July 27, 2008

ಕಾರ್ಯಕ್ರಮ ವರದಿ

ಬೆಂಗಳೂರು, ಜುಲೈ ೨೭ :
ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿಂದು ಸಮಕಾಲೀನ ಕನ್ನಡದ ಈರ್ವರು ಹಿರಿಯ ಲೇಖಕಿಯರಾದ ತುಳಸಿಯಮ್ಮ ಮತ್ತು ಸುಪ್ತದೀಪ್ತಿಯವರ ಪುಸ್ತಕ ಬಿಡುಗಡೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಶ್ರೀಯುತ ಜಗಲಿ ಭಾಗವತರು ತಮ್ಮ ದಿವ್ಯದೃಷ್ಟಿಯಿಂದ ಭಾಗವಹಿಸಿ, ಈ ಕಾರ್ಯಕ್ರಮದ ವರದಿಯನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ ೧೦:೩೦ಕ್ಕೆ ಕುಮಾರಿ ಊರ್ಜಾ ಶ್ರೀಹರಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಪ್ರವೀಣ್ ಶಿವಶಂಕರ್ ನಿರ್ವಹಿಸಿದರು. ದಟ್ಸ್-ಕನ್ನಡದ ಸಂಪಾದಕ ಶಾಮಸುಂದರ್ ಸ್ವಾಗತ ಮತ್ತು ಪರಿಚಯ ಭಾಷಣವನ್ನು ಮಾಡಿದರು. ನಂತರ ತುಳಸಿಯಮ್ಮನವರ ಲಘುಪ್ರಬಂಧ ಸಂಕಲನ - "ತುಳಸಿವನ", ಹಾಗೂ ಸುಪ್ತದೀಪ್ತಿಯವರ ಕವನಸಂಕಲನ - "ಭಾವಬಿಂಬ"ವನ್ನು ಹಿರಿಯ ಪತ್ರಕರ್ತ ಜೋಗಿ ಹಾಗೂ ಹಿರಿಯ ಕವಿ ದೊಡ್ಡರಂಗೇಗೌಡ ಬಿಡುಗಡೆಗೊಳಿಸಿದರು.
ಭಾವಬಿಂಬದ ಅನಾವರಣ
ಹೊತ್ತಿಗೆಗಳೆರಡರ ಲೋಕಾರ್ಪಣೆ

ಕವನ ಸಂಕಲನ ಬಿಡುಗಡೆಗೊಳಿಸಿ ಮಾತಾನಾಡಿದ ಕವಿ ದೊಡ್ಡರಂಗೇಗೌಡರು ಸುಪ್ತದೀಪ್ತಿಯವರ ಕವನಗಳ ಲಯಬದ್ಧತೆಯನ್ನು, ಸರಳಗನ್ನಡದ ಪ್ರಯೋಗಗಳನ್ನು ಶ್ಲಾಘಿಸಿದರು. ಸಂಕಲನದಿಂದ ಮೂರ್ನಾಲ್ಕು ಕವನಗಳನ್ನು ವಾಚಿಸಿದರು. ನಂತರ ಸುಪ್ತದೀಪ್ತಿಯವರು "ಕವನ ನನ್ನ ಹುಚ್ಚು. ನನ್ನ ಪೌರುಷ ಏನಿದ್ರೂ ಕೀಲಿಮಣೆ ಮುಂದೆ. ಆದ್ರೆ ಈಗ ನನ್ನ ಕಾಲು ಕಂಪಿಸ್ತಾ ಇದೆ" ಎನ್ನುತ್ತ ೧೫ ನಿಮಿಷ ನಿರರ್ಗಳವಾಗಿ ಮಾತಾನಾಡಿ ಕೇಳುಗರನ್ನು ಎಂದಿನಂತೆ ಬುಟ್ಟಿಗೆ ಹಾಕಿಕೊಂಡರು.

ನನ್ನ ಕಾಲುಗಳು ನಡುಗುತ್ತಿವೆ
’ತುಳಸಿವನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ್ದು ಹಿರಿಯ ಪತ್ರಕರ್ತರೂ, ಕನ್ನಡ ಬ್ಲಾಗುಲೋಕದಲ್ಲಿ ಹಲವಾರು ಬರಹಗಾರ/ರ್ತಿಯರಿಗೆ ’ಗಾಡ್-ಫಾದರ್" ಎಂದೂ ಚಿರಪರಿಚಿತರಾಗಿರುವ ಜೋಗಿಯವರು. ಸಂಕಲನದ ಹಲವಾರು ಪ್ರಬಂಧಗಳನ್ನು, ಕೆಲವು ಸಾಲುಗಳನ್ನು ಉಲ್ಲೇಖಿಸಿದ ಅವರು ತುಳಸಿಯಮ್ಮನವರ ಸಾಹಿತ್ಯಸೇವೆಯನ್ನು ಕೊಂಡಾಡಿದರು. ನಂತರ "ಗಾಂಭೀರ್ಯ ನನ್ನ ಗುಣವೇ ಅಲ್ಲ" ಎಂದು ಬಲುಗಂಭೀರವಾಗಿಯೇ ಮಾತುಗಳನ್ನಾರಂಭಿಸಿದ ತುಳಸಿಯಮ್ಮನವರು ಮುಂದುವರಿದು "ಜೋಗಿ ಕೈನಲ್ಲೆ ಪುಸ್ತಕ ಬಿಡುಗಡೆ ಮಾಡಿಸ್ಬೇಕು ಅಂತಿತ್ತು. ಅವ್ರು ಒಪ್ಪಿಲ್ದೆ ಇದ್ದಿದ್ರೆ ಪುಸ್ತಕ ಬಿಡುಗಡೆ ಮಾಡ್ತಿರ್ಲಿಲ್ಲ...ನಾನು ಬರ್ದಿದ್ದೆಲ್ಲ ಜೀವನದ ಸತ್ಯಘಟನೆಗಳೆ. ಸಾಹಿತ್ಯದ ಮೂಲದ್ರವ್ಯವಾದ ಜೀವನಾನುಭವದ ಮೂಸೆಯಲ್ಲಿಯೆ ಹರಳುಗಟ್ಟಿದವುಗಳಿವು" ಎಂದು ತಮ್ಮ ಲಘುಪ್ರಬಂಧಗಳ ಕುರಿತು ನುಡಿದರು.

ಗಾಂಭೀರ್ಯ ನನ್ನ ಗುಣವೇ ಅಲ್ಲ

ಕಾರ್ಯಕ್ರಮಕ್ಕೆ ಮೆರುಗುನೀಡಿದ್ದು ಹಿರಿಯ ಕವಿ ಎಚ್ಚೆಸ್ವಿಯವರ ಅಧ್ಯಕ್ಷೀಯ ಭಾಷಣದ ಮಾತುಗಳು. ದೂರದೇಶದಲ್ಲಿದ್ದೂ ಕನ್ನಡ ಪ್ರೀತಿಯನ್ನು, ಕನ್ನಡದ ಅಭಿಮಾನವನ್ನು ಉಳಿಸಿಕೊಂಡಿದ್ದಲ್ಲದೆ, ಪುಸ್ತಕ ಬಿಡುಗಡೆಯಂತಹ ಸಾಹಿತ್ಯಿಕ ಪಾರಿಚಾರಿಕೆಯನ್ನು ಮಾಡುತ್ತಿರುವ ಲೇಖಕಿಯರ ಉತ್ಸಾಹವನ್ನು, ಸಾಹಿತ್ಯಪರ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕನ್ನಡ ಸಾಹಿತ್ಯಲೋಕದ ದಿಗ್ಗಜಗಳಾದ ಸಾ.ಶಿ.ಮರುಳಯ್ಯ, ಲಕ್ಷ್ಮೀನಾರಯಣ ಭಟ್ಟರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಕನ್ನಡ ಬ್ಲಾಗುಲೋಕದಲ್ಲಿ ಚಿರಪರಿಚಿತರಾದ ಸುಶ್ರುತ, ಶ್ರೀನಿಧಿ, ಗುಬ್ಬಚ್ಚಿ, ಮಧು, ಮನಸ್ವಿನಿ, ವೀಣಾ ಹಾಜರಿದ್ದರು. ಮಾಯಾವಿ ವಿಕ್ರಮ ಕಾರ್ಯಕ್ರಮದ ಮೊದಲರ್ಧದಲ್ಲಿ ಮಾಯವಾಗಿದ್ದರು. ಸುನಾಥ ಕಾಕಾ ದೂರದ ಧಾರವಾಡದಿಂದ, ಫೇಡೆಯೊಂದಿಗೆ, ಬಲುಪ್ರೀತಿಯಿಂದ ಬಂದಿದ್ದರು.














೧೨:೩೦ಕ್ಕೆ ಮುಗಿದ ಕಾರ್ಯಕ್ರಮದ ನಂತರ ಸುಗ್ರಾಸ ಭೋಜನವನ್ನು ಏರ್ಪಡಿಸಲಾಗಿತ್ತು. ಬಿಸಿಬೇಳೆ ಭಾತ್, ಶಾವಿಗೆಭಾತ್, ಉಪ್ಪಿಟ್ಟು, ಬಾದಾಮ್ ಪುರಿ, ಮೊಸರನ್ನ, ಕೋಸಂಬರಿ, ಉಪ್ಪಿನಕಾಯಿಯಿಂದ ಕೂಡಿದ ಮೃಷ್ಟಾನ್ನ ಭೋಜನವನ್ನು ಎಲ್ಲರೂ ಸವಿದರು.

ಪ್ರತ್ಯಕ್ಷದರ್ಶಿಗಳ ಉದ್ಗಾರಗಳು :-
"ತುಳಸಿಯಮ್ಮ, ಸುಪ್ತದೀಪ್ತಿ ಇಬ್ರೂ ಫುಲ್ ಮಿಂಚಿಂಗ್ ಇವತ್ತು":-)
"ಜೋಗಿ ಸಕ್ಕತ್ ಕೂಲ್. ಆರಾಮಾಗಿ ಜೀನ್ಸ್-ನಲ್ಲೆ ಬಂದಿದ್ರು"
"ಮಾತು ಅಂದ್ರೆ ಎಚ್ಚೆಸ್ವಿದು. ಸೂಪರ್"
"ಸುನಾಥ ಕಾಕಾ ಬಂದಿದ್ರು. ತುಂಬ down-to-earth-ಉ. ಆದ್ರೆ ಬರೀ ಮೋಸ. ಫೇಡೆ ತುಳಸಿಯಮ್ಮಂಗೆ ಮಾತ್ರ ಕೊಟ್ರು. ನಾವು ಜಗಳ ಮಾಡಿದ್ರೂ ನಮಗೆ ಕೊಡ್ಲಿಲ್ಲ :-("

ಗಮನಾರ್ಹ ಹೇಳಿಕೆ:-
ಸುನಾಥ ಕಾಕಾ :- "ಜಗ್ಲಿ ಭಾಗ್ವತ್ರು ಸಂಭಾವಿತ ಮನಶಾ. ದಯವಿಟ್ಟು ಅವ್ರ ಕಾಲು ಎಳಿಬ್ಯಾಡ್ರಿ ಅಂತ ಲೇಖಕಿಯರಿಗೆ ಖುದ್ದು ಹೇಳಿ ಬಂದ್ರ ಛಲೋ ಅಂತ ಒಬ್ನ ಬೆಂಗ್ಳೂರಿಗ ಬಂದೇನ ನೋಡ್ರಿ"

7 comments:

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೆ....
ತಮ್ಮ ದಿವ್ಯದೃಷ್ಟಿಯನ್ನು ಮೆಚ್ಚಿದ್ದಲ್ಲದೇ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಬಗ್ಗೆ ಸವಿವರ ವರದಿ ನೀಡಿದ್ದಕ್ಕಾಗಿ ಅನಂತ ವಂದನೆಗಳನ್ನ ಅರ್ಪಿಸಿದ್ದೇವೆ.
ಕಾರ್ಯಕ್ರಮದ ಫೋಟೋಗಳನ್ನೂ ಸಹ ಆದಷ್ಟು ಬೇಗ ಸಂಗ್ರಹಿಸಿ ತಮ್ಮದೇ ಬ್ಲಾಗಲ್ಲಿ ಕರುಣಿಸಬೇಕಾಗಿ ‘ಪಟ್ಟಾಂಗ’ ‘ತುಳಸಿಯಮ್ಮ’ ಹಾಗೂ ‘ಸುಪ್ತದೀಪ್ತಿ’ಯವರುಗಳ ಕಟ್ಟಾ ಅಭಿಮಾನಿ ಪುಟ್ಟಕ್ಕನವರು ಈ ಮೂಲಕ ಬೇಡಿಕೆಯಿಟ್ಟಿದ್ದಾರೆ.

Sushrutha Dodderi said...

ನಂಗ್ಯಾಕೋ ನೀನೂ ಪ್ರೋಗ್ರಾಮಿಗೆ ಬಂದಿದ್ಯಾ ಅಂತ ಅನುಮಾನ...

ಮನಸ್ವಿನಿ said...

Cough Cough Cough :))

ಸುನಾಥ್ ಕಾಕ : ಇದೆಲ್ಲ ಈ ಭಾಗವತಂದೆ ಮಶ್ಕಿರಿ.. ನಾ ಮತ್ತ್ ನೀವ್ ಫೇಡಾ ಪಾರ್ಸಲ್ ಮಾಡೋ ವಿಷ್ಯಾನೂ ಹೇಳೀನಿ. ಅದ್ನ ಹಾಕೇ ಇಲ್ಲ ಈ ಮನ್ಶಾ

ನನ್ನ ಅರೆಬರೆ ಧಾರವಾಡ ಭಾಷಾ ಜ್ಞಾನದ ಮೇಲೆ ತಮ್ಮ ಕ್ಷಮೆ ಇರಲಿ.

sunaath said...

ಮನಸ್ವಿನಿ,
ಭಾಗ್ವತ್ರು ಮಸಾಲೆ ದೋಸೆ promise ಮಾಡಿದ್ರು ಅಂತಾನೇ ನಾನು ಬಂದಿದ್ದೆ. ಬರೀ ಬುರುಡೆ ಅಂತ ಈಗ ಗೊತ್ತಾಯ್ತು.
-ಸುನಾಥ ಕಾಕಾ

sritri said...

Sunaath kaaka, phedhe ellarigu hanchanlendu kottiddu. aadare naanu yaarigu kodade obbale tindubitte. kaakadenu tappilla illi.

bhagavatare, puttakkanavare, photos bartaa ive....

ತೇಜಸ್ವಿನಿ ಹೆಗಡೆ said...

ಭಾಗವತರೆ....
ಕಾರಣಾಂತರಗಳಿಂದ ಇಂತಹ ಒಂದು ಉತ್ತಮ ಪ್ರೋಗ್ರಾಂ ಅನ್ನು ತಪ್ಪಿಸಬೇಕಾಯಿತು. ಬೇಸರವಿದೆ. ಆದರೂ ನೀವು ಅದರ ವಿವರಣೆಗಳಿಗೆ ನಿಮ್ಮದೇ ಉಪ್ಪು ಖಾರ ಸೇರಿಸಿ.. ಸುಂದರ ಫೋಟೋಗಳಿಂದ ಅಲಂಕರಿಸಿ ಮುಂದಿರಿಸಿದಿರಿ :) ಈಗ ಸ್ವಲ್ಪ ಸಮಾಧಾನವಾಗಿದೆ. ಧನ್ಯವಾದಗಳು.

VENU VINOD said...

ಛೇ, ಭಾಗವತರೆ ನಿಮ್ಮ ವರದಿ ಆರಂಭದಲ್ಲೇ ನಾನು ಮಿಸ್ ಮಾಡಕೊಂಡೆ ಕಾರ್ಯಕ್ರಮವನ್ನು ಅನ್ನೋದು ಗೊತ್ತಾಯ್ತು, ಕೊನೆಗೆ ಮೆನು ನೋಡಿಯಂತೂ ನಿಜಕ್ಕೂ ಫೀಲ್ ಆಯ್ತು :)