ಬುದ್ಧಿವಂತರಿಗೆ ಮಾತ್ರ......
ಕುಕ್ಕರುಗಾಲು ಹಾಕಿ ಕುಂತಿದೆ ನಿದ್ದೆ ಬಾರದ ರಾತ್ರಿ,
ಕಥೆ ಹೇಳು ಅಂತದರ ವರಾತ....
ಹೇಳಿ ಮುಗಿಸಿದ್ದೇನೆ ತರಹೇವಾರಿ ಕಥೆಗಳನ್ನ...
ಇಗೊಳ್ಳಿ ನಿಮಗೊಂದಿಷ್ಟು ಸ್ಯಾಂಪಲ್ಲುಗಳು..
ಬಿಳಿಗುದುರೆಯೇರಿ ಬಂದು, ರಾಜಕುಮಾರಿಯನ್ನು ಸೆಳೆದೊಯ್ದ ಆ ರಾಜಕುಮಾರ,
ದಶದಿಕ್ಕುಗಳಲ್ಲೂ ದಿಗ್ವಿಜಯ ಮಾಡಿ, ಸಾಮ್ರಾಜ್ಯ ಕಟ್ಟಿದ ಆ ವೀರ ಪರಾಕ್ರಮಿ,
ಐಶ್ವರ್ಯದ ಹೊಳೆಯಲ್ಲಿ ಮಿಂದು, ತಿಂದು, ತೇಗಿದ ಆ ಬಂಗಲೆಯ ಸಾಹುಕಾರ,
ಗಂಧ, ಹಾರ, ತುರಾಯಿ, ಶಾಲಿನ ಮೇಲೆ ಶಾಲು ಪಡೆದ, ಆ ಅಸೀಮ ಬುದ್ಧಿವಂತ,
ಇದಾವುದೂ ಬೇಡವಂತೆ, ನಿದ್ದೆ ಬಾರದ ರಾತ್ರಿಗೆ...
ತಗೊಳ್ಳಪ್ಪ ಇನ್ನೊಂದಿಷ್ಟು ಪ್ರತಿಮೆಗಳು...
ಧಡಲ್ಲಂತ ಗುದ್ದಿದ ಬಸ್ಸಿನ ಹೊಡೆತಕ್ಕೆ, ತುಂಡಾಗಿ, ವಿಲಿವಿಲಿ ಒದ್ದಾಡಿದ ಆ ಕಾಲು
ನೇಣಿಗೆ ಕುತ್ತಿಗೆ ಕೊಟ್ಟ, ಕೊನೆ ಬೀದಿಯ, ಕೊನೆ ಮನೆಯ, ಆ ದಪ್ಪನೆಯ ಹೆಂಗಸು,
ನನ್ನ ಹೆಗಲ ಮೇಲೆ ಕಮಕ್-ಕಿಮಕ್ಕೆನ್ನದೆ ತುಟಿ ಪಿಟ್ಟಾಗಿಸಿ ಮಲಗಿದ್ದ ಆ ಸಾವು,
ಸರಕಾರಿ ಆಸ್ಪತ್ರೆಯಿಂದ ಹೊರಬಿದ್ದ, ಆ ಇನ್ನೊಂದು, ಗುರುತಿಸಲಾಗದ ಆ ಹೆಣ......
ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ....
ತುಂಡರಿಸಿದ ಆ ಕಾಲು ನರ್ತಿಸುವ ಮುನ್ನ,
ಆ ದಪ್ಪನೆಯ ಹೆಂಗಸು ಗಹಗಹಿಸುವ ಮುನ್ನ,
ಆ ಸಾವು ಎಚ್ಚರಾಗಿ ಕೆನ್ನೆ ಸವರುವ ಮುನ್ನ,
ಆ ಹೆಣ ನಸುನಕ್ಕು ಕಣ್ಣು ಹೊಡೆಯುವ ಮುನ್ನ...
ಶ್ಯ್!!! ಸದ್ದು ಮಾಡಬೇಡಿ....
ನಿದ್ದೆ ಹೋಗಬೇಕಂತೆ ರಾತ್ರಿಗೆ ಈಗ.....