ಕನಸು ಕಾಣದ ಕಂದ
ಓದುಗರಿಗೆ ಸೂಚನೆ :- ಇದೊಂದು ಕಂದಪದ್ಯ*ದ ಧಾಟಿಯಲ್ಲಿರುವ ಘನಗಂಭೀರ ಕವನವಾಗಿದ್ದು, ಗಂಭೀರವಾಗಿಯೇ ಓದಿಕೊಳ್ಳತಕ್ಕದ್ದೆಂದು ಸೂಚನೆ.
**********************************
ಭಾರೀ ಜಟಾಪಟಿ ನಿನ್ನೆ ರಾತ್ರಿ,
ಇದ್ದದ್ದು ಇಬ್ಬರೇ ಇಬ್ಬರು,
ಕನಸು ಮತ್ತು ನಾನು
ಹುಯ್ಯಲಿಟ್ಟುಕೊಂಡಿದ್ದೆ ನಾನು
’ತುಂಬ ಬೋರಾಗುತ್ತಿದೆ ಕಣೋ
ಒಂದಾದರೂ ಕನಸು ಕೊಡು
ಯಾವುದಾದರೂ ಸರಿಯೇ’
’ಆಫೀಸಿನ ಕೆಂಪು ಕೆಂಪು ಆರತಿ,
ಪಕ್ಕದ ಮನೆಯ ಕೀರುತಿ,
ಅಥವಾ ಜಿ-ಟಾಕಿನ ಭಾರತಿ,
ಯಾರಾದರೂ ಸರಿಯೇ’
ನನ್ನೆದೆಯಲ್ಲಾಕೆ ಹೂತುಹೋದಂತೆ
ಬಿಸಿಯುಸಿರು ಬೆಚ್ಚಗಾಗಿಸಿದಂತೆ,
ಚಂದ ಕನಸು ಕೊಡು ಮಾರಾಯ,
ಏನಾದರೂ ಸರಿಯೇ’
ಮುಖಗಂಟಿಕ್ಕಿಕೊಂಡಿತು ಕನಸು
’ಎಲ್ಲಾರ್ಗೂ ಅದೇ ಬೇಕು ಗುರೂ,
ಸ್ಟಾಕು ಖಾಲಿ, ನಾಳೆ ನೋಡುವ,
ಅದೇನು ಲವ್ವು ಮಾಡ್ತಾರೋ ಜನ’
ಮತ್ತೆ ದುಂಬಾಲುಬಿದ್ದೆ ನಾನು,
’ಹೋಗಲಿ ಬೇರಿನ್ನಿನ್ನೇನಾದರೂ,
ಬಿಲ್ ಗೇಟ್ಸು, ಸ್ಟೀವ್ ಜಾಬ್ಸು ಥರ,
ಕೊಪ್ಪರಿಗೆ ದುಡ್ಡು ಮಾಡಿದ ಹಾಗೆ’
ಗಹಗಹಿಸಿ ನಕ್ಕಿತು ಕನಸು
’ನಿನಗೆಂಥ ಮರುಳೋ ಭಾಗ್ವತ,
ಮೊದಲೇ ಬುಕ್ ಮಾಡೊದಲ್ವಾ?
ವೈಟಿಂಗ್ ಲಿಸ್ಟಿನಲ್ಲಿದ್ದೀ ನೀನೀಗ’
ಕೆರೆದುಕೊಂಡೆ ಇದ್ದಬದ್ದ ತಲೆ
’ಏನೋ ಒಂದು ಕಣೋ, ಪ್ಲೀಸ್,
ಆಸ್ಕರ್ರು, ನೋಬೆಲ್ಲು, ವಿಂಬಲ್ಡನ್ನು,
ರೆಬೆಲ್ಲು , ಸೈನಿಕ, ಪ್ರಧಾನಮಂತ್ರಿ’
ಕುಪಿತಗೊಂಡಿತು ಕನಸು
’ನನ್ನದೇನು ಶಾಪಿಂಗ್ ಮಾಲಾ?
ನಿನಗೇ ಗೊತ್ತಿಲ್ಲ, ಏನು ಬೇಕಂತ,
ಹೋಗಿ ತೆಪ್ಪಗೆ ಬಿದ್ದುಕೋ ಸುಮ್ಮನೇ’
ಇವತ್ತೀಗ ನಾನು ಬಿದ್ದುಕೊಳ್ಳುತ್ತಿದ್ದೇನೆ,
ಇನ್ನೆರಡೇ ನಿಮಿಷ, ಮತ್ತೆ ಗೊರಕೆ.
ಆರತಿಯೂ ಇಲ್ಲ, ಕೀರುತಿಯೂ ಇಲ್ಲ...
ನನ್ನ ಬಾಸು, ಪ್ರಾಜೆಕ್ಟು...ಡೆಡ್-ಲೈನು...
*ಕಂದಪದ್ಯ = ಶಿಶುಗೀತೆ,
ಶೀರ್ಷಿಕೆ ಕೃಪೆ : - ’ಕನಸು ಕಂಡ ಕಂಸ’ ಯಕ್ಷಗಾನ ಪ್ರಸಂಗಕೃರ್ತರ ಕ್ಷಮೆಕೋರಿ.