June 16, 2007

ತಟ್ಕ್

ತಟ್ಕ್ = ಸ್ವಲ್ಪ, ಚೂರೇ ಚೂರು. ಇದನ್ನ ಹೆಚ್ಚಾಗಿ ದ್ರವಗಳಿಗೆ ಸಂಬಂಧಿಸಿ ಉಪಯೋಗಿಸ್ತಾರೆ.
"ಅಷ್ಟೆಲ್ಲ ಮಜ್ಗಿ (ಮಜ್ಜಿಗೆ) ಬ್ಯಾಡ. 'ತಟ್ಕ್' ಅಷ್ಟೇಯ"
"ತಟ್ಕ್ ಎಣ್ಣೆ ಕೊಡ್"
"ಮಸ್ತ್ ಪಾಯ್ಸ ಹಾಕ್ಬೇಡ. ತಟ್ಕ್ ಅಷ್ಟೇಯ. ನಂಗೆ ದಾಕ್ಷಿಣ್ಯ ಇಲ್ಲ"

'ತಟ್ಕ್' ಪದ 'ತಟಕು' ಪದದ ಅಪಭ್ರಂಶ ರೂಪ. 'ತಟಕು' = ತೊಟ್ಟು, ಬಿಂದು, ಹನಿ. ಬರಹ ಕನ್ನಡ ನಿಘಂಟಿನಲ್ಲಿ ಇದರ ಅರ್ಥವನ್ನ ನೋಡಬಹುದು.

ಇದೇ ಅರ್ಥದ ಇನ್ನೊಂದು ಪದ -'ಹುಂಡ್'. 'ಹುಂಡ್' ಅಥವ 'ಹುಂಡು' ಅಂದರೆ 'ತೊಟ್ಟು', 'ಬಿಂದು', 'ಬೊಟ್ಟು', 'ತಿಲಕ'. ಆದರೆ ಈ ಪದ ಯಾಕೋ ನಿಘಂಟಿನಲ್ಲಿಲ್ಲ. ಈ ಪದವನ್ನ ಎಷ್ಟು ಜನ ಕೇಳಿಲ್ಲ?
"ಒಂದ್ ಹುಂಡ್ ಹಾಲ್ ಹಾಕ್"
"ಮಣಿಯ, ಒಂದ್ ಹುಂಡ್ ತೀರ್ಥ ಕೊಡ್ ಕಾಂಬ"
"ಹುಂಡ್ ಇಟ್ಕಣ್ಲಿಲ್ಲ ಎಂತಕೆ? ಹಣೆ ಬೋಳ್ ಬೋಳ್ ಅನ್ಸತ್ತ್" ಇಲ್ಲಿ ಹುಂಡ್ ಅಂದರೆ ತಿಲಕ.
'ಹುಂಡ್ ಕೋಳಿ' ಯಾರಾದ್ರೂ ನೋಡಿದೀರಾ?:-)

'ತಟ್ಕ್' ಅಂದ್ರೆ 'ತಟ್ಟಬೇಕ' ಅಂತನೂ ಅರ್ಥೈಸಬಹುದು. ಇದು ಸಂತು ಅವರ ಸಲಹೆ.
"ಅಧಿಕಪ್ರಸಂಗ ಮಾಡ್ತ್ಯಾ? ಹಿಡ್ದ್ ತಟ್ಕಾ?"
"ಹೇಳ್ದಾಂಗ್ ಮಾಡ್ತ್ಯಾ, ಇಲ್ಲಾ ತಟ್ಕಾ?"

ಬೋನಸ್ ಪ್ರಶ್ನೆಗೆ ಉತ್ರ:-
'ತಟ್ಕ್' ಪದದ ಸಂವಾದಿ ಪದ 'ಹನಿ'. ನನ್ನದು ಹರಕು ಮುರುಕು ಹವ್ಯಗನ್ನಡ. ಬಲ್ಲವರು ತಿದ್ದಿ. ಹವ್ಯಗನ್ನಡದ ಹಿತದೃಷ್ಟಿಯಿಂದ ಉದಾಹರಣೆ ಕೊಡ್ಲಿಕ್ಕೆ ಹೋಗಿಲ್ಲ:-))

ಇವತ್ತಿನ ಸವಾಲು:
ಈ ಪದದ ಅರ್ಥ ಏನು - 'ನಿಘಂಟು'.

ಬೋನಸ್ ಪ್ರಶ್ನೆ:
ರಸ್ತೆಯ ಒಂದು ಬದಿ ಸಮುದ್ರ. ಇನ್ನೊಂದು ಬದಿ ನದಿ. ಕರ್ನಾಟಕದಲ್ಲಿ ಎಲ್ಲಿದೆ?

8 comments:

Vattam said...

ನಿಘಂಟು - ಪದಕೋಶ - ಶಬ್ದಕೋಶ - Dictionary

ಬೋನಸ್ ಪ್ರಶ್ನೆ - ಮರವಂತೆ ಬೀಚ್, ಕುಂದಾಪ್ರದಿಂದ ಬೈಂದೂರಿಗ್ ಹೋಪೊ ದಾರಿಯಲ್ ಸಿಗತ್. ಒಂದ್ ಬದಿಯಲ್ಲ್ ಅರಬ್ಬಿ ಸಮುದ್ರ ಇನ್ನೊಂದ್ ಬದಿಯಲ್ಲ್ ನೇತ್ರಾವತಿ ನದಿ ಇರ್ಕ.

Vattam said...

ಓ, ಅದು ನೇತ್ರಾವತಿ ಅಲ್ಲ, ಸೌಪರ್ಣಿಕ ನದಿ.

reborn said...

:) You can ask me to write an assay about it ...

ohh.. how I miss going to Maravanthe ... :(

And it s river Sauparnika..

Ramya's Mane Adige said...

Hi! Came across your blog just today.... nimma blog nalli Kannada odi tumba khushi aythu!! you have a great one... Keep going :)

ರಾಜೇಶ್ ನಾಯ್ಕ said...

ಕುಂದಾಪ್ರ ಭಾಷೆ ನನ್ಗಿನ್ನೂ ಮರೀಚಿಕೆನೇ. 'ತಟ್ಕ್' ಬಗ್ಗೆ ವಿವರಣೆ ಚೆನ್ನಾಗಿತ್ತು. ಸ್ವಲ್ಪ ಕಷ್ಟದ ಪ್ರಶ್ನೆ ಕೇಳ್ರಿ, ಭಾಗವತರೆ.

Shree said...

ಬೇಸಗೆ ರಜೆ ಮುಗಿದು ಮತ್ತೆ ಪಾಠ ಶುರು ಮಾಡಿದ್ದೀರಿ ಸರ್, ತುಂಬ ಸಂತೋಷ..

ನಿಘಂಟ್ = ಖಂಡಿತ, ನಿಶ್ಚಿತವಾಗಿ.
ಅಲ್ವ ಭಾಗವತ್ರೆ... ?

'ನೀ ಬರ್ತ್ದ್ (ಬರ್ತ್-ದ್) ನಿಘಂಟಾ...'
'ಇಲ್ಲೆ ನಾ ಬರ್ತ್-ದ್ ನಿಘಂಟಿಲ್ಲೆ, ನಂಗೆ ಕಾಯಳೆ, ನೀವ್ ಹೋಯ್ನಿ...'

ಉಳ್ಳಾಲ ಸಂಕದಲ್ಲೂ ಒಂದು ಬದಿ ನೇತ್ರಾವತಿ ನದಿ, ಇನ್ನೊಂದು ಬದಿ ಸಮುದ್ರ ಕಾಣ್ತದೆ, ಆದ್ರೆ ಮರವಂತೆಯೇ ಭಾಗವತ್ರು ಬಯಸುವ ಉತ್ರ ಇರ್ಬೇಕು... :)

ನಾನು ಇನ್ನು ಮುಂದೆ ಇಲ್ಲಿ ರೆಗ್ಯುಲರ್ ಸ್ಟೂಡೆಂಟು... ಅಡ್ಡಿಲ್ವಲ್ಲ ಭಾಗವತ್ರೆ...?

ನಂದಕಿಶೋರ said...

ನಮಸ್ಕಾರ ಭಾಗವತರಿಗೆ.

ಶ್ರೀ ಅವರು ಹೇಳಿದಾಗೆ ಪಾಠ ಸುರುವಾದ್ದು ಭಾರೀ ಖುಷಿ ಆಯಿತೆ! "ನಿಘಂಟು" ಇದು ಖಂಡಿತ ಅನ್ನುವ ಅರ್ಥದಲ್ಲಿ ಹಳ್ಳಿಕಡೆ ಇರುವುದು ಹೌದು.
ಆದರೆ ಅದು ಸಂಸ್ಕೃತ ಶಬ್ದ - ಅದರ ಪೂರ್ತಿ ಅರ್ಥ ನೋಡುವನ!
ಯಾಸ್ಕಾಚಾರ್ಯರ ನಿರುಕ್ತದಲ್ಲಿ ನಿಘಂಟು ಶಬ್ದದ ವಿವರಣೆ ಕೊಟ್ಟಿದೆ - "ಛನ್ದೋಭ್ಯಃ ಸಮಾಹೃತ್ಯ ಸಮಾಹೃತ್ಯ ಸಮಾಮ್ನಾತಾಃ| ತೇ ನಿಗನ್ತವ ಏವ ಸನ್ತೋ ನಿಗಮನಾನ್ನಿಘಂಟವ ಉಚ್ಯಂತ ಔಪಮನ್ಯವ:| ಅಪಿ ವಾ ಹನನಾದ್ಯೇವ ಸ್ಯುಃ| ಸಮಾಹತಾ ಭವನ್ತಿ| ಯದ್ವಾ ಸಮಾಹೃತಾ ಭವನ್ತಿ|| "
- ವೇದಗಳಿಂದ(=ಛನ್ದೋಭ್ಯಃ)ಮತ್ತೆ ಮತ್ತೆ ಆರಿಸಿ(ಸಮಾಹೃತ್ಯ ಸಮಾಹೃತ್ಯ) ಜೋಡಿಸಿದ ಶಬ್ದಗಳಿವು. ಈ ರೀತಿ ವೇದಗಳಿಂದ(ನಿಗಮನಾತ್) ಉದ್ಧರಿಸಿದ್ದರಿಂದಲೇ (quoted, ನಿಗನ್ತವಃ) ಇವು ನಿಘಂಟುಗಳು ಎನ್ನುತ್ತಾರೆ ಔಪಮನ್ಯವ ಋಷಿಗಳು.
ನಿಘಂಟು ಶಬ್ದವು ’ಹನ್’ ಧಾತುವಿನಿಂದ ಬಂದಿದೆ (ಹನ್ ಅಂದರೆ ಕೊಲ್ಲು, ಜೋಡಿಸು ಎಂಬ ಅರ್ಥಗಳಿವೆ-’ಸಮಾಹತ’ ಎಂಬ ಶಬ್ದ ಕೂಡ ಈ ಧಾತುವಿನದ್ದು) ಅಥವಾ ’ಹೃ’ ಧಾತುವಿನಿಂದಾಗಿದೆ (’ಸಮಾಹೃತ’ ಈ ಶಬ್ದ ಹೃ ಧಾತುವಿನಿಂದಾದ್ದು-ಇದಕ್ಕೂ ಸೇರಿಸು ಎಂಬ ಅರ್ಥ ಉಂಟು).

ನಿಘಂಟು ಶಬ್ದದ ವ್ಯುತ್ಪತ್ತಿಯಲ್ಲಿ ದೋಷ ಕಂಡರೆ ತಿಳಿಸಿಬಿಡಿ ಮೇಷ್ಟ್ರೆ. :-)
ಈಗ ನನ್ನ ಪ್ರಶ್ನೆ - ನಿಘಂಟು ಶಬ್ದ ಕುಂದಗನ್ನಡಕ್ಕೆ ಬರುವಾಗ ಅರ್ಥ ಬೇರೆ ಮಾಡಿಕೊಂಡದ್ದು ಹ್ಯಾಂಗೆ? ನಿ-ಘಂ-ಟು ಈ ಅಕ್ಷರಗಳ ಭಾರದಿಂದ ಅದಕ್ಕೆ ಖಂಡಿತ ಅನ್ನುವ ಅರ್ಥ ಬಂತಾ ಎಂತ ಕತೆ?

ಮರವಂತೆಯ ಬಗ್ಗೆ ಒಂದು ಕುತೂಹಲ - ಅಲ್ಲಿ ಸೌಪರ್ಣಿಕೆ ರಾ.ಹೆದ್ದಾರಿಯ ಒಂದು ಕಡೆ ಹರೀತಾಳೆ ಅಲ್ವಾ, ಅವಳು ಮತ್ತೆ ಸಮುದ್ರ ಸೇರುದು ಎಲ್ಲಿ? ಗಂಗೊಳ್ಳಿಯಲ್ಯಾ? ಹಾಗಿದ್ರೆ ಹೆದ್ದಾರಿ ಆಗುವ ಮೊದಲು ಮರವಂತೆಯಲ್ಲೇ ಸೇರ್ತಿದ್ಲಾ? ಈ ನನ್ನ ಉಮೇದು ಸ್ವಲ್ಪ ತಣಿಸ್ತೀರಾ?

ಧನ್ಯವಾದ.

Jagali bhaagavata said...

ಶಾಂತಲ, ಒಂದು ಉತ್ರ ಸರಿ. ಇನ್ನೊಂದು ಅರ್ಧ ಸರಿ:-))

Reborn, ಉತ್ರ ಸರಿ ಇತ್ತ್. ಆದ್ರೆ 'ಕೊಡಚಾದ್ರಿ' ಬಗ್ಗೆ ಮಾಹಿತಿ ಬೇಕಿತ್ತಲ್ಲ, ನಿಮ್ಮತ್ರ ಇತ್ತಾ? ನಿಮ್ ಬ್ಲಾಗ್ನಲ್ಲಿ ಬತ್ತ್ ಅನ್ಕಂಡ್ ಮೊನ್ನೆ ವಾರ್ತೆಯಲ್ಲಿ ಕೇಂಡೆ:-))

ರಮ್ಯ,
ನನ್ನ ಬ್ಲಾಗಿಗೆ ಸ್ವಾಗತ. ನಮಗೆಲ್ಲ ಮಾವಿನಕಾಯಿ ಚಿತ್ರಾನ್ನ ತಿನ್ಬೇಕು ಅಂತ ಆಸೆಯಾಗ್ತಿದೆ:-))

ರಾಜೇಶ್,
ನಿಮಗೆ ಕಷ್ಟದ ಪ್ರಶ್ನೆ ಕೇಳೋದು ಕಷ್ಟದ ಕೆಲಸ. ಕರ್ನಾಟಕದ ಇಂಚಿಂಚೂ ಬಲ್ಲ ನಿಮಗೆ, ಎಲ್ಲ ಪ್ರಶ್ನೆನೂ ಸುಲಭದ್ದೆ:-)

ಶ್ರೀ,
ನನಗೆ ಬೇಕಾಗಿದ್ದು 'ಮರವಂತೆ'ನೆ:-) ನೀವು mind reader:-))

ರೆಗ್ಯುಲರ್ ಸ್ಟೂಡೆಂಟ್ ಆದ್ರೆ ಒಳ್ಳೆದು. ಹಾಗೇನೆ ನಿಯಮಿತವಾಗಿ ನನ್ನ ಗುರುದಕ್ಷಿಣೆನೂ ಕೊಟ್ರಾಯ್ತು:-)) ತುಳಸಿಯಮ್ಮ ಮತ್ತೆ ಶಾಂತಲ ಥರ ಮಾಡ್ಬೇಡಿ. ಅವ್ರು ಕೊಡ್ತಿನಂತ ಹೇಳಿ. ಇನ್ನೂ ಏನೂ ಕೊಟ್ಟಿಲ್ಲ:-(

ಯಾತ್ರಿಕ,
ತುಂಬ ಖುಶಿಯಾಯ್ತು, ಓದಿ. ನಾನು ಪಂಡಿತನಲ್ಲ. ನನ್ನದೇನಿದ್ದರೂ ನಿತ್ಯ ಬದುಕಿನಿಂದ ಗ್ರಹಿಸಿದ್ದು. ಓದಿ ತಿಳಿದದ್ದಲ್ಲ. 'ಖಂಡಿತ' ಎನ್ನುವ ಅರ್ಥ ಹೇಗೆ ಬಂತೋ ಗೊತ್ತಿಲ್ಲ.

ಮರವಂತೆಯಲ್ಲಿ ಸೌಪರ್ಣಿಕ ನದಿ ಸಮುದ್ರ ಸೇರ್ತಾ ಇರ್ಲಿಲ್ಲ ಅಂತ ನನ್ನ ಅನಿಸಿಕೆ. ಗಂಗೊಳ್ಳಿ (ಪಂಚ ಗಂಗಾವಳಿ - ೫ ಕವಲು)ಹೊಳೆ ಬಗ್ಗೆ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಸ್ತಾಪ ಇದೆ. ನನ್ನ ಅಜ್ಜಿಯಿಂದನೂ ಕಥೆ ಕೇಳಿದೀನಿ. ಆದ್ರೆ ಮರವಂತೆ ಹೊಳೆ ಬಗ್ಗೆ ಕೇಳಿಲ್ಲ. ನೀವೆಲ್ಲಾದ್ರೂ ಕೇಳಿದೀರಾ?