ನಿನ್ನೆ ಇಲ್ಲೊಂದು ಯಕ್ಷಗಾನ ಇತ್ತು. ತುಂಬ ಚೆನ್ನಾಗಿದ್ದರಿಂದ ನಿಮ್ ಜೊತೆ ಮಾತ್ರ ಹಂಚ್ಕೊಳ್ತಿದ್ದೇನೆ. ಬೇರೆ ಯಾರಿಗೂ ಹೇಳ್ಬೇಡಿ.
ಓದುಗರಿಗೆ ಸೂಚನೆ :-
೧) ಪಾತ್ರಧಾರಿಯು ಬೆಂಗ್ಳೂರಿನಲ್ಲಿ ನೆಲೆಸಿ ತುಂಬ ವರ್ಷಗಳಾಗಿರುವುದರಿಂದ ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಬಳಕೆಯಾಗಿದೆ.
೨) ಕೆಳಗಿನ ಕಥಾನಕವನ್ನ ಯಕ್ಷಗಾನದ ಧಾಟಿಯಲ್ಲೇ, ಶ್ರುತಿಬದ್ಧವಾಗಿ, ಸ್ವರಭಾರ, ಏರಿಳಿತ, ಆಂಗಿಕ ಮತ್ತು ವಾಚಿಕ ಅಭಿನಯದೊಂದಿಗೆ ಓದಿಕೊಂಡರೆ ರಸಾಸ್ವಾದನೆಗೆ ಒಳ್ಳೆಯದು.
೩) ಹಿ: - ಹಿಮ್ಮೇಳ. ಪಾ: ಪಾತ್ರಧಾರಿ, ನಾ: ನಾರದ ಮುನಿಗಳು.
೪) ಮೊದಲಿಗೆ ನಾಂದಿ ಪದ್ಯ. ನಂತರ ಒಡ್ಡೋಲಗದ ದೃಶ್ಯ.
***********************************
ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳಜನ ಧ್ಯಾನಿಸಿ ವಂದಿಸುತ ಶಾರದೆಗೆ ಶಕ್ರಾದ್ಯಮರರಿಂಗೆರಗಿ ನಾಂದಿಯೊಳು ವರವ್ಯಾಸ ಮುನಿಪದ ದ್ವಂದ್ವಕಾನತನಾಗಿ ನೆರೆದಿಹ ಕವಿಗಳ ಸಂದಣಿಗೆ ಬಲವಂದು ಪೇಳ್ವೆನೀ "ಅಧಿಕ ಪ್ರಸಂಗ" ಎಂಬ ಕಥಾಮೃತವ
ಹಿ : ಬಲ್ಲಿರೇನಯ್ಯಾ?
ಪಾ: ಮಾಯಾವಿ ವಿಕ್ರಮನೆಂದರೆ ಯಾರೆಂದು ತಿಳಿದಿದ್ದೀರಿ?
ಹಿ : ಇರುವಂಥ ಸ್ಥಳ
ಪಾ: ರಂಗಸ್ಥಳ
ಹಿ: ಹ್ಹ!!
ಪಾ: ವಿಶಾಲವಾದ ಬೆಂಗಳೂರು ಮಹಾನಗರವನ್ನೇ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡವನಿಗೆ ಎಲ್ಲ ಸ್ಥಳವೂ ರಂಗಸ್ಥಳವೇ.
ಹಿ: ಹ್ಹ!!
ಪಾ: ಸಪ್ತಸಾಗರಗಳನ್ನ ದಾಟಿ, ದಿಗ್ವಿಜಯವನ್ನ ಪೂರೈಸಿ, ಸ್ವಸ್ಥಾನವಾದ ಬೆಂಗಳೂರು ಮಹಾನಗರಿಗೆ ಮರಳಿ ಬಂದಿರುವ ಸಂದರ್ಭ. ಮಹಾಕಾವ್ಯವೊಂದನ್ನು ಬರೆಯುವ ಉದ್ದೇಶದೊಂದಿಗೆ ಮರಳಿ ಬಂದೆನಾದರೂ, ವೈಯಕ್ತಿಕ ಕಾರಣಗಳಿಂದ ಜೀವಂತಕಾವ್ಯವೊಂದರೊಂದಿಗೆ ಮಗ್ನನಾಗುವ ಪರಿಸ್ಥಿತಿಗೆ ಸಿಲುಕಿಕೊಂಡೆ.
ಹಿ: ಜೀವಂತಕಾವ್ಯ? ಹ್ಹ!!!
ಪಾ: ಮಾಯಾವಿ ವಿಕ್ರಮ, ನಿನ್ನ ಕವನಗಳೆಲ್ಲಿ?, ಎಂದು ನನ್ನ ಪ್ರಜಾಪರಿವಾರವರ್ಗದವರೆಲ್ಲ ಒಕ್ಕೊರಲಿನಿಂದ ಕೇಳುತ್ತಿದ್ದಾರೆ. ಏನು ಮಾಡೋಣ? ಇದೆಲ್ಲ ಹೀಗೆಯೇ ಆಗಬೇಕೆಂದು ವಿಧಿಲಿಖಿತವಾಗಿದ್ದರೆ ಅದನ್ನು ತಪ್ಪಿಸಲು ನಾನ್ಯಾರು?
ಹಿ: ಹ್ಹ!!
ಪಾ: ಪಂಡಿತೋತ್ತಮರು ಮೆಚ್ಚಿ ’ವಿಕ್ಕಿ’ ಕವಿತೆಗಳೆಂದೂ, ಅರ್ಥವಾಗದೆ ಮಂಡೆಪೆಟ್ಟು ಮಾಡಿಕೊಂಡ ಮಂದಿ ’ವಿಕ್ಸ್’ ಕವಿತೆಗಳೆಂದೂ, ವಿಧ ವಿಧ ಹೆಸರುಗಳೊಂದಿಗೆ ನನ್ನ ಕವನಗಳನ್ನು ಗುರುತಿಸುತ್ತಾರೆ. ಕವನಗಳ ಮೂಲಕವೇ ಅಂಗ, ವಂಗ, ಕಳಿಂಗ, ಕಾಂಭೋಜವೇ ಮೊದಲಾದ ಛಪ್ಪನ್ನಾರು ದೇಶಗಳಲ್ಲಿ ಲೋಕೋತ್ತರ ಪ್ರಸಿಧ್ಧಿಯನ್ನು ಪಡೆದಿರುವಾಗ.....ಇದೇನನ್ನ ಕೇಳುತ್ತಿದ್ದೇನೆ?...
ಹಿ: ಏನ ಕೇಳಿದೆ ನಾನು? ಏನ? ಏನ?...ಏನ ಕೇಳಿದೆ ನಾನು? ಬಿಡಲಾರೆ....ನಾ...ಬಿಡಲಾರೆ...
ಪಾ: ಅದಾರೋ ಪರದೇಸಿಯಾದ ಜಗಲಿ ಭಾಗವತರಂತೆ...ನನ್ನ ಕುರಿತು ಲಘುವಾಗಿ ಬರೆಯುತ್ತಿದ್ದಾರೆ ಎನ್ನುವ ವರ್ತಮಾನ ರಾಜದೂತರಿಂದ ತಿಳಿದುಬಂದಿದೆ....ನಾನು ಬೆಂಗಳೂರು ಮಹಾನಗರಿಯನ್ನು ತಲುಪಿದ ಮೇಲೆ ಕರೆ ಮಾಡುತ್ತೇನೆ ಅಂದವರು ಈ ಕೆಲಸಕ್ಕೆ ಕೈ ಹಾಕಿದರೇ?..ಎಷ್ಟು ಧೈರ್ಯ? ಎಂತಹ ಅಧಟು?...ಅವರು ಎಲ್ಲಿಯೇ ಅಡಗಿರಲಿ.....ಅತಳ, ವಿತಳ, ಸುತಳ, ಪಾತಾಳ, ರಸಾತಳ, ಮಹಾತಳ, ತಳಾತಳದಲ್ಲೇ ಅಡಗಿರಲಿ, ಇಲ್ಲಾ ಭೂಗರ್ಭದಲ್ಲೇ ಅಡಗಿರಲಿ, ಅವರನ್ನ ಗೂಗಲಿಸಿ, ಹಿಡಿದೆಳೆತಂದು ತಕ್ಕ ಶಾಸ್ತಿಯನ್ನು ಮಾಡುತ್ತೇನೆ....
ಹಿ: ಸಮಾಧಾನ...ಸಮಾಧಾನ....
ಪಾ: ಹ್ಹ..ಇದೀಗಷ್ಟೇ ಬೇಹುಗಾರರಿಂದ ತಿಳಿದುಬಂದ ಸಮಾಚಾರ...ಅವರು ಲೋಕಕಲ್ಯಾಣಾರ್ಥವಾಗಿ ಶ್ರದ್ಧಾಭಕ್ತಿಯಿಂದ, ವಾರಾಂತ್ಯದಲ್ಲಿ ದಿನವೊಂದಕ್ಕೆ ೧೮ ಗಂಟೆಗಳಷ್ಟು ಘನಘೋರ ನಿದ್ದೆಯನ್ನು ಮಾಡುತ್ತಾರೆ ಎನ್ನುವ ಮಾಹಿತಿ....ನಿದ್ದೆಯಲ್ಲಿದ್ದವರನ್ನ, ರಣಕ್ಕೆ ಬೆನ್ನು ಹಾಕಿ ಓಡುತ್ತಿರುವವರನ್ನ, ನಿರಾಯುಧರನ್ನ ಘಾಸಿಗೊಳಿಸಬಾರದು ಎನ್ನುವುದು ಕ್ಷಾತ್ರಧರ್ಮ....ಹ್ಹಾ...ಈಗೇನು ಮಾಡಲಿ? ಇವರನ್ನ ನಿದ್ದೆಯಿಂದ ಎಬ್ಬಿಸುವ ವಿಧಾನ ಹೇಗೆ?
ಹಿ: ಮಸಾಲೆ ದೋಸೆಯ ವಾಸನೆ ತೋರಿಸಿದರೆ?
ಪಾ: ಹ್ಹಾ...ಭಲೇ...ಒಳ್ಳೆಯ ಯೋಜನೆ. ಇಗೋ, ನಿಮಗೆ ನನ್ನ ಕಂಠೀಹಾರವನ್ನ ಪಾರಿತೋಷವಾಗಿ ನೀಡುತ್ತಿದ್ದೇನೆ...ಯಾರಲ್ಲಿ? ಇವರಿಗೆ ಸಾವಿರ ಬಂಗಾರದ ವರಹಗಳನ್ನು ನೀಡಿ ಯಥೋಚಿತವಾಗಿ ಸನ್ಮಾನಿಸಿ....
ಹಿ: ಧನ್ಯೋಸ್ಮಿ.
ಪಾ: ಮಸಾಲೆ ದೋಸೆ ಹೇಗಿರಬೇಕು?
ಹಿ: ಹೇಗಿರಬೇಕು?
ಪಾ: ರುಚಿಕಟ್ಟಾಗಿರಬೇಕು...ರುಚಿ ಕಟ್-ಆಗಿರಬೇಕು...(ವ್ಯಂಗ್ಯ ನಗು)....ಹ್ಹ....ರಾಜಪಾಕಶಾಸ್ತ್ರಜ್ಞರಿಂದ ದೋಸೆಯನ್ನು ತಯಾರಿಸಿದ್ದಾಗಿದೆ...ಪದಾತಿ ದಳ, ಅಶ್ವಸೈನ್ಯ, ಗಜಸೈನ್ಯವೂ ಸಿದ್ಧವಾಗಿದೆ. ಇನ್ನೇನು ತಡ? ಹೊರಡೋಣವಂತೆ.....
(ನಾರದ ಮುನಿಗಳ ಪ್ರವೇಶವಾಗುವುದು).
ನಾ: ಭಾಗವತ.....ಭಾಗವತ.....
ಪಾ: ನಾರದ ಮುನಿಪುಂಗೋತ್ತಮರೇ...ಇದೋ ವಂದಿಸಿಕೊಂಡಿದ್ದೇನೆ.....ಆಸೀನರಾಗಿ.
ನಾ: ಆಯ್ಯಾ ಮಾಯಾವಿ ವಿಕ್ರಮ. ನಿನ್ನ ರಣೋತ್ಸಾಹವನ್ನು ನೋಡಿ, ಅನಾಹುತವನ್ನು ತಪ್ಪಿಸಲೋಸುಗ ಆತುರಾತರವಾಗಿ ಬಂದಿದ್ದೇನೆ.
ಪಾ: ಅನಾಹುತವೇ?
ನಾ: ಹೌದಯ್ಯ. ಜಗಲಿ ಭಾಗವತರು ಅಕ್ಷೋಹಿಣಿ ಸೈನ್ಯದ ಬಲವುಳ್ಳವರು. ಅಲ್ಲದೇ ಅವರ ಪುಣ್ಯನಾಮ ಸ್ಮರಣೆಯನ್ನು ಮಾಡಿದರೆ ನಿನಗೆ ಸನ್ಮಂಗಲ ಉಂಟಾಗುವುದಯ್ಯಾ..ಹಾಗಾಗಿ, ಈ ಯುದ್ಧವನ್ನು ಕೈ ಬಿಡು.
ಪಾ: ಮುನಿಪೋತ್ತಮರೇ, ನಿಮ್ಮ ಮಾತುಗಳನ್ನು ಮೀರಲಾರೆ. ಇಗೋ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇನೆ...
ನಾ: ಒಳ್ಳೆಯದಾಗಲಿ. ಭಾಗವತ......ಭಾಗವತ.....
ಪಾ: ನಾರದ ಮಹರ್ಷಿಗಳ ಸಲಹೆಯನುಸಾರ ಯುದ್ಧವನ್ನು ಕೈಬಿಟ್ಟಿದ್ದೇನೆ.....ಹ್ಹಾ....ಬಹಳ ಆಯಾಸವುಂಟಾಗಿದೆ....ವಿಶ್ರಮಿಸಕೊಳ್ಳಬೇಕು....ಯಾರಲ್ಲಿ? ರಾಜಸಖಿಯರನ್ನು ಬರಹೇಳಿ.
ಹಿ: ಅವರೆಲ್ಲ ಮಹಿಳಾ ವಿಮೋಚನಾ ಸಭೆಗೆ ತೆರಳಿದ್ದಾರಯ್ಯ....
ಪಾ: ಹ್ಹಾ...ಎಂತಹ ದುರ್ಭರ ಪ್ರಸಂಗ ಇದು.
ಹಿ: ಅಧಿಕ ಪ್ರಸಂಗವೇ ಹೌದು.
ಪಾ: ಹ್ಹ...
(ಆಗ ಕರೆಂಟು ಕೈ ಕೊಟ್ಟಿದ್ದರಿಂದ ಮುಂದೇನಾಯ್ತೆಂದು ಸರಿಯಾಗಿ ಗೊತ್ತಾಗ್ಲಿಲ್ಲ. ಗೊತ್ತಿದ್ದವರು ತಿಳಿಸಿ.)
ಹಿ: ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ.........ಮಂಗಳಂ
**********************************************************