June 30, 2008

ಕ್ರಿಕೆಟ್ಟು

ಪ್ರಕಟಣೆ : - ಜುಲೈ ೩, ೪, ೫, ಮತ್ತು ೬ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಮೋದರ ಚಿತ್ರಕಲಾ ಪ್ರದರ್ಶನವಿದೆ, ಬೆಳಿಗ್ಗೆ ೧೦ರಿಂದ ಸಂಜೆ ೭ರ ತನಕ. ವಿವರಗಳಿಗೆ ಪ್ರಮೋದರನ್ನು ಸಂಪರ್ಕಿಸಿ.
**********************************************************

ಇವತ್ತು ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಯ ಕುರಿತು ಮಾತಾಡೋಣ. ಭಾಗ್ವತ್ರು ಕನ್ನಡ ವೀಕ್ಷಕ ವಿವರಣೆ ಮೊದ್ಲು ಕೇಳಿದ್ದು ಆಕಾಶವಾಣಿಯಲ್ಲಿ (ರೇಡಿಯೋ, ಬಾನುಲಿ). ಅದ್ರಲ್ಲೂ ಧಾರವಾಡ ಮತ್ತು ಗುಲ್ಬರ್ಗ ಕೇಂದ್ರದಲ್ಲಿ. ಅದು ಪಿ.ವಿ.ಶಶಿಕಾಂತ್, ಕಾರ್ಲ್ಟನ್ ಸಲ್ದಾನ, ಕಿರ್ಮಾನಿ, ಅರ್ಜುನ್ ರಾಜಾ, ರಘುರಾಮ್ ಭಟ್ ಯುಗ. ಜಾವಗಲ್ ಶ್ರೀನಾಥ್ ಹ್ಯಾಟ್ರಿಕ್ ಪಡೆದದ್ದನ್ನ, ಕುಂಬ್ಳೆ ಶತಕ ಬಾರಿಸಿದ್ದನ್ನ ಕೇಳಿದ ನೆನಪು.

ಆಗ ಸ್ಥಳೀಯ ಮಟ್ಟದಲ್ಲೂ ತುಂಬ ಪಂದ್ಯಗಳಾಗೋದು...ವಲಯಮಟ್ಟ, ತಾಲೂಕುಮಟ್ಟ, ಜಿಲ್ಲಾಮಟ್ಟ, ರಾಜ್ಯಮಟ್ಟ ಅಂತೆಲ್ಲ...
ಆಗ ಸ್ಥಳೀಯ ಮಟ್ಟದಲ್ಲಿ ತುಂಬ ಹೆಸರಿದ್ದದ್ದು ಕುಂದಾಪುರದ ಚಕ್ರವರ್ತಿ ಕ್ರಿಕೆಟರ್ಸ್ ತಂಡಕ್ಕೆ. ಶ್ರೀಪಾದ ಉಪಾಧ್ಯ, ಸತೀಶ್ ಕೋಟ್ಯಾನ್, ಸತೀಶ್ ಕೆ.ಪಿ., ಪ್ರದೀಪ್ ವಾಜ್, ಶಹೀದ್ ನನಗೆ ನೆನಪಿರೋ ಹೆಸ್ರುಗಳು. ಜೊತೆಗೆ ಕುಂದಾಪುರ ಟಾರ್ಪೆಡೋಸ್-ನ ನಿತಿನ್ ಸಾರಂಗ್, ಉಡುಪಿ ಸನ್ನಿಯ ಕಿಶೋರ್ ಕೂಡ. ಇನ್ನೊಂದಿಷ್ಟು ತಂಡಗಳೂ ಹೆಸರುವಾಸಿಯಾಗಿದ್ವು. ಸವಿನಯ ಸಾಸ್ತಾನ, ಬೆಂಗಳೂರು (ಅಥ್ವಾ ಮೈಸೂರು?) ಜೈ ಕರ್ನಾಟಕ, ಪಡಿಬಿದ್ರಿ ಫ್ರೆಂಡ್ಸ್....

ಆಯ್ತು. ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಯ್ತು. ಈಗ ಒಂದಿಷ್ಟು ಪದಗಳನ್ನ ಪಟ್ಟಿಮಾಡೋಣ.

bat = ದಾಂಡು.
batsman = ದಾಂಡಿಗ
ball = ಚೆಂಡು,
delivery = ಎಸೆತ
stroke = ಹೊಡೆತ
bowler = ಎಸೆಗಾರ
field = ಕ್ಷೇತ್ರರಕ್ಷಣೆ
fielder = ಕ್ಷೇತ್ರರಕ್ಷಕ
run = ಓಟ
stump = ಗೂಟ
leg stump = ಬಲಗೂಟ
off stump = ಎಡಗೂಟ
middle stump = ಮಧ್ಯಗೂಟ
wicket keeper = ಗೂಟರಕ್ಷಕ
wicket = ಹುದ್ದರಿ
boundary = ಸೀಮೆ
full toss = ಪೂರ್ಣಾಂತರ
catch = ಬುತ್ತಿ
defensive shot = ರಕ್ಷಣಾತ್ಮಕ ಹೊಡೆತ, ತಟ್ಟಿಮುಟ್ಟಿ ಆಡು
pinch hitter = ಹೊಡೆಬಡಿಯ ದಾಂಡಿಗ
umpire = ನಿರ್ಣಾಯಕ. ಅದ್ರಲ್ಲೂ ಹೆಚ್ಚಾಗಿ "ಹದ್ದಿನ ಕಣ್ಣಿನ ನಿರ್ಣಾಯಕ". ;-)
line = ನೇರ
length = ಅಂತರ
no ball = ಅಕ್ರಮ ಎಸೆತ
wide = ಅಗಲ ಎಸೆತ. ಆದರೆ ಹೆಚ್ಚಾಗಿ - ವೈಡ್ :-)
footwork = ಪಾದಚಲನೆ
backfoot = ಹೆಜ್ಜೆಯನ್ನ ಹಿಂದಿಟ್ಟು
frontfoot = ಹೆಜ್ಜೆಯನ್ನ ಮುಂದಿಟ್ಟು
short run up = ನಾಲ್ಕಾರು ಹೆಜ್ಜೆಗಳ ಅಂತರದಿಂದ
long run up = ಹತ್ತಾರು ಹೆಜ್ಜೆಗಳ ಅಂತರದಿಂದ, ದೂರದಿಂದ ಓಡಿ ಬಂದು
sweep = ಗುಡಿಸಿ ಹೊಡೆ
fielding set up = ಕ್ಷೇತ್ರರಕ್ಷಣಾ ವ್ಯೂಹ
A fierce contest between bat and ball = ಚೆಂಡು ದಾಂಡಿನ ನಡುವೆ ತೀವ್ರ ಹಣಾಹಣಿ :-)
inswinger = ಒಳತಿರುವು
outswinger = ಹೊರತಿರುವು
pacer = ವೇಗಿ
medium pacer = ಮಧ್ಯಮ ವೇಗಿ
over = ನಿರ್ವಹಣೆ.
swift running between the wickets = ಪಾದರಸದ ಚುರುಕಿನ ಓಟಗಾರಿಕೆ :-)
appeal = ಮನವಿ
loud appeal, vociferous appeal = ಬಲವಾದ ಮನವಿ
out = ನಿರ್ಗಮನ.
four = ನಾಲ್ಕು ಓಟ, ಚಟ್ಕ
sixer = ಆರು ಓಟ, ಷಟ್ಕ
two, couple of runs = ಅವಳಿ ಓಟ, ಎರಡು ಓಟ
loss of wicket = ಹುದ್ದರಿಯ ನಷ್ಟ.
opener = ಆರಂಭಿಕ ಆಟಗಾರ,
middle order = ಮಧ್ಯಮ ಕ್ರಮಾಂಕ
average = ಸರಾಸರಿ
poor fielding = ಕಳಪೆ ಕ್ಷೇತ್ರರಕ್ಷಣೆ
dramatic collapse = ನಾಟಕೀಯ ಕುಸಿತ
offside = ಎಡಭಾಗ
legside = ಬಲಭಾಗ
life = ಜೀವದಾನ

ಇನ್ನೂ ತುಂಬ ಪದಗಳಿಗೆ ಕನ್ನಡದಲ್ಲಿ ಸಂವಾದಿ ಶಬ್ದಗಳಿಲ್ಲ. mid-on, mid-off, gully, slip, silly point, cover, point, sweeper cover, block hole.....ಬ್ರಿಟಿಷರ ವಸಾಹತೀಕರಣದ ಪಳೆಯುಳಿಕೆಯಾಗಿದ್ದರಿಂದ, ಇಂಗ್ಲಿಷ್ ಮೂಲದ ಈ ಆಟದ ಎಲ್ಲ ಪದಗಳನ್ನು ಕನ್ನಡೀಕರಣಗೊಳಿಸುವುದು ಸ್ವಲ್ಪ ಕಷ್ಟ. ನಾವು ಒಂದು ಪುಟ್ಟ ಪ್ರಯತ್ನ ಮಾಡೋಣ ಬನ್ನಿ.
slip = ಜಾರು :-)
silly point = ಮೂರ್ಖ ಬಿಂದು :-)
long leg = ಉದ್ದ ಕಾಲು :-)
square leg = ಚೌಕ ಕಾಲು :-)
fine leg = ಚಂದ ಕಾಲು :-)

ಇದೊಂದು ಉದಾಹರಣೆ:
ಎರಡು ಎಸೆತಗಳಲ್ಲಿ ೬ ಓಟಗಳ ಅವಶ್ಯಕತೆ. ಕೊನೆಯ ಹುದ್ದರಿ ಕೈಯಲ್ಲಿ. ನಿರ್ಣಾಯಕ ಘಟ್ಟದಲ್ಲಿ ಪಂದ್ಯ. ಬೌಲಿಂಗ್ ತುದಿಯಲ್ಲಿ ವಿಕ್ರಮ. ಹೊಡೆಬಡಿಯ ದಾಂಡಿಗ ಜಗಲಿ ಭಾಗವತ ತಂಡಕ್ಕೆ ಆಪದ್ಭಾಂಧವರಾಗಬಲ್ಲರೇ ಎನ್ನುವುದನ್ನು ಕಾದುನೋಡಬೇಕಾಗಿದೆ. ದಾಂಡಿಗನ ಎಡಭಾಗದಲ್ಲಿ ಐವರು, ಬಲಭಾಗದಲ್ಲಿ ನಾಲ್ವರು ಕ್ಷೇತ್ರರಕ್ಷಕರು. ತನ್ಮಧ್ಯೆ, ವಿಕ್ರಮ ಹತ್ತಾರು ಹೆಜ್ಜೆಗಳಿಂದ ಓಡಿಬಂದು ಹದ್ದಿನ ಕಣ್ಣಿನ ನಿರ್ಣಾಯಕ ಅಸತ್ಯಾನ್ವೇಷಿಗಳನ್ನು ದಾಟಿ ಬಳಸಿ ಎಸೆದಿರತಕ್ಕಂತಹ ಈ ಒಂದು ಎಸೆತ...ಅದ್ಭುತ ಎಸೆತ...ಎಡಗೂಟದ ನೇರದಲ್ಲಿ ಬಂದು ಕೊಂಚ ಒಳತಿರುವನ್ನು ಪಡೆದ ಎಸೆತ....ಚೆಂಡಿನ ನೇರವನ್ನ ಗುರುತಿಸುವಲ್ಲಿ ದಾಂಡಿಗ ವಿಫಲ....ದಾಂಡಿನ ಕೊನೆಯಂಚನ್ನು ಚುಂಬಿಸಿ ಸಾಗಿದ ಚೆಂಡನ್ನು ಬುತ್ತಿಯಾಗಿಸಿಕೊಳ್ಳುವಲ್ಲಿ ಗೂಟರಕ್ಷಕ ಸುಶ್ರುತ ಸಂಪೂರ್ಣ ವಿಫಲ....ಕಳಪೆ ಗೂಟರಕ್ಷಣೆ...ಈ ಒಂದು ಜೀವದಾನ ದುಬಾರಿಯಾಗಬಲ್ಲುದೇ ಎನ್ನುವದನ್ನು ಕಾದುನೋಡಬೇಕಾಗಿದೆ....ಅತ್ಯಂತ ರೋಚಕ ಅಂತ್ಯ...೬ ಓಟಗಳ ಅವಶ್ಯಕತೆ...ಕೊನೆಯ ಹುದ್ದರಿ ಕೈಯಲ್ಲಿ...ಕೊನೆಯ ಎಸೆತ....., ಅತ್ತಿಂದಿತ್ತ ಓಲಾಡುತ್ತಿರುವ ವಿಜಯಲಕ್ಷ್ಮಿ.......ಯಾರ ಕೊರಳಿಗೆ ವಿಜಯಮಾಲೆ?... ರೋಮಾಂಚಕತೆಯ ಉತ್ಕಂಠತತೆ....ವಿಕ್ರಮ ಸಜ್ಜಾಗುತ್ತಿದ್ದಾರೆ, ಕೊನೆಯ ಬಾರಿಗೆ....ಜಗಲಿ ಭಾಗವತರ ಹೊಡೆಬಡಿಯ ಆಟಕ್ಕೆ ಕಡಿವಾಣ ತೊಡಿಸಬಲ್ಲರೇ?....ಓಡಿಬಂದು ಎಸೆದಿರುವ ಈ ಎಸೆತ....ಭರ್ಜರಿ ಹೊಡೆತ.....ಗಾಳಿಯಲ್ಲಿ ತೇಲಿ ಹೋಗಿರುವ ಚೆಂಡು.......ಆರು ಓಟಗಳು........ಸೀಮಾರೇಖೆಯನ್ನ ಪೂರ್ಣಾಂತರದಲ್ಲಿ ದಾಟಿ ಸೆಲೆಬ್ರಿಟಿ ಬ್ಲಾಗರ್ ತರಹ ಕಣ್ಮರೆಯಾಗುವುದರೊಂದಿಗೆ.......ಜಗಲಿ ಭಾಗವತರ ತಂಡಕ್ಕೆ ವಿಜಯಮಾಲೆ.. :-))

ಮನವಿ : ಬಲ್ಲವರು ಈ ಪಟ್ಟಿಗೆ ಇನ್ನಷ್ಟು ಪದಗಳನ್ನು ಸೇರಿಸಿ.

June 18, 2008

ಬ್ಲಾಗ್ ವಿಹಾರ

ಇವತ್ತು ಹೀಗೆ ಒಂದು ಸುತ್ತು ಬ್ಲಾಗ್ ವಿಹಾರಕ್ಕೆ ಹೋಗೋಣ ಬನ್ನಿ.

ಭಾಗ್ವತ್ರು ತುಂಬ ದಿನದಿಂದ ಏನೂ ಮಾಡ್ದೇ ಸುಮ್ನೆ ಕಾಲ ತಳ್ತಾ ಇದ್ದಿದ್ರಿಂದ, ಏನಾದ್ರೂ inspirational ಸಿಗತ್ತಾ ಅಂತ ತುಂಬ ಹುಡುಕಾಡ್ತಾ ಇದ್ರು. ಹಾಗೆ ಹುಡುಕ್ತಾ ಹುಡುಕ್ತಾ ಇಲ್ಲಿಗ್ ಬಂದ್ರು. ’ಓದುಗ್ರೇ, ನಿಮ್ ಅನುಭವಾನೂ ಬರೀರಿ’ ಅಂತ ಕೇಳ್ಕೊಂಡಿದಾರೆ. ನೀವೂ ಕಾಮೆಂಟಿಸ್ಬಹುದು.

ಕನ್ನಡದಲ್ಲಿ ವಿಜ್ಞಾನ ಸಂಬಂಧಿ ಲೇಖನಗಳು ತೀರ ಕಡಿಮೆ ಅಂತ ಬಲ್ಲವರ ಅಂಬೋಣ. ಶ್ರೀನಿಧಿ, ಹಾಲ್ದೊಡ್ಡೇರಿ ಸುಧೀಂದ್ರ, ಪವನಜ ಅಂತ ಒಂದಿಷ್ಟು ಕೈ ಬೆರಳೆಣಿಕೆಯಷ್ಟು ಮಂದಿಯನ್ನ ಬಿಟ್ರೆ ಬೇರೆ ಯಾರೂ ಕೈಯಾಡಿಸಿಲ್ಲ. ಈ ಫೀಲ್ಡಿಗೆ ಹೊಸ ಎಂಟ್ರಿ ಕೊಟ್ಟಿರೋರು ಭೌತಶಾಸ್ತ್ರಜ್ಞೆ ಲಕ್ಷ್ಮಿ . ನೀವು ಓದಿ, ಬರ್ದು, ಬೆನ್ನು ತಟ್ಬೇಕಂತೆ.

ನಮ್ಮೂರಿನವ್ರೊಬ್ರು, ವಿಜಯರಾಜ ಕನ್ನಂತ ಅಂತ, ಕುಂದಾಪ್ರ ಕನ್ನಡದ ಹೊಸ ಬ್ಲಾಗು ಶುರು ಮಾಡಿದಾರೆ. ಇವರಲ್ಲೂ ಭಾಗ್ವತ್ರ ತರಹ, ಮಳೆ ಗಾಳಿ ಚಳಿ ಎನ್ನದೇ, ಪ್ರತಿದಿನವೂ ಕುಂದಗನ್ನಡದ ತರಗತಿಗಳನ್ನು ತೆಗೆದುಕೊಳ್ಳುವ ಪ್ರಶ್ನಾತೀತ ಬದ್ಧತೆ ಇದೆಯೇ ಅಂತ ಕಾದು ನೋಡಬೇಕಷ್ಟೆ.

ವಿಶೇಷ ಪ್ರಕಟಣೆ:
ಕೆಂಡಸಂಪಿಗೆಯ ಉಪಸಂಪಾದಕರೂ, ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು ದಾಖಲೆ ಮಾಡಿದವರೂ ಆದ ಜೋಮನ್ ವರ್ಗೀಸರು, ತಮ್ಮ ಬ್ಲಾಗೋದುಗರಿಗೆ ಕೃತಜ್ಞತಾಪೂರ್ವಕವಾಗಿ ಕೆಂಗುಲಾಬಿಗಳನ್ನು ನೀಡುತ್ತಿದ್ದಾರೆಂದೂ, ಮಹಿಳಾಮಣಿಗಳೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದೂ, ನಮ್ಮ ಬ್ಲಾಗಿನ ನಿಷ್ಠಾವಂತ ಓದುಗರೂ, ಹಿತೈಷಿಗಳೂ ಆದ ಶ್ರೀಮತಿ ಟೀನಾ ಅವರು ತಿಳಿಸಿರುತ್ತಾರೆ.

June 10, 2008

ವಾರ್ತೆಗಳು

ವಾರ್ತೆಗಳು,
ಬರೆಯುತ್ತಿರುವವರು ಜಗಲಿ ಭಾಗವತರು.

ಇತ್ತೀಚೆಗೆ ತಲೆದೋರಿರುವ ಅತೀವ ಪ್ರೇಮಕ್ಷಾಮದ ಸಮಸ್ಯೆಗೆ ಪರಿಹಾರ ಯೋಜನೆಯೊಂದನ್ನು ಕಂಡುಹಿಡಿಯಲು ಕನ್ನಡದ ಹಿರಿಯ ಬರಹಗಾರ್ತಿಯರಿಬ್ಬರು ನಿರ್ಧರಿಸಿದ್ದಾರೆಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅಮೇರಿಕೆಯ ಸಂಯುಕ್ತ ಸಂಸ್ಥಾನದ ಕೆಲಿಫೋರ್ನಿಯಾದ ಬೀದಿಯೊಂದರ ತಳ್ಳುಗಾಡಿಯ ಐಸ್ಕ್ಯಾಂಡಿಯೊಂದನ್ನು ಅಸ್ವಾದಿಸುತ್ತಾ ಬರಹಗಾರ್ತಿಯರೀರ್ವರು ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡರೆನ್ನಲಾಗಿದೆ. ಐಸ್ಕ್ಯಾಂಡಿಯನ್ನು ಆಸ್ವಾದಿಸಿದ ನಂತರ ಪಕ್ಕದ ತೋಟವೊಂದಕ್ಕೆ ’ನುಗ್ಗಿ’, ಕೆಂಗುಲಾಬಿಗಳ ನೂರಾರು ಛಾಯಾಚಿತ್ರಗಳನ್ನು ತಮ್ಮ ಕೆಮೆರಾದ ಬಕಾಸುರ ಹೊಟ್ಟೆಯಲ್ಲಿ ಸೆರೆಹಿಡಿದಿದ್ದಾರೆನ್ನಲಾಗಿದೆ. ಯೋಜನೆಯ ಮೊದಲ ಹಂತವಾಗಿ ತಮ್ಮ ಬ್ಲಾಗಿನಲ್ಲಿ ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಪ್ರೇಮಕವಿತೆಗಳನ್ನು ಪ್ರಕಟಿಸುವುದಾಗಿಯೂ, ಜೊತೆಯಲ್ಲಿ ಕಂಗೊಳಿಸುವ ಕೆಂಗುಲಾಬಿಯ ಚಿತ್ರಗಳನ್ನು ಪ್ರಕಟಿಸುವುದಾಗಿಯೂ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಚಿತ್ರದುರ್ಗದವರು "ಇತ್ತೀಚೆಗೆ ಬಹಳ ಮಂದಿ ಯುವಕ ಯುವತಿಯರು ಪ್ರೇಮಕ್ಷಾಮದಿಂದ ಬಳಲುತ್ತಿರುವ ಸಮಸ್ಯೆ ತಲೆದೋರಿದೆ. ಈ ನಿಟ್ಟಿನಲ್ಲಿ ನಾವು ಹಿರಿಯಕ್ಕನ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಇಂದಿನ ಪೀಳಿಗೆಯವರಿಗೆ ಸಹಾಯ ಮಾಡಬೇಕಂತ ಅನಿಸಿದ್ದರಿಂದ ಈ ಯೋಜನೆ ರೂಪುತಳೆಯಿತು" ಎಂದರು.

ಈಗ ಜಾಹೀರಾತು ಸಮಯ
**************************
ಬಿಸಿರಕ್ತದ, ಗಟ್ಟಿಮುಟ್ಟಾದ, ರಮ್ಯ ಹೃದಯಕ್ಕೆ ಇಂದೇ ಸಂಪರ್ಕಿಸಿ. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ - ೧-೮೦೦-ಹೃದಯ-ಲಭ್ಯವಿದೆ. ತ್ವರೆ ಮಾಡಿ. ಕೆಲವೇ ಕ್ಷಣಗಳು ಬಾಕಿ ಇವೆ. ಹೃದಯವನ್ನು ಕದಿಯಿರಿ, ಮನಸ್ಸನ್ನು ಪುಕ್ಕಟೆಯಾಗಿ ಪಡೆಯಿರಿ!!!
*************************************

ಈಗ ವಾರ್ತಾ ಪ್ರಸಾರ ಮುಂದುವರಿಯಲಿರುವುದು.

ಈ ಯೋಜನೆಯ ಇನ್ನೋರ್ವ ಭಾಗೀದಾರರಾದ ಸುಪ್ತದೀಪ್ತಿಯವರು ಇಂದಿಲ್ಲಿ ಕರೆದಿದ್ದ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡುತ್ತ "ಇವತ್ತಿನ ಯುವಜನಾಂಗಕ್ಕೆ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅವಶ್ಯಕತೆಯಿದೆ. ಇದು ಸಾಧ್ಯವಾಗಬೇಕಾದರೆ ಪ್ರೇಮಕವನಗಳ ಕುರಿತು ಯುವಜನಾಂಗದಲ್ಲಿ ಆಸಕ್ತಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಯೋಜನೆ ಸಮಾಜೋದ್ಧಾರದ ಉದ್ದೇಶಗಳನ್ನು ಹೊಂದಿದೆ" ಎಂದು ತಿಳಿಸಿದರು.

ಹವಾಮಾನ ವರದಿ :
ಪ್ರೇಮಕವನಗಳನ್ನೋದಿ, ದೈಹಿಕ ಉಷ್ಣತೆಯಲ್ಲಿ ಸಾಧಾರಣದಿಂದ ಭಾರೀ ಮಟ್ಟದ ಏರುಪೇರುಗಳಾಗುವ ಸಂಭವವಿರುವುದರಿಂದ ಸಾರ್ವಜನಿಕರು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕೆಂದು ಹವಾಮಾನ ಇಲಾಖೆಯ ಪ್ರಕಟನೆಯೊಂದು ತಿಳಿಸಿದೆ.

ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು.