ಹಳೇ ಬ್ಲಾಗ್
ನನ್ನ ಸಹಪಾಠಿ ಒಂದು ಬ್ಲಾಗ್ ಬರೀತಿದ್ದ - http://rkvijay.blogspot.com/ - ಆದ್ರೆ ಯಾರೂ ಓದ್ತಾ ಇಲ್ಲ, ಅನಿಸಿಕೆಗಳನ್ನ ಗೀಚ್ತಾ ಇಲ್ಲ ಅಂತ ಈಗ ಮುಖ ಊದಿಸ್ಕೊಂಡು ಕೂತಿದ್ದಾನೆ, ಬ್ಲಾಗ್ ಬರೆಯೋದ್ ಬಿಟ್ಟು. ನೀವಾದ್ರೂ ಓದಿ, ನಿಮ್ಮನಿಸಿಕೆಗಳನ್ನ ಗೀಚಿ:-)
ನನ್ನ ಸಹಪಾಠಿ ಒಂದು ಬ್ಲಾಗ್ ಬರೀತಿದ್ದ - http://rkvijay.blogspot.com/ - ಆದ್ರೆ ಯಾರೂ ಓದ್ತಾ ಇಲ್ಲ, ಅನಿಸಿಕೆಗಳನ್ನ ಗೀಚ್ತಾ ಇಲ್ಲ ಅಂತ ಈಗ ಮುಖ ಊದಿಸ್ಕೊಂಡು ಕೂತಿದ್ದಾನೆ, ಬ್ಲಾಗ್ ಬರೆಯೋದ್ ಬಿಟ್ಟು. ನೀವಾದ್ರೂ ಓದಿ, ನಿಮ್ಮನಿಸಿಕೆಗಳನ್ನ ಗೀಚಿ:-)
Posted by Jagali bhaagavata at 8:21 PM 6 comments
ನಿಘಂಟು = ಪದಕೋಶ. ಇದು ಗ್ರಂಥಸ್ಥ ಕನ್ನಡದಲ್ಲಿನ ಬಳಕೆ. ಈ ಅರ್ಥವಲ್ಲದೆ 'ಖಚಿತ', 'ಖಂಡಿತ', 'ನಿಶ್ಚಿತ' ಅನ್ನುವ ಅರ್ಥದಲ್ಲೂ ಬಳಕೆಯಾಗುತ್ತದೆ.
ಕುಂದಗನ್ನಡದ ಉದಾಹರಣೆಗಳು
"ಮದಿ (ಮದುವೆ) ಏಗ್ಳಿಕಂತೇಳಿ ನಿಘಂಟಾಯ್ತಾ?"
"ದಿನ ಸ್ವಲ್ಪ ಹೆಚ್ಚು ಕಡ್ಮೆ ಆಪ್ಗ್ (ಆಗಬಹುದು). ನಿಘಂಟಲ್ಲ ಅದ್"
ಕಾಸರಗೋಡಿನ ಹವ್ಯಗನ್ನಡದ ಉದಾಹರಣೆಗಳು (ಶ್ರೀ ಕೊಟ್ಟಿದ್ದು)
"ನೀ ಬರ್ತ್ದ್ (ಬರ್ತ್-ದ್) ನಿಘಂಟಾ..."
"ಇಲ್ಲೆ ನಾ ಬರ್ತ್-ದ್ ನಿಘಂಟಿಲ್ಲೆ, ನಂಗೆ ಕಾಯಳೆ (ಕಾಯಬೇಡಿ), ನೀವ್ ಹೋಯ್ನಿ (ಹೋಗಿ)..."
ಈ ಅರ್ಥ ಕುಂದಗನ್ನಡಕ್ಕೆ ಮಾತ್ರ ಸೀಮಿತ ಅಲ್ಲ ಅನ್ನಿಸ್ತದೆ ನನಗೆ. ತ.ರಾ.ಸು. ಅವರ 'ಚಂದವಳ್ಳಿಯ ತೋಟದಲ್ಲಿ' ಕಾದಂಬರಿಯ ೯೦ನೇ ಪುಟದಲ್ಲಿ ಈ ಪದ ಬಳಕೆಯಾಗಿದೆ - "ನನ್ನ ಮಾತಿನಲ್ಲಿ ನಂಬಿಕೆ ಇಲ್ಲಾಂದ್ರೆ, ಈಗ್ಲೇ ಏನೇನ್ಬೇಕೋ ಎಲ್ಲಾ ನಿಘಂಟಾಗಿ ಹೇಳ್ಬಿಡಿ" ಎಂದ ಶಿವನಂಜೇಗೌಡ.
'ನಿಘಂಟು' ಶಬ್ದದ ವ್ಯುತ್ಪತ್ತಿ ಬಗ್ಗೆ 'ಯಾತ್ರಿಕ' ವಿವರವಾಗಿ ಬರೆದಿದ್ದಾರೆ:-
ಯಾಸ್ಕಾಚಾರ್ಯರ ನಿರುಕ್ತದಲ್ಲಿ ನಿಘಂಟು ಶಬ್ದದ ವಿವರಣೆ ಕೊಟ್ಟಿದೆ - "ಛಂದೋಭ್ಯಃ ಸಮಾಹೃತ್ಯ ಸಮಾಹೃತ್ಯ ಸಮಾಮ್ನತಾಃ ತೇ ನಿಗಂತವ ಏವ ಸಂತೋ ನಿಗಮನಾನ್ನಿಘಂಟವ ಉಚ್ಯಂತ ಔಪಮನ್ಯವ: ಅಪಿ ವಾ ಹನನಾದ್ಯೇವ ಸ್ಯುಃ ಸಮಾಹತಾ ಭವಂತಿ ಯದ್ವಾ ಸಮಾಹೃತಾ ಭವಂತಿ "
- ವೇದಗಳಿಂದ (=ಛಂದೋಭ್ಯಃ) ಮತ್ತೆ ಮತ್ತೆ ಆರಿಸಿ (ಸಮಾಹೃತ್ಯ ಸಮಾಹೃತ್ಯ) ಜೋಡಿಸಿದ ಶಬ್ದಗಳಿವು. ಈ ರೀತಿ ವೇದಗಳಿಂದ (ನಿಗಮನಾತ್) ಉದ್ಧರಿಸಿದ್ದರಿಂದಲೇ (quoted, ನಿಗಂತವಃ) ಇವು ನಿಘಂಟುಗಳು ಎನ್ನುತ್ತಾರೆ ಔಪಮನ್ಯವ ಋಷಿಗಳು. ನಿಘಂಟು ಶಬ್ದವು ಹನ್ ಧಾತುವಿನಿಂದ ಬಂದಿದೆ (ಹನ್ ಅಂದರೆ ಕೊಲ್ಲು, ಜೋಡಿಸು ಎಂಬ ಅರ್ಥಗಳಿವೆ- ಸಮಾಹತ ಎಂಬ ಶಬ್ದ ಕೂಡ ಈ ಧಾತುವಿನದ್ದು) ಅಥವಾ ಹೃ ಧಾತುವಿನಿಂದಾಗಿದೆ ('ಸಮಾಹೃತ' ಈ ಶಬ್ದ ಹೃ ಧಾತುವಿನಿಂದಾದ್ದು-ಇದಕ್ಕೂ ಸೇರಿಸು ಎಂಬ ಅರ್ಥ ಉಂಟು).
'ನಿಘಂಟು' ಶಬ್ದಕ್ಕೆ 'ಖಚಿತ', 'ನಿಶ್ಚಿತ' ಎನ್ನುವ ಅರ್ಥ ಹೇಗೆ ಬಂತೋ ನಿಘಂಟಾಗಿ ಗೊತ್ತಿಲ್ಲ. ಬಲ್ಲವರು ತಿಳಿಸಿ.
ಬೋನಸ್ ಪ್ರಶ್ನೆಗೆ ಉತ್ರ:-ಮರವಂತೆಯಲ್ಲಿ ರಸ್ತೆಯ ಒಂದು ಬದಿ ಸಮುದ್ರ, ಇನ್ನೊಂದು ಬದಿ ಸೌಪರ್ಣಿಕಾ ನದಿ. ಇಲ್ಲಿ ದೋಣಿ ವಿಹಾರ ವ್ಯವಸ್ಥೆ ಕೂಡ ಇದೆ. ಆದರೆ ಮಳೆಗಾಲ ಸೂಕ್ತ ಸಮಯ ಅಲ್ಲ:-)
ಇವತ್ತಿನ ಸವಾಲು:-
ಈ ಪದದ ಅರ್ಥ ಏನು - 'ಹರ್ಮೈಕ'?
ಬೋನಸ್ ಪ್ರಶ್ನೆ:-
ಹವ್ಯಕರ ಮನೆ ಹೊಕ್ಕಾಗ 'ಆಸ್ರಿಗ್ ಬೇಕಾ' ಅಂತ ಕೇಳ್ತಾರೆ. ಅದೇ ರೀತಿ ಕುಂದಾಪುರದ ಮನೆಯಲ್ಲಿ ಏನ್ ಕೇಳ್ತಾರೆ?:-)
Posted by Jagali bhaagavata at 9:12 PM 4 comments
ತಟ್ಕ್ = ಸ್ವಲ್ಪ, ಚೂರೇ ಚೂರು. ಇದನ್ನ ಹೆಚ್ಚಾಗಿ ದ್ರವಗಳಿಗೆ ಸಂಬಂಧಿಸಿ ಉಪಯೋಗಿಸ್ತಾರೆ.
"ಅಷ್ಟೆಲ್ಲ ಮಜ್ಗಿ (ಮಜ್ಜಿಗೆ) ಬ್ಯಾಡ. 'ತಟ್ಕ್' ಅಷ್ಟೇಯ"
"ತಟ್ಕ್ ಎಣ್ಣೆ ಕೊಡ್"
"ಮಸ್ತ್ ಪಾಯ್ಸ ಹಾಕ್ಬೇಡ. ತಟ್ಕ್ ಅಷ್ಟೇಯ. ನಂಗೆ ದಾಕ್ಷಿಣ್ಯ ಇಲ್ಲ"
'ತಟ್ಕ್' ಪದ 'ತಟಕು' ಪದದ ಅಪಭ್ರಂಶ ರೂಪ. 'ತಟಕು' = ತೊಟ್ಟು, ಬಿಂದು, ಹನಿ. ಬರಹ ಕನ್ನಡ ನಿಘಂಟಿನಲ್ಲಿ ಇದರ ಅರ್ಥವನ್ನ ನೋಡಬಹುದು.
ಇದೇ ಅರ್ಥದ ಇನ್ನೊಂದು ಪದ -'ಹುಂಡ್'. 'ಹುಂಡ್' ಅಥವ 'ಹುಂಡು' ಅಂದರೆ 'ತೊಟ್ಟು', 'ಬಿಂದು', 'ಬೊಟ್ಟು', 'ತಿಲಕ'. ಆದರೆ ಈ ಪದ ಯಾಕೋ ನಿಘಂಟಿನಲ್ಲಿಲ್ಲ. ಈ ಪದವನ್ನ ಎಷ್ಟು ಜನ ಕೇಳಿಲ್ಲ?
"ಒಂದ್ ಹುಂಡ್ ಹಾಲ್ ಹಾಕ್"
"ಮಣಿಯ, ಒಂದ್ ಹುಂಡ್ ತೀರ್ಥ ಕೊಡ್ ಕಾಂಬ"
"ಹುಂಡ್ ಇಟ್ಕಣ್ಲಿಲ್ಲ ಎಂತಕೆ? ಹಣೆ ಬೋಳ್ ಬೋಳ್ ಅನ್ಸತ್ತ್" ಇಲ್ಲಿ ಹುಂಡ್ ಅಂದರೆ ತಿಲಕ.
'ಹುಂಡ್ ಕೋಳಿ' ಯಾರಾದ್ರೂ ನೋಡಿದೀರಾ?:-)
'ತಟ್ಕ್' ಅಂದ್ರೆ 'ತಟ್ಟಬೇಕ' ಅಂತನೂ ಅರ್ಥೈಸಬಹುದು. ಇದು ಸಂತು ಅವರ ಸಲಹೆ.
"ಅಧಿಕಪ್ರಸಂಗ ಮಾಡ್ತ್ಯಾ? ಹಿಡ್ದ್ ತಟ್ಕಾ?"
"ಹೇಳ್ದಾಂಗ್ ಮಾಡ್ತ್ಯಾ, ಇಲ್ಲಾ ತಟ್ಕಾ?"
ಬೋನಸ್ ಪ್ರಶ್ನೆಗೆ ಉತ್ರ:-
'ತಟ್ಕ್' ಪದದ ಸಂವಾದಿ ಪದ 'ಹನಿ'. ನನ್ನದು ಹರಕು ಮುರುಕು ಹವ್ಯಗನ್ನಡ. ಬಲ್ಲವರು ತಿದ್ದಿ. ಹವ್ಯಗನ್ನಡದ ಹಿತದೃಷ್ಟಿಯಿಂದ ಉದಾಹರಣೆ ಕೊಡ್ಲಿಕ್ಕೆ ಹೋಗಿಲ್ಲ:-))
ಇವತ್ತಿನ ಸವಾಲು:
ಈ ಪದದ ಅರ್ಥ ಏನು - 'ನಿಘಂಟು'.
ಬೋನಸ್ ಪ್ರಶ್ನೆ:
ರಸ್ತೆಯ ಒಂದು ಬದಿ ಸಮುದ್ರ. ಇನ್ನೊಂದು ಬದಿ ನದಿ. ಕರ್ನಾಟಕದಲ್ಲಿ ಎಲ್ಲಿದೆ?
Posted by Jagali bhaagavata at 11:08 PM 8 comments