ಸೊಲಗೆ
'ಸೊಲಗೆ'
ಸೊಲಗೆ = ೫೦ ಮಿ.ಲಿ.
೪ ಸೊಲಗೆಗೆ ಒಂದು ಸಿದ್ದಿ (ಸಿದ್ದೆ). ೫ ಸಿದ್ದಿಗೆ ಒಂದು ಲೀಟರ್.
ಹಾಲಿನ ಡೈರಿ, ಪ್ಯಾಕೆಟ್ ಹಾಲು ಬರುವ ಮುಂಚೆ ಹಾಲಿನ ಲೆಕ್ಕಾಚಾರವೆಲ್ಲ ಸಿದ್ದಿ, ಸೊಲಗೆಗಳ ಲೆಕ್ಕದಲ್ಲಿ.
"ಶೆಟ್ಟರ ಮನೆಗೆ ೪ ಸಿದ್ದಿ ಹಾಲು ಕೊಡ್ಕ್".
"ಮೊನ್ನೆ ಅಮಾವಾಸ್ಯೆಯಿಂದ ಹಾಲ್ ಕೊಡುಕೆ ಶುರು ಮಾಡದ್ದ್. ದಿನಕ್ಕೆ ೩ ಸಿದ್ದಿ ಹಾಲ್. ಸಿದ್ದಿಗೆ ೨ ರೂಪಾಯಿಯಾದ್ರೆ, ಒಟ್ಟ್ ಎಷ್ಟಾಯ್ತ್?".
"ಮಗ ಬಯಿಂದ (ಬಂದಿದ್ದಾನೆ). ಎರಡ್ ಸೊಲಗೆ ಹಾಲ್ ಹೆಚ್ಚು ಕೊಡುವಲೆ (ಕೊಡು)".
'ಸೊಲಗೆ' ದ್ರವಗಳ ಮಾಪನದ ಕನಿಷ್ಠ ಮಿತಿಯಾಗಿಯೂ ಉಪಯೋಗ ಆಗತ್ತೆ.
"ಅಷ್ಟೆಲ್ಲ ಬ್ಯಾಡ. ಒಂದ್ ಸೊಲಗೆ ಅಷ್ಟೆಯ"
ಧಾನ್ಯಗಳ ಮಾಪನದಲ್ಲಿ ಹೆಚ್ಚಾಗಿ ಉಪಯೋಗ ಆಗುವುದು "ಪಾವು", "ಸೇರು", "ಕಳ್ಸಿಗೆ", "ಮಾನಿಗೆ", "ಮುಡಿ".
೪ ಪಾವು = ಒಂದು ಸೇರು.
೧೪ ಸೇರು = ಒಂದು ಕಳ್ಸಿಗೆ
೪೨ ಸೇರು = ೩ ಕಳ್ಸಿಗೆ = ಒಂದು ಮಾನಿಗೆ = ಇದು ಸರಿಸುಮಾರು ೪೦ ಕೆ.ಜಿ. ಅಂತೆ.
ಒಂದು ಮುಡಿಗೆ ಎಷ್ಟು ಸೇರು? ೪೮?
"ನಾಕ್ (೪) ಸೇರ್ ಭತ್ತ ಕೊಡ್".
"ಎಷ್ಟ್ ಮಾನಿಗೆ ಭತ್ತ ಬೆಳಿತ್ರಿ?".
"ಅದ್ ನಾಕ್ ಮುಡಿ ಗದ್ದೆ".
ಈ ಪರಿಮಾಣಗಳೆಲ್ಲ ಒಂದು ಪ್ರದೇಶದಿಂದ ಒಂದು ಪ್ರದೇಶದಿಂದ ಬೇರೆ ಬೇರೆ ಆಗಿರತ್ತೆ. ಪೂರಕ ಓದಿಗೆ ಕನ್ನಡಪ್ರಭದ ಲೇಖನ - ಓದಿ. ಈ ಲೇಖನದ ಪ್ರಕಾರ ೪ ಸಿದ್ದೆಗೆ ಒಂದು ಪಾವು. ಆದ್ರೆ ನಮ್ಮಲ್ಲಿ ಸಿದ್ದೆ ಉಪಯೋಗಿಸುವುದು ದ್ರವಗಳಿಗೆ ಮಾತ್ರ, ಧಾನ್ಯಗಳಿಗಲ್ಲ. " ೪ ಸಿದ್ದೆ ಹಾಲು", " ೪ ಸೇರ್ ಭತ್ತ".
ಕುಂದಗನ್ನಡ ಪಂಡಿತರಿದ್ದರೆ ತಿದ್ದಿ. ಬಾಲ ಬೇಕಿದ್ರೆ ಜೋಡ್ಸಿ:-)) ನಮ್ಮ reviewers ಮತ್ತೆ inspector ಇನ್ನೂ ಕಾಣೆಯಾಗಿದ್ದಾರೆ:-((
ಬೋನಸ್ ಪ್ರಶ್ನೆಗೆ ಉತ್ರ:- ಕರ್ನಾಟಕ ಏಕೀಕರಣದಲ್ಲಿ ಬಹುವಾಗಿ ಶ್ರಮಿಸಿದ ಕೋ.ಶಿವರಾಮ ಕಾರಂತರ ಸಹೋದರ - ರಾಮಕೃಷ್ಣ ಕಾರಂತ.
ನಾನೋದಿದ 'ಕರ್ನಾಟಕ ಏಕೀಕರಣ" ಕುರಿತಾದ ಒಂದೆರಡು ಪುಸ್ತಕಗಳಲ್ಲಿ ಓದಿದ್ದೆ. ಮತ್ತೆ ವೈದೇಹಿಯವರ ಬಳಿ ಕೇಳಿ ತಿಳಿದದ್ದು. ಹೆಚ್ಚು ಮಾಹಿತಿ ನನ್ನ ಹತ್ರ ಇಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಇವತ್ತಿನ ಸವಾಲು :
ಇದರ ಅರ್ಥ ಏನು - 'ತಟ್ಕ್'?
ಬೋನಸ್ ಪ್ರಶ್ನೆ :
'ತಟ್ಕ್' ಪದದ ಸಂವಾದಿ ಹವ್ಯಗನ್ನಡದ ಪದ ಯಾವುದು?
ಬಾಲಂಗೋಚಿ :
"ರಾಮ (ತೆಂಗಿನ) ಕಾಯಿ ಕೊಯ್ಯುಕೆ ಬಯಿಂದ. ನಾನ್ ಇನ್ನೊಂದೆರಡ್ ಕೆಲ್ಸ ಹಮ್ಸಕಂಡಿದ್ದೆ. ನೀನ್ ಎಲ್ಲ ಬಿಟ್ಟ್ ಇಷ್ಟೊತ್ತಿಗೆ ಸೊಲಗೆ, ಸಿದ್ದೆ..ಅನ್ಕಂಡ್ ಫೋನ ಮಾಡ್ರೆ? ಪುರ್ಸೊತ್ತಿದ್ದಾಗ್ಳಿಕೆ ಫೋನ್ ಮಾಡ್, ಆಗ್ದಾ (ಆಗೊಲ್ಲವೆ)?" ಅಂತ ಅಮ್ಮ ಫೋನ್ ಇಟ್ಟಿದ್ದರಿಂದ ಈ ಅಧ್ಯಾಯ ಇಲ್ಲಿಗೆ ಪರಿಸಮಾಪ್ತಿಯಾಗುತ್ತಿದೆ. ಮಂಗಳಂ:-))