October 11, 2007

ಆರೋಗ್ಯವಂತರಿಗೆ ಮಾತ್ರ!!

ಓದುಗ ದೊರೆಗಳ ಗಮನಕ್ಕೆ :- ಈ ಬರಹಕ್ಕೆ ಅರ್ಥ ಹುಡುಕುವುದು ಆರೋಗ್ಯಕ್ಕೆ ಹಾನಿಕರ:-))
***************************************************************

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ....
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಅಲ್ಲೆಲ್ಲಾ ಶಿಶಿರದ ತಂಪು
ಗಾಳಿಯಲ್ಲಿ ವಸಂತನ ಬಿಸುಪು
ಶೃತಿ ಹಿಡಿದು ಜಿನುಗುವ ಮಳೆಹನಿಗಳು
ಮಿರುಮಿರುಗುವ ಬಣ್ಣ ಹೊತ್ತ ಮರಗಳು
ನಾಚಿ ಕೆಂಪಾಗಿವೆ ಆಕೆಯ ಬೆಳಗುಗೆನ್ನೆಗಳು
ಮಂಡಿಯೂರಿದವನ ಎದೆಯ ತುಂಬೆಲ್ಲ ಬಿಸಿಯುಸಿರು
"ನನಗೆ ನೀನು ತುಂಬ ಇಷ್ಟ. ನಿನಗೆ ನಾನು ಇಷ್ಟಾನಾ?"
ಝಲ್ಲೆನ್ನುವ ಕಾಲ್ಗೆಜ್ಜೆಯ ಸದ್ದು, ಝಣಝಣ ಕೈಬಳೆಗಳ ಸದ್ದು
ಜೋಡಿಹಕ್ಕಿ ಹಾರುತ್ತಿದೆ, ನಿನ್ನೆ ನಾಳೆಗಳ ಪರಿವೆ ಇಲ್ಲದಂತೆ.....

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಅವ ಭುಸುಗುಡುತ್ತಿದ್ದಾನೆ ಹಲ್ಲು ಕಟಕಟಿಸುತ್ತ
ನಿನ್ನೆಯಷ್ಟೇ ಕೈಯಲ್ಲಿದ್ದ ಆಕೆ ಈಗ ಇನ್ನಾರವಳೋ,
ಗೋಳಿಡುತ್ತಿದ್ದಾನೆ, ಭೋರೆಂದು ಗೋಳಿಡುತ್ತಿದ್ದಾನೆ
ನಾಳೆಯ ಬಿಳಿಹಾಳೆಯ ತುಂಬೆಲ್ಲ ಕಪ್ಪುಮಸಿಯ ಲೇಪಿಸಿ,
"ನನ್ನ ಬಿಟ್ಟು ಹೋಗಬೇಡ್ವೆ, ಪ್ಲೀಸ್, ಒಂದ್ನಿಮಿಷ ನನ್ನ ಕೇಳು,
ನನ್ನ ನಾಳೆಗಳು ಉಸಿರು ಕಳೆದುಕೊಳ್ಳುತ್ತವೆ, ನೀನಿಲ್ಲದೇ ಹೋದರೆ"
ಬಿಳಿಹೊದಿಕೆ ಹೊತ್ತ ಸತ್ತ ನಾಳೆಯ ಹೆಣದ ಮೆರವಣಿಗೆ ಬೀದಿ ತುಂಬೆಲ್ಲ,
ಕಣ್ಣೀರೊರೆಸಿಕೊಳ್ಳುತ್ತಿದ್ದಾರೆ, ಕಣ್ಣು ಹಾಯುವವರೆಗೂ ನೆರೆದ ದು:ಖತಪ್ತ ಜನಸ್ತೋಮ
ರುಂಡದಿಂದ ತೊಟ್ಟಿಕ್ಕುವ ರಕ್ತದ ಪಾಲಿಗಾಗಿ ಮೇಲಿಂದ ಗಿರಕಿ ಹೊಡೆಯುತ್ತಿವೆ ರಣಹದ್ದುಗಳು

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

ಕಣ್ಣು ಕಾಣದ ಮುದುಕಿ ಸುತ್ತೆಲ್ಲ ಅರಸುತ್ತಿದ್ದಾಳೆ,
ಊಟ ಕಾಣದ ಆ ಪುಟ್ಟ ಮಗು ಚಿಂದಿ ಆಯುತ್ತಿದೆ,
ಕಂಡಕಂಡವರಲ್ಲೆಲ್ಲಾ ಕೈ ಮುಗಿದು ಬೇಡುತ್ತಿದ್ದಾಳೆ ಆಕೆ,
"ಮಗನ ಆಪರೇಷನ್ನಿಗೆ ದುಡ್ಡಿಲ್ಲ. ಏನಾದ್ರೂ ಕರುಣೆ ಮಾಡಿ ಸ್ವಾಮಿ"
ನಾಳೆಗಳು ಮತ್ತೆ ಚಿಗಿತುಕೊಂಡಿವೆ, ಅಷ್ಟೂದ್ದ ಎತ್ತರಕ್ಕೆ ಬೆಳೆದುನಿಂತಿವೆ,
"ಬಾರೋ ಮಾರಾಯ, ಒಟ್ಟಿಗೆ ಹೋಗೋಣ ಬಾ" ಕೈ ಬೀಸಿ ಕರೆಯುತ್ತಿದೆ.
ಬೀದಿಯ ತುಂಬೆಲ್ಲ ಹಸಿರು ಪಲ್ಲಕ್ಕಿ ಈಗ, ವಟರುಗಪ್ಪೆಗಳದ್ದೇ ಒಡ್ಡೋಲಗ
"ಬಲ್ಲಿರೇನಯ್ಯಾ? ನಾಳೆಗಳಿಗೆ ಯಾರೆಂದು ಕೇಳಿದ್ದೀರಿ? ಅಹೋ, ನಾವೇ ಸರಿ"

ನಾನು ನಗುತ್ತಿದ್ದೇನೆ
ನಾನಿನ್ನೂ ನಗುತ್ತಲಿದ್ದೇನೆ
ಮತ್ತು, ನಾನೀಗ ಏಕಾಂಗಿ...
ಕಥಾನಾಯಕಿಗೆ ಪುರಸೊತ್ತಿಲ್ಲವಂತೆ...

10 comments:

ಅನಂತ said...

ಚೆನ್ನಾಗಿದೆ, ಅರ್ಥ ಹುಡುಕದೇ ಇದ್ದರೆ...! ;)

ವಿಕ್ರಮ ಹತ್ವಾರ said...

ಬಿಳಿಹೊದಿಕೆ ಹೊತ್ತ ಸತ್ತ ನಾಳೆಯ ಹೆಣದ ಮೆರವಣಿಗೆ ಬೀದಿ ತುಂಬೆಲ್ಲ

ಲಾಯ್ಕಿತ್ ಮಾಣಿ

ಕಥಾನಾಯಕಿ ಯಾರು?

ವಟರುಗಪ್ಪೆ ಯಾರು? ಕಮೆಂಟ್ ಮಾಡುವವರಲ್ಲ ತಾನೆ!

ಸುಪ್ತದೀಪ್ತಿ suptadeepti said...

ಅರ್ಥ ಹುಡುಕದೇ ಇದ್ದರೂ ಅರ್ಥವಾಗುತ್ತಾ, ಬೆರಗುಗೊಳಿಸುತ್ತಾ ತೆರೆದುಕೊಳ್ಳುವ ಕವನ.
ನಿನ್ನೆ, ಇಂದುಗಳ ಪರಿಧಿಯಲ್ಲಿ ಸುತ್ತುವ ನಿರ್ಜೀವ ಜೀವನಕ್ಕೆ ನಾಳೆಯ ಭರವಸೆ ಸೊಗಸಾಗಿದೆ. ಇಂಥ ಒಳ್ಳೆಯ ಕವನಗಳು ಇನ್ನೂ ಬರಲಿ.

Jagali bhaagavata said...

ಅನಂತ,
ಸದ್ಯ! ನೀವು ಅರ್ಥ ಹುಡುಕುವ ಕಷ್ಟ ತಗೊಳ್ಲಿಲ್ವಲ್ಲ:-)

ವಿಕ್ಕಿ,
ಯಾರಿಗೆ ಪುರಸೊತ್ತಿಲ್ಲವೋ ಅವಳೇ ಕಥಾನಾಯಕಿ:-) ನೀನೇ ಹುಡುಕು. ಸುಪ್ತದೀಪ್ತಿಯ ಹುಂಡಿಯಲ್ಲಿ ಯಾರಾದ್ರೂ ಇರ್ಬಹುದು. ಕೇಳಿ ನೋಡು:-))

ಸುಪ್ತದೀಪ್ತಿ,
ಧನ್ಯೋಸ್ಮಿ. ನಿಮ್ಮ ಆಶೀರ್ವಾದ ಭಾಗವತರ ಮೇಲಿದ್ದರೆ, ಇನ್ನೂ ಒಳ್ಳೆಯ ಕವನಗಳನ್ನ ಬರೀತಾರಂತೆ:-)

ಮನಸ್ವಿನಿ said...

ಅಬ್ಬಬ್ಬ!!! ಎಂತಹ ಕವನ..ಚೆನ್ನಾಗಿದೆ ಮಾರಾಯ . ದೇವ್ರಾಣೆ ೧೦೦% ಅರ್ಥ ಆಗಿಲ್ಲ ನಂಗೆ..ಬಿಡಿ ಬಿಡಿ ಪ್ಯಾರ ಅರ್ಥ ಆಗುತ್ತೆ..ಆದ್ರೆ ಜೋಡಣೆ ಬಗ್ಗೆ, ಪೂರ್ತಿ ಪದ್ಯ ನನ್ನ ಮಂಡೆಗೆ ಅರ್ಥ ಆಗ್ತ ಇಲ್ಲ..ಕವಿಗಳ ಹತ್ರ ವಿವರಿಸು ಅನ್ನೋದು ಸರಿಯೋ, ತಪ್ಪೋ ಗೊತ್ತಿಲ್ಲ...ಆದ್ರೆ ನನಗೆ ಸ್ವಲ್ಪ ವಿವರಿಸಿ ಪುಣ್ಯ ಕಟ್ಕೋ ಮಾರಾಯ...

ಅಂದ ಹಾಗೆ ಭಾಗವರು ಇಷ್ಟು ಸಿರಿಯಸ್ ಆದ್ರೆ ಹೇಂಗೆ!! :)

ಯಾರದು ಕಥಾನಾಯಕಿ?ಸಿಕ್ಕಿಬಿಟ್ಲಾ? ಮಸ್ತ್ ಮಾಣಿ..
ಯಾದ್ರೆ ಅವ್ಳಿಗೆ ಪುರುಸೊತ್ತಿಲ್ಲ ಯಾಕೆ? ನೀನು ಪಿಜೆ ಹೊಡಿಯದು ಕಮ್ಮಿ ಮಾಡು...ಪುರುಸೊತ್ತು ಮಾಡ್ಕೋಂಡಾಳು :)

Jagali bhaagavata said...

ವಿಕ್ಕಿ,

ವಟರುಗಪ್ಪೆ ಯಾರು? ಕಮೆಂಟ್ ಮಾಡುವವರಲ್ಲ ತಾನೆ!

ಕಮೆಂಟು ಮಾಡುವವರಲ್ಲ ಮಾರಾಯ. ಹಸಿರು ಪಲ್ಲಕ್ಕಿ, ವಟರುಗಪ್ಪೆ ಎಲ್ಲ ಮಳೆಗಾಲದ ಸ್ನೇಹಿತರು. ನಮ್ಮೂರಿನ ವಟರುಗಪ್ಪೆಗಳು ಮಳೆ ಬರುವುದು ಗೊತ್ತಾದ ಕೂಡಲೆ "ವಾಟರ್ ವಾಟರ್" ಅಂತ ಇಂಗ್ಲೀಷಿನಲ್ಲಿ ಕೂಗ್ತವೆ:-)

ಮನಸ್ವಿನಿ,
ಈ ಕವನ ಆರೋಗ್ಯವಂತರಿಗೆ ಮಾತ್ರ. ನೀನ್ಯಾಕೆ ಅರ್ಥ ಮಾಡ್ಕೊಳ್ಳಿಕ್ಕೆ ಪ್ರಯತ್ನ ಮಾಡ್ದೆ?:-) ನನ್ನ ಪುಣ್ಯದ ಕೊಡ ಆಗಲೆ ತುಂಬಿ ತುಳುಕುತ್ತಿದೆ. ಇನ್ನೂ ಹೆಚ್ಚಿಗೆ ಪುಣ್ಯ ಬೇಡ ನನಗೆ:-))

ಪುರಸೊತ್ತಿಲ್ಲದ ಕಥಾನಾಯಕಿನ ಕಟ್ಕೊಂಡು ಏನ್ ಪ್ರಯೋಜನ ಹೇಳು. ಅವ್ಳಿಗೆ ಪುರಸೊತ್ತಾಗುವ ಹೊತ್ತಿಗೆ ಕಥೆ 'ಮಂಗಳಂ' ಆಗಿರತ್ತೆ:-((

ಮನಸ್ವಿನಿ said...

ಭಾಗವತ,

ತುಂಬಿದ ಕೊಡ ತುಳುಕುವುದಿಲ್ಲ :)

Gubbacchi said...

ಕಥಾನಾಯಕಿ ಯಾರು?
ಕಥಾನಾಯಕಿಗೆ ಪುರ್ಸೊತ್ತ್ ಇಲ್ಲ್ದಿಪ್ಪುಕ್ ಹೊಯ್ ಭಾಗ್ವತ್ರ ಇಂಥ ಕವನ ಬರ್ದ್ರು...
ಕಥಾನಾಯಕಿಗೆ ಧನ್ಯವಾದಗಳು :)

Sushrutha Dodderi said...

ನಾನೂ ನಗುತ್ತಿದ್ದೇನೆ!!! :D

ವಿಕ್ರಮ ಹತ್ವಾರ said...

ಸುಶ್ರುತ, ಭಾಗವತ- ಇಬ್ರೂ ಜೋಡಾಟ ಮಾಡಿದ್ರೆ ಗಮ್ಮತ್ ಆತ್ತೆ. ಇಬ್ಬರ ಕಥಾನಾಯಕಿಯರಿಗೂ ಪುರುಸೊತ್ತಿಲ್ಲ. ಇಲ್ಲಿ ಯಾವ ಕಥನಾಯಕಿಗೂ ಪುರುಸೊತ್ತಿರುವುದಲ್ಲ ಅಂತ ಕಾಣುತ್ತೆ. ಅಥವ ಕಥಾನಾಯಕಿ ಆಗುವುದಕ್ಕೆ ಪುರುಸೊತ್ತಿಲ್ಲದವರಾಗುತ್ತಾರಾ?!