August 14, 2007

ಬೈಸರ್ತಿಗೆ

ಬೈಸರ್ತಿಗೆ, ಬೈಸರಿಗೆ = ಸಂಜೆಗೆ, ಸಾಯಂಕಾಲದ ಹೊತ್ತು.

ಇವತ್ತ್ ಬೈಸರ್ತಿಗೆ ಎಲ್ಲಿಗೆ ಸವಾರಿ ತಮ್ದ್?
ನಾಳೆ ಬೈಸರ್ತಿಗೆ ಎಲ್ಲ ತುಳಸಿಯಮ್ಮನ ಮನೆಗೆ ಬನ್ನಿ. ಗಡ್ಜ್ ಹಯಗ್ರೀವದ ಸಮಾರಾಧನೆ ಇತ್ತಂಬ್ರ್:-)
ಈಗ ನಂಗ್ ಕೆಲ್ಸ ಮಸ್ತ್ ಇತ್ತ್. ಬೈಸರ್ತಿಗೆ ಬಾ, ಆಗ್ದಾ?

ಇದೇ ಅರ್ಥದ ಇನ್ನೊಂದು ಶಬ್ದ - 'ಬೈಯಾಪತ್ತಿಗೆ'.
'ಬೈ' + 'ಆಪತ್ತಿಗೆ' (ಆಗುವಾಗ) = ಸಂಜೆ ಆಗುವಾಗ
"ಬೈಯಾಪತ್ತಿಗೆ ಭಟ್ರ್ ಮನಿಗ್ ಹೋಯಿ (ಹೋಗಿ) ಹಾಲ್ ತಕಂಡ್ (ತೆಗೆದುಕೊಂಡು) ಬಾ."

ಇದೇ ಪದದ ಇನ್ನೊಂದು ರೂಪ - 'ಬೈಯಾಯ್ತಲೆ', 'ಬೈಯಾಯ್ತ್'
'ಬೈ' + 'ಆಯ್ತಲೆ' (ಆಯಿತಲ್ಲ) = ಸಂಜೆ ಆಯ್ತಲ್ಲ
"ಬೈಯಾಯ್ತಲೆ, ಇನ್ನೂ ದನದ ಹಾಲ್ ಕರಿಲಿಲ್ಯಾ ನೀನ್?"
"ಬೈಯಾಯ್ತ್. ಇನ್ನ್ ಕೂಕಂಡ್ರೆ (ಕೂತುಕೊಂಡರೆ) ಆಪ್ದಲ್ಲ (ಆಗುವುದಲ್ಲ)" - ಮನೆಗೆ ಬಂದ ನೆಂಟರಿಗೆ ಸಂಜೆಯಾಗುತ್ತಲೆ ಆಗುವ ಜ್ಞಾನೋದಯ:)

ನಿಘಂಟಿನಲ್ಲಿ ನನಗೆ ದೊರೆತ ಶಬ್ದ 'ಬೈಗು'. 'ಬೈಹೊತ್ತು' ಅನ್ನುವ ಪದ ಕೇಳಿದ್ದೆ. ಆದರೆ 'ಬೈ' ಅನ್ನುವ ಸ್ವತಂತ್ರ ಪದದ ಅರ್ಥ 'ಅಡಗಿಸು', 'ಹುದುಗಿಸು'. 'ಬೈ' ಅಂದರೆ ಸಂಜೆಯೂ ಆಗುತ್ತದಾ? ಕನ್ನಡ ಪಂಡಿತರು ತಿಳಿಸಿ. ನಮ್ಮ reviewers ಯಾವಾಗ್ಲೋ ಮಾಯ ಆಗ್ಬಿಟ್ಟಿದ್ದಾರೆ:(( inspector-ಅಂತೂ ಪತ್ತೆನೆ ಇಲ್ಲ....

'ಬೈಯಾದ' ನಂತರ 'ಹೊತ್ತು ಕಂತುತ್ತದೆ". 'ಕಂತು' = ಮುಳುಗು.
ಬೆಳಿಗ್ಗೆ ಆಗುವಾಗ - ಹೊತ್ತು ಮೂಡುತ್ತದೆ. ಬೆಳ್ಳಿ ಮೂಡುತ್ತದೆ.
ಸಂಜೆ - ಹೊತ್ತು ಕಂತುತ್ತದೆ.
"ಹೊತ್ತ್ ಮೂಡ್ತ್. ಇನ್ನೂ ನಿದ್ರಿಯ ನಿಂಗೆ?"
"ಹೊತ್ತ್ ಕಂತಿಯಾಯ್ತಲೆ, ಮಕ್ಳೆ. ಇನ್ನ್ ಆಡದ್ದ್ ಸಾಕ್. ಎಲ್ಲ ಕೈ ಕಾಲ್ ಮುಖ ತೊಳ್ಕಂಡ್ ದೇವ್ರ್ ಭಜನೆ ಮಾಡಿನಿ. ಹೋಯ್ನಿ (ಹೋಗಿ)"

ಬೆಳಗಾಗುವುದು, ಸಂಜೆಯಾಗುವುದು ನಮ್ಮ ಜನಪದರಿಗೆ, ಕವಿಗಳಿಗೆ ಬಹಳ ಆಸಕ್ತಿ ಹುಟ್ಟಿಸುವ ಕ್ರಿಯೆಗಳೆನಿಸುತ್ತದೆ. ಸೂರ್ಯನಿಗಂತೂ ದೇವರ ಪಟ್ಟ:)) ಬೇಂದ್ರೆಯವರ ಈ ಕವನ ನನಗೆ ಬಹಳ ಅಚ್ಚುಮೆಚ್ಚು
"ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ, ನುಣ್ಣನೆ ಎರಕವ ಹೊಯ್ದಾ"
ತುಳಸಿಯಮ್ಮ, ತುಳಸಿವನದಲ್ಲಿ ಈ ಪದ್ಯ ಹಾಕ್ತ್ರ್ಯಾ?

ಬೋನಸ್ ಪ್ರಶ್ನೆಗೆ ಉತ್ರ -
'ಕುಜ' ಕಾದಂಬರಿ 'ಜಿ. ಕೆ. ಐತಾಳ'ರ ಕೃತಿ. ಕುಂದಾಪುರದವರು. 'ಅ.ನ.ಕೃ' ಪ್ರಶಸ್ತಿ ವಿಜೇತ ಕೃತಿ. ಈ ಕಾದಂಬರಿಯ ನಾಯಕನ ಪಾತ್ರಕ್ಕೂ, ಚಿತ್ತಾಲರ 'ಶಿಕಾರಿ'ಯ 'ನಾಗಪ್ಪ'ನಿಗೂ ಬಹಳ ಸಾಮ್ಯತೆಗಳಿವೆ.

ಇವತ್ತಿನ ಸವಾಲು:-
ಈ ಶಬ್ದದ ಅರ್ಥ ಏನು - 'ತದ್ಯಾಪ್ರತ'.

ಬೋನಸ್ ಪ್ರಶ್ನೆ -
ಕ್ಷಿತಿಜ ನೇಸರ ಧಾಮ ಎಲ್ಲಿದೆ?
ಸುಳಿವು - ಇವತ್ತಿನ ಶಬ್ದಮಾಲೆಯನ್ನ ನೋಡಿ:)

8 comments:

Shree said...

ನಮ್ಮ ಕಡೆ ನಿಮ್ಮ ಭಾಷೆ ಮಾತಾಡುವವರು 'ಬೆಳಗ್ಗೆ' ಅನ್ನುವುದಕ್ಕೆ 'ಬೆಳ್ಚೊತ್ತಿಗೆ' ಅಂತಾರೆ.
ಹವ್ಯಕ ಕನ್ನಡದಲ್ಲಿ ಬೈಸರ್ತಿಗೆ (ಸಂಜೆಗೆ)ಹೊತ್ತೋಪಗ ಅಂತಾರೆ. (ಹೊತ್ತು + ಹೋಪಗ = ಹೊತ್ತು ಹೋಗುವಾಗ)
ಕಷ್ಟದ ಪ್ರಶ್ನೆಗಳು ಕೇಳಿದ್ದೀರಿ, ಯಾಕೆ, ಗುರುದಕ್ಷಿಣೆ ಬಂದಿಲ್ಲ ಅಂತ್ಲಾ?
ತದ್ಯಾಪತ್ರ ಅಂದ್ರೆ ತದ್ರೂಪ ಅಂತ್ಲಾ? DITTO ಅಂತಾರಲ್ಲ, ಆ ಅರ್ಥವಾ?

reborn said...

LOL for sri s answer..Good try :)
I know the answer for both .. before giving it I want to clarify my doubt... Am i eligible for ur tests , as I have an edge over others being a Kundapuri :)

Unknown said...

ನಮ್ಮ ಕಡೆ ಬೈತಲೆ ಅಂತ ಇದೆ. ಅಂದರೆ ಹೆಣ್ಣುಮಕ್ಕಳು ತಲೆಯ ನಡುವಿನಲ್ಲಿ ಕ್ರಾಪ್ ತೆಗೆದು ಕೂದಲು ಬಾಚುತ್ತಾರೆ.

sritri said...

ಭಾಗವತ್ರೇ, ನಿಮ್ಮ ಪ್ರಶ್ನೆ ಈ ಸಲ ಸುಲಭ ಇತ್ತ್ . ಕ್ಷಿತಿಜ ನೇಸರ ಧಾಮ ಉಡುಪಿ-ಭಟ್ಕಳ್ ಹತ್ರದಲ್ಲೆಲ್ಲೋ ಇದೆ ಅಲ್ಲವಾ?

ಮೂಡಲ ಮನೆ ಹಾಡು ಬರುತ್ತದೆ ಸದ್ಯದಲ್ಲಿಯೇ. ಹೆಗಡೇರ ಮಗಳನ್ನು ಹುಡುಕೋದಕ್ಕಿಂತ ಇದೇ ಸುಲಭವಾಗಿದೆ :))

ನಂದಕಿಶೋರ said...

ಬೈಯ, ಬಯ್ಯ ಅಂತ ತುಳುವಿನಲ್ಲೂ ಇತ್ತೆ. ಅರ್ಥ ಅದೇ, ಸಂಜೆಗೆ ಅಂತ. ಹೀಗಾಗಿ ನೀವು ಕನ್ನಡ ಪಂಡಿತ್ರನ್ನು ಹುಡುಕೋ ಮೊದ್ಲು ತುಳುಪಾಮರರನ್ನು ಕೇಳಿ ನೋಡಿ ;-)

ಮತ್ತೆ ಕ್ಷಿತಿಜ ನೇಸರ ಧಾಮ ಇರುದು ಬೈಂದೂರಿಂದ ಮುಂದೆ ಒತ್ತಿನೆಣೆಯಲ್ಲಿ, ಅಲ್ದಾ?

ತದ್ಯಾಪತ್ರ ಎಂತ ಅಂತ ಗೊತ್ತಾಗ್ಲಿಲ್ಲ ಮಾರ್ರೆ. ಮುಂದಿನ ಸಲ ಹೇಳಿ. ಸರಿ, ಇಲ್ಲೂ ಹೊತ್ತು ಕಂತಿಯಾಯ್ತ್, ನಾವಿನ್ ಮನಿಗ್ ಹೊರಡ್ತೊ. ನಮ್‌ಸ್ಕಾರ.

Santhu said...

ತದ್ಯಾಪತ್ರ - ಈ ಪದ ಸಂಸ್ಕ್ರತದೆಗ್ ಅದ್ದಿ ತೆಗೆದ್ದಾಂಗ್ ಇತ್ತಲೆ ಭಾಗವತ್ರೆ. ಅಂದಾಜಿಗೊಂದು ಗುಂಡು ಹೊಡುದಾದ್ರೆ ನನ್ನ್ ಉತ್ರ - ತದ್ದಿಪದ್ದ (ಕೀಟಲೆ, ತುಂಟಾಟ).

reborn said...

Where is our teacher ?? U ve become very irresponsible teacher..., not checking the answers ..

Jagali bhaagavata said...

ಶ್ರೀ,
ಒಳ್ಳೆಯ ಪ್ರಯತ್ನ. ಅದು ತದ್ಯಾಪತ್ರ ಅಲ್ಲ, ತದ್ಯಾಪ್ರತ.

ಮರುಹುಟ್ಟು,
ತುಂಬ ಹಿಂದೆನೆ ಹೇಳಿದ್ದೆ. ಉತ್ತರಿಸಬಹುದು ಅಂತ. ನೀವು ಹೇಗಿದ್ದರೂ ತಪ್ಪು ಉತ್ರಾನೆ ಕೊಡ್ತೀರಿ ಅಂತ ಗೊತ್ತು ನಂಗೆ:-)

ಭರತ,
ಆ ಪ್ರಯೋಗ ನಮ್ಮಲ್ಲೂ ಇದೆ. ಬಹುಶಃ ಅದು ಇಂಗ್ಲಿಷ್-ನಿಂದ ಬಂದಿರ್ಬಹುದು. by-lane ಅಂತಾರಲ್ಲ ಹಾಗೆ:-))

ತುಳಸಿಯಮ್ಮ,
"ಕ್ಷಿತಿಜ ನೇಸರ ಧಾಮ ಉಡುಪಿ-ಭಟ್ಕಳ್ ಹತ್ರದಲ್ಲೆಲ್ಲೋ ಇದೆ ಅಲ್ಲವಾ?"....ಸೂಪರ್ ಉತ್ರ. ಆಕಾಶವಾಣಿಯ ಹವಾಮಾನ ವಾರ್ತೆ ನೆನಪಾಯ್ತು. "ಅಲ್ಲಲ್ಲಿ (ಎಲ್ಲೆಲ್ಲಿ?), ಆಗಾಗ (ಯಾವಾಗ?), ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ:-))

ಮತ್ತೆ, ಮೂಡಲ ಮನೆ ಇನ್ನೂ ಬಂದಿಲ್ಲ. "ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು":-)

ಯಾತ್ರಿಕರ,
ಒತ್ತಿನೆಣೆ ಸರಿಯಾದ ಉತ್ರ. ಕೆಲವು ಪದಗಳು ತುಳುವಿನಿಂದ ಬಂದಿರುವುದು ಹೌದು. ನೀವು ತುಳುಪಾಮರರೆ?

ಸಂತು,
ನಿಮ್ಮ ಅಂದಾಜಿನ ಗುಂಡು ಸರಿ ಇತ್ತ್:-)

ಮರುಹುಟ್ಟು,
ಉತ್ರನೆ ಕೊಟ್ಟಿಲ್ಲ ನೀವು. ಮತ್ತೆ ನನಗೆ 'ಬೇಜವಾಬ್ದಾರಿ ಜನ' ಅಂತ ಅನ್ನೋದಾ?:-)