April 29, 2008

ಬಾಲಕನ ಅರಣ್ಯರೋದನ

ಮೊನ್ನೆ ಒಂದು ಪೌರಾಣಿಕ ನಾಟಕವನ್ನ ನೋಡಲಿಕ್ಕೆ ಹೋಗಿದ್ದೆ. ಅದರ ಒಂದು ದೃಶ್ಯದ ತುಣುಕು ನಿಮ್ಮ ಓದಿಗೆ.
*********************************************************************
(ರಾಜಬೀದಿಯ ಹಿನ್ನೆಲೆಯ ತೆರೆ. ಹರಿದ ಬಟ್ಟೆಗಳನ್ನು ತೊಟ್ಟ, ಕೆದರಿದ ತಲೆಯ ಬಾಲಕನೊಬ್ಬನು ವಿಧವಿಧವಾಗಿ ವಿಲಪಿಸುತ್ತಾ ರಂಗದ ಮೇಲೆ ಆಗಮಿಸುವನು).

ಬಾಲಕ : ಅಯ್ಯೋ, ಇದೆಂತಹ ದುರ್ಭರ ಪ್ರಸಂಗ ನನ್ನ ಬಾಳಿನಲ್ಲಿ ಬಂದೊದಗಿತಲ್ಲ. ಇದನ್ನೆಲ್ಲ ನೋಡುವ ನನ್ನ ಕಣ್ಣುಗಳು ಇಂಗಿಹೋಗಬಾರದೆ? ಇದನ್ನೆಲ್ಲ ಅನುಭವಿಸುವ ನನ್ನ ಹೃದಯ ಸಿಡಿದು ಹೋಗಬಾರದೆ? ನಾನು ನಿಂತಿರುವ ಭೂಮಿ ಬಿರಿದು ನನ್ನನ್ನು ತಿನ್ನಬಾರದೇ? ಹರಹರ....ಶಿವಶಿವ...ಅಕಟಕಟಕಟಕಟಕಟ.....(ಲಬೋಲಬೋ ಎಂದು ಎದೆ ಎದೆ ಬಡಿದುಕೊಳ್ಳುತ್ತ, ಕೈಗಳನ್ನು ಮೇಲ್ಮುಖವಾಗಿ ಹಿಡಿದು, ನಿಧಾನವಾಗಿ ಒಂದೊಂದೆ ಹೆಜ್ಜೆಯನ್ನ್ನಿಟ್ಟು ರಂಗದ ಮಧ್ಯಭಾಗಕ್ಕೆ ಬರುವನು. )

(ತಲೆಗೆ ಮುಂಡಾಸು ಸುತ್ತಿಕೊಂಡ, ಕೈಯಲ್ಲಿ ತಾಳ ಹಿಡಿದಿರುವ ವ್ಯಕ್ತಿಯೊಬ್ಬನು ರಂಗದ ಮೇಲೆ ಆಗಮಿಸುವನು).
ವ್ಯಕ್ತಿ : ಅಯ್ಯಾ ಬಾಲಕ. ನಿನ್ನ ಹೃದಯವಿದ್ರಾವಕ ರೋದನವನ್ನು ನನ್ನ ಈ ಎರಡು ಕಣ್ಣುಗಳಿಂದ ನೋಡಲಾಗುತ್ತಿಲ್ಲ. ನಿನ್ನ ವ್ಯಥೆ ಏನು?

(ಬಾಲಕನು ಕಣ್ಣೀರೊರೆಸಿಕೊಳ್ಳಲು ನೋಡುವನು. ಕೂಡಲೇ ಪ್ರೇಕ್ಷಕರೊಬ್ಬರು ಪಕ್ಕದಲ್ಲಿರುವ ಹವ್ಯಗೂಸೊಂದರಿಂದ (ಹವ್ಯಕ + ಕೂಸು - ಆದೇಶಾಗಮ ಲೋಪ ಸಂಧಿ) ಕರವಸ್ತ್ರವೊಂದನ್ನು ಪಡೆದು ಬಾಲಕನಿಗೆ ನೀಡುವರು).
ಬಾಲಕ : ಅಯ್ಯಾ, ನನ್ನ ಕಥೆಯನ್ನು ಏನೆಂದು ಹೇಳಲಿ? ನನ್ನ ಪಾಲಕರಿಂದ ನಾನು ತ್ಯಕ್ತನಾಗಿದ್ದೇನೆ.

ವ್ಯಕ್ತಿ : ಅಹುದೇ? ಈ ಕಲಿಗಾಲದಲ್ಲೂ ತಮ್ಮ ಮಕ್ಕಳನ್ನು ಪಾಲಕರು ಬೀದಿಗೆ ಬಿಡುವರೇ? ಆಯ್ಯೋ, ಎಂತಹ ಕಾಲವು ಪ್ರಾಪ್ತವಾಯಿತು? ಛೆ..ಛೆ...ಛೆ...

ಬಾಲಕ : ಅಹುದು. ನಾನು ಆಂಗ್ಲ ಬಾಲಕ. ನನ್ನ ಪಾಲಕರು ತಮ್ಮ ಕನ್ನಡದ ಪುತ್ರಿಯನ್ನು ಚೆನ್ನಾಗಿಯೇ ಪೋಷಿಸುತ್ತಿಹರು....

ವ್ಯಕ್ತಿ : ಅಹೋ!! ಮಕ್ಕಳಲ್ಲೂ ಮಲತಾಯಿಧೋರಣೆಯೆ? ಶಾಂತಂ ಪಾಪಂ...ಶಾಂತಂ ಪಾಪಂ...

ಬಾಲಕ : ನನಗೆ ಜೀವನದಲ್ಲಿ ಜಿಗುಪ್ಸೆ ಮೂಡಿದೆ. ಇದೂ ಒಂದು ಜೀವನವೇ? ಇದೋ, ನಾನು ಹಿಮಾಲಯಕ್ಕೆ ತೆರಳಿ ನಿರ್ವಾಣ ಹೊಂದುತ್ತೇನೆ....

ವ್ಯಕ್ತಿ : ಅಯ್ಯಾ ಬಾಲಕ. ತಡೆ. ಎಲ್ಲದಕ್ಕೂ ತಾಳ್ಮೆಯೇ ಭೂಷಣವು. ಅಗೋ, ನಮ್ಮ ರಾಜವೈದ್ಯೆಯಲ್ಲಿ ವಿಚಾರಿಸೋಣ. ನಿನಗೂ ಸಾಂಗತ್ಯದ, ಸಾಹಚರ್ಯದ, ಒಡನಾಟದ ಅಗತ್ಯವಿರುವುದೇನೋ...

ಬಾಲಕ : ಅಹುದೇ? ನಾನೀಗ ಏನು ಮಾಡಬೇಕೆಂದು ಹೇಳುವಂತವರಾಗಿ.

ವ್ಯಕ್ತಿ : ಕೇಳುವಂತವನಾಗು...ನೀನು ಸೂರ್ಯೋದಯಕ್ಕಿಂತ ಅರ್ಧ ಗಂಟೆ ಮುನ್ನ, ಒದ್ದೆ ಪೀತಾಂಬರವನ್ನುಟ್ಟು, ಖಾಲಿ ಹೊಟ್ಟೆಯಲ್ಲಿ, "ಓಂ ಶ್ರೀ ಜಗಲಿ ಭಾಗವತಾಯ ನಮಃ" ಎಂದು ಒಂದು ಸಾವಿರ ಬಾರಿ ಪುಣ್ಯನಾಮ ಸ್ಮರಣೆಯನ್ನು ಮಾಡು.

ಬಾಲಕ : ಧನ್ಯೋಸ್ಮಿ. ಹಾಗೆಯೇ ಆಗಲಿ. ನಿಮ್ಮ ಪಾದಾರವಿಂದಗಳಿಗೆ ವಂದಿಸಿಕೊಂಡಿದ್ದೇನೆ.

ವ್ಯಕ್ತಿ : ತಥಾಸ್ತು. ನಿನಗೆ ಮಂಗಳವಾಗಲಿ.

April 6, 2008

ಕುಂದಗನ್ನಡದಲ್ಲಿ ಮೊದಲ ಕಾದಂಬರಿ

ಕುಂದಗನ್ನಡದಲ್ಲಿ ಬರೆದ ಮೊದಲ ಕಾದಂಬರಿ ಬಿಡುಗಡೆಯಾಗಿದೆ. ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳರು ಬರೆದ ’ಹಳೆಯಮ್ಮನ ಆತ್ಮಕಥೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಉದಯವಾಣಿಯ ಲೇಖನವನ್ನು ಓದಿ.