ನಿಘಂಟು
ನಿಘಂಟು = ಪದಕೋಶ. ಇದು ಗ್ರಂಥಸ್ಥ ಕನ್ನಡದಲ್ಲಿನ ಬಳಕೆ. ಈ ಅರ್ಥವಲ್ಲದೆ 'ಖಚಿತ', 'ಖಂಡಿತ', 'ನಿಶ್ಚಿತ' ಅನ್ನುವ ಅರ್ಥದಲ್ಲೂ ಬಳಕೆಯಾಗುತ್ತದೆ.
ಕುಂದಗನ್ನಡದ ಉದಾಹರಣೆಗಳು
"ಮದಿ (ಮದುವೆ) ಏಗ್ಳಿಕಂತೇಳಿ ನಿಘಂಟಾಯ್ತಾ?"
"ದಿನ ಸ್ವಲ್ಪ ಹೆಚ್ಚು ಕಡ್ಮೆ ಆಪ್ಗ್ (ಆಗಬಹುದು). ನಿಘಂಟಲ್ಲ ಅದ್"
ಕಾಸರಗೋಡಿನ ಹವ್ಯಗನ್ನಡದ ಉದಾಹರಣೆಗಳು (ಶ್ರೀ ಕೊಟ್ಟಿದ್ದು)
"ನೀ ಬರ್ತ್ದ್ (ಬರ್ತ್-ದ್) ನಿಘಂಟಾ..."
"ಇಲ್ಲೆ ನಾ ಬರ್ತ್-ದ್ ನಿಘಂಟಿಲ್ಲೆ, ನಂಗೆ ಕಾಯಳೆ (ಕಾಯಬೇಡಿ), ನೀವ್ ಹೋಯ್ನಿ (ಹೋಗಿ)..."
ಈ ಅರ್ಥ ಕುಂದಗನ್ನಡಕ್ಕೆ ಮಾತ್ರ ಸೀಮಿತ ಅಲ್ಲ ಅನ್ನಿಸ್ತದೆ ನನಗೆ. ತ.ರಾ.ಸು. ಅವರ 'ಚಂದವಳ್ಳಿಯ ತೋಟದಲ್ಲಿ' ಕಾದಂಬರಿಯ ೯೦ನೇ ಪುಟದಲ್ಲಿ ಈ ಪದ ಬಳಕೆಯಾಗಿದೆ - "ನನ್ನ ಮಾತಿನಲ್ಲಿ ನಂಬಿಕೆ ಇಲ್ಲಾಂದ್ರೆ, ಈಗ್ಲೇ ಏನೇನ್ಬೇಕೋ ಎಲ್ಲಾ ನಿಘಂಟಾಗಿ ಹೇಳ್ಬಿಡಿ" ಎಂದ ಶಿವನಂಜೇಗೌಡ.
'ನಿಘಂಟು' ಶಬ್ದದ ವ್ಯುತ್ಪತ್ತಿ ಬಗ್ಗೆ 'ಯಾತ್ರಿಕ' ವಿವರವಾಗಿ ಬರೆದಿದ್ದಾರೆ:-
ಯಾಸ್ಕಾಚಾರ್ಯರ ನಿರುಕ್ತದಲ್ಲಿ ನಿಘಂಟು ಶಬ್ದದ ವಿವರಣೆ ಕೊಟ್ಟಿದೆ - "ಛಂದೋಭ್ಯಃ ಸಮಾಹೃತ್ಯ ಸಮಾಹೃತ್ಯ ಸಮಾಮ್ನತಾಃ ತೇ ನಿಗಂತವ ಏವ ಸಂತೋ ನಿಗಮನಾನ್ನಿಘಂಟವ ಉಚ್ಯಂತ ಔಪಮನ್ಯವ: ಅಪಿ ವಾ ಹನನಾದ್ಯೇವ ಸ್ಯುಃ ಸಮಾಹತಾ ಭವಂತಿ ಯದ್ವಾ ಸಮಾಹೃತಾ ಭವಂತಿ "
- ವೇದಗಳಿಂದ (=ಛಂದೋಭ್ಯಃ) ಮತ್ತೆ ಮತ್ತೆ ಆರಿಸಿ (ಸಮಾಹೃತ್ಯ ಸಮಾಹೃತ್ಯ) ಜೋಡಿಸಿದ ಶಬ್ದಗಳಿವು. ಈ ರೀತಿ ವೇದಗಳಿಂದ (ನಿಗಮನಾತ್) ಉದ್ಧರಿಸಿದ್ದರಿಂದಲೇ (quoted, ನಿಗಂತವಃ) ಇವು ನಿಘಂಟುಗಳು ಎನ್ನುತ್ತಾರೆ ಔಪಮನ್ಯವ ಋಷಿಗಳು. ನಿಘಂಟು ಶಬ್ದವು ಹನ್ ಧಾತುವಿನಿಂದ ಬಂದಿದೆ (ಹನ್ ಅಂದರೆ ಕೊಲ್ಲು, ಜೋಡಿಸು ಎಂಬ ಅರ್ಥಗಳಿವೆ- ಸಮಾಹತ ಎಂಬ ಶಬ್ದ ಕೂಡ ಈ ಧಾತುವಿನದ್ದು) ಅಥವಾ ಹೃ ಧಾತುವಿನಿಂದಾಗಿದೆ ('ಸಮಾಹೃತ' ಈ ಶಬ್ದ ಹೃ ಧಾತುವಿನಿಂದಾದ್ದು-ಇದಕ್ಕೂ ಸೇರಿಸು ಎಂಬ ಅರ್ಥ ಉಂಟು).
'ನಿಘಂಟು' ಶಬ್ದಕ್ಕೆ 'ಖಚಿತ', 'ನಿಶ್ಚಿತ' ಎನ್ನುವ ಅರ್ಥ ಹೇಗೆ ಬಂತೋ ನಿಘಂಟಾಗಿ ಗೊತ್ತಿಲ್ಲ. ಬಲ್ಲವರು ತಿಳಿಸಿ.
ಬೋನಸ್ ಪ್ರಶ್ನೆಗೆ ಉತ್ರ:-ಮರವಂತೆಯಲ್ಲಿ ರಸ್ತೆಯ ಒಂದು ಬದಿ ಸಮುದ್ರ, ಇನ್ನೊಂದು ಬದಿ ಸೌಪರ್ಣಿಕಾ ನದಿ. ಇಲ್ಲಿ ದೋಣಿ ವಿಹಾರ ವ್ಯವಸ್ಥೆ ಕೂಡ ಇದೆ. ಆದರೆ ಮಳೆಗಾಲ ಸೂಕ್ತ ಸಮಯ ಅಲ್ಲ:-)
ಇವತ್ತಿನ ಸವಾಲು:-
ಈ ಪದದ ಅರ್ಥ ಏನು - 'ಹರ್ಮೈಕ'?
ಬೋನಸ್ ಪ್ರಶ್ನೆ:-
ಹವ್ಯಕರ ಮನೆ ಹೊಕ್ಕಾಗ 'ಆಸ್ರಿಗ್ ಬೇಕಾ' ಅಂತ ಕೇಳ್ತಾರೆ. ಅದೇ ರೀತಿ ಕುಂದಾಪುರದ ಮನೆಯಲ್ಲಿ ಏನ್ ಕೇಳ್ತಾರೆ?:-)
4 comments:
ಹರ್ಮೈಕ್ = ಬಾಯಿ ಬಡ್ಕಾ / ಬಡ್ಕಿ
ಅಸ್ರುದ್ ಸ ಆತೇನೊ ಼
ನಿಂ Links ಪಟ್ಟಿ ಕಂಡೇ ತ್ರಾಸಾತ್ತ್. ಜಾಸ್ತಿ ಹಾಕ್ತ ಹೋದ್ರೆ ಹ್ಯಾಂಗೆ, ಕಡೆಗ್ ನಿಂ ಕತೆ ಓದುದ್ ಬಿಟ್ಟ್ಕಂಡ್ ಬೇರೆಯವ್ರದ್ದ್ ಕಾಂತ ಕೂಕಂಕಾತ್ತ್.
ಕುಂದಾಪುರ ಕಡೆ ಕೇಳುವುದು "ಗಂಗೋದ್ಕ ಬೇಕಾ?" ಅಂತ.
Post a Comment