ದೂಧಸಾಗರ ಜಲಪಾತಕ್ಕೆ ಹೋಗಬೇಕೆಂದು ಯೋಜನೆ ಹಾಕಿದ್ದು 'ಸಕಾಲಿಕ' ವಾರಪತ್ರಿಕೆಯಲ್ಲಿ ಬಂದ ನಾಗರಾಜ ಹರಪನಹಳ್ಳಿಯವರ ಲೇಖನ ಓದಿದ ಮೆಲೆ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಂತರ ನಿರ್ಧಾರ ಬದಲಾಯಿಸಿ ದೇವಕಾರು ಜಲಪಾತವನ್ನೆ ಗಟ್ಟಿಮಾಡಿಕೊಂಡೆವು. ಆದಕ್ಕೆ ಮುಖ್ಯ ಕಾರಣ ಅದರಲ್ಲಿದ್ದ ಅನಿಶ್ಚತತೆ. ಜಲಪಾತ ಇದೆಯೊ ಇಲ್ಲವೊ ಅನ್ನುವುದೆ ನಮ್ಮ ಸಂದೇಹವಾಗಿತ್ತು. ಆ ಕ್ಶಣಕ್ಕೆ ನಾಗರಾಜರೆ ನಮ್ಮ ದೇವರು.
ಸ್ನೇಹಿತರ ಮುಂದೆ ಯೋಜನೆ ಮುಂದಿಟ್ಟಾಗ ೧೫ ಜನರ ತಂಡ ಸಿದ್ಧವಾಗಿತ್ತು. ಅವರಿಗೆಲ್ಲ ರಂಗುರಂಗಿನ ಕಥೆ ಹೇಳಿ ಒಪ್ಪಿಸಿದ್ದೆ. ಅವರಿಗೆ ನಿಜವಾಗಿಯೂ ಎಲ್ಲಿ ಹೋಗುತ್ತಿದ್ದೆವೆನ್ನುವುದರ ಅರಿವಿರಲಿಲ್ಲ. 'ಎಲ್ಲೊ ಕರ್ಕೊಂಡ್ ಹೋಗ್ತಾನಂತೆ ಕಣೊ' ಅಂತ ಎಲ್ಲ ಜವಾಬ್ದಾರಿ ನನ್ನ ಮೇಲೆ ಹೊರಿಸಿ ತಯಾರಾಗಿದ್ದರು.
ದೇವಕಾರು ತಲುಪುವುದು ಹೇಗೆ?
ಕಾರವಾರದಿಂದ ಬೆಳಗಾವಿ ಮಾರ್ಗವಾಗಿ ೩೫ಕಿಮಿ ದೂರದಲ್ಲಿರುವ ಕದ್ರಾ ತಲುಪಿ, ಅಲ್ಲಿಂದ ಕೊಡಸಳ್ಳಿಯ ಮಾರ್ಗಕ್ಕೆ ಹೊರಳಬೇಕು. ಕೊಡಸಳ್ಳಿಗಿಂತ ೧೧ಕಿ.ಮಿ. ಹಿಂದೆ (ಕದ್ರಾದಿಂದ ಸುಮರು ೨೪ಕಿ.ಮಿ. ಕ್ರಮಿಸಿದ ನಂತರ) ದೇವಕಾರು ಕ್ರಾಸ್ ಸಿಗುತ್ತದೆ. ಈ ಸ್ಥಳ ಗುರುತು ಹಿಡಿಯುವುದು ಸ್ವಲ್ಪ ಕಷ್ಟದ ಕೆಲಸ. ಒಂದು ಹಳೆಯ ಬೋರ್ಡ್ ಮತ್ತು ಮುಳಿಹುಲ್ಲಿನಿಂದ ಅರ್ಧ ಮುಚ್ಚಿರುವ ತಂಗುದಾಣದಂತ ರಚನೆ ಬಿಟ್ಟರೆ ಮತ್ತೇನೂ ಇಲ್ಲ. ಅಲ್ಲಿಂದ ಬಲಭಾಗದಲ್ಲಿರುವ ಮಣ್ಣಿನ ರಸ್ತೆಯಲ್ಲಿ ಸುಮಾರು ಒಂದು ಕಿ.ಮಿ. ನಡೆದರೆ ಕಾಳಿನದಿಯ ಹಿನ್ನೀರಿನ ದಡ ಸಿಗುತ್ತದೆ. ಅಲ್ಲಿಂದ ಗಟ್ಟಿಯಾಗಿ 'ದೋಣಿ' ಅಂತ ಕೂಗಬೇಕು. ಆಚೆಕಡೆಯವರಿಗೆ ಕೇಳಿಸಿದರೆ ಓಗೊಟ್ಟು ಸ್ವಲ್ಪ ಸಮಯದ ನಂತರ ಬರುತ್ತಾರೆ. ಅಲ್ಲಿಂದ ಸುಮಾರು ೩೦ ನಿಮಿಷ ನಡೆದರೆ ದೇವಕಾರು ಜಲಪಾತ.
ತೋಪಾದ ಯೊಜನೆ
ನಾವು ಕಾಳಿ ನದಿ ದಡದಲ್ಲಿ ಕೂತು ಸುಮಾರು ಅರ್ಧ ಗಂಟೆ ಕಿರುಚಾಡಿದರೂ ಆಚೆಕಡೆಯಿಂದ ಪ್ರತಿಕ್ರಿಯೆ ಇಲ್ಲ. 'ಈ ಮಯ್ಯನ್ನ ಕಟ್ಟಿಕೊಂಡು ಕೋಳಿಪಡೆ' ಅಂತ ಆಗಲೆ ರಾಗ ಸುರು ಹಚ್ಚಿಕೊಂಡಿತ್ತು. ಅಂತೂ ಇಂತೂ ದೋಣಿ ಬಂದು 'ಅಂಬಿಗ ನಾ ನಿನ್ನ ನಂಬಿದೆ' ಅಂತ ಜಪಿಸುತ್ತ ಆಚೆ ದಡ ಮುಟ್ಟಿದಾಗ ಗಂಟೆ ೩ ಅಗಿತ್ತು. ಈಗ ಜಲಪಾತಕ್ಕೆ ಹೊಗುವುದೊ ಬೇಡವೊ ಅನ್ನುವುದನ್ನು ನಿರ್ಧರಿಸಬೇಕಿತ್ತು. ನಮ್ಮ ಮೂಲ ಯೋಜನೆಯ ಪ್ರಕಾರ ಜಲಪಾತಕ್ಕೆ ೩ ಗಂಟೆಯ ಸಮಯ ಮಾತ್ರ. ಸಂಜೆಯಾದದ್ದರಿಂದ ಹಳ್ಳಿಯಲ್ಲೆ ಉಳಿದು, ಮಾರನೆ ದಿನ ನಮ್ಮ ದಿಗ್ವಿಜಯ ಮುಂದುವರಿಸುವುದೆಂದು ಒಮ್ಮತದ ಠರಾವು ಅಂಗೀಕರಿಸಿದೆವು.
ಮುಗಿಯದ ಅಂಬಿಗನ ಋಣ
'ನದಿಯ ದಾಟಿದ ಮೇಲೆ ಅವನ್ಯಾರೊ ಇವನ್ಯಾರೊ' ಎಂದು ಅಂಬಿಗನ ಕುರಿತು ಹಾಡಲು ಅದು ಸೂಕ್ತ ಸ್ಥಳವಾಗಿರಲಿಲ್ಲ. ರಾತ್ರಿ ಉಳಿದುಕೊಳ್ಳಲು ಯಾರ ಮನೆಗಾದರೂ ದಾಳಿ ಇಕ್ಕುವುದು ಅನಿವಾರ್ಯವೆಂದು ಗೊತ್ತಿತ್ತು. ನಾವು ಆಯಕಟ್ಟಿನ ಮನೆಗಾಗಿ ಹೊಂಚುಹಾಕುತ್ತಿರುವಾಗಲೆ ಅಂಬಿಗನ ಸಹಾಯ ಸಿಕ್ಕಿತು. ಅಲ್ಲಿಂದ ಅರ್ಧಗಂಟೆ ನಡೆದು (ಇದು ನೋಡು ವಾಕ್(walk)ಸ್ವಾತಂತ್ರ್ಯ ಅಂದರೆ ಅಂತೆಲ್ಲ ಜೋಕು ಕತ್ತರಿಸುತ್ತ) ಸುಧಾಕರ ತಿಮ್ಮಣ್ಣ ನಾಯ್ಕರ ಬಿಡಾರದಲ್ಲಿ ಠಿಕಾಣಿ ಹೂಡಿದೆವು.
ಆ ಜಾಗ
ಪ್ರಕೃತಿ ಸೌಂದರ್ಯ ಅಲ್ಲಿ ಕಾಲು ಮುರಿದುಕೊಂಡು ಬಿದ್ದಿತ್ತು. ಹಸಿರು ಹಸಿರು ಭತ್ತದ ಗದ್ದೆ, ಜುಳು ಜುಳು ಹರಿಯುತ್ತಿದ್ದ ನೀರಿನ ಝರಿ, ಸುತ್ತ ಆವರಿಸಿದ್ದ ದಟ್ಟ ಕಾಡು, ಇವೆಲ್ಲಕ್ಕೂ ವಿಶೇಷ ಮೆರುಗು ಕೊಟ್ಟಿದ್ದ ಪಶ್ಚಿಮದ ಕೆಂಪು ಸೂರ್ಯ....ಮೊದಲ ನೋಟಕ್ಕೇ 'ಹೋ' ಅಂತ ಆಯಾಚಿತವಾಗಿ ಕೂಗಿಬಿಟ್ಟೆವು. ನಮ್ಮ ರೂಕ್ಷ ಶಬ್ದಪಂಜರದಲ್ಲಿ ಬಂಧಿಸಿಡಲಾಗದ ಅಮೂರ್ತ ಅನುಭವ ಅದಾಗಿತ್ತು.
ದೇವಕಾರಿನ ಬಗ್ಗೆ ಕೊಂಚ
ದೇವಕಾರು ಕಾಳಿನದಿಯ ಹಿನ್ನೀರಿಂದ ಸುತ್ತುವರಿದಿರುವುದರಿಂದ ದೋಣಿ ಮಾತ್ರವೆ ಹೊರ ಜಗತ್ತಿನೊಂದಿಗಿನ ಸಂಪರ್ಕ ಮಾಧ್ಯಮ. ಕೈಗಾ ಅಣುಸ್ಥಾವರವೂ ಹತ್ತಿರವಿರುವುದರಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಈ ಊರಿನಲ್ಲಿ ವಿದ್ಯುತ್ತು, ದೂರವಾಣಿಯಂಥ ಯಾವ ಮೂಲ ಸೌಲಭ್ಯಗಳೂ ಇಲ್ಲ. ಇಲ್ಲಿನ ಜನ ದಿನಸಿ ವಸ್ತುಗಳಿಗಾಗಿ ಮೈಲಿಗಟ್ಟಲೆ ನಡೆದು ಹೋಗಬೇಕು. ಬೆಳಿಗ್ಗೆ ಬರುವ ಬಸ್ಸೊಂದನ್ನು ಬಿಟ್ಟರೆ ಬೇರೆ ಸಾರಿಗೆ ವ್ಯವಸ್ಥೆಗಳೂ ಇಲ್ಲ.
ಮುಳುಗುವ ಸಮಯ
ತಿಮ್ಮಣ್ಣ ನಾಯ್ಕರು ನಮ್ಮನ್ನು ಹತ್ತಿರದಲ್ಲಿದ್ದ ತೊರೆಗೆ ಕರೆದೊಯ್ದರು. ಅಲ್ಲೊಂದು ಕಡೆ ತೊರೆ ಚಿಕ್ಕ ಈಜುಗೊಳದ ತರಹ ನೈಸರ್ಗಿಕವಾಗಿ ರೂಪುಗೊಂಡಿತ್ತು. ನಮ್ಮ ಕಪಿಸೈನ್ಯಕ್ಕೆ ಇನ್ನೇನು ಬೇಕಿತ್ತು. ಲಾಗ ಹೊಡೆದಿದ್ದೆ ಹೊಡೆದಿದ್ದು. ಅತ್ತ ಸೂರ್ಯ ಮುಳುಗುತ್ತಿದ್ದರೆ ಇತ್ತ ನಮ್ಮ ಆರಡಿ ಎತ್ತರದ ಸಂತೋಷ ನೀರಿನ ಅಂತರ್ವಿದ್ಯುತ್ತಿಗೆ ಸಿಲುಕಿ ಮುಳುಗೇಳುತ್ತಿದ್ದ. ಸತೀಶ ತಕ್ಷಣ ಕೈ ನೀಡಿದ್ದರಿಂದ ಏನೂ ಅಪಾಯವಾಗಲಿಲ್ಲ.
ಗಾನಗೋಷ್ಠಿ
ರಾತ್ರಿ ಬೆಳದಿಂಗಳು ಹಾಲು ಚೆಲ್ಲಿತ್ತು. ನಮ್ಮ ಗಾನಗೋಷ್ಠಿ ವೀಕ್ಷಿಸಲು ಚಂದ್ರ ತಾರೆಗಳ ಬೈಠಕ್ಕು ಕರೆದಿದ್ದ. ಮಾಮೂಲಿ ಹಿಂದಿ ಹಾಡುಗಳ ಜೊತೆಗೆ ಒಂದೆರಡು ಭಾವಗೀತೆಗಳು, ಯಕ್ಷಗಾನದ ಹಾಡು, ಕನ್ನಡದ ಕ್ರಿಕೆಟ್ ವೀಕ್ಷಕವಿವರಣೆಗಳೂ ಸೇರಿಕೊಂಡಿದ್ದವು. ಎಲ್ಲದಕ್ಕೂ ಕಳೆ ಏರಿಸಿದ್ದು ತಿಮ್ಮಣ್ಣ ನಾಯ್ಕರ ಹಾಡು. ಅವರ ಹಾಡಿನಲ್ಲಿ ಗಾಂಧಿಯ ಪ್ರಸ್ತಾಪ ಬಂದದ್ದು ಬಿಟ್ಟು ಬೇರೇನೂ ನಮಗೆ ಒಂದಿನಿತೂ ಗೊತ್ತಗಾದಂತೆ ಹಾಡು ಮುಗಿಸಿದರು. ನಂತರ ತಿಮ್ಮಣ್ಣ ನಾಯ್ಕರು ಹತ್ತಿರದ ನಾಲ್ಕಾರು ಮನೆಗಳವರನ್ನು ಸೇರಿಸಿ ನಮಗಾಗಿ ತಯಾರಿಸಿದ್ದ ಅನ್ನ ಸಾಂಬಾರು ತಂದಿತ್ತರು. ಈ ಜನರ ಮುಗ್ಧ ಪ್ರೀತಿಗೆ ಸಾಟಿಯುಂಟೆ?
ನಾನೇರುವೆತ್ತರಕೆ ನೀನೇರಬಲ್ಲೆಯಾ?
ಬೆಳಿಗ್ಗೆ ಆಗಿದ್ದೆ ಜಲಪಾತದತ್ತ ತಿಮ್ಮಣ್ಣ ನಾಯ್ಕರನ್ನು ಮುಂದಿಟ್ಟುಕೊಂಡು ನಮ್ಮ ತಂಡ ಹೊರಟಿತು. ದಾರಿಯುದ್ದಕ್ಕೂ ಚಿಕ್ಕ ದೊಡ್ಡ ಬಂಡೆಗಳು. ಅವನ್ನೆಲ್ಲ ಜಾಗರೂಕತೆಯಿಂದ ದಾಟಿ ಮುಂಬರಿಯುತ್ತಿದ್ದಾಗ ತಿಮ್ಮಣ್ಣ ನಾಯ್ಕರು ಅಚಾನಕ್ಕಾಗಿ ನಿಲ್ಲಿಸಿಬಿಟ್ಟರು. 'ಇಲ್ಲಿಂದ ಮುಂದೆ ಹೋಗಲಿಕ್ಕಾಗುವುದಿಲ್ಲ' ಅಂತ ಹೆಬ್ಬಂಡೆಯೊಂದನ್ನು ತೋರಿಸಿ ಅಲ್ಲೆ ಕುಕ್ಕರುಬಡಿದರು. ಅಷ್ಟಕ್ಕೆ ನಮ್ಮ ಕಪಿಬುದ್ಧಿ ಮತ್ತೆ ಜಾಗೃತವಾಯಿತು. 'ಹಾಗಾದರೆ ಹತ್ತಿಯೆ ಸಿದ್ಧ' ಅನ್ನುವುದು ನಮ್ಮೆಲ್ಲರ ತೀರ್ಮಾನವಾಗಿತ್ತು. ಇದರ ಮುಂದಾಳತ್ವ ವಹಿಸಿದ್ದು ದಯಾನಂದ್ ಮತ್ತು ಶ್ರೀಕರ್. ಆ ಹೆಬ್ಬಂಡೆಯನ್ನು ಹಾಗೂ ಹೀಗೂ ಹತ್ತಿ ಕೆಳ ನೋಡಿದರೆ ಕಾಣಿಸಿದ್ದೇನು? ಮನೆ, ಅಮ್ಮ, ಅಜ್ಜಿ, ಪುಟು ಪುಟು ನೆಗೆಯುವ 'ಗಜಾಲ್ ಗೌರಿ' ಎಂದು ಕರೆಸಿಕೊಳ್ಳುವ ದನದ ಕರು....ಎಲ್ಲ!!! ಜಲಪಾತ ಮುಟ್ಟುವುದಕ್ಕಿಂತಲೂ ಆ ಬಂಡೆ ಇಳಿಯುವುದು ಹೇಗೆ ಎನ್ನುವುದೆ ನಮ್ಮ ಅದ್ಯತೆಯ ವಿಷಯವಾಗಿದ್ದು ಆ ಕ್ಷಣಕ್ಕೆ ಸುಳ್ಳೇನೂ ಅಲ್ಲ.
ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ಎಲ್ಲ ಅಡೆತಡೆಗಳನ್ನೂ ದಾಟಿ ಜಲಪಾತ ಮುಟ್ಟಿದಾಗ ಏನು ಖುಶಿ. ಫೋಟೊ ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು. ನಿಂತು, ಕೂತು, ಬಗ್ಗಿ ಎಲ್ಲ ಭಂಗಿಗಳಲ್ಲೂ. ತಿಮ್ಮಣ್ಣ ನಾಯ್ಕರ ಪ್ರಕಾರ ಜಲಪಾತದ ಪಾದ ಮುಟ್ಟಿದ್ದು ನಮ್ಮ ತಂಡವೊಂದೆ. ಅದು ಕೇಳಿದ್ದೆ ಇನ್ನೊಂದು ಫೋಟೊ. ಬಲ್ಲಿರೇನಯ್ಯ? ದೇವಕಾರು ಜಲಪಾತಕ್ಕೆ ಯಾರೆಂದು ಕೇಳಿದ್ದೀರಿ? ಪೋಸಿನಲ್ಲಿ.
ಇಳಿಯುವ ಫಜೀತಿ
ಮಧ್ಯಾಹ್ನವಾಗುತ್ತಿದ್ದಂತೆ ಹಿಂದಿರುಗುವ ಸಿದ್ಧತೆ ನಡೆಸತೊಡಗಿದೆವು. ಎಲ್ಲ ಬಂಡೆಗಳನ್ನೂ ಹಾರಿ ಇಳಿದು ಕೊನೆಯಲ್ಲಿ ಅದೆ ಹೆಬ್ಬಂಡೆಯ ಬಳಿ ಮತ್ತೆ ಯೋಚಿಸುವಂತಾಯ್ತು. ಎಲ್ಲರಿಗಿಂತ ಫಜೀತಿ ಪಟ್ಟಿದ್ದು ನಂದಾ. ಎರಡು ಮೂರು ಜನ ಕೈ ಹಿಡಿದುಕೊಂಡರೂ ಪಾರ್ಟಿ ಕೆಳಗಿಳಿಯಲೊಲ್ಲದು. ಅಂತೂ ಇಂತೂ ಪುಸಲಾಯಿಸಿ ಧೈರ್ಯ ತುಂಬಿ ಕೆಳಗಿಳಿಸಿದಾಗ ನಮಗೆ ಬೆವರು ಇಳಿದಿತ್ತು. ಅವನಂತೂ ಮೈ ತುಂಬಾ ನಡುಗುತ್ತಿದ್ದ ತಿಮ್ಮಣ್ಣ ನಾಯ್ಕರ ಮನೆ ತಲುಪುವವರೆಗೂ. ಜೀವದ ಹೆದರಿಕೆ ಅಲ್ಲವಾ ಮತ್ತೆ? ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವ ಪರಿಸ್ಥಿತಿ.
Project, deadlineಗಳ ಲೋಕದತ್ತ ಮತ್ತೆ ಮುಖ ಮಾಡಿ ಸಂಜೆಯಾಗುತ್ತಿದ್ದಂತೆ ಹೊರಡುವ ತಯಾರಿ ನಡೆಸಬೇಕಿತ್ತು. ದೇವಕಾರಿನ ಮುಗಿಯದ ನೆನಪಿನ ಬುತ್ತಿ ಕಟ್ಟಿಕೊಂಡು, ಊರಿನವರಿಗೆ ವಿದಾಯ ಹೇಳುವಾಗ ಬೇಸರವಾದದ್ದು ಸುಳ್ಳಲ್ಲ. ದೇವಕಾರಿಗೆ ಬೆನ್ನು ಹಾಕಿ ಹೊರಟಾಗ ಸೂರ್ಯ ಮತ್ತೆ ಮುಳುಗುವ ಸಿದ್ಧತೆಯಲ್ಲಿದ್ದ. ಕಾರವಾರದಲ್ಲಿ ಊಟ ಮಾಡಿ ಮಧ್ಯರಾತ್ರಿ ಮನೆ ತಲುಪಿದಾಗ ಯಶಸ್ವಿ ಪ್ರವಾಸದ ತೃಪ್ತಿ ನಮಗೆಲ್ಲ.
ಒಂದು ಕಿವಿಮಾತು
ದೇವಕಾರು ಒಂದು ಅನಾಘ್ರಾಣಿತ ಕುಸುಮ. ಇಲ್ಲಿನ್ನೂ ಪ್ಲಾಸ್ಟಿಕ್ ಚೀಲಗಳ ಸಂಗ್ರಹ ತಯಾರಾಗಿಲ್ಲ. ಆದರೂ ನಿಧಾನವಾಗಿ ಆ ಸಂಸ್ಕೃತಿ ಇಲ್ಲಿ ಕಾಲಿಡುತ್ತಿದೆ. ನಮಗಿಂತ ಮುಂಚೆ ಬಂದಿದ್ದ ಒಂದು ತಂಡ ಬಿಯರ್ ಬಾಟಲಿಗಳನ್ನು ಎಸೆದು ಹೋಗಿದ್ದರು. ಹಳ್ಳಿಯವರಿಗೆ ಇದೊಂದು ಹೆಮ್ಮೆಯ ವಿಷಯವಾಗಿ ತೋರಿದ್ದು ನೋವಿನ ಸಂಗತಿ. ದೇವಕಾರಿಗೆ ನೀವೂ ಹೋದರೆ, ದಯವಿಟ್ಟು ಅದನ್ನು ಅದರ ಮೂಲರೂಪದಲ್ಲೆ ಬಿಟ್ಟು ಬನ್ನಿ.
ಮನೆಯಲ್ಲಿ
ಅಜ್ಜಿಯ ಬಳಿ ನಮ್ಮ ಸಾಹಸದ ಕುರಿತು ಹೇಳುತ್ತಿದ್ದೆ. 'ನಾನು ಸ್ವರ್ಗಕ್ಕೆ ಹೋಗಿದ್ದೆ. ಅಲ್ಲಿ ಬೃಹಸ್ಪತಿಗಳು ಸಿಕ್ಕಿದ್ದರು. 'ನನ್ನ ಬಗ್ಗೆ ಕಥೆ ಹೇಳುತ್ತಾರಲ್ಲ ಓ ಅವರು, ಅವರು ಹೇಗಿದ್ದಾರೆ' ಅಂತ ನಿನ್ನನ್ನು ವಿಚಾರಿಸಿದರು ಎಂದೆ. ಒಮ್ಮೆ ದೊಡ್ಡದಾಗಿ ನಕ್ಕ ಅಜ್ಜಿ 'ಇದ್ಕೆ ಸೈ ಜಗಲಿ ಭಾಗವತ್ರು. ಮನ್ಯೆಗೆ ಸ್ವಸ್ಥ ಮನಿಕಂಬ್ದ್ ಬಿಟ್ಟ್, ಅಲ್ಲ್ ಎದ್ಕಂಡ್, ಬಿದ್ಕಂಡ್ ತದ್ಯಾಪ್ರತ ಮಾಡ್ಕಂಬ್ಕೆ ಹೋದ್ದಾ ಹಂಗರೆ' ಅಂತ ತಣ್ಣೀರೆರಚಿದಳು.