ಎರು
'ಎರು' = ಇರುವೆ.
'ಸಕ್ರೆ ಚೆಲ್ಬೇಡ. ಎರು ಬತ್ತ್ (ಬರತ್ತೆ)'.
'ಆ ಲಾಡಿನ್ (ಲಡ್ಡುವಿನ) ಪಾತ್ರ ಮುಚ್ಚಲಿಲ್ಯಾ? ಎರು ಬಂತಾ ಕಾಣ್'.
'ಕೆಳಗ್ ಬೀಳಿಸ್ದೇ ತಿನ್ನ್. ಎರು ಬತ್ತ್'.
ಎರು ಬಗ್ಗೆ ಬರೀಲಿಕ್ಕೆ ತುಂಬ ವಿಷಯ ಇದೆ. ಒಳ್ಳೆಯ ದಿನ (ಅರಿ ಸಮಾಸ ಗೊತ್ತಲ್ಲ? - ಸಮ್ಯಕ್+day = Sunday) ಸಿಕ್ಕಾಗ ಬರೀತೇನೆ.
ನಮ್ಮೂರಿನ ಎರುಗಳಲ್ಲೂ ತುಂಬ ವಿಧವಿದೆ. ಅವುಗಳ ಜೀವಶಾಸ್ತ್ರೀಯ ಹೆಸರುಗಳು ಗೊತ್ತಿಲ್ಲ. ನಮ್ಮೂರಿನ ಹೆಸರುಗಳಷ್ಟೇ ಗೊತ್ತು. ನಿಮ್ಮೂರಲ್ಲಿ ಏನಂತಾರೆ ಅಂತ ಬರೆಯಿರಿ.
'ಓಡೆರು' = ಬಹುಶಃ ಓಡುವ ಎರು ಇರ್ಬೇಕು. ಇದು ನಿಂತಲ್ಲಿ ನಿಲ್ಲಲ್ಲ. ಯಾವಾಗ್ಲೂ ಓಡ್ತಾನೆ ಇರತ್ತೆ. ಸಿಕ್ಕಾಪಟ್ಟೆ ಓಟ. ಹಾಗಾಗಿ ಇದು ಹೆಚ್ಚ್ ಹೊತ್ತು ಒಂದೇಕಡೆ ಇರಲ್ಲ. ಕಪ್ಪು ಬಣ್ಣ. ತುಂಬ ಚಿಕ್ಕವು, ಜೊತೆಗೆ ಕಚ್ಚೋದು ಇಲ್ಲ. ಹಾಗಾಗಿ ಇದು ತೀರ ನಿರುಪದ್ರವಿ ಎರು.
'ನೈಯರು' - ಇದೂ ಕೂಡ ತುಂಬ ಚಿಕ್ಕ ಎರು. ಆದರೆ ಮಹಾನ್ ಘಾಟಿ. ಕೆಂಪು ಬಣ್ಣ. ಬಂದರೆ ಅಕ್ಷೋಹಿಣಿ ಸೈನ್ಯ. ಸುಲಭದಲ್ಲಿ ಹೋಗೋದೂ ಇಲ್ಲ, ಕಚ್ಚಿದರೆ ತುಂಬ ಉರಿ. ಹಾಗಾಗಿ ಇದು ಉಪದ್ರವಿ ನಂಬರ್ ೧.
'ಕೆಂಪೆರು' - ಇವು ಆಕಾರ, ಗಾತ್ರ, ಸೈನ್ಯಬಲ, ಮೀಸೆಬಲ (ಕಚ್ಚಿದಾಗ) ಎಲ್ಲದರಲ್ಲೂ 'ನೈಯರು' ತರಹ. ಸ್ವಲ್ಪ ಕೆಂಪು ಜಾಸ್ತಿ. ಆದರೆ ಇದನ್ನ 'ನೈಯರು'ಗಿಂತ ಸುಲಭದಲ್ಲಿ ಓಡಿಸಬಹುದು.
'ಕಟ್ಟೆ' - ಇವು ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಆದರೆ ಸೈನ್ಯ ಯಾವಾಗಲೂ ಸಣ್ಣದು. ಕಚ್ಚುವುದಿಲ್ಲ. ಕಪ್ಪು ಬಣ್ಣ. ಎರುವಿನ ಜಾತಿಯಲ್ಲಿ ಇವಕ್ಕೆ 'ಕ್ಲಾಸಿಕಲ್ ಎರು' ಅಂತ ಕರೀಬಹುದು :-)
'ಕಟ್ಟೆರು' - ಆಕಾರ, ಗಾತ್ರದಲ್ಲಿ ಇದು ಕಟ್ಟೆ ತರಹವೇ. ಸೈನ್ಯಬಲ ಸಣ್ಣದು. ಆದರೆ ಸ್ವಲ್ಪ ಕಪ್ಪು ಜಾಸ್ತಿ. ಕಚ್ಚಿದರೆ ನಮ್ಮೂರಿನ ಶ್ರೀನಿವಾಸ ಡಾಕ್ಟರರ ಇಂಜೆಕ್ಷನ್ ಚುಚ್ಚಿದ ಹಾಗಾಗತ್ತೆ :-)
'ಬೆದರುಕಟ್ಟೆ' - ಇದು ನಿಜವಾಗಿಯೂ ಬೆದರಿಸುವ ಕಟ್ಟೆ. ಎರುವಿನ ಜಾತಿಯಲ್ಲೆ ದೊಡ್ಡವು. ತುಂಬ ವಿರಳ. ಕೆಂಪುಮೂತಿ. ಓಡಾಡುವಾಗ ಸ್ವಲ್ಪ ರಾಜಗಾಂಭೀರ್ಯ. ಆದರೆ...ಕಚ್ಚಿದರೆ ದೇವರೇ ಗತಿ. ಇಡಿ ಒಂದು ದಿನ 'ಅಮ್ಮಾ, ಊಊಊಊ' ಅಂತ ಅಳ್ತಾ ಕೂರ್ಬಹುದು.
ಮೇಲಿನ ಎರುಗಳೆಲ್ಲ domestic ಎರುಗಳು:-) ನೀವು ಎಚ್ಚರವಹಿಸದಿದ್ದರೆ, ರಾತ್ರೋರಾತ್ರಿ ಮುನ್ಸೂಚನೆ ಕೊಡದೆ ಪದಾತಿ ದಳದೊಂದಿಗೆ ಮನೆಗೆ ದಾಳಿ ಇಡುವಂತಹವು.
'ಚೌಳಿ' - ಇದು non-resident ಎರು. ಹೆಚ್ಚಾಗಿ ಗೇರುಮರದ ಎಲೆಗಳ ಮಧ್ಯೆ ಮನೆಮಾಡಿಕೊಂಡಿರುತ್ತದೆ. ಕೆಂಪು ಕೆಂಪು, ರಣ ಭಯಂಕರ. ಮರ ಹತ್ತಿದಾಗ ನೀವೇನಾದರೂ ಗೊತ್ತಿಲ್ಲದೆ ಇದಕ್ಕೆ ಕೈಹಾಕಿದಿರೋ......'ಮಂಗಳಂ' ಅಷ್ಟೇ :-))
'ದುಡ್ಡು' - ಎರು ಕಚ್ಚಿ ಉಬ್ಬಿದ ಚರ್ಮದ ಭಾಗ.
ಬಹುಶಃ ಎರು ಕಚ್ಚಿಸಿಕೊಂಡ ಮಕ್ಕಳನ್ನ ಸುಮ್ಮನಿರಿಸಲಿಕ್ಕಾಗಿ ಈ ಪದ ಬಂದಿರಬೇಕು.
'ಎರು ಕಚ್ತಾ? ಓಹೋ, ನಮ್ಮನೆ ಮಗುಗೆ ಮಸ್ತ್ ದುಡ್ಡ್ ಸಿಕ್ಕಿತ್ತಲೇ ಇವತ್ತ್' :-)
ಬೋನಸ್ ಪ್ರಶ್ನೆಗೆ ಉತ್ರ -
'ಚಣಿಲ' - ಅಳಿಲು, ಇಣಚಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ. ತುಳುವಿನಲ್ಲೂ ಇದೇ ಬಳಕೆ ಇದೆ. ಸುನಿಲ್-ಗೆ ಥ್ಯಾಂಕ್ಸ್.
'ಮರದ್ಮೇಲ್ ಚಣಿಲ ಕಾಣ್. ಎಷ್ಟ್ ಚಂದ ಇತ್ತಲ್ದಾ?'.
'ಅಲ್ಕಾಣ್ ಚಣಿಲ. ಹ್ಯಾಂಗ್ (ಹೇಗೆ :-) ಮರ ಹತ್ತತ್ತ್ ಕಾಣ್'.
'ಚಣಿಲ' ಚಂದದ ಮುದ್ದಿನ ಪ್ರಾಣಿ. ಪಾಪದ್ದು (ಸುಪ್ತದೀಪ್ತಿ ಹೇಳಿದ ಹಾಗೆ). ಎಷ್ಟು ಪಾಪದ್ದು ಅಂದ್ರೆ ತ್ರೇತಾಯುಗದಲ್ಲೇ ಶ್ರೀರಾಮನಂಥ ಶ್ರೀರಾಮನೇ ಅದಕ್ಕೆ 'ಮೂರು ನಾಮ' ಎಳೆದಿದ್ದ :-)
ಚಣಿಲ ತುಂಬ ಕ್ರೀಯಾಶೀಲ ಪ್ರಾಣಿ. ಹಾಗಾಗಿ ಅದನ್ನ ಪ್ರಶಂಸಾತ್ಮಕವಾಗಿ ಬಳಸುವುದೂ ಉಂಟು.
"ಅಂವ ಚಣಿಲನ ಮರಿ. ಭಾರಿ ಚುರ್ಕ್ (ಚುರುಕು)"
ಓದುಗ ದೊರೆಗಳ ಬೇಡಿಕೆಯ ಪದಗಳು -
ಹಸರೊಣೆ, ಗಿಂಡು, ಪೋಂಕು.
ಶಾಂತಲಾ ('ಬಂಡಿ'ಗಟ್ಟಲೆ ಬರೆಯುವವರಲ್ಲ, ಇನ್ನೊಬ್ಬರು, ನಮ್ಮ reviewer) ಒಂದಿಷ್ಟು ಪದಗಳನ್ನು ಕೇಳಿದ್ದರು. ಅವು ಯಾವುದಂತ ಮರೆತು ಹೋಗಿದೆ (ವಯಸ್ಸಾಗ್ತ ಬಂತು, ಏನು ಮಾಡೋದು? :-)). ಮತ್ತೊಮ್ಮೆ ಕಳಿಸಿ :-)
ಇವತ್ತಿನ ಸವಾಲು :-
ಈ ಶಬ್ದದ ಅರ್ಥ ಏನು - 'ಹಸರೊಣೆ' ಅಥ್ವಾ 'ಹಸ್ರೋಣೆ'?
ಬೋನಸ್ ಪ್ರಶ್ನೆ :-
ಇದು ಯಾರ ಕಥೆ - 'ಇಣಚಿ ಮತ್ತು ಮರ'?
ಸುಳಿವು - ಇವರು ಹಲವಾರು ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ವಿಜೇತ ಕಥೆಗಾರ್ತಿ.
16 comments:
ಈ ಎರು-ಇರು ನಂಟನ್ನು ಸ್ವಲ್ಪ ತಿಳಿದುಕೊಂಡರೆ ಎಷ್ಟೊಂದು ವಿಷಯಗಳಿಗೆ ಸರಿಯಾದ ವಿವರಣೆ ನೀಡಬಹುದು.
೧. ಇಕ್ಕೆಲ - ಎರಡು ಕೆಲ (ಇದಕ್ಕೆ ಕುಂದಾಪುರದ ಕಡೆ ಹೇಗೆ ಹೇಳ್ತಾರೆ ?)
ಕೆಲ - Side ("....ಬಾಹುಬಲಿಯು ತನ್ನ ದಕ್ಷಿಣ ಬಾಹುವ ಕೆಲದಲ್ಲಿನಿಂದ ಚಕ್ರಮನಾಗಳ್ ಸಾಹಸಮಂ ಕಂಡೀ..." ಅಂತ ಒಂದು ಕೃತಿಯಲ್ಲಿ ಬರತ್ತೆ).
೨. ಇಬ್ಭಾಗ - ಎರಡು ಭಾಗ
ಅಂದರೆ, ಕನ್ನಡದಲ್ಲಿ ಸಂಧಿ ಮಾಡುವಾಗ ಮೊದಲ ಪದ ಎರ್ ಅಂತ ಬಂದರೆ ಅದು "ಇರ್" ಆಗುತ್ತದೆಯೇ ?
ಜೆ ಬಿ,
ಬ್ಲಾಗ್ ಸೊಗಸಾಗಿದೆ. ಎಷ್ಟಕೊಂದು ಮಾಹಿತಿ! ಚಣಿಲ, ಚೌಳಿ ಇವನ್ನೆಲ್ಲ ನಾವೂನೂ ಬಾಲ್ಯದಲ್ಲಿ ಉಪಯೋಗಿಸ್ತ ಇದ್ದ ಪದಗಳೇನೇ. ಈಗೆಲ್ಲ ಅವು ನೆನಪಾಗಿ ಖುಶಿ.
-ಟೀನಾ.
ಹಸ್ರೋಣೆ - ತರ್ಕಾರಿ.
ಇಣಚಿ - ಚಣಿಲ.
clue ಸಾಕಾಯ್ಲಾ
ಓಹ್. ಎರು ಅಂದ್ರೆ ಇರುವೆನಾ..?? ನಮ್ಮಲ್ಲಿ ಅದಕ್ಕೆ 'ಯರ' ಅಂತ ಹೇಳೋದು :)
ನಮ್ಮಲ್ಲಿ 'ಗೊದ್ದ' ಅಂತ ಓಂದು ಜಾತಿ ಇರುವೆಗಳಿವೆ. ಗೊದ್ದ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು ಯಾವಾಗಲೂ ಬೆಲ್ಲ ಅಥವ ಸಕ್ರೆ ಡಬ್ಬಿಯಲ್ಲೇ ಬಿದ್ದು ಎದ್ದು ಓಡಾಡಿಕೊಂಡು ಇರುತ್ತದೆ :). ಜಾಸ್ತಿ ಸಿಹಿ ತಿನ್ನುವವರಿಗೆ ಇವನೊಬ್ಬ/ಳು ಗೊದ್ದ ಅಂತಾನೇ ಹೇಳೋದು :)
ಭಾಗವತ್ರೇ...... ನನ್ನ ಕರೆದ್ರಾ?
ಸುನಿಲ್,
ನೀವು 'ಭರತೇಶ ವೈಭವ'ವನ್ನ ಓದ್ತಾ ಇದೀರಲ್ವಾ? :-)
ನಮ್ಮಲ್ಲಿ - ಕೆಲ = ಬದಿ (side). ಇಕ್ಕೆಲಕ್ಕೆ ಬಹುಶಃ 'ಎರಡೂ ಬದಿ' ಅಂತಾನೇ ಇರ್ಬೇಕು. 'ಇಕ್ಕೆಲ' ಅಂತ ಗ್ರಾಂಥಿಕ ಕನ್ನಡದಲ್ಲಷ್ಟೇ ಓದಿದ ನೆನಪು.
ಇಕ್ಕೆಲ, ಇಬ್ಬ್ಭಾಗದ ತರಹವೇ ಇನ್ನೂ ತುಂಬ ಪದಗಳಿವೆ :- ಇಪ್ಪತ್ತು (ಎರಡು ಪತ್ತು ಅಥ್ವಾ ಎರಡು ಹತ್ತು), ಇನ್ನೂರು, ಇತ್ತಂಡ, ಇಬ್ಬಂದಿತನ, ಇಮ್ಮಡಿ .....
ಈ ಶಬ್ದಗಳಲ್ಲೆಲ್ಲ 'ಇ' ನಂತರದ ಅಕ್ಷರಕ್ಕೆ ಅದೇ ಒತ್ತಕ್ಷರ ಇದೆ :- ಮ್ಮ, ಪ್ಪ, ನ್ನ, ತ್ತ.....ಬಹುಶಃ 'ಎರಡು ಟಿಗೆ' ಅಂದರೆ 'ಇಟ್ಟಿಗೆ' ಇರಬಹುದಾ? :-))
ಜೊತೆಗೆ 'ಎರಡು' ಅನ್ನುವ ಪದಕ್ಕೆ 'ವಿರೋಧ' ಅನ್ನುವ ಅರ್ಥವಿದೆಯೇ ಅಂತ ಒಂದು ಚರ್ಚೆ ನಡೆದಿತ್ತು, ತುಂಬ ವರ್ಷಗಳ ಹಿಂದೆ, ಉದಯವಾಣಿಯಲ್ಲಿ. ಯಕ್ಷಗಾನದಲ್ಲಿ 'ಎರಡನೇ ವೇಷ' ಅಂದರೆ ಹೆಚ್ಚಾಗಿ anti-hero ಥರದ ಪಾತ್ರಗಳು. 'ಉಂಡ ಮನೆಗೆ ಎರಡು ಬಗೆದ' ಅಂತ ಕೇಳಿದ್ದೀರಾ?
ಟೀನಾ,
ಥ್ಯಾಂಕ್ಸು:-)
ಶಾಂತಲಾ,
ಸರಿಯಾಗಿದೆ.
ಕೊನೆಯ ಸುಳಿವು - ನೀವು ಮತ್ತು ಕತೆಗಾರ್ತಿ ಇಬ್ಬರೂ 'ಲಾ','ಲಾ' :-))
ಶ್ಯಾಮಾ,
ಹವ್ಯಗನ್ನಡ ಮತ್ತು ಕುಂದಗನ್ನಡದ ನಡುವೆ ತುಂಬ ಸಾಮ್ಯವಿದೆ. 'ಗೊದ್ದ' ನಮ್ಮಲ್ಲೂ ಇವೆ. ನಮ್ಮನೆಯ ಬೆಲ್ಲದ ಡಬ್ಬಿಯಲ್ಲಿ ತುಂಬ ಬಾರಿ ಅವುಗಳ ಮುಖದರ್ಶನವಾಗಿದೆ ನನಗೆ :-)
ಶಾಂತಲಾ,
ಇಲ್ವಲ್ಲ, ನಾನು ಕರೀಲಿಲ್ಲ. ಬಹುಶಃ wrong number ಇರ್ಬೇಕು :-)
ಅಂದಹಾಗೆ, 'ಬಂಡಿ'ಗಟ್ಟಲೆ ಬರೆಯುವವರು ಅಂದ್ರೆ ನೀವೇನಾ? :-)
"ಸುಮ"ವನ್ನು "ಲಾ" ಅಂತ ಹೇಳೋದು ಸರಿಯಾ?
kamala hemmige ?
ಶಾಂತಲಾ,
ಇನ್ನೊಂದು ಚಾನ್ಸ್. ಕೊನೆಯದು. ಸುಪ್ತದೀಪ್ತಿ ೫೦% ಉತ್ರ ಕೊಟ್ಟಿದಾರೆ. ನನ್ನ ಸುಳಿವನಲ್ಲಿ ಇನ್ನೊಂದು ೨೫% ಉತ್ರ ಇದೆ.
ನಂದಸಾ ಕೊನೆದ್, ವಸುಮತಿ ಉಡುಪ. ಈಗ್ ನೀವ್ ಉತ್ತ್ರ ಹೇಳ್ಲೆಬೇಕಾತ್ತ್.
ಶಾಂತಲಾ,
ನೀವು ಸೋತೆ ಅಂತ ಒಪ್ಕೊಳ್ಳಿ :-)
ನಿಂ ಪ್ರಶ್ಣೆಗ್ ಸೋಲುದಾ ಅಥವ ನಿಂ ಸುಳಿವಿಗಾ, ಅದೆಂಥಾ ಸುಳಿವು ಲಾ ಲಾ. reborn ಬಪ್ಪುದೆ ನಿಲ್ಲಿಸ್ದ್ರ್, ಇನ್ನ್ ನಾ ಸ ಹಾಂಗೆ ಮಾಡ್ತೆ, ನಿಂ ಸುಳಿವು ಬಗ್ಗೆ ತಲೆ ಕೆಡ್ಸ್ಕಂಡ್ ಸಾಕಾಯ್ತ್.
ಶಾಂತಲಾ ಸೋತೆ ಅಂತ ಒಪ್ಕೋಬೇಡಿ.ಉತ್ತರ ಪತ್ರಿಕೆ (ಜ್ಯೋತಿ, ಭಾಗವತ)ಅವರ ಉತ್ತರಗಳಲ್ಲೇ ಇದೆ. ಸರಿಯಾಗಿ ನೋಡಿ. :)
ಶಾಂತಲಾ,
ಹ್ವಾಯ್, ನೀವ್ ಈ ನಮೂನಿ ಗಲಾಟಿ ಮಾಡಿರ್ ಹ್ಯಾಂಗೆ? ನೀವು ಬಪ್ಪುದು ನಿಲ್ಸಿರೆ ಕ್ಲಾಸು ನಿಂತ್-ಹೋತ್ತ್ ('ತ'ಗೆ 'ಹ' ಒತ್ತು ಕೊಡ್ಲಿಕ್ಕಾಗ್ತಿಲ್ಲ).
Reborn ನೆಟ್ ಸನ್ಯಾಸ ತಕಂಡಿರ್. patients ಈಗ ಜಾಸ್ತಿಯಾಯಿ, ಅವ್ರಿಗೆ ಇಂಜೆಕ್ಷನ್ ಚುಚ್ಚಿ ಚುಚ್ಚಿ ಸುಸ್ತಾಯ್ತಂಬ್ರ್ ಅವ್ರಿಗೆ :-)
ಅಂದಹಾಗೆ, ಉತ್ರ - ಸುಮಂಗಲಾ. ಇವಾಗ ಹೇಳಿ, ನೀವು ಮತ್ತು ಅವ್ರು 'ಲಾ' 'ಲಾ' ಅಲ್ವಾ? :-)
ಗಲಾಟಿ, what ಗಲಾಟಿ ಼ ನೀವ್ 'ನೆಟ್ ಸನ್ಯಾಸ' ಏಗ್ಳಿಕ್ ತಕಂಬ್ದ್ ಼ ಕಡೀಗ್ shiv ಕಣ್ಣಂಗೆ ನೀವ್ ಸಾ ಮದಿ ಆಯಿ ಮಾಯಾ. ಹಾಂಗೆಂತದಾದ್ರು ಆದ್ರೆ, ನಾ ಏಕಲವ್ಯ ಕಣ್ಣಂಗೆ ನಿಂ ಮೂರ್ತಿ ಮಾಡಿ ಪಾಠ ಕಲಿಕಾತ್ತ್. ಒಬ್ಬ್ರ್(ಯಾರ್ ಹೇಳಿ ನಿಮ್ಗೆ ಗೊತ್ತಿರ್ಕ್) ಬ್ಲಾಗಲ್ಲ್ ಗಿರಿಧಾರಿ pose ಕೊಟ್ಟಿದ್ದ್ ನೀವೆ ಅಲ್ದಾ ಼
ಶಾಂತಲಾ,
ಇನ್ನೂ 'ನೆಟ್ ಸನ್ಯಾಸ' ತಕಂಬು ಟೈಮ್ ಬರ್ಲಿಲ್ಯೇ. ನಾನು ಮದಿಯಾಯ್ಲಿ, ಮುದಿಯಾಯ್ಲಿ, ಅಷ್ಟ್ ಸುಲಭದಲ್ಲ್ ಮಾಯ ಆತಿಲ್ಲ :-) ಓದುಗ ದೊರೆಗಳು ಇರುವವರೆಗೂ ಕ್ಲಾಸ್ ಇರತ್ತ್.
ನಾನೆಲ್ಲ್ ಗಿರಿಧಾರಿ pose ಕೊಟ್ಟದ್ದ್? ಎಲ್ಲಿ? ಹೇಗೆ? ಯಾರಿಂದ? ಸಂದರ್ಭ ಸಹಿತ ವಿವರಿಸಿ:-)
Post a Comment