ಮೊನ್ನೆ ಉದಯವಾಣಿ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಒಂದು ವರದಿ ಗಮನಸೆಳೆಯಿತು. ಒತ್ತಿನೆಣೆಯಲ್ಲಿ ನಡೆದ ಪ್ರತಿಭಟನೆಯ ವರದಿಯದು. ಬಳ್ಳಾರಿಯ ಗಣಿಗಳ ಅದಿರು ವಿದೇಶಕ್ಕೆ ರಫ್ತಾಗುವುದು ನವಮಂಗಳೂರು ಬಂದರಿನ ಮೂಲಕ. ಈ ಮಾರ್ಗದ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದರಿ ೧೭. ಈ ರಸ್ತೆ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜೀವನಾಡಿ. ಅದು ಉಭಯಜಿಲ್ಲೆಗಳ ಆರ್ಥಿಕ ವ್ಯವಹಾರಗಳ ಮುಖ್ಯ ಕೊಂಡಿ ಕೂಡ.
ಕಳೆದ ಹಲವು ವರ್ಷಗಳಿಂದ ಅಧಿಕ ಭಾರದ ಅದಿರು ಹೊತ್ತ ಲಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ರಸ್ತೆ ಗಬ್ಬೆದ್ದಿತ್ತು. ರಸ್ತೆಯ ಧಾರಣ ಸಾಮರ್ಥ್ಯವನ್ನು ಮೀರಿದ ಭಾರವಾಹನಗಳಿಂದ ರಸ್ತೆಗೆ ಸಂಚಕಾರ ಬಂದಿತ್ತು. ಶಿರೂರು (ಉಡುಪಿ ಜಿಲ್ಲೆಯ ಉತ್ತರ ತುದಿ) ಬಳಿಯಿದ್ದ weigh bridge ಗಣಿ ಲಾರಿ ಮಾಲೀಕರ ಒತ್ತಡದಿಂದ ರಾತ್ರೋರಾತ್ರಿ ಮಾಯವಾಗಿತ್ತು. ಈ ಲಾರಿಗಳು ಸೃಷ್ಟಿಸಿದ ಸಮಸ್ಯೆಗಳು ಒಂದೆರಡಲ್ಲ. ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಪ್ರತಿಭಟಿಸಿದರೂ ರಾಜಕೀಯ ಒತ್ತಡದಿಂದಾಗಿ ಲಾರಿಗಳ ದಾಂಧಲೆ ಅವ್ಯಾಹತವಾಗಿ ನಡೆದಿತ್ತು. ರಸ್ತೆ ಇನ್ನೇನು ಕೈ ಬಿಟ್ಟಿತು ಅನ್ನುವಾಗ ನಡೆದದ್ದು ಮೊನ್ನಿನ ಪ್ರತಿಭಟನೆ. ಸರ್ವಪಕ್ಷಗಳ ಪ್ರತಿನಿಧಿಗಳು, ವಿವಿಧ ಸಾಮಾಜಿಕ ಸಂಘಟನೆಗಳು ಕೈಜೋಡಿಸಿ ನಡೆಸಿದ ೫ ದಿನಗಳ ಪ್ರತಿಭಟನೆಗೆ ಅಂತೂ ಜಯಸಿಕ್ಕಿತು. ೫ ದಿನಗಳಲ್ಲಿ ೨೦೦ಕ್ಕೂ ಮಿಕ್ಕಿ ಲಾರಿಗಳನ್ನು ತಡೆಹಿಡಿಯಲಾಯಿತು. weigh bridge ಅಂತೂ ಇಂತೂ ಶಿರೂರಿಗೆ ಮತ್ತೊಮ್ಮೆ ಬಂತು. ಬಹುಷಃ ಇನ್ನಾದರೂ ರಸ್ತೆಗಳು ಉಳಿದಾವು.
ಇಂಥದ್ದೆ ಒಂದು ತಪ್ಪಿಗೆ ಬಲಿಯಾದದ್ದು ಹೊನ್ನಾವರದ ಶರಾವತಿ ಸೇತುವೆ (ರಾಜ್ಯದ ಅತಿ ದೊಡ್ಡ ಸೇತುವೆ. ೧ ಕಿ.ಮಿ.ಗಿಂತಲೂ ಉದ್ದವಿದೆ). ಅಲ್ಲಿ ಹಲವು ವರ್ಷಗಳ ಕಾಲ ಸೇತುವೆ ಕೆಟ್ಟು bargeಗಳಲ್ಲಿ ಸಂಚರಿಸಬೇಕಾಗಿತ್ತು. barge ಮಾಲಿಕರ ಒತ್ತಡಕ್ಕೆ ಸಿಲುಕಿ ರಸ್ತೆ ದುರಸ್ತಿಯೂ ತೀರ ನಿಧಾನವಾಗಿತ್ತು. ಒಟ್ಟಿನಲ್ಲಿ ಪಾಡುಪಟ್ಟಿದ್ದು ಮಾತ್ರ ಸಾಮಾನ್ಯ ಜನತೆ. ಉತ್ತರ ಕನ್ನಡದ ಇಡೀ ಆರ್ಥಿಕ ವ್ಯವಸ್ಥೆಯನ್ನೆ ನುಂಗಿಹಾಕಿತ್ತದು.
ಈ lobbyಗಳ ಸಾಲಿನಲ್ಲಿ ಇನ್ನೊಂದು ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲುಹಾದಿಯ braodgauge ಪರಿವರ್ತನೆ. ಖಾಸಗಿ ಬಸ್ಸುಗಳ ಮಾಲಿಕರ ಒತ್ತಡದಿಂದ ರೈಲು ಇನ್ನೂ ಓಡಾತ್ತಿಲ್ಲ. ಖಾಸಗಿ ಬಸ್ಸುಗಳಿಗೆ ಬೆಂಗಳೂರು ಮಂಗಳೂರು ಹಾದಿ ತೀರ ಲಾಭದಾಯಕ. ರೈಲು ಬಂದರೆ ಆ ಇಡೀ ವ್ಯವಸ್ಥೆಗೆ ಸಂಚಕಾರ ಬರುವುದರಿಂದ ಅವರ ವಿರೋಧ. ಇಲ್ಲೂ ಪಾಡುಪಟ್ಟಿದ್ದು ಮಾತ್ರ ಸಾಮಾನ್ಯ ಜನತೆ.
ನಮ್ಮಲ್ಲಿ ಇಂತಹ ಹಲವಾರು ಸಮಸ್ಯೆಗಳಿವೆ. ನಂದಿಕೂರು, ನಾಗಾರ್ಜುನ ಯೋಜನೆ, ಇತ್ತೀಚೆಗೆ ಪ್ರಸ್ತಾಪವಾಗುತ್ತಿರುವ ಉತ್ತರಕನ್ನಡದ ತದಡಿ ವಿದ್ಯುತ ಸ್ಥಾವರ...ಇಲ್ಲೆಲ್ಲ ಅಸಲಿಯಾಗಿ ಏನು ನಡೆಯುತ್ತಿದೆ? ಯಾರ ಲಾಭಕ್ಕಾಗಿ ಈ ಎಲ್ಲ ಯೋಜನೆಗಳು? ಈ ಯೋಜನೆಗಳ ಅಪಾಯಗಳೇನು?...ಯಾರಿಗೂ ಗೊತ್ತಿರುವುದಿಲ್ಲ. ಎಲ್ಲ ನಿರ್ಧಾರಗಳು ರೂಪುಗೊಳ್ಳುವುದು ಭ್ರಷ್ಟ ರಾಜಕೀಯ ಪಡಸಾಲೆಗಳಲ್ಲಿ, ಲಾಭಕ್ಕಾಗಿ ಹಸಿದಿರುವ ವ್ಯಾಪಾರಿಗಳ ಬಂಗಲೆಗಳಲ್ಲಿ.
ಕೇವಲ ಸಣ್ಣದೊಂದು ಸ್ವಹಿತಾಸಕ್ತ ಗುಂಪಿನ ಲಾಭಕ್ಕಾಗಿ ನಮ್ಮ ನೆಲ, ನಮ್ಮ ಪರಿಸರ ನಾಶವಾಗುತ್ತಿದೆ. ಯಾರದೋ golf courseನ ಹಣಕ್ಕಾಗಿ ನಮ್ಮ ರಸ್ತೆಗಳು ಅತ್ಯಾಚಾರಕ್ಕೊಳಗಾಗುತ್ತವೆ. ಯಾರದೋ ಐಷಾರಾಮಿ ಜೀವನದ ತೆವಲಿಗಾಗಿ, ಬಕಾಸುರ ಲಾಭದ ಹಸಿವಿಗಾಗಿ ನಮ್ಮ ನದಿಗಳು ಬರಡಾಗುತ್ತವೆ, ಊರುಗಳು ಮುಳುಗುತ್ತವೆ, ಜನಾಂಗ ಸಂಸ್ಕೃತಿಗಳೆ ಕಣ್ಮರೆಯಾಗುತ್ತವೆ.
September 16, 2006
Subscribe to:
Post Comments (Atom)
No comments:
Post a Comment