May 13, 2007

ಗಂಟಿ

'ಗಂಟಿ' = ದನ, ಎಮ್ಮೆ, ಎತ್ತು, ಹೋರಿ,(Live stock, ನಾಯಿ ಬೆಕ್ಕುಗಳನ್ನ ಬಿಟ್ಟು)
ಸಂತು ಅವರ ವಿವರಣೆ ತುಂಬ ಚೆನ್ನಾಗಿದೆ.

"ಇವ ಎಂತಕೂ (ಏನಕ್ಕೂ) ಆಪವ್ನಲ್ಲ (ಆಗುವವನಲ್ಲ). 'ಗಂಟಿ' ಮೇಸುಕೆ (ಮೇಯಿಸಲಿಕ್ಕೆ) ಅಡ್ಡಿಲ್ಲ."
"ನಾನ್ ಇವತ್ತ್ ಮದಿಗ್ (ಮದ್ವೆಗೆ) ಹೋಯ್ಕ್. ನೀನ್ 'ಗಂಟಿ' ಕಂಡ್ಕಂತ್ಯಾ? (ನೋಡ್ಕೋತೀಯ)"
"ಅಮ್ಮ, 'ಗಂಟಿ'ಗ್ ಹುಲ್ಲ್ ಹಾಕಿದ್ಯಾ? ದನ ಕೂಗ್ತಿತ್ತಪ್ಪ ಆಗ್ಳಿಂದ (ಆವಾಗಿಂದ)"

'ಹೆಂಗರು' - ಹೆಣ್ಣು ಕರು
'ಗುಡ್ಡ' - ಗಂಡು ಕರು
"ದನ ಕರು ಹಾಕಿತ್ತ? ಗುಡ್ಡವ? ಹೆಂಗರುವ?"

'ಕಡಸು' - ಕರುವಿಗಿಂತ ಕೊಂಚ ದೊಡ್ಡದಾದ, ಇನ್ನೂ ಗರ್ಭಧರಿಸಿರದ ಎಳೆಗರು:-)
'ಕಡಸು' ಶಬ್ದ ತಮಿಳು, ಮಲಯಾಳಂನ 'ಕಡಾ' ಶಬ್ದದಿಂದ ಬಂದಿರಬಹುದು ಅಂತ ಎಲ್ಲೋ ಓದಿದ್ದೆ.

'ಬತ್ತ್ ಗಂದಿ' = ಬತ್ತಿದ ದನ, ಹಾಲು ಕೊಡದ ದನ.
"'ಬತ್ತ್ ಗಂದಿ' ಮಾರಾಯ್ರೆ ಅದ್. ಹಾಲೇ ಇಲ್ಲ ಕಾಣಿ."

ದನಗಳ ಆಹಾರ - 'ಹಿಂಡಿ', 'ಅಕ್ಕಚ್ಚು'
"ದನಕ್ಕೆ ಅಕ್ಕಚ್ಚ್ ಕೊಟ್ಟಿದ್ಯ?"
"ಎಮ್ಮೆ ಕೂಗತ್ತಲೆ, ಮಗ. 'ಅಕ್ಕಚ್ಚ್' ಬೇಕೇನೋ ಅದ್ಕೆ. ಹೋಯಿ ಕಾಣ್"
'ಗೋಗ್ರಾಸ' ಇಲ್ಲದೆ ಯಾವ ಊಟವೂ ಆರಂಭವಾಗುವುದಿಲ್ಲ. ದೀಪಾವಳಿಯ ಸಮಯದಲ್ಲಿ 'ಗೋಪೂಜೆ' ನನಗೆ ತುಂಬ ಖುಶಿ ಕೊಡ್ತಾ ಇದ್ದ ಹಬ್ಬ.

ಬೋನಸ್ ಪ್ರಶ್ನೆಗೆ ಉತ್ತರ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಕೋ.ಲ.ಕಾರಂತರ ಜೀವನಚರಿತ್ರೆ. ಶಾಂತಲಾಗೆ ಪೂರ್ತಿ ಅಂಕ:-)
'ಕೋ.ಲ.ಕಾರಂತ'ರು ಶಿವರಾಮ ಕಾರಂತರ ಸಹೋದರ. ಶಿಕ್ಷಣತಜ್ಞರು. ಜೀವನದ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ಕೊಡಬೇಕು ಅನ್ನುವುದು ಅವರ ನಿಲುವಾಗಿತ್ತು. ಅದರಲ್ಲಿ ವ್ಯವಸಾಯವೂ ಒಂದು. ಅವರು ಸ್ವತಃ ತೋಟ ಬೆಳೆಸಿದ್ದರು. ಕುಂದಾಪುರದ ಬೋರ್ಡ್ ಹೈಸ್ಕೂಲ್, ಕೋಟದ ವಿವೇಕ ಹೈಸ್ಕೂಲ್-ಗಳ ಜೊತೆ ಅವರ ಹೆಸರು ಚಿರಸ್ಥಾಯಿಯಾಗಿದೆ. ದೇವರ ಕುರಿತು ಅವರದ್ದು 'ಏ.ಎನ್.ಮೂರ್ತಿರಾಯ'ರ ಥರದ ನಿಲುವು. ನಾಸ್ತಿಕರಾದರೂ ಹೆಂಡತಿಯ ಆಸ್ತಿಕತೆಯನ್ನು ಪ್ರಶ್ನಿಸಿದವರಲ್ಲ.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಸೊಲಗೆ'?
ಸುಳಿವು - ಇದು ದ್ರವಗಳ ಮಾಪನ ಪರಿಮಾಣ.

ಬೋನಸ್ ಪ್ರಶ್ನೆ -
ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಶಿವರಾಮ ಕಾರಂತರ ಸಹೋದರ ಯಾರು?

8 comments:

ಅನೂಜ್ಞಾ said...

ಸೊಲಗೆ ಅಂದರೆ ೧/೪ ofಸಿದ್ದೆ(ಪಾವು).

ಕರ್ನಾಟಕ ಏಕೀಕರಣದಲ್ಲಿ ಶ್ರಮವಹಿಸಿದ ಶಿವರಾಮ ಕಾರಂತರ ಸಹೋದರ ರಾಮಕೃಷ್ಣ ಕಾರಂತರು. ಸರಿನಾ?

sritri said...

ಕಡಸು ಅನ್ನುವ ಪದ ನಮ್ಮ ಕಡೆ ಬಳಕೆಯಲ್ಲಿದೆ. ಸ್ವಲ್ಪ ದೊಡ್ದ ಕರುವನ್ನು (ಪಡ್ಡೆ :-)) "ಮಣಕ" ಎಂದೂ ಕರೆಯುತ್ತಾರೆ.

sritri said...

ಜ್ಯೋತಿ ಹೇಳಿರುವ ಉತ್ತರ ರಾಮಕೃಷ್ಣ ಕಾರಂತ ಸರಿನಾ? ಇವರು ಶಿವರಾಮ ಕಾರಂತರಿಗೆ ತಲೆಯ ಮೇಲೆ ಗುದ್ದಿ ಓದಲು ಕೂಡಿಸುತ್ತಿದ್ದರಂತೆ :) - (ನಾನು ಎವೆ ಮುಚ್ಚಿದರೆ ಸಾಕು, ಅಣ್ಣನ ಮುಷ್ಟಿ ಗಿಡುಗನ ವೇಗದಿಂದ ನನ್ನ ತಲೆಯ ಮೇಲೆ ಎರಗುತ್ತಿತ್ತು. ಹೀಗೆ ಒಂಭತ್ತು ಘಂಟೆಯವರೀ ಓದಿಸುವುದೇ ಅವನ ಕೆಲಸ)

ಕಾರಂತರ ಇತರ ಸಹೋದರರು - ಲಕ್ಷ್ಮೀನಾರಾಯಣ, ವಾಸುದೇವ. ಭಾಗವತರೇ, ಪೂರ್ತಿ ಓದಿಕೊಂಡು ಬಂದಿದ್ದರೆ ನಿಮ್ಮ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಿದ್ದೆ. :-)

Gubbacchi said...

ಭಾಗ್ವತ್ರೆ, ಕಡಸು ಅಂತ ಹೆಣ್ಣು ಕರುವಿಗೆ ಹೆಳ್ತ್ರಾ?... ಕಡಸು ಅಂದ್ರೆ ಕರುಕಿಂತ ದೊಡ್ಡದು ಆದ್ರೆ ಅದಕ್ಕೆ ಒಂದೂ ಕರು ಇರುದಿಲ್ಲ.
ಹೆಣ್ಣು ಕರುವಿಗೆ ಹೆಂಗರು ಅಂತ ಹೆಳ್ತ್ರ ಅಲ್ದಾ?

Jagali bhaagavata said...

ಗುಬ್ಬಚ್ಚಿ,
ನೀವ್ ಹೇಳಿದ್ದ್ ಸರಿ. ಅದನ್ನ ಸರಿ ಮಾಡ್ತೆ:-))

ನಿಮಗೆ reviewer ಪಟ್ಟ ಕೊಟ್ಟದ್ದ ಸಾರ್ಥಕ ಆಯ್ತ್:-))

Unknown said...

ನಮಸ್ಕಾರ ಭಾಗವತರಿಗೇ
ನಿಮ್ಮ ಬ್ಲೋಗ್ ಯಾವುದು ಅಂತ ಹುಡುಕುತ್ತಿದ್ದೆ ಇವತ್ತು ಸಿಕ್ಕಿತು.. ನಾನು ನಿಮ್ಮ ಸ್ಟೂಡೆoಟ್ ಲಿಸ್ಟ್‌ಗೆ ಸೇರ್‌ಕೋತೀನಿ

reborn said...

I didnt know the meaing of the word ... :) so i fail :)

and Shivram Karanth s brother u r asking about is is K.L. karanth right...? He was the one who planted saalu Maragalu in Kundapur . U must have seen them right..

Do i get any grace marks now ?

Jagali bhaagavata said...

ಮಲ್ನಾಡ್,
ಸ್ವಾಗತ. ತುಂಬ ಸಂತೋಷ. ನನ್ನ ಗುರುದಕ್ಷಿಣೆ ೧೦೦೦ ಡಾಲರ್ ಬೇಗ ಕಳ್ಸಿ ಕೊಡಿ:-))

reborn,
ಆಶ್ಚರ್ಯ. ಗಂಟಿ ಅಂದ್ರೆ ಗೊತ್ತಿರ್ಲಿಲ್ಯಾ? ನೀವು double fail. ಉತ್ರ ನನ್ನ ಮುಂದಿನ post-ನಲ್ಲಿದೆ ನೋಡಿ.:-))