಗಿದೆ.

chetana said...

:)
majavaagide

Shree said...

hahhahhaa! :) Supper Bhaagavatha, innaShTu naaTakagaLannu nireekShisutteve :)

reborn said...

? ..... :)

sunaath said...

ಧನ್ಯವಾದಗಳು,ಭಾಗವತೋತ್ತಮರೆ. ನೀವು ಹೇಳಿದ ಮಂತ್ರವನ್ನು ಜಪಿಸಿದ ಮೇಲೆ ಈಗ ಚೆನ್ನಾಗಿ ನಿದ್ರೆ ಬರುತ್ತಿದೆ.