August 14, 2007

ಬೈಸರ್ತಿಗೆ

ಬೈಸರ್ತಿಗೆ, ಬೈಸರಿಗೆ = ಸಂಜೆಗೆ, ಸಾಯಂಕಾಲದ ಹೊತ್ತು.

ಇವತ್ತ್ ಬೈಸರ್ತಿಗೆ ಎಲ್ಲಿಗೆ ಸವಾರಿ ತಮ್ದ್?
ನಾಳೆ ಬೈಸರ್ತಿಗೆ ಎಲ್ಲ ತುಳಸಿಯಮ್ಮನ ಮನೆಗೆ ಬನ್ನಿ. ಗಡ್ಜ್ ಹಯಗ್ರೀವದ ಸಮಾರಾಧನೆ ಇತ್ತಂಬ್ರ್:-)
ಈಗ ನಂಗ್ ಕೆಲ್ಸ ಮಸ್ತ್ ಇತ್ತ್. ಬೈಸರ್ತಿಗೆ ಬಾ, ಆಗ್ದಾ?

ಇದೇ ಅರ್ಥದ ಇನ್ನೊಂದು ಶಬ್ದ - 'ಬೈಯಾಪತ್ತಿಗೆ'.
'ಬೈ' + 'ಆಪತ್ತಿಗೆ' (ಆಗುವಾಗ) = ಸಂಜೆ ಆಗುವಾಗ
"ಬೈಯಾಪತ್ತಿಗೆ ಭಟ್ರ್ ಮನಿಗ್ ಹೋಯಿ (ಹೋಗಿ) ಹಾಲ್ ತಕಂಡ್ (ತೆಗೆದುಕೊಂಡು) ಬಾ."

ಇದೇ ಪದದ ಇನ್ನೊಂದು ರೂಪ - 'ಬೈಯಾಯ್ತಲೆ', 'ಬೈಯಾಯ್ತ್'
'ಬೈ' + 'ಆಯ್ತಲೆ' (ಆಯಿತಲ್ಲ) = ಸಂಜೆ ಆಯ್ತಲ್ಲ
"ಬೈಯಾಯ್ತಲೆ, ಇನ್ನೂ ದನದ ಹಾಲ್ ಕರಿಲಿಲ್ಯಾ ನೀನ್?"
"ಬೈಯಾಯ್ತ್. ಇನ್ನ್ ಕೂಕಂಡ್ರೆ (ಕೂತುಕೊಂಡರೆ) ಆಪ್ದಲ್ಲ (ಆಗುವುದಲ್ಲ)" - ಮನೆಗೆ ಬಂದ ನೆಂಟರಿಗೆ ಸಂಜೆಯಾಗುತ್ತಲೆ ಆಗುವ ಜ್ಞಾನೋದಯ:)

ನಿಘಂಟಿನಲ್ಲಿ ನನಗೆ ದೊರೆತ ಶಬ್ದ 'ಬೈಗು'. 'ಬೈಹೊತ್ತು' ಅನ್ನುವ ಪದ ಕೇಳಿದ್ದೆ. ಆದರೆ 'ಬೈ' ಅನ್ನುವ ಸ್ವತಂತ್ರ ಪದದ ಅರ್ಥ 'ಅಡಗಿಸು', 'ಹುದುಗಿಸು'. 'ಬೈ' ಅಂದರೆ ಸಂಜೆಯೂ ಆಗುತ್ತದಾ? ಕನ್ನಡ ಪಂಡಿತರು ತಿಳಿಸಿ. ನಮ್ಮ reviewers ಯಾವಾಗ್ಲೋ ಮಾಯ ಆಗ್ಬಿಟ್ಟಿದ್ದಾರೆ:(( inspector-ಅಂತೂ ಪತ್ತೆನೆ ಇಲ್ಲ....

'ಬೈಯಾದ' ನಂತರ 'ಹೊತ್ತು ಕಂತುತ್ತದೆ". 'ಕಂತು' = ಮುಳುಗು.
ಬೆಳಿಗ್ಗೆ ಆಗುವಾಗ - ಹೊತ್ತು ಮೂಡುತ್ತದೆ. ಬೆಳ್ಳಿ ಮೂಡುತ್ತದೆ.
ಸಂಜೆ - ಹೊತ್ತು ಕಂತುತ್ತದೆ.
"ಹೊತ್ತ್ ಮೂಡ್ತ್. ಇನ್ನೂ ನಿದ್ರಿಯ ನಿಂಗೆ?"
"ಹೊತ್ತ್ ಕಂತಿಯಾಯ್ತಲೆ, ಮಕ್ಳೆ. ಇನ್ನ್ ಆಡದ್ದ್ ಸಾಕ್. ಎಲ್ಲ ಕೈ ಕಾಲ್ ಮುಖ ತೊಳ್ಕಂಡ್ ದೇವ್ರ್ ಭಜನೆ ಮಾಡಿನಿ. ಹೋಯ್ನಿ (ಹೋಗಿ)"

ಬೆಳಗಾಗುವುದು, ಸಂಜೆಯಾಗುವುದು ನಮ್ಮ ಜನಪದರಿಗೆ, ಕವಿಗಳಿಗೆ ಬಹಳ ಆಸಕ್ತಿ ಹುಟ್ಟಿಸುವ ಕ್ರಿಯೆಗಳೆನಿಸುತ್ತದೆ. ಸೂರ್ಯನಿಗಂತೂ ದೇವರ ಪಟ್ಟ:)) ಬೇಂದ್ರೆಯವರ ಈ ಕವನ ನನಗೆ ಬಹಳ ಅಚ್ಚುಮೆಚ್ಚು
"ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ, ನುಣ್ಣನೆ ಎರಕವ ಹೊಯ್ದಾ"
ತುಳಸಿಯಮ್ಮ, ತುಳಸಿವನದಲ್ಲಿ ಈ ಪದ್ಯ ಹಾಕ್ತ್ರ್ಯಾ?

ಬೋನಸ್ ಪ್ರಶ್ನೆಗೆ ಉತ್ರ -
'ಕುಜ' ಕಾದಂಬರಿ 'ಜಿ. ಕೆ. ಐತಾಳ'ರ ಕೃತಿ. ಕುಂದಾಪುರದವರು. 'ಅ.ನ.ಕೃ' ಪ್ರಶಸ್ತಿ ವಿಜೇತ ಕೃತಿ. ಈ ಕಾದಂಬರಿಯ ನಾಯಕನ ಪಾತ್ರಕ್ಕೂ, ಚಿತ್ತಾಲರ 'ಶಿಕಾರಿ'ಯ 'ನಾಗಪ್ಪ'ನಿಗೂ ಬಹಳ ಸಾಮ್ಯತೆಗಳಿವೆ.

ಇವತ್ತಿನ ಸವಾಲು:-
ಈ ಶಬ್ದದ ಅರ್ಥ ಏನು - 'ತದ್ಯಾಪ್ರತ'.

ಬೋನಸ್ ಪ್ರಶ್ನೆ -
ಕ್ಷಿತಿಜ ನೇಸರ ಧಾಮ ಎಲ್ಲಿದೆ?
ಸುಳಿವು - ಇವತ್ತಿನ ಶಬ್ದಮಾಲೆಯನ್ನ ನೋಡಿ:)